ನವದೆಹಲಿ[ಮಾ.23]: 'ನಮ್ಮ ನೂತನ ಪಕ್ಷ ದೇಶದ ಸುಮಾರು 100 ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣಾ ಕಣಕ್ಕಿಳಿಯಲಿದೆ. ಇದರಲ್ಲಿ ಗುಜರಾತ್ ನ 15 ಕ್ಷೇತ್ರಗಳೂ ಇವೆ' ಎಂದು ವಿಶ್ವ ಹಿಂದೂ ಪರಿಷತ್ ನ ಮಾಜಿ ನಾಯಕ ಪ್ರವೀಣ್ ತೊಗಾಡಿಯಾ ಶುಕ್ರವಾರದಂದು ತಿಳಿಸಿದ್ದಾರೆ. 

ಇತ್ತೀಚೆಗಷ್ಟೇ ತೊಗಾಡಿಯಾರವರು ಹಿಂದೂಸ್ತಾನ್ ನಿರ್ಮಾಣ್ ದಳ್ ಎಂಬ ನೂತನ ಪಕ್ಷವನ್ನು ಸ್ಥಾಪಿಸಿದ್ದರು. ಈಗಾಗಲೇ 41 ಚುನಾವಣಾ ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷ ಬಿಡುಗಡೆಗೊಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡಿರುವ ತೊಗಾಡಿಯಾ ಕೆಲವೇ ದಿನಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ತಾನು ವಾರಾಣಸಿ, ಅಯೋಧ್ಯೆ ಅಥವಾ ಮುಥುರಾದಿಂದ ಸ್ಪರ್ಧಿಸುತ್ತೇನೆ ಎಂದಿದ್ದಾರೆ. ವಾರಾಣಸಿ ಪ್ರಧಾನಿ ಮೋದಿಯ ತವರು ಕ್ಷೇತ್ರವಾಗಿದೆ ಈ ಬಾರಿಯೂ ಮೋದಿ ಅದೇ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂಬುವುದು ಗಮನಾರ್ಹ.

'ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ, ಕೃಷಿ ಉತ್ಪನ್ನಗಳಿಗೆ ಬೆಲೆ ಹಾಗೂ ಕೃಷಿ ವಲಯದಲ್ಲಿ ಉದ್ಯೋಗ ಸೃಷ್ಟಿಯೇ ನಮ್ಮ ಪಕ್ಷದ ಮೊದಲ ಆದ್ಯತೆಯಾಗಿದೆ. ಮೋದಿ ಸರ್ಕಾರ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ದೇಶದ ಹಿಂದೂಗಳಿಗೆ ನೀಡಿದ್ದ ಭರವಸೆಯನ್ನು ಮುರಿದಿದ್ದಾರೆ. ಅಲ್ಲದೇ ಭಾರತದ ಕೃಷಿಕರು ಹಾಗೂ ಯುವಕರಿಗೂ ಮೋಸ ಮಾಡಿದ್ದಾರೆ' ಎಂದು ಆರೋಪಿಸಿದ್ದಾರೆ.  

ಸಂವಾದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರವೀಣ್ ತೊಗಾಡಿಯಾ 'ಮೋದಿಗೆ ರಾಮ ಮಂದಿರ ನಿರ್ಮಿಸಲು ಸಾಧ್ಯವಿಲ್ಲವೆಂದಾದರೆ ರಾಜೀನಾಮೆ ನೀಡಲಿ. ನಮಗೆ ದೇಶದಲ್ಲಿ ರಾಮ ಮಂದಿರ ನಿರ್ಮಿಸುವ, ರೈತರಿಗೆ ಬೆಳೆಗಳ ಬೆಲೆ ಹಾಗೂ ಯುವಕರಿಗೆ ಉದ್ಯೋಗ ನೀಡುವ ಸರ್ಕಾರ ಬೇಕಿತ್ತು ಇದಕ್ಕಾಗೇ ಜನರು ಮತ ನೀಡಿದ್ದರು. ದೇಶಕ್ಕೆ ರಾಮನೂ ಸಿಗಲಿಲ್ಲ, ರೈತರಿಗೆ ಬೆಲೆಯೂ ಸಿಗಲಿಲ್ಲ ಅತ್ತ ಯುವಕರಿಗೆ ಉದ್ಯೋಗವೂ ಸಿಗಲಿಲ್ಲ' ಎಂದಿದ್ದಾರೆ.