ಒಂದು ಗೊಂಬೆ ನಿಮ್ಮ ಅದೃಷ್ಟ ಬದಲಿಸಬಹುದಾ? ಈ ಪ್ರಶ್ನೆಗೆ ಯಸ್ ಅಂತ ಉತ್ತರ ನೀಡ್ದೆ ಬೇರೆ ದಾರಿ ಇಲ್ಲ. ಚೀನಾದ ಉದ್ಯಮಿಯೊಬ್ಬ ಗೊಂಬೆಯಿಂದ್ಲೇ ಕೋಟಿ ಕೋಟಿ ಗಳಿಸ್ತಿದ್ದಾನೆ. ಜನ ಗೊಂಬೆ ಖರೀದಿಗೆ ಕ್ಯೂ ನಿಲ್ತಿದ್ದಾರೆ.
ಮಾರ್ಕೆಟ್ (Market) ನಲ್ಲಿ ಯಾವ ವಸ್ತು ಯಾರ ಅದೃಷ್ಟ ಬದಲಿಸುತ್ತೆ ಹೇಳೋಕೆ ಸಾಧ್ಯವಿಲ್ಲ. ಕೆಲವೊಂದು ವಸ್ತುಗಳು ರಾತ್ರೋರಾತ್ರಿ ಪ್ರಸಿದ್ಧಿಗೆ ಬರುತ್ವೆ. ಅದನ್ನು ಖರೀದಿಸೋಕೆ ಜನರು ಕ್ಯೂ ನಿಲ್ತಾರೆ. ಕಂಪನಿಯ ಟರ್ನ್ ಓವರ್ ಕೋಟಿ ದಾಟುತ್ತೆ. ಈಗ ಚೀನಾದ ಕಂಪನಿಯ ಸಿಇಒ ಇದೇ ವಿಷ್ಯಕ್ಕೆ ಚರ್ಚೆಗೆ ಬಂದಿದ್ದಾರೆ. ರಾತ್ರೋರಾತ್ರಿ ಅವರ ಕನಸು ನನಸಾಗಿದೆ. ಗೊಂಬೆಯೊಂದು 38 ವರ್ಷದ ವ್ಯಕ್ತಿ ಜೀವನವನ್ನೇ ಬದಲಿಸಿದೆ. ಒಂದೇ ದಿನದ ಅವರ ಸಂಪಾದನೆ ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿಯನ್ನು ಹಿಂದಿಕ್ಕಿದೆ.
ಗೊಂಬೆ (doll)ಗಳಂದ್ರೆ ಮಕ್ಕಳಿಂದ ವಯಸ್ಕರವರೆಗೆ ಎಲ್ಲರಿಗೂ ಇಷ್ಟ. ಮಾರುಕಟ್ಟೆಯಲ್ಲಿ ಸಾವಿರಾರು ಗೊಂಬೆಗಳಿವೆ. ಈ ಗೊಂಬೆಗಳು ಕೀ ಚೈನ್ ಆಗಿ, ಬ್ಯಾಗ್ ಆಗಿ ರಾರಾಜಿಸ್ತಿರುತ್ತವೆ. ಆದರೆ ಮಕ್ಕಳ ಗೊಂಬೆಯೊಂದು ಇಷ್ಟೊಂದು ಹೆಸರು ಮಾಡುತ್ತೆ ಅಂದ್ರೆ ನಂಬೋದು ಕಷ್ಟ. ಆದ್ರೆ ಚೀನಾದ ವಾಂಗ್ ನಿಂಗ್ (Wang Ning )ಜೀವನದಲ್ಲಿ ಇದು ಸತ್ಯವಾಗಿದೆ. ವಾಂಗ್ ನಿಂಗ್, ಆಟಿಕೆ ತಯಾರಿಕಾ ಕಂಪನಿ ಪಾಪ್ ಮಾರ್ಟ್ ಇಂಟರ್ನ್ಯಾಷನಲ್ ಗ್ರೂಪ್ನ ಸಿಇಒ ಮತ್ತು ಅಧ್ಯಕ್ಷರಾಗಿದ್ದಾರೆ. ಈ ಕಂಪನಿ ತಯಾರಿಸುವ ಗೊಂಬೆ ಲಾಬೂಬು ಸದ್ಯ ಪ್ರಪಂಚದಾದ್ಯಂತ ಸದ್ದು ಮಾಡ್ತಿದೆ. ಈ ಗೊಂಬೆ ಪ್ರಪಂಚದಾದ್ಯಂತ ಅನೇಕ ಮಹಿಳಾ ಸೆಲೆಬ್ರಿಟಿಗಳ ನೆಚ್ಚಿನ ಆಟಿಕೆಯಾಗಿದೆ. ಲಬೂಬು ಒಂದು ಮುದ್ದಾದ ಮತ್ತು ಭಯಾನಕ ಗೊಂಬೆ. ಕೀ ಚೈನ್ ನಿಂದ ಹಿಡಿದು ಲಬೂಬು ಗೊಂಬೆಯ ಚೀಲ ಜನರ ಆಕರ್ಷಣೆಯ ಕೇಂದ್ರವಾಗಿದೆ.
ಲಬೂಬು ಗೊಂಬೆ (Labubu doll) ಎಂದರೇನು? : ಲಬೂಬು ದಿ ಮಾನ್ಸ್ಟರ್ಸ್ ಗುಂಪಿನ ಆಟಿಕೆ. ಈ ಗೊಂಬೆ ಅದರ ಮೊನಚಾದ ಕಿವಿ, ದೊಡ್ಡ, ಅಗಲವಾದ ಕಣ್ಣುಗಳು ಮತ್ತು ಭಯಾನಕ ನಗುವಿಗೆ ಹೆಸರುವಾಸಿಯಾಗಿದೆ. ಈ ಗೊಂಬೆಯ ವಿನ್ಯಾಸವು ನಾರ್ಡಿಕ್ ಪುರಾಣಗಳಿಂದ ಪ್ರೇರಿತವಾಗಿದೆ. ಲಬೂಬು ಗೊಂಬೆಯನ್ನು ಹಾಂಗ್ ಕಾಂಗ್ ಮೂಲದ ವಿನ್ಯಾಸಕ ಕೇಸಿಂಗ್ ಲಂಗ್ ರಚಿಸಿದ್ದಾರೆ. ಇದರ ನಂತರ, 2019 ರಲ್ಲಿ, ಚೀನಾದ ಆಟಿಕೆ ಕಂಪನಿ ಪಾಪ್ ಮಾರ್ಟ್ಗೆ ಲಬೂಬು ಗೊಂಬೆಗಳನ್ನು ತಯಾರಿಸಲು ಪರವಾನಗಿ ನೀಡಲಾಯಿತು. ಈ ಗೊಂಬೆ 2025ರಲ್ಲಿ ಅತಿ ಹೆಚ್ಚು ಮಾರಾಟವಾಗ್ತಿರುವ ಗೊಂಬೆಯಾಗಿದೆ.
ಸಂಪತ್ತು ಎಷ್ಟು ಹೆಚ್ಚಾಗಿದೆ? : ಭಾರತೀಯ ನಟಿ ಅನನ್ಯಾ ಪಾಂಡೆ ಕೂಡ ಲಬೂಬೂ ಗೊಂಬೆಯೊಂದಿಗೆ ಕಾಣಿಸಿಕೊಂಡಿದ್ದಾರೆ. ಥಾಯ್ ರ್ಯಾಪರ್ ಮತ್ತು ಗಾಯಕಿ ಲಿಸಾ ಪಿಎಸ್ ಕೂಡ ಇದನ್ನು ಖರೀದಿಸಿದ್ದಾರೆ. ಪ್ರಸಿದ್ಧ ಗಾಯಕಿಯರಾದ ರಿಹಾನ್ನಾ ಮತ್ತು ದುವಾ ಲಿಪಾ ಕೂಡ ಲಬೂಬೂ ಗೊಂಬೆಯತ್ತ ಆಕರ್ಷಿತರಾಗಿದ್ದಾರೆ. ಸೆಲೆಬ್ರಿಟಿಗಳು ಮಾತ್ರವಲ್ಲದೆ ಜನಸಾಮಾನ್ಯರು ಇದರ ಖರೀದಿಗೆ ಮುಗಿ ಬೀಳ್ತಿದ್ದಾರೆ. ಹಾಗಾಗಿಯೇ ಬೇಡಿಕೆ ಗಗನಕ್ಕೇರಿದೆ. ಲಾಬುಬು ಗೊಂಬೆಯ ಹೆಚ್ಚುತ್ತಿರುವ ಮಾರಾಟದಿಂದಾಗಿ, ವಾಂಗ್ ಸಂಪತ್ತು ಕೇವಲ 24 ಗಂಟೆಗಳಲ್ಲಿ 1.6 ಬಿಲಿಯನ್ ಡಾಲರ್ (ಸುಮಾರು 13 ಸಾವಿರ ಕೋಟಿ ರೂಪಾಯಿ) ಹೆಚ್ಚಾಗಿದೆ. ಈ ಮೊತ್ತ ಅಂಬಾನಿ ಮತ್ತು ಅದಾನಿ ಒಂದು ದಿನದಲ್ಲಿ ಗಳಿಸುವ ಮೊತ್ತಕ್ಕಿಂತ ಹೆಚ್ಚಾಗಿದೆ. ಪಾಪ್ ಮಾರ್ಟ್ನ ಮೊಬೈಲ್ ಅಪ್ಲಿಕೇಶನ್ ಅಮೆರಿಕದಲ್ಲಿ ಹೆಚ್ಚು ಡೌನ್ಲೋಡ್ ಮಾಡಲಾದ ಅಪ್ಲಿಕೇಶನ್ ಆಗಿದೆ.
ಚೀನಾ ಮತ್ತು ಅಮೆರಿಕ ಮಧ್ಯೆ ವ್ಯಾಪಾರ ಸಂಬಂಧ ಚೆನ್ನಾಗಿಲ್ಲ. ಆದ್ರೂ ಜನರು ಲಬೂಬು ಗೊಂಬೆ ಖರೀದಿಗೆ ಮುಗಿ ಬೀಳ್ತಿದ್ದಾರೆ. ಅಮೆರಿಕದ ಜನರು ಲಬೂಬು ಗೊಂಬೆಗಳನ್ನು ಖರೀದಿಸಲು ಗಂಟೆಗಟ್ಟಲೆ ಸಾಲಿನಲ್ಲಿ ಕಾಯುತ್ತಿದ್ದಾರೆ. ಇದು ಲಬೂಬು ಕೇವಲ ಆಟಿಕೆಯಲ್ಲ, ಭಾವನಾತ್ಮಕ ಸಂಪರ್ಕ ಹೊಂದಿದೆ ಎಂಬುದನ್ನು ತೋರಿಸುತ್ತದೆ. ಫೋರ್ಬ್ಸ್ ಪ್ರಕಾರ, ವಾಂಗ್ ನಿಂಗ್ ಅವರ ಒಟ್ಟು ಸಂಪತ್ತು ಸುಮಾರು 18.7 ಬಿಲಿಯನ್ ಡಾಲರ್ಗಳಷ್ಟಿದೆ.
ಮಾರಾಟ ನಿಲ್ಲಿಸಿದ್ದು ಏಕೆ? : ಲಬೂಬು ಗೊಂಬೆಯ ಜನಪ್ರಿಯತೆ ಹೆಚ್ಚಾಗ್ತಿದ್ದಂತೆ ಯುಕೆ ಅಂಗಡಿಯಲ್ಲಿ ಪಾಪ್ ಮಾರ್ಟ್ ತನ್ನ ಮಾರಾಟವನ್ನು ನಿಲ್ಲಿಸಿದೆ. ಇದಕ್ಕೆ ಕಾರಣ ನೂಕುನುಗ್ಗಲು, ಗೊಂಬೆ ಖರೀದಿಗೆ ಅತಿ ಉತ್ಸಾಹಿತರಾಗಿದ್ದ ಗ್ರಾಹಕರ ಮಧ್ಯೆ ಜಗಳವಾಗಿದೆ. ಶಾಂತತೆಗಾಗಿ ಪಾಪ್ ಮಾರ್ಟ್ ಗೊಂಬೆ ಮಾರಾಟವನ್ನು ನಿಲ್ಲಿಸಿದೆ.
