ಸರ್ಕಾರಿ ಕೋಟಾದಡಿ ಓದಿ ವೈದ್ಯೆಯಾದ ಅಮೆರಿಕ ಪ್ರಜೆಗೆ ಹೈಕೋರ್ಟ್ ಹಿಗ್ಗಾಮುಗ್ಗಾ ತರಾಟೆ
ಭಾರತದ ಪ್ರಜೆಯೆಂದು ಘೋಷಿಸಿಕೊಂಡು ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಪದವಿ ಪೂರ್ಣಗೊಳಿಸಿ ನಂತರ ಹುಟ್ಟೂರಾದ ಅಮೆರಿಕಕ್ಕೆ ತೆರಳಿ ಅಲ್ಲಿಯೇ ನೆಲೆಸಲು ಮುಂದಾಗಿದ್ದ ಮಹಿಳಾ ವೈದ್ಯರೊಬ್ಬರ ವೈಖರಿಯನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಬೆಂಗಳೂರು (ಮಾ.21) : ಭಾರತದ ಪ್ರಜೆಯೆಂದು ಘೋಷಿಸಿಕೊಂಡು ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಪದವಿ ಪೂರ್ಣಗೊಳಿಸಿ ನಂತರ ಹುಟ್ಟೂರಾದ ಅಮೆರಿಕಕ್ಕೆ ತೆರಳಿ ಅಲ್ಲಿಯೇ ನೆಲೆಸಲು ಮುಂದಾಗಿದ್ದ ಮಹಿಳಾ ವೈದ್ಯರೊಬ್ಬರ ವೈಖರಿಯನ್ನು ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್(Karnataka highcourt), ಅನಿವಾಸಿ ಭಾರತೀಯ (ಎನ್‌ಆರ್‌ಐ) ಅಥವಾ ಭಾರತದ ಸಾಗರೋತ್ತರ ನಾಗರಿಕ (ಓಸಿಐ) ಕೋಟಾದಡಿ ವಿಧಿಸುವ ಎಂಬಿಬಿಎಸ್(MBBS) ಪದವಿಯ ಶುಲ್ಕ ಪಡೆದು ವಾಪಸ್ಸಾಗಲು ಮಹಿಳೆಗೆ ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ.
ಅಮೆರಿಕಕ್ಕೆ ತೆರಳಲು ಎಕ್ಸಿಟ್ ಪರ್ಮಿಟ್(Exit permit) ನೀಡಲು ನಿರಾಕರಿಸಿದ ಕೇಂದ್ರ ಸರ್ಕಾರದ ವಲಸೆ ಬ್ಯೂರೋ ಕ್ರಮ ಪ್ರಶ್ನಿಸಿ ಡಾ.ಭಾನು ಸಿ. ರಾಮಚಂದ್ರನ್(Dr Bhanu C Ramachandran) ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.
ನಗರದಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್: ಬಿಬಿಎಂಪಿ ವಿರುದ್ಧ ಹೈಕೋರ್ಟ್ ಕಿಡಿ
ವಿದೇಶಿ ಪ್ರಜೆ ವೀಸಾ ಹಾಗೂ ಪಾಸ್‌ಪೋರ್ಚ್ ಅವಧಿ ಮುಗಿದ ಮೇಲೆ ಕೇಂದ್ರ ಸರ್ಕಾರ ಮತ್ತು ವಲಸೆ ಬ್ಯೂರೋ ಅನುಮತಿಯಿಲ್ಲದೆ ಭಾರತದಲ್ಲಿ ನೆಲೆಸಲು ಅವಕಾಶವಿಲ್ಲ. ಆದರೆ, ಅರ್ಜಿದಾರೆ ಭಾರತೀಯ ಪ್ರಜೆ ಎಂಬುದಾಗಿ ಬಿಂಬಿಸಿಕೊಂಡು ರಾಜ್ಯದಲ್ಲಿ ದ್ವಿತೀಯ ಪಿಯು ಪೂರೈಸಿ ಸರ್ಕಾರದ ಕೋಟಾದಡಿ ಎಂಬಿಬಿಎಸ್ ಪದವಿ ಪೂರ್ಣಗೊಳಿಸಿದ್ದಾರೆ. ಆ ಮೂಲಕ ನಿಜವಾದ ಭಾರತೀಯ ಪ್ರಜೆಗೆ ಮೀಸಲಾಗಿದ್ದ ಸೀಟು ಕಸಿದುಕೊಂಡಿದ್ದಾರೆ ಎಂದು ಹೈಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ನಾಚಿಕೆಯಿಲ್ಲದೆ ಭಾರತೀಯ ಪ್ರಜೆ ಎಂದು ಸುಳ್ಳು ಹೇಳಿಕೊಂಡು ಇಲ್ಲಿನ ಸರ್ಕಾರಿ ಸೌಲಭ್ಯ ಪಡೆದುಕೊಂಡು ಎಂಬಿಬಿಎಸ್ ಪದವಿ ಪೂರ್ಣಗೊಳಿಸಿದ್ದಾರೆ. ಇದೀಗ ತನ್ನ ದೇಶವಾದ ಅಮೆರಿಕದಲ್ಲಿ ಉನ್ನತ ವ್ಯಾಸಂಗ ಮುಂದುವರೆಸಲು ಮತ್ತು ಅಲ್ಲಿಯೇ ನೆಲೆಸಲು ಯೋಜಿಸಿದ್ದಾರೆ. ಅನೈತಿಕತೆ ವಿಧಾನದಲ್ಲಿ ತನ್ನ ಗುರಿ ಸಾಧಿಸಲು ಮುಂದಾಗಿದ್ದಾರೆ. ಈ ನಡೆ ನಿಜಕ್ಕೂ ಖಂಡನಾರ್ಹವಾಗಿದೆ ಎಂದು ಪೀಠ ಕಟುವಾಗಿ ನುಡಿದಿದೆ.
ಇದೇ ವೇಳೆ ಆಕೆ ವಿದ್ಯಾರ್ಥಿನಿಯಾಗಿದ್ದು, ಸುಳ್ಳು ಹೇಳುವುದರಿಂದ ಮುಂದಾಗುವ ಕಾನೂನು ಪರಿಣಾಮಗಳ ಬಗ್ಗೆ ಅರಿವು ಹೊಂದಿಲ್ಲ. ಆದ್ದರಿಂದ ಪ್ರಕರಣದಲ್ಲಿ ಉದಾರತೆ ತೋರಬೇಕಿದೆ. ಅದರಂತೆ ಅನಿವಾಸಿ ಭಾರತೀಯ (ಎನ್‌ಆರ್‌ಐ) ಅಥವಾ ಭಾರತದ ಸಾಗರೋತ್ತರ ನಾಗರಿಕ (ಓಸಿಐ) ಕೋಟಾದಡಿಯ ಎಂಬಿಬಿಎಸ್ ಪದವಿ ಕೋರ್ಸ್‌ಗೆ ಐದು ವರ್ಷಗಳಿಗೆ ನಿಗದಿಯಾದ ಶುಲ್ಕವನ್ನು ಅರ್ಜಿದಾರರಿಂದ ಪಡೆದು, ಅಮೆರಿಕಕ್ಕೆ ತೆರಳಲು ಆಕೆಗೆ ಎಕ್ಸಿಟ್ ಪರ್ಮಿಟ್ ನೀಡಬೇಕು ಎಂದು ಹೈಕೋರ್ಚ್ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ.
ಹುಟ್ಟಿದ್ದು ಅಮೆರಿಕದಲ್ಲಿ, ಓದಿದ್ದು ಭಾರತದಲ್ಲಿ!
ಅರ್ಜಿದಾರೆಯು ಭಾರತೀಯ ಮೂಲದ ದಂಪತಿಗೆ ಜನಿಸಿದ್ದು ಅಮೆರಿಕದಲ್ಲಿ ಜನಿಸಿದ್ದರು. ಅರ್ಜಿದಾರೆ ತಮಗೆ 6 ವರ್ಷವಿದ್ದಾಗ ಪ್ರವಾಸಿ ವೀಸಾ ಪಡೆದು 2003ರ ಜೂ.23ರಂದು ಭಾರತಕ್ಕೆ ಆಗಮಿಸಿದ್ದರು. ನಂತರ ರಾಜ್ಯದಲ್ಲಿಯೇ ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣ ಪೂರೈಸಿದ್ದರು. ಅವರಿಗೆ 2015ರ ಫೆ.5ರಂದು 18 ವರ್ಷ ತುಂಬಿತ್ತು. ಭಾರತೀಯ ನಿವಾಸಿ ಎಂದು ಘೋಷಿಸಿಕೊಂಡು ವೈದ್ಯಕೀಯ ಪದವಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಿ, 2015ರಲ್ಲಿ ಸಿಇಟಿ ಬರೆದು ಮಂಡ್ಯದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಪದವಿ ಪಡೆದು ಎಂಬಿಬಿಎಸ್ ಪೂರ್ಣಗೊಳಿಸಿದ್ದರು.
ವಯಸ್ಕರಾದ ನಂತರ ಅಮೆರಿಕದ ಪೌರತ್ವ ಅಥವಾ ರಾಷ್ಟ್ರೀಯತೆಯನ್ನು ತ್ಯಜಿಸಿಲ್ಲ. ಬದಲಾಗಿ ಅಮೆರಿಕದಲ್ಲಿ ಪಾಸ್‌ಪೋರ್ಚ್‌ಗೆ ಹೊಸದಾಗಿ ಅರ್ಜಿ ಸಲ್ಲಿಸಿದ್ದರು. ಪಾಸ್‌ಪೋರ್ಚ್ ದೊರೆತ ಮೇಲೆ 2021ರ ಮಾ.17ರಂದು ಭಾರತೀಯ ವಲಸೆ ಬ್ಯೂರೋಗೆ ಅರ್ಜಿ ಸಲ್ಲಿಸಿ, ಅಮೆರಿಕದಲ್ಲಿ ಹೆಚ್ಚಿನ ವಿದ್ಯಾಭ್ಯಾಸ ನಡೆಸಲು ಎಕ್ಸಿಟ್ ಪರ್ಮಿಟ್ (ನಿರ್ಗಮನಕ್ಕೆ ಅನುಮತಿ) ಕೋರಿದ್ದರು. ಆದರೆ, ಎಕ್ಸಿಟ್ ಪರ್ಮಿಟ್ ನೀಡಲು ನಿರಾಕರಿಸಿದ್ದರಿಂದ ಅರ್ಜಿದಾರೆ ಹೈಕೋರ್ಚ್ ಮೆಟ್ಟಿಲೇರಿದ್ದರು.
ಜಡ್ಜ್ ನೇಮಕಕ್ಕೆ ಹೊಸ ಸಮಿತಿ: ಕೇಂದ್ರ ಪುನರುಚ್ಚಾರ
ದೇಶದಲ್ಲಿ ಅಕ್ರಮ ವಾಸ: ಕೇಂದ್ರ
ಅರ್ಜಿಗೆ ಆಕ್ಷೇಪಿಸಿದ್ದ ಕೇಂದ್ರ ಸರ್ಕಾರ, ಅರ್ಜಿದಾರೆ ಪ್ರವಾಸಿ ವೀಸಾ ಮೇಲೆ ಭಾರತಕ್ಕೆ ಬಂದಿದ್ದು ಅದರ ಅವಧಿಯು 2003ರಲ್ಲೇ ಮುಕ್ತಾಯವಾಗಿದೆ. ಅಮೆರಿಕ ಪಾರ್ಸ್‌ಪೋರ್ಚ್ 2004ರಲ್ಲೇ ಕೊನೆಗೊಂಡಿದೆ. ಹೀಗಿದ್ದರೂ ಅವರು ಭಾರತದಲ್ಲಿ ವಾಸ ಮಾಡಿದ್ದಾರೆ. ಇದು ಅಕ್ರಮ ವಾಸವಾಗಿದ್ದು, ವಿದೇಶಿಯರ ಕಾಯ್ದೆ-1946ಕ್ಕೆ ವಿರುದ್ಧವಾಗಿದೆ. ಅರ್ಜಿದಾರೆ ಭಾರತೀಯ ಪ್ರಜೆ ಎಂದು ಹೇಳಿಕೊಳ್ಳಲು ಅವಕಾಶವಿಲ್ಲ. 2021ರಲ್ಲೇ ಆಕೆಯನ್ನು ಅಮೆರಿಕ ಪ್ರಜೆಯಾಗಿ ಘೋಷಿಸಿ, ಪಾಸ್‌ಪೋರ್ಚ್ ನೀಡಲಾಗಿದೆ. ಹಾಗಾಗಿ, ಅರ್ಜಿ ವಜಾಗೊಳಿಸಬೇಕು ಹಾಗೂ ಆಕೆಯ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡಬೇಕು ಎಂದು ಕೋರಿತ್ತು.