ಎಸ್‌ ಎಸ್‌ ಎಲ್‌ ಸಿಯಲ್ಲಿ 625ಕ್ಕೆ 625 ಅಂಕ ಪಡೆದ ಸರ್ಕಾರಿ ಶಾಲೆ ವಿದ್ಯಾರ್ಥಿ! ವರ್ಷದಲ್ಲೆ ತಂದೆಯನ್ನ ಕಳೆದುಕೊಂಡವನ ಸಾಧನೆ ಕಂಡು ಹುಬ್ಬೇರಿಸಿದ ಜನ! ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಎದುರು ಡಾಕ್ಟರ್‌ ಆಗೋ ಆಸೆ ಹೇಳಿಕೊಂಡ ಅಮೀತ್!

ವರದಿ: ಷಡಕ್ಷರಿ ಕಂಪೂನವರ್ ಏಷ್ಯಾನೆಟ್‌ ಸುವರ್ಣ ನ್ಯೂಸ್ 

ವಿಜಯಪುರ (ಮೇ 19) : ಸಾಧನೆಗೆ ಬಡತನ ಅಡ್ಡಿ ಆಗೊಲ್ಲ ಅನ್ನೋದಕ್ಕೆ ಈ ಯುವಕನೇ ತಾಜಾ ಉದಾಹರಣೆ. ಬಡತನದ ನಡುವೆ ಸರ್ಕಾರಿ ಶಾಲೆಯಲ್ಲಿ ಓದಿದ ವಿಜಯಪುರ ಜಿಲ್ಲೆಯ ಜುಮನಾಳ ಗ್ರಾಮದ ಈ ಯುವಕ ಎಸ್‌ ಎಸ್‌ ಎಲ್‌ ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದು ಸಾಧನೆ ಮಾಡಿದ್ದಾನೆ. ಕಡು ಬಡತನದ ನಡುವೆ ವಿದ್ಯಾರ್ಥಿಯ ಸಾಧನೆ ಎಲ್ಲರನ್ನ ಹುಬ್ಬೇರಿಸುವಂತೆ ಮಾಡಿದೆ. 

ಜುಮನಾಳ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಓದಿದ ಅಮಿತ್ : ವಿಜಯಪುರ ತಾಲೂಕಿನ ಅಮಿತ್ ಮಾದರ್‌ 625ಕ್ಕೆ 625 ಅಂಕಗಳನ್ನ ಪಡೆಯುವ ಮೂಲಕ ಸಾಧನೆ ಮಾಡಿದ್ದಾನೆ. ಜುಮನಾಳ ಗ್ರಾಮದ ಮಾದರ ಓಣಿ ನಿವಾಸಿಯಾಗಿರುವ ಅಮಿತ್ ತನ್ನ ಸಾಧನೆಯ ಮೂಲಕ ಎಲ್ಲರನ್ನ ಹುಬ್ಬೇರಿಸುವಂತೆ ಮಾಡಿದ್ದಾನೆ. ವಿಶೇಷ ಅಂದ್ರೆ ಅಮಿತ್ ಓದಿದ್ದು ಇದೆ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಎನ್ನುವುದು. ಸರ್ಕಾರಿ ಶಾಲೆಯಲ್ಲಿ ಓದಿದ್ರು ಅಮಿತ್ ಟಾಫರ್‌ ಆಗಿ ಮಿಂಚಿದ್ದಾನೆ.

ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಗ್ಗೆ ಒತ್ತಡವೇ: 08046110007 ಸಂಖ್ಯೆಗೆ ಕರೆ ಮಾಡಿ

ಬಡತನದಲ್ಲಿ ಅರಳಿದ ಪ್ರತಿಭೆ ಅಮೀತ್: ಅಮಿತ್ ಅಕ್ಷರಶಃ ಬಡತನದಲ್ಲಿ ಅರಳಿದ ಪ್ರತಿಭೆ. ಮನೆಯಲ್ಲಿ ಕಡು ಬಡತನ ಸಾಧನೆ ಮಾಡಿದ್ದಾನೆ. ಹುಟ್ಟಿನಿಂದಲು ಕಡು ಬಡತನದಲ್ಲೆ ಬೆಳೆದ ಅಮಿತ್ ತಾನು ಏನಾದರು ಸಾಧನೆ ಮಾಡಬೇಕು ಅಂದುಕೊಂಡಿದ್ದ. ಅಂದುಕೊಂಡಂತೆ ಈಗ ಸಾಧನೆ ಮಾಡಿದ್ದಾನೆ. ಬಡತನದಲ್ಲಿ ತಾಯಿ ಮಹಾದೇವಿಯೇ ದುಡಿದು ಮೂರು ಮಕ್ಕಳನ್ನ ಸಾಕಿದ್ದಾಳೆ. ಬಡತನದಲ್ಲು ತಾಯಿಯೊಂದಿಗೆ ಕೆಲಸ ಮಾಡುತ್ತಲೇ ಅಮಿತ್ ಈ ಸಾಧನೆ ಮಾಡಿದ್ದಾನೆ. 

ಹುಟ್ಟಿದ ವರ್ಷದಲ್ಲೆ ತಂದೆಯನ್ನ ಕಳೆದುಕೊಂಡಿದ್ದ: ಬಡತನದಲ್ಲೆ ಹುಟ್ಟಿದ ಅಮಿತ್ ದುರಾದೃಷ್ಟವೋ ಏನೋ, ಆತ ಹುಟ್ಟಿದ ಒಂದೇ ವರ್ಷದಲ್ಲೆ ತಂದೆ ಆನಂದ ಸಾವನ್ನಪ್ಪಿದ್ದಾರೆ. ತಂದೆ ಇಲ್ಲದಿದ್ದರು, ಅಮ್ಮನಲ್ಲೆ ತಂದೆಯನ್ನ ಕಾಣುತ್ತಾ ಬೆಳೆದ ಅಮಿತ್ ಇಂದು ಮಾಡಿದ ಸಾಧನೆ ಎಲ್ಲರನ್ನ ಹುಬ್ಬೇರಿಸುವಂತೆ ಮಾಡಿದೆ.

ವೈದ್ಯನಾಗೋ ಕನಸು ಕಂಡಿರೋ ಅಮೀತ್: ಸದ್ಯ ಎಸ್‌ ಎಸ್‌ ಎಲ್‌ ಸಿಯಲ್ಲಿ ಸಾಧನೆ ಮಾಡಿರೋ ಅಮಿತ್ ಗೆ ಮುಂದೆ ವೈದ್ಯನಾಗಬೇಕು ಎನ್ನುವ ಕನಸಿದೆ. ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜೊತೆಗೆ ಮಾತನಾಡಿದ ಅಮಿತ್ ತಾನು ಮೆಡಿಕಲ್‌ ಮಾಡುವ ಕನಸಿದೆ ಎಂದು ಹಂಚಿಕೊಂಡಿದ್ದಾನೆ. ವೈದ್ಯನಾಗಿ ಸೇವೆ ಮಾಡುವ ಆಸೆ ಇದೆ. ಈಗ ಪಿಯು ಸೈನ್ಸ್‌ ಮಾಡುವೆ ಎಂದಿದ್ದಾನೆ.

ತಾಯಿಯ ಕಾಲಿಗೆ ಎರಗಿ ಆಶೀರ್ವಾದ, ಸಿಹಿ ತಿನ್ನಿಸಿ ಸಂಭ್ರಮ: 625ಕ್ಕೆ 625ಅಂಕ ಪಡೆದಿರುವ ಅಮಿತ್ ಸುದ್ದಿ ತಿಳಿಯುತ್ತಿದ್ದಂತೆ ತಾಯಿ ಮಹಾದೇವಿ ಕಾಲಿಗೆ ಎರಗಿ ಆಶೀರ್ವಾದ ಪಡೆದಿದ್ದಾನೆ. ಬಳಿಕ ತಾಯಿ ಅಮಿತ್ ಗೆ ಸಿಹಿ ತಿನ್ನಿಸಿ ಸಂಭ್ರಮಿಸಿದ್ದಾಳೆ. ಇನ್ನು ಅಮಿತ್ ನಿವಾಸಕ್ಕೆ ಭೇಟಿ ನೀಡಿದ ಸಚಿವ ಗೋವಿಂದ ಕಾರಜೋಳ ಪುತ್ರ ಉಮೇಶ ಕಾರಜೋಳ ಸಿಹಿ ಅಮಿತ್ ಗೆ ಅಭಿನಂದಿಸಿದ್ದಾರೆ. ಗ್ರಾಮಸ್ಥರು ಅಮಿತ್ ಭೇಟಿ ಮಾಡಿ ಅಭಿನಂದಿಸಿದ್ದಾರೆ.

KARNATAKA SSLC TOPPERS LIST: ಒಟ್ಟು 145 ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ!

ಶೇ 85.63 ಫಲಿತಾಂಶ:  2021-22ನೇ ಸಾಲಿನ ಎಸ್​ಎಸ್‌ಎಲ್​ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಶೇಖಡವಾರು 85.63 ಫಲಿತಾಂಶ ಬಂದಿದೆ. ಇದು ಕಳೆದ 10 ವರ್ಷಗಳಲ್ಲಿ ದಾಖಲೆಯ ಫಲಿತಾಂಶವಾಗಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಬಿ.ಸಿ. ನಾಗೇಶ್ (Minister of Primary and SecondEducation BC Nagesh) ಫಲಿತಾಂಶ ಪ್ರಕಟಿಸಿದ್ದಾರೆ. ಕೊರೋನಾ ಆತಂಕ, ಹಿಜಾಬ್ ವಿವಾದದ ನಡುವೆ ಪರೀಕ್ಷೆಗೆ ಹಾಜರಾಗಿದ್ದ, 8,73,884 ವಿದ್ಯಾರ್ಥಿಗಳ ಪೈಕಿ 8,53,436 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ 7,30,881 ಮಂದಿ ಉತ್ತೀರ್ಣರಾಗಿದ್ದಾರೆ. ಇದರಲ್ಲಿ 40,061 ಮಂದಿ ಗ್ರೇಸ್ ಮಾರ್ಕ್ ಮೂಲಕ ಪಾಸ್ ಆಗಿದ್ದಾರೆ.

ಒಟ್ಟು 4,08,523 ಬಾಲಕರು ಪರೀಕ್ಷೆಗೆ ಹಾಜರಾಗಿ 3,52,752 ಮಂದಿ ಪಾಸ್ ಆಗುವ ಮೂಲಕ ಬಾಲಕರು ಶೇ. 86.34 ಮತ್ತು ಒಟ್ಟು 3,98,683 ಬಾಲಕಿಯರು ಪರೀಕ್ಷೆಗೆ ಹಾಜರಾಗಿ 3,68,579 ಮಂದಿ ಪಾಸ್ ಆಗಿ ಶೇ.92.44 ಫಲಿತಾಂಶದ ಮೂಲಕ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಒಟ್ಟು 145 ಮಂದಿ ಈ ಬಾರಿ 625ಕ್ಕೆ 625 ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.