-ವಿಜಯ್‌ ಮಲಗಿಹಾಳ

ಬೆಂಗಳೂರು(ಮಾ.12]: ಚುನಾವಣಾ ರಾಜಕಾರಣದಿಂದ ಅಂತರ ಕಾಪಾಡಿಕೊಂಡಿರುವ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಈ ನಾಡು ಕಂಡ ಅಪರೂಪದ ಮುತ್ಸದ್ದಿ ರಾಜಕಾರಣಿ. ಬಹುಕಾಲದಿಂದ ರಾಜಕಾರಣ ನಡೆಸಿದ ಕಾಂಗ್ರೆಸ್‌ ಪಕ್ಷವನ್ನು ತೊರೆದು ಬಿಜೆಪಿಗೆ ಬಂದಿದ್ದಾರೆ. ಪ್ರಮುಖ ಸಭೆ- ಸಮಾರಂಭಗಳಿಗೆ ಹೋಗುವುದನ್ನು ಬಿಟ್ಟರೆ ಬಹುತೇಕ ಅವರು ಸಕ್ರಿಯ ರಾಜಕೀಯ ಚಟುವಟಿಕೆಗಳಿಂದ ದೂರವೇ ಇದ್ದಾರೆ.

ಆಗಾಗ ಪ್ರಸಕ್ತ ಬೆಳವಣಿಗೆಗಳಿಗೆ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯೆ ನೀಡುವ ಕೃಷ್ಣ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅಪಾರವಾದ ಪ್ರೀತಿ ಮತ್ತು ಅಭಿಮಾನ. ‘ಅಚ್ಛೇ ದಿನ್‌’ ಎನ್ನುವುದು ಒಂದೇ ಬಾರಿಗೆ ಬರವಂಥದ್ದಲ್ಲ. ಆದರೆ, ದೇಶ ಆ ದಿಕ್ಕಿನಲ್ಲಿ ಹೆಜ್ಜೆ ಇಟ್ಟಿದೆ ಎನ್ನುವುದು ಗಮನಾರ್ಹ ಎನ್ನುವ ಅವರು ಮೋದಿಗೆ ಇನ್ನೂ ಕೆಲ ವರ್ಷ ಅವಕಾಶ ಸಿಕ್ಕಿದರೆ ದೇಶ ಮುನ್ನಡೆಯುವುದರಲ್ಲಿ ಹಾಗೂ ಜನರ ಜೀವನ ಮಟ್ಟಸುಧಾರಿಸುವುದರಲ್ಲಿ ಅನುಮಾನವೇ ಇಲ್ಲ ಎಂದು ಭರವಸೆ ವ್ಯಕ್ತಪಡಿಸುತ್ತಾರೆ. ರಾಜೀವ್‌ ಗಾಂಧಿಯವರಿಗೆ ಪ್ರಧಾನಿಯಾಗುವ ಅರ್ಹತೆ ಇದ್ದಂತೆ ರಾಹುಲ್‌ ಗಾಂಧಿಗೆ ಯಾವ ಅರ್ಹತೆಯೂ ಇಲ್ಲ ಎನ್ನುವ ಕೃಷ್ಣ ಪ್ರಿಯಾಂಕಾ ಗಾಂಧಿ ಹಾಗೂ ಇಂದಿರಾ ಗಾಂಧಿ ಕುರಿತೂ ವ್ಯಾಖ್ಯಾನ ಮಾಡಿದ್ದಾರೆ.

ಲೋಕಸಭಾ ಚುನಾವಣೆಯ ಭರಾಟೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿಯ ಹಿರಿಯ ನಾಯಕರೂ ಆಗಿರುವ ಕೃಷ್ಣ ಅವರು ಸೋಮವಾರ ‘ಕನ್ನಡಪ್ರಭ’ಕ್ಕೆ ವಿಶೇಷ ಸಂದರ್ಶನ ಹಲವಾರು ವಿಚಾರಗಳ ಕುರಿತು ಮುಕ್ತವಾಗಿ ಮಾತನಾಡಿ ತಮ್ಮ ಅಭಿಪ್ರಾಯಗಳನ್ನು ಹೊರಹಾಕಿದ್ದಾರೆ. ಸಂದರ್ಶನದ ಆಯ್ದ ಭಾಗ ಇಲ್ಲಿದೆ:

* ಸಕ್ರಿಯ ರಾಜಕಾರಣದಿಂದ ನೀವು ಸಾಕಷ್ಟುದೂರ ಇದ್ದೀರಿ. ಆದರೂ, ಈ ಬಾರಿ ನೀವು ಬಿಜೆಪಿಯ ಪರವಾಗಿ ಸಕ್ರಿಯ ಪ್ರಚಾರಕ್ಕೆ ಬರಬೇಕು ಎಂದು ಮಾಜಿ ಡಿಸಿಎಂ ಅಶೋಕ್‌ ನಿಮ್ಮನ್ನು ಆಹ್ವಾನಿಸಿದ್ದಾರೆ?

ಹೌದು. ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿದ್ದೇನೆ. ಪಕ್ಷ ಬಯಸಿದಲ್ಲಿ, ಬಯಸಿದಷ್ಟು, ಬಯಸಿದೆಡೆ ನಾನು ಪ್ರಚಾರ ಮಾಡುತ್ತೇನೆ. ವೈಯಕ್ತಿಕವಾಗಿಯೂ ಈ ದೇಶಕ್ಕೆ ಮೋದಿಯವರ ನಾಯಕತ್ವ ಬೇಕು ಎಂದು ನನಗೆ ಅನಿಸಿದೆ. ಹಾಗಾಗಿ, ಮೋದಿ ಪರ ಮತ ಯಾಚಿಸುತ್ತೇನೆ. ಕಳೆದ ಐದು ವರ್ಷಗಳಲ್ಲಿ ಮೋದಿ ಉತ್ತಮ ನಾಯಕತ್ವ ನೀಡಿದ್ದಾರೆ. ಮತ್ತೊಮ್ಮೆ ಐದು ವರ್ಷಗಳ ಕಾಲ ಮುಂದುವರಿಯಬೇಕು. ಇದು ಹಿಂದೆಂದಿಗಿಂತಲೂ ಈಗ ಅವಶ್ಯಕತೆ ಇದೆ. ಈ ಬಾರಿಯ ಫಲಿತಾಂಶಕ್ಕಾಗಿ ದೇಶದ ಜನ ಕಾಯುತ್ತಿದ್ದಾರೆ. ಮೋದಿ ಮತ್ತೆ ಪ್ರಧಾನಿಯಾಗಲಿದ್ದಾರೆ. ದೇಶದಲ್ಲಿ ಮತ್ತೊಮ್ಮೆ ಸಂಚಲನ ಸೃಷ್ಟಿಯಾಗುತ್ತದೆ.

* ಮೋದಿ ಅವರು ಕಳೆದ ಚುನಾವಣೆ ವೇಳೆ ಭರವಸೆ ನೀಡಿದ್ದ ‘ಅಚ್ಛೇ ದಿನ್‌’ ಈ ದೇಶದ ಜನರ ಪಾಲಿಗೆ ಬರಲೇ ಇಲ್ಲ ಎಂದು ಪ್ರತಿಪಕ್ಷಗಳು ಲೇವಡಿ ಮಾಡುತ್ತಿವೆ?

ಅದು ತಪ್ಪು. ಅಚ್ಛೇ ದಿನ್‌ ಎನ್ನುವುದು ಒಂದೇ ಬಾರಿಗೆ ಬರುವಂಥದ್ದು ಅಲ್ಲ. ಆ ಪ್ರಕ್ರಿಯೆಯನ್ನು ಪ್ರಧಾನಿ ಮೋದಿ ಆರಂಭ ಮಾಡಿದ್ದಾರೆ. ಇಷ್ಟೊಂದು ಸುದೀರ್ಘ ಕಾಲದ ವ್ಯವಸ್ಥೆಯನ್ನು ಅಚ್ಛೇ ದಿನ್‌ ಮಾಡಬೇಕಾದಲ್ಲಿ ಇನ್ನೂ ಹಲವು ಅವಧಿಗಳು ಬೇಕಾಗುತ್ತದೆ. ಆದರೆ, ಮೋದಿ ಅವರು ಅಚ್ಛೇ ದಿನ್‌ ದಿಕ್ಕಿನಲ್ಲಿ ದೇಶವನ್ನು ಕೊಂಡೊಯ್ಯುವ ಪ್ರಯತ್ನ ಆರಂಭಿಸಿದ್ದಾರೆ. ಅದು ಕಾಣುತ್ತಿದೆ. ಇದೇ ಬಹಳ ಪ್ರಮುಖ. ಇಂಥಹ ಧನಾತ್ಮಕ ಬೆಳವಣಿಗೆಯ ದಿನ ಬಂದಿದೆ ಹಾಗೂ ಬರುತ್ತಿದೆ ಎಂಬುದೇ ಅಚ್ಛೇ ದಿನ್‌ ಅಲ್ಲವೇ?

* ಮೋದಿಯವರನ್ನು ಸೋಲಿಸುವ ಉದ್ದೇಶದಿಂದ ಕಾಂಗ್ರೆಸ್‌, ಜೆಡಿಎಸ್‌ ಸೇರಿದಂತೆ ಹಲವು ರಾಜಕೀಯ ಪಕ್ಷಗಳನ್ನು ಒಳಗೊಂಡ ಮಹಾಗಠಬಂಧನ್‌ ರಚನೆಯಾಗಿದೆ?

ಈ ಹಿಂದಿನ ಹಲವು ಉದಾಹರಣೆಗಳು ನಮ್ಮ ಕಣ್ಣು ಮುಂದಿವೆ. ಮಹಾಗಠಬಂಧನ್‌ ರೀತಿ ಮೈತ್ರಿ ಮಾಡಿಕೊಂಡು ಗೆದ್ದ ಪಕ್ಷಗಳು ಸೇರಿ ರಚಿಸಿದ ಸರ್ಕಾರಗಳು ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲ ಬಾಳುವುದಿಲ್ಲ ಎನ್ನುವುದು ನಿರೂಪಿತವಾಗಿದೆ. ದೇಶದ ಅಭಿವೃದ್ಧಿ ದೃಷ್ಟಿಯಿಂದ ಒಂದು ಪಕ್ಷಕ್ಕೆ ಆಡಳಿತದ ಚುಕ್ಕಾಣಿ ನೀಡುವುದು ಸೂಕ್ತ. ಇದನ್ನು ಜನರು ಅರ್ಥಮಾಡಿಕೊಂಡಿದ್ದಾರೆ.

* ರಾಜ್ಯದಲ್ಲೂ ಜೆಡಿಎಸ್‌ ಕಾಂಗ್ರೆಸ್‌ನ ಗಠಬಂಧನ ಸರ್ಕಾರ ರಚನೆಯಾಗಿದೆ. ಮತದಾರರು ಸಮ್ಮಿಶ್ರ ಸಮಸ್ಯೆಯನ್ನು ಅರ್ಥ ಮಾಡಿಕೊಂಡಿದ್ದರೆ ಇಂಥ ಸರ್ಕಾರ ರಚನೆಯಾಗಿದ್ದು ಹೇಗೆ?

ಇದು ಜನ ಕೊಟ್ಟತೀರ್ಪು ಅಲ್ಲ. ರಾಜ್ಯದ ಜನರು ಕಾಂಗ್ರೆಸ್‌ ವಿರುದ್ಧ ತೀರ್ಪು ನೀಡಿದ್ದಾರೆ. ಜನರ ತೀರ್ಪು ಬಿಜೆಪಿಯ ಪರವಾಗೇ ಇತ್ತು. ಆದರೆ, ಬಿಜೆಪಿಯನ್ನು ದೂರ ಇಡಬೇಕು ಎಂಬ ಏಕೈಕ ಕಾರಣಕ್ಕಾಗಿ ಜನ್ಮ ತಳೆದಿರುವ ಹಿಂಬಾಗಿಲ ಸರ್ಕಾರ ಇದು. ಅವಸರವಾಗಿ ಈ ಮೈತ್ರಿ ಶಿಶು ಹುಟ್ಟಿದೆ. ಅಧಿಕಾರದ ಆಸೆ ಬಿಟ್ಟು ಬೇರೆ ಯಾವ ಉದ್ದೇಶದಿಂದಲೂ ಅಲ್ಲ. ಕೇವಲ ಅಧಿಕಾರದ ಆಸೆಗೆ ಶಿಶು ಜನಿಸಿದೆ. ಈ ಸರ್ಕಾರದಿಂದ ಹೇಳಿಕೊಳ್ಳುವಂಥ ಅಭಿವೃದ್ಧಿ ಆಗಿರುವುದು ಕಂಡು ಬಂದಿಲ್ಲ.

* ಈ ಸರ್ಕಾರ ಹೆಚ್ಚು ಕಾಲ ಬಾಳದು ಎನ್ನುತ್ತೀರಾ?

ಬಹಳ ಜನ ಶಾಸಕರು ಮೇ.23ರ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಫಲಿತಾಂಶದ ನಂತರ ಮಹತ್ವದ ಬೆಳವಣಿಗೆಗಳು ನಡೆಯಬಹುದು. ಆಗ ಏನು ಬೇಕಾದರೂ ಆಗಬಹುದು.

* ರೈತರ ಬೆಳೆಸಾಲ ಮನ್ನಾದಂಥ ಮಹತ್ವಕಾಂಕ್ಷಿ ಯೋಜನೆಗಳನ್ನು ರಾಜ್ಯದ ಸಮ್ಮಿಶ್ರ ಸರ್ಕಾರ ಜಾರಿಗೆ ತಂದಿದೆಯಲ್ಲ?

ಬೆಳೆಸಾಲ ಮನ್ನಾ ಯೋಜನೆಗಾಗಿ ಸುಮಾರು 40 ಸಾವಿರ ಕೋಟಿ ರು.ಗಳಿಗೂ ಹೆಚ್ಚು ವೆಚ್ಚ ಮಾಡಲಾಗುವುದು ಎಂದು ಸರ್ಕಾರ ಹೇಳುತ್ತಿದ್ದರೂ ವಾಸ್ತವವಾಗಿ ಆಗಿರುವುದು ತೀರಾ ಕಡಮೆ. ರೈತರಿಗೆ ಈ ಯೋಜನೆಯ ಪೂರ್ಣ ಲಾಭ ದೊರೆಯುತ್ತಿಲ್ಲ ಎಂಬ ವಿಶ್ಲೇಷಣೆಗಳು ಬರುತ್ತಿವೆ. ಈ ಬಗ್ಗೆ ಸತ್ಯಾಸತ್ಯತೆಗಳು ಇನ್ನು ಹೊರಬರಬೇಕು.

* ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸ್ಥಾನ ಹೊಂದಾಣಿಕೆಯಿಂದ ಬಿಜೆಪಿಗೆ ನಷ್ಟಉಂಟಾಗುವ ಆತಂಕವಿದೆಯಂತೆ?

ನನಗೇನೂ ಹಾಗೆ ಅನ್ನಿಸುವುದಿಲ್ಲ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೇಲ್ಮಟ್ಟದಲ್ಲಿ ಒಂದಾಗಿವೆ. ಆ ಪಕ್ಷದ ಮೇಲ್ಮಟ್ಟದ ನಾಯಕರು ಒಂದಾದಂತೆ ಕಾಣಬಹುದು. ಆದರೆ, ತಳಮಟ್ಟದಲ್ಲಿ ಅಂದರೆ, ಕಾರ್ಯಕರ್ತರ ಮಟ್ಟದಲ್ಲಿ ಉಭಯ ಪಕ್ಷಗಳ ನಡುವೆ ಹೊಂದಾಣಿಕೆ ಕಂಡು ಬರುತ್ತಿಲ್ಲ. ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ ಹಾಗೂ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಮತವರ್ಗಾವಣೆ ಸುಲಭವಲ್ಲ. ಉತ್ತರ ಪ್ರದೇಶದಲ್ಲಾದರೆ, ಸಮಾಜವಾದಿ ಪಕ್ಷದ ಮತಗಳು ವರ್ಗಾವಣೆಯಾಗುವುದಿಲ್ಲ ಆದರೆ, ಮಯಾವತಿಯವರ ಬಹುಜನ ಸಮಾಜ ಪಕ್ಷದಿಂದ ಮತಗಳು ವರ್ಗಾವಣೆಯಾಗಬಹುದು ಎನ್ನಲಾಗುತ್ತದೆ. ಆದರೆ, ಇಲ್ಲಿ, ಜೆಡಿಎಸ್‌ನಿಂದ ಕಾಂಗ್ರೆಸ್‌ಗಾಗಲೀ, ಕಾಂಗ್ರೆಸ್‌ನಿಂದ ಜೆಡಿಎಸ್‌ಗಾಗಲೀ ಮತವರ್ಗಾವಣೆ ಸಾಧ್ಯವಾಗದು. ಈ ಸಂಘರ್ಷದ ಮತಗಳು ಮೂರನೇ ಅಭ್ಯರ್ಥಿಗೆ ವರ್ಗಾವಣೆ ಆಗಬಹುದು. ಇದರಿಂದ ಬಿಜೆಪಿಗೆ ಅನುಕೂಲವಾಗಬಹುದು.

* ರಾಹುಲ್‌ ಗಾಂಧಿ ಪ್ರಧಾನಿ ಅಭ್ಯರ್ಥಿ ಅಲ್ಲ ಎಂದು ಯಾಕೆ ಹೇಳುತ್ತೀರಿ ನೀವು?

ರಾಜೀವ್‌ ಗಾಂಧಿ ಪ್ರಧಾನಿಯಾದಾಗ 21ನೇ ಶತಮಾನದ ನಾಯಕತ್ವ ಗುಣಗಳನ್ನು ಹೊಂದಿದ್ದರು. ಅವರಿಗೆ ರಾಜಕೀಯ ಕುಟುಂಬದ ಹಿನ್ನೆಲೆಯಷ್ಟೇ ಅಲ್ಲ ವಿದ್ಯೆ, ವೃತಿ ಪರತೆ, ನಾಯಕತ್ವ ಗುಣ ಎಲ್ಲವೂ ಇತ್ತು. ಅದನ್ನು ದೇಶವೂ ನೋಡಿದೆ. ಆದರೆ, ರಾಹುಲ್‌ ಗಾಂಧಿಯಲ್ಲಿ ಇದ್ಯಾವವೂ ಕಾಣುವುದಿಲ್ಲ. ರಾಜಕೀಯ ಕುಟುಂಬದ ಹಿನ್ನೆಲೆಯನ್ನು ಬಿಟ್ಟರೆ ಯಾವ ಅರ್ಹತೆ ಕಾಣುತ್ತಿದೆ ಹೇಳಿ.

* ರಾಹುಲ್‌ ಗಾಂಧಿ ನೆರವಿಗೆ ಈಗ ಪ್ರಿಯಾಂಕಾ ಗಾಂಧಿಯೂ ಬಂದಿದ್ದಾರೆ. ಅವರು ನೋಡಲು ಇಂದಿರಾ ಗಾಂಧಿ ಥರ ಇದ್ದಾರೆ ಎಂಬ ಅಂಶ ಅನುಕೂಲಕರ ಎಂದು ಕಾಂಗ್ರೆಸ್‌ ನಂಬಿದೆ?

ನೋಡಿ, ಇಂದಿರಾ ಗಾಂಧಿಯವರು ನಿಧನರಾಗಿ 35 ವರ್ಷಗಳೇ ಆಗಿವೆ. ಹಾಗಾಗಿ, 30 ವರ್ಷದೊಳಗಿನ ಹೊಸ ತಲೆಮಾರಿನ ಬಹುತೇಕ ಮತದಾರರು ಇಂದಿರಾ ಗಾಂಧಿಯವರ ಜೊತೆ ಭಾವ ಬೆಸುಗೆ ಹೊಂದಿಲ್ಲ. ಹಾಗೂ, ಇಂದಿರಾ ಜೊತೆ ಭಾವ ಬೆಸುಗೆ ಹೊಂದಿರುವ ನನ್ನಂಥ ಮತದಾರರಿಗೆ ಪ್ರಿಯಾಂಕಾ ಜೊತೆ ಭಾವ ಬೆಸುಗೆ ಸಾಧ್ಯವಾಗದು. ಹಾಗಾಗಿ, ಪ್ರಿಯಾಂಕಾ ಗಾಂಧಿ ನೋಡಲು ಇಂದಿರಾ ಗಾಂಧಿ ಥರ ಇದ್ದಾರೆ ಎಂಬ ಅಂಶವೇ ಈಗ ಅಪ್ರಸ್ತುತ. ಇಷ್ಟಕ್ಕೂ ನೋಡಲು ಇಂದಿರಾ ಗಾಂಧಿ ಥರ ಇದ್ದರೆ ಸಾಲದು. ಅಲ್ಲದೇ, ಇಂಥಾ ಕುಟುಂಬ ರಾಜಕಾರಣವೇ ಸರಿಯಲ್ಲ. ಅರ್ಹತೆಯಿದ್ದರೆ ಕುಟುಂಬದಿಂದಲೇ ರಾಜಕಾರಣ ಮಾಡಲಿ. ಆದರೆ, ಬಹು ಕುಟುಂಬದವರು ಎನ್ನುವ ಕಾರಣಕ್ಕೇ ರಾಜಕಾರಣಕ್ಕೆ ಬರುವುದು ಸರಿಯಲ್ಲ. ಇದನ್ನು ನಾನು ವಿರೋಧಿಸಿದ್ದೇನೆ.

* ಕಾಂಗ್ರೆಸ್‌ ರೀತಿ ಈಗ ಜೆಡಿಎಸ್‌ನಲ್ಲೂ ಕುಟುಂಬ ರಾಜಕಾರಣ ಜೋರಾಗಿದೆ. ದೇವೇಗೌಡರ ಮಕ್ಕಳು, ನೆಂಟರು ಹಾಗೂ ಸೊಸೆಯ ನಂತರ ಈಗ ಇಬ್ಬರು ಮೊಮ್ಮಕಳನ್ನೂ ಈ ಬಾರಿ ಲೋಕಸಭಾ ಚುನಾವಣೆಯ ಕಣಕ್ಕೆ ಇಳಿಸುತ್ತಿದ್ದಾರೆ?

ಮೊದಲೇ ಹೇಳಿದಂತೆ ನಾನು ಕುಟುಂಬ ರಾಜಕಾರಣದ ವಿರೋಧಿ. ಇಷ್ಟಕ್ಕೂ ಇಲ್ಲಿ ವ್ಯಕ್ತಿಗಳು ಮುಖ್ಯ ಆಗಲ್ಲ. ಸಿದ್ಧಾಂತ ಮುಖ್ಯ ಆಗುತ್ತದೆ. ನಾವು ಸಿದ್ಧಾಂತದ ಜತೆ ಚುನಾವಣೆಗೆ ಹೋಗುತ್ತೇವೆ. ಜನರು ತುಲನೆ ಮಾಡುತ್ತಾರೆ. ಪ್ರಜಾಪ್ರಭುತ್ವದಲ್ಲಿ ಅನುಭವಿ, ಅನನುಭವಿ ಎನ್ನುವುದು ಇಲ್ಲ. 25 ವರ್ಷ ತುಂಬಿದವರು ಯಾರು ಬೇಕಾದರೂ ಚುನಾವಣೆಗೆ ಸ್ಪರ್ಧೆ ಮಾಡಬಹುದು. ಕುಟುಂಬ ರಾಜಕಾರಣದ ಬಗ್ಗೆ ಸಂವಿಧಾನದಲ್ಲಿ ನಿರ್ಬಂಧ ಇಲ್ಲ. ಅರ್ಹತೆ ಇದ್ದವರು ರಾಜಕಾರಣಕ್ಕೆ ಬರಲಿ. ಆದರೆ, ಕುಟುಂಬದವರು ಎಂಬುದೇ ಅರ್ಹತೆಯಾಗಬಾರದು ಎಂಬುದು ನನ್ನ ನಿಲುವು. ಅಂದಹಾಗೆ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಬಗ್ಗೆ ಹೇಳುವುದಾದರೆ ನಿಖಿಲ್‌ ಬಗ್ಗೆ ಏನೂ ಗೊತ್ತಿಲ್ಲ. ಅವರ ವಿದ್ಯಾಭ್ಯಾಸ ಗೊತ್ತಿಲ್ಲ. ಎಲ್ಲೆಲ್ಲಿ ಕೆಲಸ ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ಆದರೆ, ಕುಮಾರಸ್ವಾಮಿ ಬಗ್ಗೆ ಗೊತ್ತಿದೆ. ಅವರ ಅನುಭವ ಎಷ್ಟುಎಂಬುದು ಗೊತ್ತಿದೆ.

* ನಿಮ್ಮ ಪುತ್ರಿ ಶಾಂಭವಿ ಸೇರಿದಂತೆ ನಿಮ್ಮ ಕುಟುಂಬದ ಸದಸ್ಯರು ಚುನಾವಣಾ ರಾಜಕಾರಣಕ್ಕೆ ಪ್ರವೇಶಿಸುವ ಬಗ್ಗೆ ಆಗಾಗ ಸುದ್ದಿಗಳು ಹಬ್ಬುತ್ತಲೇ ಇರುತ್ತವೆ?

ಇದು ವದಂತಿ ಮಾತ್ರ. ನಾನು ವಂಶ ಪಾರಂಪರ್ಯ ರಾಜಕಾರಣ ವಿರೋಧಿಸಿ ಕಾಂಗ್ರೆಸ್‌ ತೊರೆದು ಬಂದಿದ್ದೇನೆ. ಇನ್ನು ಪುತ್ರಿಗೆ ಟಿಕೆಟ್‌ ಕೇಳುವುದು ಅಸಂಬದ್ಧ ನಿಲುವಾಗುತ್ತದೆ. ಅದು ನನ್ನ ಜಾಯಮಾನವೂ ಅಲ್ಲ. ನನ್ನ ಮಗಳಾಗಲೀ ಅಥವಾ ಕುಟುಂಬದ ಸದಸ್ಯರಾಗಲೀ ಯಾವುದೇ ಚುನಾವಣೆ ಸ್ಪರ್ಧಿಸುವುದಿಲ್ಲ. ರಾಜಕಾರಣ ಬೇಡ ಎಂದು ನಾನು ನನ್ನ ಕುಟುಂಬದ ಯಾರಿಗೂ ಹೇಳಿಲ್ಲ. ಅದು ಅವರಿಗೆ ಬಿಟ್ಟದ್ದು. ಆದರೆ, ನನ್ನ ಕುಟುಂಬದವರು ರಾಜಕೀಯ ಪ್ರವೇಶದ ಬಗ್ಗೆ ಆಸಕ್ತಿ ತೋರದಿರುವುದು ನನಗೆ ಸಂತಸ ಉಂಟು ಮಾಡಿದೆ.

* ಸುಮಲತಾ ಅಂಬರೀಷ್‌ ಅವರು ಚುನಾವಣೆಗೆ ಸ್ಪರ್ಧಿಸುವುದಕ್ಕೆ ತಮ್ಮ ಬೆಂಬಲ ಇದೆಯೇ?

ಸುಮಲತಾಗೆ ಬೆಂಬಲ ನೀಡುವ ಬಗ್ಗೆ ನಾನು ವೈಯಕ್ತಿಕವಾಗಿ ಹೇಳುವುದು ಸರಿಯಲ್ಲ. ಈ ಸಂಬಂಧ ಪಕ್ಷ ಸೂಕ್ತ ನಿಲುವು ಕೈಗೊಳ್ಳುತ್ತದೆ.

* ಅಂಬರೀಷ್‌ ಅವರ ಪತ್ನಿ ಎಂಬ ಅಂಶ ಸುಮಲತಾ ಅವರಿಗೆ ನೆರವಾಗಬಹುದೇ? ಇಷ್ಟಕ್ಕೂ ಮಂಡ್ಯ ಜಿಲ್ಲೆಗೆ ಅಂಬರೀಷ್‌ ದೊಡ್ಡ ಕೊಡುಗೆಯೇನೂ ಕೊಟ್ಟಿರಲಿಲ್ಲ ಎಂಬ ಆಪಾದನೆಗಳೂ ಇದೀಗ ಕೇಳಿಬರುತ್ತಿವೆ?

ನೋಡಿ, ಅಂಬರೀಷ್‌ ಅವರು ಈಗ ಇಲ್ಲದಿರುವುದರಿಂದ ಅವರ ಕೊಡುಗೆಯನ್ನು ಪ್ರಶ್ನಿಸಿ ಮಾತನಾಡುವುದು ಸರಿಯಲ್ಲ. ಹಿಂದೆ ಅಂಬರೀಷ್‌ ಅವರನ್ನು ಕಾಂಗ್ರೆಸ್ಸಿಗೆ ಕರೆತರುವುದರಲ್ಲಿ ಪ್ರಮುಖ ಪಾತ್ರ ವಹಿಸಿದವರಲ್ಲಿ ನಾನೂ ಒಬ್ಬ. ನಾನಾಗ ಈ ರಾಜ್ಯದ ಉಪಮುಖ್ಯಮಂತ್ರಿಯಾಗಿದ್ದೆ. ನಂತರ ಅವರ ದಾರಿಗೆ ಅವರಿಗೆ, ನನ್ನ ದಾರಿ ನನಗೆ ಎಂಬಂತಾಯಿತು. ಆದರೆ, ವೈಯಕ್ತಿಕ ಸಂಬಂಧ ಚೆನ್ನಾಗಿತ್ತು. ಹಲವು ಭಾರಿ ಭೇಟಿ, ಮಾತುಕತೆ ನಡೆಸಿದ್ದೇವೆ. ಆದರೆ, ಸುಮಲತಾ ಅವರು ಅಂಬರೀಷ್‌ ಅವರ ಪತ್ನಿ ಎಂಬುದಷ್ಟೇ ಪರಿಗಣನೆಯಾಗಬಾರದು.

* ಹಾಗಾದರೆ, ಮಂಡ್ಯ ರಾಜಕಾರಣದ ಬಗ್ಗೆ ಏನಂತೀರಿ? ಬಿಜೆಪಿ ಸ್ವಂತ ಅಭ್ಯರ್ಥಿ ಹಾಕುವುದು ಒಳಿತೋ ಅಥವಾ ಸುಮಲತಾಗೆ ಬಾಹ್ಯ ಬೆಂಬಲ ನೀಡುವುದು ಬಿಜೆಪಿಗೆ ಒಳಿತೋ?

ಸುಮಲತಾಗೆ ಬೆಂಬಲ ನೀಡುವ ಬಗ್ಗೆ ಪಕ್ಷ ನಿರ್ಧಾರ ಕೈಗೊಳ್ಳುತ್ತದೆ. ಆದರೆ, ಮಂಡ್ಯದಲ್ಲಿ ಪರಿಸ್ಥಿತಿ ಮೊದಲಿನ ಹಾಗಿಲ್ಲ. ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯನ್ನು ಹಾಕಿದ್ದರೂ ನಾವ್ಯಾರೂ ಹೆಚ್ಚು ಪ್ರಚಾರಕ್ಕೆ ಹೋಗಲು ಸಾಧ್ಯವಾಗಿರಲಿಲ್ಲ. ಆದಾಗ್ಯೂ 2.5 ಲಕ್ಷ ಮತಗಳು ಬಂದವು. ಈಗ ಮೋದಿಯವರ ಮೇಲೆ ಮಂಡ್ಯ, ಮೈಸೂರು, ಚಾಮರಾಜನಗರದಂಥ ಪ್ರದೇಶದಲ್ಲೂ ಮತದಾರರಿಗೆ ಒಲವಿದೆ. ಹಾಗಾಗಿ, ಈ ಭಾಗದಲ್ಲಿ ಈ ಬಾರಿ ಬಿಜೆಪಿಗೆ ಉತ್ತಮ ಅವಕಾಶಗಳಿರುವುದಂತೂ ನಿಜ.

* ಸುಮಲತಾ ಅವರಂತೆ ಅನಂತಕುಮಾರ್‌ ಅವರ ಪತ್ನಿ ತೇಜಸ್ವಿನಿ ಅವರೂ ಈ ಬಾರಿ ಚುನಾವಣೆಗೆ ಇಳಿಯುತ್ತಿದ್ದಾರೆ. ಇದಕ್ಕೇನಂತೀರಿ?

ಕೇವಲ ಅನಂತಕುಮಾರ್‌ ಪತ್ನಿ ಎಂಬ ಕಾರಣಕ್ಕಾಗಿ ತೇಜನಸ್ವಿನಿ ಅವರಿಗೆ ಟಿಕೆಟ್‌ ನೀಡಬೇಕಾಗಿಲ್ಲ. ಆದರೆ, ತೇಜಸ್ವಿನಿ ಹಲವಾರು ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡಿದ್ದಾರೆ. ನಾನು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಹಸಿದ ಮಕ್ಕಳಿಗಾಗಿ ಬಿಸಿಯೂಟ ಯೋಜನೆಯನ್ನು ಆರಂಭಿಸಿದ್ದೆ. ಆಗಲೇ, ತೇಜಸ್ವಿನಿ ಅವರು ತಮ್ಮ ಸೇವಾ ಸಂಸ್ಥೆ ಅದಮ್ಯ ಚೇತನದ ಮೂಲಕ ಸಾವಿರಾರು ಮಕ್ಕಳಿಗೆ ಬಿಸಿಯೂಟ ನೀಡುತ್ತಿದ್ದರು. ಇದನ್ನು ತೋರಿಸಿಲು ಅನಂತ ಕುಮಾರ್‌ ಅವರೇ ನನ್ನನ್ನು ಆಹ್ವಾನಿಸಿದ್ದರು. ನಾನಾಗ ಕಾಂಗ್ರೆಸ್‌ನಲ್ಲಿದ್ದರೂ ತೇಜಸ್ವಿನಿ ಅವರ ಸಾರ್ವಜನಿಕ ಕೆಲಸವನ್ನು ನಾನು ಮೆಚ್ಚಿದ್ದೆ. ಹಾಗಾಗಿ, ತೇಜಸ್ವಿನಿ ಅನಂತಕುಮಾರ್‌ ಅವರು ಬೆಂಗಳೂರು ದಕ್ಷಿಣಕ್ಕೆ ಅರ್ಹ ಅಭ್ಯರ್ಥಿ. ಅವರು ಸಂಘಟನಾ ಚಾತುರ್ಯ ಹಾಗೂ ರಾಜಕೀಯದ ಅನುಭವ ಹೊಂದಿದ್ದಾರೆ. ಅವರಿಗೆ ಟಿಕೆಟ್‌ ನೀಡುವುದು ಒಳಿತು ಎಂದೇ ನಾನು ಪಕ್ಷಕ್ಕೆ ತಿಳಿಸಿದ್ದೇನೆ. ಇದು ತೇಜಸ್ವಿನಿಯವರು ಯಾವುದೋ ರಾಜಕಾರಣಿಯ ಕುಟುಂಬದವರು ಎಂಬ ಕಾರಣಕ್ಕೆ ಅಲ್ಲ.

* ಹಳೆ ಮೈಸೂರು ಭಾಗದಲ್ಲಿ ನಿಮಗಿನ್ನೂ ರಾಜಕೀಯ ಹಿಡಿತ ಬಲಿಷ್ಠವಾಗೇ ಇದೆ. ಬಿಜೆಪಿಗೆ ಇಲ್ಲಿ ಕೆಲ ಭಾಗದಲ್ಲಿ ಪ್ರಬಲ ಅಭ್ಯರ್ಥಿಗಳಿಲ್ಲ. ನಿಮಗೇನಾದರೂ ಟಿಕೆಟ್‌ ನೀಡಿದರೆ ಚುನಾವಣೆಗೆ ನಿಲ್ಲುತ್ತೀರಾ?

ಇಲ್ಲ. ನಾನು ಇನ್ನು ಚುನಾವಣೆಗೆ ನಿಲ್ಲುವುದಿಲ್ಲ.

* ಇದೇ ನನ್ನ ಕೊನೆಯ ಚುನಾವಣೆ. ಇನ್ನು ಚುನಾವಣೆಗೆ ನಿಲ್ಲುವುದಿಲ್ಲ ಎಂದ ಅನೇಕ ನಾಯಕರು ಈಗಲೂ ಚುನಾವಣೆಗೆ ನಿಲ್ಲುತ್ತಲೇ ಇದ್ದಾರೆ. ಹಾಗಾಗಿ ನೀವೂ ಚುನಾವಣೆಗೆ ನಿಲ್ಲಬಹುದಲ್ಲ?

ಅದೇ ನನಗೂ ಆ ನಾಯಕರಿಗೂ ಇರುವ ವ್ಯತ್ಯಾಸ.

* ದೇವೇ ಗೌಡರು ಈ ಬಾರಿ ಬೆಂಗಳೂರು ಉತ್ತರದಿಂದ ಸ್ಪರ್ಧಿಸಬಹುದು ಎನ್ನುವ ಮಾತಿದೆ. ಇದು ಬಿಜೆಪಿಗೆ ಕಷ್ಟವಾಗಬಹುದೇ?

ಜನರಿಗೆ ಗೊತ್ತಿದೆ... ಬೆಂಗಳೂರಿಗೆ ಯಾರು ಏನು ಕೊಡುಗೆ ನೀಡಿದ್ದಾರೆ ಎಂದು. ಹಾಗಾಗಿ, ಬೆಂಗಳೂರಿನ ಜನರು ಮತದಾನ ಮಾಡುವಾಗ ಈ ನಾಯಕರು ಈ ಹಿಂದೆ ನೀಡಿದ ಕೊಡುಗೆಗಳನ್ನು ನೋಡಿ ಮತ ಹಾಕುತ್ತಾರೆ.

* ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮೆಟ್ರೋ ಸೇರಿದಂತೆ ಬೆಂಗಳೂರಿನ ಅಭಿವೃದ್ಧಿಗೆ ಅನೇಕ ಕೊಡುಗೆಗಳನ್ನು ನೀಡಿದ್ದೇ ನಾನು ಎಂದು ದೇವೇಗೌಡರು ಹೇಳುತ್ತಾರಲ್ಲ?

ಇತಿಹಾಸದಲ್ಲಿ ಸಾಕಷ್ಟುಸಾಕ್ಷಿ ಗುಡ್ಡಗಳಿವೆ. ಅವನ್ನು ಒಮ್ಮೆ ನೋಡಲಿ. ನಾನು ಮುಖ್ಯಮಂತ್ರಿಯಾಗಿದ್ದ ದಿನದಲ್ಲಿ ಸತತ ಮೂರು ವರ್ಷ ಬರಗಾಲವಿತ್ತು. ವೀರಪ್ಪನ್‌ ಕಾಟವಿತ್ತು. ಜಯಲಲಿತಾ ಕಾಟವಿತ್ತು. ಆದರೂ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನನ್ನ ಕಾಲದಲ್ಲೇ ಯೋಜಿಸಿ, ನನ್ನ ಕಾಲದಲ್ಲೇ ಶಂಕು ಸ್ಥಾಪನೆ ಮಾಡಿ, ನನ್ನ ಕಾಲದಲ್ಲೇ ಕಾರ್ಯಗತ ಮಾಡಿ, ನನ್ನ ಕಾಲದಲ್ಲೇ ಉದ್ಘಾಟನೆಯನ್ನು ಮಾಡಿದ್ದಕ್ಕೆ ಈ ಸಾಕ್ಷಿ ಗುಡ್ಡಗಳನ್ನು ನೋಡಲಿ. ಅದೇ ರೀತಿ ಮೆಟ್ರೋ. ದೆಹಲಿಯ ಮೆಟ್ರೋ ರೂವಾರಿ ಶ್ರೀಧರನ್‌ ಅವರನ್ನು ಕರೆದುತಂದು, ಸಮೀಕ್ಷೆ ಮಾಡಿಸಿ, ಸರ್ಕಾರದ ಸಹಕಾರ ನೀಡಿ, ಜಪಾನಿನ ಆರ್ಥಿಕ ನೆರವು ನೀಡಿ ಯೋಜನೆಯನ್ನು ನಾನು ಆರಂಭಿಸಿದ್ದಕ್ಕೂ ಈ ಸಾಕ್ಷಿ ಗುಡ್ಡಗಳನ್ನ ನೋಡಲಿ.

ಬೆಳೆಯುತ್ತಿರುವ ಕರ್ನಾಟಕದ ಪ್ರಗತಿಗೆ ವಿಧಾನ ಸೌಧ ಸಾಲದು ಎನ್ನಿಸಿದಾಗ ವಿಕಾಸ ಸೌಧವನ್ನು ಯೋಜಿಸುವುದರಿಂದ ಹಿಡಿದು ಉದ್ಘಾಟನೆಯ ವರೆಗೆ ನೆರವೇರಿಸಿದ ಹೆಮ್ಮೆ ನನಗಿದೆ. ಇದರ ಸಾಕ್ಷಿಯನ್ನು ಜನ ನೋಡಲಿ. ಕರ್ನಾಟಕದಲ್ಲಿ ಸೆಕೆಂಡ್ಸ್‌ ಮದ್ಯದ ಹಾವಳಿಯನ್ನು ತಪ್ಪಿಸಲು ನಾನು ನೂತನ ಬೇವರೇಜಸ್‌ ಕಾರ್ಪೋರೇಷನ್‌ ಸ್ಥಾಪಿಸಿದೆ. ನನಗೆ ಮದ್ಯ ಉದ್ಯಮದಲ್ಲಿ ಖೋಡೆ, ಆದಿಕೇಶವಲು ಅಂಥ ಅನೇಕ ಮಿತ್ರರಿದ್ದರೂ ನಾನು ರಾಜ್ಯದ ಒಳಿತಿಗಾಗಿ ಈ ನಿಗಮ ಸ್ಥಾಪಿಸಿದೆ. ಸರ್ಕಾರದ ಒಂದು ಪೈಸಾ ಹೂಡಿಕೆಯಿಲ್ಲದೇ ಬೊಕ್ಕಸಕ್ಕೆ ಸುಮಾರು ಇಪ್ಪತ್ತು ಸಾವಿರ ಕೋಟಿ ರೂಪಾಯಿ ಆದಾಯ ಬರುತ್ತಿದೆ. ನನ್ನ ಈ ಆಡಳಿತಾತ್ಮಕ ಕೊಡುಗೆಗೆ ಈ ಸಾಕ್ಷಿ ಗುಡ್ಡಗಳನ್ನು ನೋಡಲಿ.

* ಹಾಗಾದರೆ, ಮಣ್ಣಿನ ಮಗ ಎಂಬ ಹೆಸರಿಗೆ ತಕ್ಕಂತೇ, ದೇವೇಗೌಡರನ್ನು ಬೆಂಗಳೂರಿನ ಅಭಿವೃದ್ಧಿಗಿಂತ ಹಳ್ಳಿಗಳ ಜೊತೆಗೇ ಹೆಚ್ಚು ಗುರುತಿಸಬಹುದೇ?

 ರಾಜ್ಯದಲ್ಲಿ ಹುಟ್ಟಿದವರೆಲ್ಲರೂ ಮಣ್ಣಿನ ಮಕ್ಕಳೇ. ನಾನೂ ಹೌದು. ನೀವೂ ಹೌದು. ಕೃಷಿ ಕಾರ್ಮಿಕರು ಹೌದು. ರಿಕ್ಷಾ ಓಡಿಸುವವರೂ ಮಣ್ಣಿನ ಮಗನೇ. ಆದರೆ, ಕೆಲವರಿಗೆ ಮಣ್ಣಿನ ಮಗ ಎನ್ನುವುದು ಸಿನೆಮಾ ಟೈಟಲ್‌ ಇದ್ದಹಾಗೆ. ಕೆಲವು ಸ್ಟಾರ್‌ ನಾಯಕರ ಹೆಸರಿನ ಜೊತೆಗೆ ಒಂದೊಂದು ಟೈಟಲ್‌ ಇರುತ್ತದಲ್ಲಾ ಹಾಗೆ.