ಸೇಫ್ಟಿ ಪಿನ್… ಸಾಲ ತೀರಿಸಲು ಹುಟ್ಟಿದ ಈ ಸಣ್ಣ ಸಾಧನ ಇಂದು ಫ್ಯಾಷನ್ ಜಗತ್ತಿನಲ್ಲಿಯೂ ತನ್ನ ಛಾಪು ಮೂಡಿಸಿದೆ. 

ಸೇಫ್ಟಿ ಪಿನ್ ಕೇವಲ ತಂತಿಯ ತುಂಡಲ್ಲ, ಬದಲಾಗಿ ಮನೆಯಲ್ಲಿ ಚಿಕ್ಕ ಪುಟ್ಟ ಕೆಲಸಗಳಿಗೆ ಬಳಕೆಯಾಗುವ ಮತ್ತು ಫ್ಯಾಷನ್ ಜಗತ್ತಿನಲ್ಲಿ ತನ್ನದೇ ಸ್ಥಾನವನ್ನು ಗಳಿಸಿರುವ ಒಂದು ಮಾಂತ್ರಿಕ ಸಾಧನ. ಇದು ಪ್ರತಿ ಬಾರಿಯೂ ಅನೇಕ ಸಮಸ್ಯೆಗಳನ್ನು ಮೌನವಾಗಿ ಪರಿಹರಿಸುವ ಸಣ್ಣ ಸೂಪರ್ ಹೀರೋ ಆಗಿದೆ. ಶಾಲೆಯಲ್ಲಿ ಶರ್ಟ್‌ನ ಬಟನ್ ಮುರಿದರೆ ಸೇಫ್ಟಿ ಪಿನ್ ಅದನ್ನು ಉಳಿಸುತ್ತದೆ. ದುಪಟ್ಟಾ ಮತ್ತು ಸೀರೆಗೆ ಇದು ಅತ್ಯಂತ ಮುಖ್ಯವಾದ ಸಾಧನವಾಗಿದೆ. ಹೀಗೆ ಸೀರೆಗಳಿಂದ ಹಿಡಿದು ಮಕ್ಕಳ ಸಡಿಲ ಬಟ್ಟೆಗಳನ್ನು ಸರಿಪಡಿಸುವವರೆಗೆ ಸೇಫ್ಟಿ ಪಿನ್ ತಾಯಂದಿರ ಸೂಪರ್ ಪವರ್ ಆಗಿದೆ.

ಸೇಫ್ಟಿ ಪಿನ್ ತಯಾರಿಸುವ ಸಮಯದಲ್ಲಿ ಒಂದು ದಿನ ಇದನ್ನು ಪ್ರತಿ ಮನೆಯಲ್ಲೂ ಬಳಸಲಾಗುತ್ತದೆ ಎಂದು ಬಹುಶಃ ಕಂಡುಹಿಡಿದವರೇ ಊಹಿಸಿಲ್ಲ. ಪ್ರತಿಯೊಂದು ಮನೆಯ ಹೊಲಿಗೆ ಕಿಟ್‌ನಲ್ಲಿ ಮತ್ತು ಹೆಣ್ಮಕ್ಕಳ ಬಟ್ಟೆ ಬ್ಯಾಗ್ ಅಥವಾ ಪರ್ಸ್‌ನಲ್ಲಿ ತನ್ನದೇ ಆದ ಸ್ಥಾನವನ್ನು ಹೊಂದಿರುವ ಒಂದು ಸಣ್ಣ ಲೋಹದ ತುಂಡು ಈ ಸೇಫ್ಟಿ ಪಿನ್. ನೋಡುವುದಕ್ಕೆ ಚಿಕ್ಕದಾಗಿ ಕಂಡರೂ ಅದರ ಪವರ್ ಎಷ್ಟು ಅದ್ಭುತವಾಗಿದೆಯೆಂದರೆ ಅದು ಫ್ಯಾಷನ್ ಜಗತ್ತಿಗೂ ಹರಡಿದೆ. ಹಾಗಾದರೆ ಬನ್ನಿ, ಈ ಸಣ್ಣ ಸೇಫ್ಟಿ ಪಿನ್‌ನ ಸ್ಟೋರಿ ತಿಳಿದುಕೊಳ್ಳೋಣ.

ಸೇಫ್ಟಿ ಪಿನ್‌ ಹೇಗೆ ಕಂಡುಹಿಡಿಯಲಾಯಿತು?
ಒಂದು ಸಾಮಾನ್ಯ ದಿನ. ಒಂದು ಸಾಮಾನ್ಯ ಕಚೇರಿ. ಓರ್ವ ಸಾಮಾನ್ಯ ವ್ಯಕ್ತಿ ವಾಲ್ಟರ್ ಹಂಟ್ ತಿಳಿಯದೆಯೇ ಇಂದು ಪ್ರತಿ ಮನೆಯಲ್ಲೂ ಕಂಡುಬರುವ ಸೇಫ್ಟಿ ಪಿನ್‌ ಕಂಡುಹಿಡಿದರು. ಮಜಾ ಅಂದ್ರೆ ಸೇಫ್ಟಿ ಪಿನ್‌ ಅನ್ನು ಪ್ರಯೋಗಾಲಯದಲ್ಲಿ ಕಂಡುಹಿಡಿಯಲಾಗಿಲ್ಲ, ಸಾಲವನ್ನು ತೀರಿಸಲು. ವಾಲ್ಟರ್ ಹಂಟ್ ಆ ದಿನ ತನ್ನ ನ್ಯೂಯಾರ್ಕ್ ಕಚೇರಿಯಲ್ಲಿ ಕುಳಿತಿದ್ದರು. ಅವರು ಮೆಕ್ಯಾನಿಕ್ ಆಗಿದ್ದವರು. 15 ಡಾಲರ್ ಸಾಲದಿಂದ ತೊಂದರೆಗೀಡಾಗಿದ್ದರು. ಹಣ ಮತ್ತು ಸಮಯದ ನಿರ್ಬಂಧ. ಹಾಗಾಗಿ ಹಂಟ್ ಮೇಜಿನ ಮೇಲೆ ಬಿದ್ದಿದ್ದ ಸಾಮಾನ್ಯ ತಂತಿಯನ್ನು ಎತ್ತಿಕೊಂಡು ಯಾವುದೇ ನಿರ್ದಿಷ್ಟ ಉದ್ದೇಶವಿಲ್ಲದೆ ಅದನ್ನು ಬಗ್ಗಿಸಲು ಪ್ರಾರಂಭಿಸಿದರು. ಅವರ ಮನಸ್ಸಿನಲ್ಲಿ ಯಾವುದೇ ಯೋಜನೆ ಇರಲಿಲ್ಲ. ತಂತಿಯನ್ನು ಇಲ್ಲಿ ಮತ್ತು ಅಲ್ಲಿ ಬಗ್ಗಿಸುತ್ತಾ, ಒಂದು ತುದಿಯಲ್ಲಿ ಕೊಕ್ಕೆ ಮತ್ತು ಇನ್ನೊಂದು ತುದಿಯಲ್ಲಿ ಬಟ್ಟೆಗಳನ್ನು ಲೂಪ್‌ನಂತೆ ಸುರಕ್ಷಿತವಾಗಿ ಹಿಡಿದಿಟ್ಟುಕೊಳ್ಳುವ ಡಿಸೈನ್ ಕ್ರಿಯೇಟ್ ಮಾಡಿದ್ರು ಹಂಟ್.

ಸಣ್ಣ ಸಾಲದ ಚಿಂತೆಯಿಂದಾಗಿ ಈ ಬಹಳ ಉಪಯುಕ್ತವಾದ ವಸ್ತುವನ್ನು ಕಂಡುಹಿಡಿಯಲಾಯಿತು. ಆದರೆ ವಾಲ್ಟರ್ ಹಂಟ್ ತನ್ನ ಕೈಯಲ್ಲಿ ಮಾಡಿದ ಈ ಸಣ್ಣ ವಸ್ತುವನ್ನು ನೋಡಿದಾಗ, ಬಟ್ಟೆ ನೀಟಾಗಿ ಕಾಣುವಂತೆ ಬಳಸಲು ಇದು ಉತ್ತಮ ಮಾರ್ಗವಾಗಿದೆ ಎಂದು ಅರಿತುಕೊಂಡರು.

ಸೂಜಿ ಚುಚ್ಚದೆ ಮತ್ತು ಬಟ್ಟೆಗಳಿಗೆ ಹಾನಿಯಾಗದಂತೆ ಇದನ್ನು ಬಳಸಬಹುದು. ಆದ್ದರಿಂದ ಅವರು ಅದಕ್ಕೆ "ಸೇಫ್ಟಿ ಪಿನ್" ಎಂದು ಹೆಸರಿಸಿದರು. ಮತ್ತು ಅದರ ಪೇಟೆಂಟ್ ಅನ್ನು ಏಪ್ರಿಲ್ 10, 1849 ರಂದು ಪಡೆದರು. ಆದರೆ ಹಂಟ್‌ಗೆ ತನ್ನ ಆವಿಷ್ಕಾರದ ಬಗ್ಗೆ ಹೆಚ್ಚಿನ ವಿಶ್ವಾಸವಿರಲಿಲ್ಲ. ತನ್ನ ಸಾಲವನ್ನು ತೀರಿಸುವ ಆತುರದಲ್ಲಿ, ಅವರು ತನ್ನ ಪೇಟೆಂಟ್‌ನ ಹಕ್ಕುಗಳನ್ನು ಕೇವಲ 400 ಡಾಲರ್‌ಗಳಿಗೆ ಮಾರಿದರು. ಅದರಲ್ಲಿ ಅವರು ತನ್ನ 15 ಡಾಲರ್ ಸಾಲವನ್ನು ತೀರಿಸಿದರು. ನಂತರ ಅದನ್ನು ಮುಂದಿನ ಆವಿಷ್ಕಾರಕ್ಕೆ ತಯಾರಿ ಮಾಡಲು ಖರ್ಚು ಮಾಡಿದರು.

ಪ್ರಪಂಚದಾದ್ಯಂತ ಬಳಕೆಯಾಗ್ತಿದೆ
ಈ ಸಣ್ಣ ತುಂಡು ಒಂದು ದಿನ ಜಗತ್ತನ್ನೇ ಆಕ್ರಮಿಸುತ್ತದೆ ಎಂದು ಯಾರಿಗೆ ಗೊತ್ತು?. ಸೇಫ್ಟಿ ಪಿನ್ ಬಟ್ಟೆಗೆ ಹಾಕಲು ಸುಲಭವಾದ ಮಾರ್ಗವನ್ನು ಒದಗಿಸಿದ್ದಲ್ಲದೆ, ಡೈಪರ್‌, ಬ್ಯಾಗ್ ಮತ್ತು ತುರ್ತು ರಿಪೇರಿಗಳಲ್ಲಿಯೂ ಸಹ ಬಳಸಲ್ಪಟ್ಟಿತು. ಇಂದು, ಇದು ಪ್ರತಿಯೊಂದು ಹೊಲಿಗೆ ಕಿಟ್ ಮತ್ತು ಮನೆಯ ಅನಿವಾರ್ಯ ಭಾಗವಾಗಿದೆ. ನಾವು ಇದನ್ನು ಹಲವು ಉದ್ದೇಶಗಳಿಗಾಗಿ ಬಳಸುತ್ತೇವೆ. ಆದರೆ ಅದು ಸಾಲದಿಂದ ಹುಟ್ಟಿದ ಕಲ್ಪನೆ ಎಂದು ಯಾರಿಗೂ ತಿಳಿದಿಲ್ಲ.