ತಿರುಚಿರಾಪಳ್ಳಿ(ಮಾ.23): ವಾರಾಣಸಿಯಲ್ಲಿ ಈ ಬಾರಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ, ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಬಿಟ್ಟು ಒಟ್ಟು 111 ಜನ ಸ್ಪರ್ಧೆ ಮಾಡಲಿದ್ದಾರೆ.

ಅರೆ! 111 ಜನ ಮೋದಿ ವಿರುದ್ಧ ಸ್ಪರ್ಧೆಯೇ ಅಂತಾ ಆಶ್ಚರ್ಯವಾಯ್ತಾ?. ಇದು ಆಶ್ಚರ್ಯವಾದರೂ ಸತ್ಯ. ಹಾಗಾದ್ರೆ ಯಾರು ಆ 111 ಜನ ಅಭ್ಯರ್ಥಿಗಳು ಅಂತೀರಾ?.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅರೆ ಬೆತ್ತಲೆಯಾಗಿ ಹಾಗೂ ಆತ್ಮಹತ್ಯೆ ಮಾಡಿಕೊಂಡ ರೈತರ ತಲೆಬುರುಡೆಗಳನ್ನು ಹಿಡಿದು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದ ತಮಿಳುನಾಡು ರೈತರು, ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಲು ನಿರ್ಧರಿಸಿದ್ದಾರೆ.

ವಾರಾಣಸಿಯಲ್ಲಿ ಮೋದಿ ವಿರುದ್ಧ ರಾಜ್ಯದ 111 ರೈತರು ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಮಿಳುನಾಡು ರೈತ ನಾಯಕ ಪಿ ಅಯ್ಯಕಣ್ಣು ಸ್ಪಷ್ಟಪಡಿಸಿದ್ದಾರೆ.

ಸಾಲ ಮನ್ನಾ ಹಾಗೂ ರೈತರ ಬೆಳಗೆ ಬೆಂಬಲ ಬೆಲೆ ಸೇರಿದಂತೆ ತಮ್ಮ ವಿವಿಧಿ ಬೇಡಿಕೆಗಳನ್ನು ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಕಟಿಸಬೇಕು ಎಂದು ಒತ್ತಾಯಿಸುವುದಕ್ಕಾಗಿ ಚುನಾವಣೆಗೆ ಸ್ಪರ್ಧಿಸುವ ನಿರ್ಧಾರಕ್ಕೆ ಬಂದಿದ್ದಾಗಿ ದಕ್ಷಿಣ ಭಾರತ ನದಿ ಜೋಡಣೆ ರೈತರ ಸಂಘದ ಅಧ್ಯಕ್ಷರಾಗಿರುವ ಅಯ್ಯಕಣ್ಣು ತಿಳಿಸಿದ್ದಾರೆ.

ಇದೇ ಏಪ್ರಿಲ್ 11ರಿಂದ ಒಟ್ಟು 7 ಹಂತಗಳಲ್ಲಿ ಲೋಕಸಭೆಗೆ ದೇಶಾದ್ಯಂತ ಚುನಾವಣೆ ನಡೆಯಲಿದ್ದು, ಕರ್ನಾಟಕದಲ್ಲಿ ಏಪ್ರಿಲ್ 18 ಮತ್ತು ಏಪ್ರಿಲ್ 23ರಂದು ಒಟ್ಟು ಎರಡು ಹಂತಗಳಲ್ಲಿ ಚುನಾವಣೆ ಘೋಷಣೆಯಾಗಿದೆ. ಮೇ 23 ರಂದು ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟಣೆಯಾಗಲಿದೆ.

ಲೋಕಸಭೆ ಚುನಾವಣೆ ಸುದ್ದಿಗಳು