Asianet Suvarna News Asianet Suvarna News

ಎಸ್‌ಎಸ್‌ಎಲ್‌ಸಿ ರಿಸಲ್ಟ್‌: ಯಾದಗಿರಿಯಲ್ಲಿ 675 ಶಿಕ್ಷಕರ ಕೊರತೆ ಮಧ್ಯೆಯೂ ಉತ್ತಮ ಫಲಿತಾಂಶ

ಪರೀಕ್ಷೆಯಲ್ಲಿ ನಕಲು ಸಮರ್ಥನೀಯವಲ್ಲ. ಆದರೆ, ಇದ ತಡೆಗಟ್ಟುವ ಕುರಿತು ಕಠಿಣ ಕ್ರಮಗಳನ್ನು ಜಾರಿಗೊಳಿಸುವ ಇಲಾಖೆ ಇದಕ್ಕಾಗಿ ವ್ಯವಸ್ಥೆಗಳಿಗೆ ಖರ್ಚು ಮಾಡುವ ಹಣದಲ್ಲಿ ಶಿಕ್ಷಕರ ನೇಮಿಸಿದರೆ ಅಂತಹ ಸಂದರ್ಭವೇ ಬರುವುದಿಲ್ಲ ಅನ್ನೋದು ಶಿಕ್ಷಣ ವಲಯದ ಅನಿಸಿದೆ.
 

Good Result Despite shortage of 675 Teachers in Yadgir in SSLC Result grg
Author
First Published May 10, 2024, 11:52 AM IST

ಆನಂದ್ ಎಂ. ಸೌದಿ

ಯಾದಗಿರಿ(ಮೇ.10):  ಗುರುವಾರ ಪ್ರಕಟಗೊಂಡ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲಾವಾರು ರ್‍ಯಾಂಕ್‌ ಪಟ್ಟಿಯಲ್ಲಿ ಯಾದಗಿರಿ ಕೊನೆಯ 35ನೇ ಸ್ಥಾನದಲ್ಲಿದ್ದು, ಈ ಬಾರಿ ಶೇ.27.20 ರಷ್ಟು ಫಲಿತಾಂಶ ಕುಸಿದಿರುವುದು ಆತಂಕ ಮೂಡಿಸಿದೆ.
ಇಂತಹ ಎಸ್ಸೆಸ್ಸೆಲ್ಸಿ ಫಲಿತಾಂಶಕ್ಕೆ ಶಿಕ್ಷಕರ ಕೊರತೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಮಂಜೂರಾದ ಶಿಕ್ಷಕರ ಹುದ್ದೆಗಳ ಪೈಕಿ ಶೇ.50ರಷ್ಟು ಹುದ್ದೆಗಳು ಖಾಲಿಯಿವೆ. ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಹೆಚ್ಚಳ ಮಾಡಬೇಕೆಂಬ ಒತ್ತಡ ಇಲಾಖೆಯ ಮೇಲ್ಮಟ್ಟದ ಅಧಿಕಾರಿಗಳಿಂದ ಇರುತ್ತಾದರೂ, ಶಿಕ್ಷಕರ ಹುದ್ದೆ ಭರ್ತಿ ಮಾಡುವಲ್ಲಿನ ಕಾಳಜಿ ಇರದಿರುವುದು ದುರದೃಷ್ಟಕರ ಅಂತಾರೆ ಇಲ್ಲಿನ ಶಿಕ್ಷಕ ವೃಂದ.

ಪರೀಕ್ಷೆಯಲ್ಲಿ ನಕಲು ಸಮರ್ಥನೀಯವಲ್ಲ. ಆದರೆ, ಇದ ತಡೆಗಟ್ಟುವ ಕುರಿತು ಕಠಿಣ ಕ್ರಮಗಳನ್ನು ಜಾರಿಗೊಳಿಸುವ ಇಲಾಖೆ ಇದಕ್ಕಾಗಿನ ವ್ಯವಸ್ಥೆಗಳಿಗೆ ಖರ್ಚು ಮಾಡುವ ಹಣದಲ್ಲಿ ಶಿಕ್ಷಕರ ನೇಮಿಸಿದರೆ ಅಂತಹ ಸಂದರ್ಭವೇ ಬರುವುದಿಲ್ಲ ಅನ್ನೋದು ಶಿಕ್ಷಣ ವಲಯದ ಅನಿಸಿದೆ.

ಬೆಂಗಳೂರು: ಬಿಬಿಎಂಪಿ ಶಾಲೆಗಳಲ್ಲಿ ಶೇ. 68.78ರಷ್ಟು ಫಲಿತಾಂಶ

ಯಾದಗಿರಿ ಸೇರಿದಂತೆ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ನಕಲು ತಡೆಗೆ ಇಲಾಖೆ ಕಠಿಣ ಕ್ರಮಗಳನ್ನು ಕೈಗೊಂಡಿತ್ತು. ವೆಬ್‌ ಕಾಸ್ಟಿಂಗ್‌, ಬಾಡಿ ಕ್ಯಾಮರಾ, ಭದ್ರತೆ, ಸಿಸಿಟಿವಿ ಮುಂತಾದವುಗಳು ಸರಿಯಾದ ಕ್ರಮವಾದರೂ, ಪ್ರತಿ ಬಾರಿ ಕೋಟ್ಯಂತರ ರುಪಾಯಿಗಳ ಇಷ್ಟು ಖರ್ಚು ಮಾಡುವ ಬದಲು, ಶಿಕ್ಷಕರ ನೇಮಕ ಮಕ್ಕಳ ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ಸಾಧ್ಯ ಎನ್ನಲಾಗಿದೆ.

ಈ ಬಾರಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಮುಂದಿನ ದಿನಮಾನಗಳಲ್ಲಿ ನಕಲು ವ್ಯವಸ್ಥೆಯನ್ನು ಬುಡಸಮೇತ ಕಿತ್ತು ಹಾಕುವ ಪ್ರಯತ್ನವಾಗಿದ್ದು ಶ್ಲಾಘನೀಯ. ಆದರೆ, ಮಕ್ಕಳ ಶಿಕ್ಷಣ ಗುಣಮಟ್ಟ ಸುಧಾರಿಸಲು ನೀಡಬೇಕಾದ ಶಿಕ್ಷಕರನ್ನೇ ನೇಮಿಸದಿದ್ದರೆ ಫಲಿತಾಂಶ ಸುಧಾರಣೆ ಹೇಗೆ ಸಾಧ್ಯ ಅನ್ನೋದು ಶಿಕ್ಷಣತಜ್ಞರ ಅಭಿಮತ.

ಅಂಕಿ-ಅಂಶಗಳತ್ತ ಗಮನ ಹರಿಸುವುದಾದರೆ, ಯಾದಗಿರಿ ಜಿಲ್ಲೆಯಲ್ಲಿ ಒಟ್ಟು ಮಂಜೂರಾದ 1,435 ಶಿಕ್ಷಕರ ಹುದ್ದೆಗಳ ಪೈಕಿ, ಕೇವಲ ನೇಮಕಗೊಂಡ 760 ಶಿಕ್ಷಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, 675 ಶಿಕ್ಷಕರ ಹುದ್ದೆಗಳು ಖಾಲಿಯಿವೆ.
ಅದರಲ್ಲೂ, ಆಂಗ್ಲ ಭಾಷೆಯಲ್ಲಿ 104, ಭೌತಶಾಸ್ತ್ರ, ಗಣಿತ, ರಸಾಯನಶಾಸ್ತ್ರ (ಪಿಸಿಎಂ) ನಲ್ಲಿ 98, ರಸಾಯನಶಾಸ್ತ್ರ, ಪ್ರಾಣಿಶಾಸ್ತ್ರ, ಮಾನವಶಾಸ್ತ್ರ (ಸಿಬಿಝೆಡ್‌)ನಲ್ಲಿ 76, ಹಿಂದಿಯಲ್ಲಿ 78, ಮಾತೃಭಾಷೆ ಕನ್ನಡದಲ್ಲೇ 93 ಹಾಗೂ ಆರ್ಟ್ ಕನ್ನಡದಲ್ಲಿ 100 ಶಿಕ್ಷಕರ ಹುದ್ದೆಗಳು ಖಾಲಿಯಿರುವುದರಿಂದ ಶೈಕ್ಷಣಿಕ ಗುಣಮಟ್ಟ ಸುಧಾರಣೆ ನಿರೀಕ್ಷೆ ಹೇಗೆ ಸಾಧ್ಯ ?

2023-24 ಶೈಕ್ಷಣಿಕ ವರ್ಷದ ಆರಂಭದಲ್ಲೇ ಜಿಲ್ಲೆಯಿಂದ ವಿವಿಧ ಜಿಲ್ಲೆಗಳಿಗೆ 800-900 ಶಿಕ್ಷಕರು ವರ್ಗಾವಣೆಗೊಂಡರು. ಬೇರೆ ಬೇರೆ ಭಾಗಗಳಿಂದ ಇಲ್ಲಿಗೆ ಬರುವವರ ಸಂಖ್ಯೆ ಎರಡಂಕಿ ದಾಟಲಿಲ್ಲ. ಖಾಲಿಯಿರುವ ಹುದ್ದೆಗಳಿಗೆ ಅತಿಥಿ ಶಿಕ್ಷಕರ ನೇಮಕ ಪ್ರಕ್ರಿಯೆ ಸೆಪ್ಟೆಂಬರ್‌-ಅಕ್ಟೋಬರ್‌ ಅಂತ್ಯಕ್ಕೆ ಪೂರ್ಣಗೊಳ್ಳುವದರಲ್ಲಿ ಮಕ್ಕಳು ಅರ್ಧದಷ್ಟು ಸಿಲೆಬಸ್‌ನಿಂದ ವಂಚಿತರಾಗುತ್ತಾರೆ. ಇನ್ನುಳಿದ ದಿನಗಳಲ್ಲಿ ಹಬ್ಬ- ಜಯಂತಿ ಮತ್ತಿತರ ರಜೆಗಳಿಂದಾಗಿ ಕೊನೆಗೆ ಪರೀಕ್ಷೆಯ ದಿನಗಳ ಒತ್ತಡ ಹೆಚ್ಚಿ "ನಾಮ್‌ ಕೆ ವಾಸ್ತೆ" ಸಿಲೆಬಸ್‌ ಮುಗಿಸಲಾಗುತ್ತದೆ.

ಪ್ರಾಥಮಿಕದಿಂದ ಉನ್ನತೀಕರಣಗೊಂಡ ಜಿಲ್ಲೆ 19 ಪ್ರೌಢಶಾಲೆಗಳು "ಏಕೋಪಾಧ್ಯಾಯ"ರಿದ್ದಾಗ ಮಕ್ಕಳ ಕಲಿಕೆ ಹಾಗೂ ಭಾರಿ ಪ್ರಮಾಣದಲ್ಲಿ ಫಲಿತಾಂಶದ ಹೆಚ್ಚಳ ನಿರೀಕ್ಷೆ ಮಾಡುವುದಾದರೂ ಹೇಗೆ ಎನ್ನುವ ಯಾದಗಿರಿ ನಿವೃತ್ತ ಶಿಕ್ಷಕ ಶರಣಬಸಪ್ಪ, ನಕಲನ್ನು ಸಮರ್ಥನೆ ಮಾಡಲಿಕ್ಕಾಗದು. ಆದರೆ, ಶಿಕ್ಷಕರನ್ನೇ ನೇಮಿಸದೆ ಮಕ್ಕಳ ಗುಣಮಟ್ಟ ಸುಧಾರಿಸಿ ಎಂದರೆ ಹೇಗೆ ಎಂದು ಪ್ರಶ್ನಿಸುತ್ತಾರೆ.

ಮುಂದಿನ ವರ್ಷದಿಂದ ಇಲ್ಲಿ 10ನೇ ಕ್ಲಾಸ್‌ ಪಾಸಾಗೋಕೆ ಕನಿಷ್ಠ ಶೇ. 40 ಮಾರ್ಕ್ಸ್‌ ಗಳಿಸೋದು ಕಂಪಲ್ಸರಿ

ಶಿಕ್ಷಕರ ಇಂತಹ ಕೊರತಗಳಿಂದಾಗಿ ಉಡುಪಿ, ಮಂಗಳೂರು, ಬಳ್ಳಾರಿ, ಧಾರವಾಡ, ಗಂಗಾವತಿ, ಕಲಬುರಗಿ, ಬೆಂಗಳೂರು ಮುಂತಾದ ಬೇರೆ ಬೇರೆ ಜಿಲ್ಲೆಗಳಿಗೆ ವಲಸೆ ಹೋಗಿ ಶಿಕ್ಷಣ ಪಡೆಯುತ್ತಿರುವ ಇಲ್ಲಿನ ಪ್ರತಿಭಾವಂತ ಮಕ್ಕಳ ಫಲಿತಾಂಶ ಶೇ.95-98 ರಷ್ಟು ಕಂಡು ಬರುತ್ತದೆ. ಅಂತಹ ನಮ್ಮ ಮಕ್ಕಳು ಇಲ್ಲಿನವರೇ ಆಗಿದ್ದು, ಮೂಲಸೌಲಭ್ಯ ಹಾಗೂ ಶಿಕ್ಷಕರ ಕೊರತೆ ಇರದಿದ್ದರೆ ಅವರೇಕೆ ವಲಸೆ ಹೋಗುತ್ತಿದ್ದರು ಅನ್ನೋ ಮಾತುಗಳು ಪಾಲಕರ ವಲಯದಲ್ಲಿ ಪ್ರತಿಧ್ವನಿಸುತ್ತವೆ.

ಯಾದಗಿರಿ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಕಡಮೆಯಾಗಿದ್ದರೂ, ಪರೀಕ್ಷಾ ವ್ಯವಸ್ಥೆಯಲ್ಲಿನ ಸುಧಾರಣೆ ಮುಂದಿನ ದಿನಗಳಲ್ಲಿ ಒಳ್ಳೆಯ ಫಲ ನೀಡಲಿದೆ. ಅರ್ಧದಷ್ಟು ಶಿಕ್ಷಕರ ಕೊರತೆಯ ನಡುವೆಯೂ ಈ ಸಾಧನೆ ಶಿಕ್ಷಕರ ಶ್ರಮಕ್ಕೆ ಉದಾಹರಣೆ ಎಂದು ಯಾದಗಿರಿ ಡಿಡಿಪಿಐ ಮಂಜುನಾಥ್‌ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios