ಜಡ್ಜ್ ನೇಮಕಕ್ಕೆ ಹೊಸ ಸಮಿತಿ: ಕೇಂದ್ರ ಪುನರುಚ್ಚಾರ
ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ಜಡ್ಜ್‌ಗಳ ನೇಮಕಕ್ಕೆ ಈಗಿರುವ ಕೊಲಿಜಿಯಂ ಬಗ್ಗೆ ಸರ್ಕಾರ ಹಾಗೂ ನ್ಯಾಯಾಂಗದ ನಡುವೆ ಸಾಕಷ್ಟು ವಾದ-ಪ್ರತಿವಾದ ನಡೆದಿರುವ ನಡುವೆಯೇ ಜಡ್ಜ್‌ಗಳ ನೇಮಕಕ್ಕೆ ಹೆಸರು ಶಿಫಾರಸು ಮಾಡುವ ಬಗ್ಗೆ ಹೊಸ ಸಮಿತಿ ರಚನೆ ಆಗಬೇಕು ಎಂಬ ಇಂಗಿತವನ್ನು ಕೇಂದ್ರ ಸರ್ಕಾರ ಪುನರುಚ್ಚರಿಸಿದೆ
ನವದೆಹಲಿ: ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ಜಡ್ಜ್‌ಗಳ ನೇಮಕಕ್ಕೆ ಈಗಿರುವ ಕೊಲಿಜಿಯಂ ಬಗ್ಗೆ ಸರ್ಕಾರ ಹಾಗೂ ನ್ಯಾಯಾಂಗದ ನಡುವೆ ಸಾಕಷ್ಟು ವಾದ-ಪ್ರತಿವಾದ ನಡೆದಿರುವ ನಡುವೆಯೇ ಜಡ್ಜ್‌ಗಳ ನೇಮಕಕ್ಕೆ ಹೆಸರು ಶಿಫಾರಸು ಮಾಡುವ ಬಗ್ಗೆ ಹೊಸ ಸಮಿತಿ ರಚನೆ ಆಗಬೇಕು ಎಂಬ ಇಂಗಿತವನ್ನು ಕೇಂದ್ರ ಸರ್ಕಾರ ಪುನರುಚ್ಚರಿಸಿದೆ. ಪ್ರಸ್ತಾವಿತ ಶೋಧ ಮತ್ತು ಪರಿಶೀಲನಾ ಸಮಿತಿಯಲ್ಲಿ ಸರ್ಕಾರದಿಂದ ಶಿಫಾರಸುಗೊಂಡ ವ್ಯಕ್ತಿಗೂ ಅವಕಾಶ ಕಲ್ಪಿಸಬೇಕು. ಈ ಸಮಿತಿ ಶಿಫಾರಸು ಮಾಡುವ ಅಭ್ಯರ್ಥಿಗಳ ಹೆಸರನ್ನು ಕೊಲಿಜಿಯಂ ಪರಿಗಣಿಸಬೇಕು. ಕುರಿತು ನಿಯಮಗಳನ್ನು ಒಳಗೊಂಡ ಕಾರ‍್ಯವಿಧಾನವನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಬೇಕು ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದೆ.
ಜ.6ರಂದೇ ಕೇಂದ್ರ ಸರ್ಕಾರ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದಿದೆ. ಈ ಬಗ್ಗೆ ಸಂಸತ್ತಿಗೆ ಗುರುವಾರ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು (Kiren Rijiju) ಮಾಹಿತಿ ನೀಡಿದ್ದಾರೆ. ಜಡ್ಜ್‌ಗಳ ನೇಮಕ ಸಂಬಂಧ ಕೇಂದ್ರ ಸರ್ಕಾರ ಹಾಗೂ ಕೊಲಿಜಿಯಂ ಮಧ್ಯೆ ಸಂಘರ್ಷ ನಡೆದಿರುವ ನಡುವೆಯೇ ಈ ವಿದ್ಯಮಾನ ನಡೆದಿದೆ.
ರಿಜಿಜು ಹೇಳಿದ್ದೇನು?:
ಸಂಸತ್ತಿಗೆ ಪ್ರಶ್ನೋತ್ತರದ ವೇಳೆ ಸುದೀರ್ಘ ಉತ್ತರ ನೀಡಿರುವ ರಿಜಿಜು, ಜಡ್ಜ್‌ಗಳ ನೇಮಕ ಕುರಿತ ಪ್ರಸ್ತಾಪಗಳು ಸಾಂವಿಧಾನಿಕ ನ್ಯಾಯಾಲಯಗಳಿಗೆ ನ್ಯಾಯಾಧೀಶರ ನೇಮಕದ ವಿಷಯದಲ್ಲಿ ಹೆಚ್ಚು ಪಾರದರ್ಶಕತೆ, ಹೊಣೆಗಾರಿಕೆ ತರುವ ಜೊತೆಗೆ ನೇಮಕಾತಿ ಪ್ರಕ್ರಿಯೆ ಚುರುಕುಗೊಳಿಸಲು ನೆರವಾಗಲಿವೆ. ಜ.6ರಂದು ಮುಖ್ಯ ನ್ಯಾಯಾಧೀಶರಿಗೆ ಬರೆದ ಪತ್ರದಲ್ಲಿ ಇದನ್ನು ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ ಎಂದಿದ್ದಾರೆ.
ದೇಶದ ಕೋರ್ಟ್‌ಗಳಲ್ಲಿ ಬಾಕಿ ಉಳಿದ ಪ್ರಕರಣಗಳ ಸಂಖ್ಯೆ 5 ಕೋಟಿ
ಹಾಲಿ ಇರುವ ನಿಯಮಗಳ ಅನ್ವಯ, ಜಿಲ್ಲಾ ಜಡ್ಜ್‌ಗಳ ನೇಮಕ, ರಾಜ್ಯ ಹೈಕೋರ್ಟ್‌ಗಳಿಗೆ ನ್ಯಾಯಾಧೀಶರ ನೇಮಕ, ವರ್ಗ ಮತ್ತು ಸುಪ್ರೀಂಕೋರ್ಟ್‌ಗೆ ಪದೋನ್ನತಿ ನೀಡುವ ವಿಷಯದಲ್ಲಿ ಆಯಾ ರಾಜ್ಯಗಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ಕೊಲಿಜಿಯಂ ಪ್ರಾಥಮಿಕ ಹಂತದ ನಿರ್ಣಯ ಕೈಗೊಳ್ಳುತ್ತದೆ. ಬಳಿಕ ಅದಕ್ಕೆ ರಾಜ್ಯ ಸರ್ಕಾರದ ನಿಲುವು ಸೇರಿಸಿ ಸುಪ್ರೀಂಕೋರ್ಟ್‌ಗೆ ಕಳುಹಿಸಿಕೊಡುತ್ತದೆ. ಆದರೆ ಅಂತಿಮವಾಗಿ ಸುಪ್ರೀಂಕೋರ್ಟ್‌ನ ಕೊಲಿಜಿಯಂ ಶಿಫಾರಸು ಮಾಡಿದವರನ್ನೇ ಹೈಕೋರ್ಟ್‌ಗೆ ನೇಮಕ ಇಲ್ಲವೇ ವರ್ಗ ಮಾಡಲಾಗುತ್ತದೆ.
ಆದರೆ ರಾಜ್ಯಗಳಲ್ಲಿ ಹಾಗೂ ಸುಪ್ರೀಂಕೋರ್ಟ್ ಮಟ್ಟದಲ್ಲಿ ಹೊಸ 'ಶೋಧ ಮತ್ತು ಪರಿಶೀಲನಾ ಸಮಿತಿ' (earch and Review Committee) ರಚನೆ ಆಗಬೇಕು. ಇದರಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಸೂಚಿಸಿರುವ ವ್ಯಕ್ತಿಗಳೂ ಇರಬೇಕು ಎಂಬುದು ಕೇಂದ್ರದ ವಾದ. ಇದಕ್ಕಾಗಿಯೇ ‘ರಾಜ್ಯಗಳ ಹೈಕೋರ್ಟ್ ಮುಖ್ಯ ನ್ಯಾಯಾಧೀಶರು ಮತ್ತು ನ್ಯಾಯಾಧೀಶರ ನೇಮಕ, ವರ್ಗದ ವಿಷಯದಲ್ಲಿ, ‘ಶೋಧ ಮತ್ತು ಪರಿಶೀಲನಾ ಸಮಿತಿ’ಯಲ್ಲಿ ಮುಖ್ಯಮಂತ್ರಿಗಳಿಂದ ಶಿಫಾರಸಾಗುವ ವ್ಯಕ್ತಿ/ ರಾಜ್ಯ ಕೊಲಿಜಿಯಂನಿಂದ (Collegium) ಹೊರಗಿರುವ ಹಿರಿಯ ನ್ಯಾಯಾಧೀಶರು ಇರಬೇಕು. ಇವರು ಅರ್ಹ ನ್ಯಾಯಾಧೀಶ ಅಭ್ಯರ್ಥಿಗಳ ಪಟ್ಟಿಯಿಂದ ಸೂಕ್ತ ವ್ಯಕ್ತಿಗಳನ್ನು ಶಿಫಾರಸು ಮಾಡಬೇಕು. ಹೀಗೆ ಶಿಫಾರಸಾದ ವ್ಯಕ್ತಿಗಳ ಹೆಸರನ್ನು ಹೈಕೋರ್ಟ್‌ನ ಕೊಲಿಜಿಯಂ ಮುಂದಿನ ಹಂತಕ್ಕೆ ಶಿಫಾರಸು ಮಾಡಬೇಕು ಎಂದು ಕೇಂದ್ರ ಸರ್ಕಾರ ಪ್ರಸ್ತಾಪ ಮಾಡಿದೆ.
ಸುಪ್ರೀಂಕೋರ್ಟ್ ಮಟ್ಟದಲ್ಲೂ ಇಂಥ ‘ಶೋಧ ಮತ್ತು ಪರಿಶೀಲನಾ ಸಮಿತಿ’ ಇರಬೇಕು. ಇದರಲ್ಲಿ ಕೇಂದ್ರ ಸರ್ಕಾರದ ಪ್ರತಿನಿಧಿಗಳಿಗೂ ಅವಕಾಶ ನೀಡಬೇಕು. ಈ ಸಮಿತಿ ಶಿಫಾರಸು ಮಾಡಿರುವ ಹೆಸರುಗಳನ್ನು ಕೊಲಿಜಿಯಂ ಪರಿಶೀಲಿಸಿ ಅಂತಿಮ ಶಿಫಾರಸು ಮಾಡಬೇಕು’ ಎಂದು ಕೇಂದ್ರ ಸರ್ಕಾರ ಹೊಸ ಪ್ರಸ್ತಾವದಲ್ಲಿ ಹೇಳಿದೆ.
ಜಡ್ಜ್‌ಗಳ ನೇಮಕಕ್ಕೆಂದೇ ಕೇಂದ್ರ ಸರ್ಕಾರ ನ್ಯಾಯಾಂಗ ನೇಮಕಾತಿ ಆಯೋಗ ರಚಿಸಿತ್ತಾದರೂ, ಅದನ್ನು 2015ರಲ್ಲಿ ಸುಪ್ರೀಂಕೋರ್ಟ್ ರದ್ದುಗೊಳಿಸಿತ್ತು. ಜೊತೆಗೆ ನೇಮಕಾತಿ ವಿಷಯದಲ್ಲಿ ಹೊಸ ನಿಯಮ ಜಾರಿಗೆ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಾಧೀಶರ ಜೊತೆ ಮಾತುಕತೆ ನಡೆಸಿ ‘ಮೆಮರಾಂಡಮ್ ಆಫ್ ಪ್ರೊಸೀಜರ್’ ಬಿಡುಗಡೆ ಮಾಡಬಹುದು ಎಂದು ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ 2016, 2017, 2019ರಲ್ಲಿ ಸುಪ್ರೀಂಕೋರ್ಟ್‌ಗೆ ಮೆಮರಾಂಡಮ್ ಆಫ್ ಪ್ರೊಸೀಜರ್ ಕಳುಹಿಸಿಕೊಡಲಾಗಿತ್ತು. ಆದರೆ ಇದಕ್ಕೆ ಸೂಕ್ತ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಮತ್ತೊಮ್ಮೆ ಈ ಬಗ್ಗೆ ಸುಪ್ರೀಂಕೋರ್ಟ್‌ಗೆ ಪತ್ರ ರವಾನಿಸಲಾಗಿದೆ ಎಂದು ಕಿರಣ್ ರಿಜಿಜು (Kiran Rijiju) ಮಾಹಿತಿ ನೀಡಿದ್ದಾರೆ.