Education Budget 2022: ಶಿಕ್ಷಣಕ್ಕೆ ಸಿಕ್ಕಿದ್ದು ಮಹತ್ವದ ಕೊಡುಗೆ, ಡಿಜಿಟಲ್ ವಿಶ್ವವಿದ್ಯಾಲಯ ಸ್ಥಾಪನೆ
- ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಘೋಷಣೆ
- ಡಿಜಿಟಲ್ ವಿಶ್ವವಿದ್ಯಾಲಯ ಸ್ಥಾಪನೆಗೆ ಒತ್ತು
- ಪೂರಕ ಶಿಕ್ಷಣಕ್ಕೆ ಒಂದು ವರ್ಗ ಒಂದು ಟಿವಿ ಚಾನೆಲ್
ನವದೆಹಲಿ(ಫೆ.1): ಕೇಂದ್ರ ಬಜೆಟ್ 2022ರ (Union Budget 2022) ಮಂಡನೆ ವೇಳೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಘೋಷಣೆ ಮಾಡಿದ್ದು, ಉದ್ಯೋಗ ಸೃಷ್ಟಿ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಮಹತ್ವ ನೀಡಿದ್ದಾರೆ. ಆತ್ಮನಿರ್ಭರ್‌ಗೆ ಹೆಚ್ಚು ಒತ್ತು ನೀಡಿದ್ದು, 25 ವರ್ಷಗಳ ಬ್ಲೂಪ್ರಿಂಟ್ ತಯಾರು ಮಾಡಿರುವ ಬಗ್ಗೆ ವಿವರಣೆ ನೀಡಿದ್ದಾರೆ. ಜೊತೆಗೆ ಆಂತರಿಕವಾಗಿ 30 ಲಕ್ಷ ಉದ್ಯೋಗ ಸೃಷ್ಟಿ ಮಾಡುವ ಭರವಸೆ ನೀಡಿದ್ದಾರೆ.
ಈ ವರ್ಷದ ಬಜೆಟ್ ಶಿಕ್ಷಣ ಕ್ಷೇತ್ರಕ್ಕೂ ಕೆಲವು ಪ್ರಮುಖ ಘೋಷಣೆಗಳನ್ನು ಹೊಂದಿದೆ. ಡಿಜಿಟಲ್ ವಿಶ್ವವಿದ್ಯಾಲಯವನ್ನು ( Digital University ) ಪ್ರಾರಂಭಿಸುವುದು ಮತ್ತು ಪೂರಕ ಶಿಕ್ಷಣಕ್ಕಾಗಿ 'ಒಂದು ವರ್ಗ ಒಂದು ಟಿವಿ ಚಾನೆಲ್' (‘One class One TV channel) ಕಾರ್ಯಕ್ರಮ ಘೋಷಣೆ ಮಾಡಲಾಗಿದೆ.
ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಡಿಜಿಟಲ್ ವಿಶ್ವವಿದ್ಯಾಲಯ ಬಹುದೊಡ್ಡ ನಿರ್ಧಾರವಾಗಿದ್ದು ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರಿಯ ಗುಣಮಟ್ಟದ ಶಿಕ್ಷಣ ನೀಡಲು ಈ ಯೋಜನೆ ತರಲಾಗಿದೆ. ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಈ ಯೋಜನೆಯಲ್ಲಿ ಕೈಜೋಡಿಸಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತರಾಮನ್ (Union Finance Minister Nirmala Sitharaman) ಮಾಹಿತಿ ನೀಡಿದ್ದಾರೆ.
ಜೊತೆಗೆ ಕೋವಿಡ್ 19 ಸಾಂಕ್ರಾಮಿಕದಿಂದ ಗ್ರಾಮೀಣ ಪ್ರದೇಶಗಳ ಮಕ್ಕಳಿಗೆ ಶಿಕ್ಷಣದ ತೊಡಕಾಗಿದ್ದು, ಅವರಿಗೆ ಪೂರಕ ಶಿಕ್ಷಣ ನೀಡಲು 'ಒಂದು ವರ್ಗ ಒಂದು ಟಿವಿ ಚಾನೆಲ್' ಪ್ರಾರಂಭಿಸಲಾಗುತ್ತದೆ. ಒಂದನೇ ತರಗತಿಯಿಂದ 12ನೇ ತರಗತಿಯವರೆಗೆ ಪಠ್ಯ ಬೋಧಿಸಲು ಈ ಯೋಜನೆ ಸಹಾಯಕವಾಗಲಿದೆ. ಪ್ರಧಾನಿ 'ಇ-ವಿದ್ಯಾ' ಯೋಜನೆ ಅಡಿಯಲ್ಲಿ 200 ಪ್ರಾದೇಶಿಕ ಟಿವಿ ಚಾನೆಲ್‌ಗಳನ್ನು ತೆರೆಯಲಾಗುತ್ತದೆ. ಜೊತೆಗೆ ಡಿಟಿಟಲ್ ಪಠ್ಯವನ್ನು ಮಾತೃಭಾಷೆಯಲ್ಲಿಯೇ ಸಿದ್ಧಪಡಿಸಲಾಗುವುದು ಎಂದು ವಿತ್ತ ಸಚಿವೆ ಹೇಳಿದ್ದಾರೆ.
ಸಣ್ಣ ಮತ್ತು ಮಧ್ಯಮ ವಲಯದ ಆತಿಥ್ಯ ಸೇವೆಗಳು ಇನ್ನೂ ಹೆಚ್ಚಬೇಕಿದೆ. ಹೀಗಾಗಿ ನಾರಿ ಶಕ್ತಿಯ ಮಹತ್ವವನ್ನು ಅರಿತು ಮಹಿಳೆಯರು ಹಾಗೂ ಮಕ್ಕಳ ಅಭಿವೃದ್ಧಿಗಾಗಿ ಮೂರು ಯೋಜನೆಗಳನ್ನು ಆರಂಭಿಸಲಾಗಿದೆ. ಇದರೊಂದಿಗೆ, ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟನ್ನು ಡೈನಾಮಿಕ್ ಉದ್ಯಮದ ಅಗತ್ಯಗಳೊಂದಿಗೆ ಜೋಡಿಸಲಾಗುತ್ತದೆ. ನಾಗರಿಕರಲ್ಲಿ ಸಂಬಂಧಿತ ಉದ್ಯೋಗಗಳು, ಉದ್ಯಮಶೀಲತೆಯ ಅವಕಾಶಗಳ ಆವಿಷ್ಕಾರವನ್ನು ಸಕ್ರಿಯಗೊಳಿಸಲು ಕೌಶಲ್ಯ ಮತ್ತು ಜೀವನೋಪಾಯಕ್ಕಾಗಿ ಡಿಜಿಟಲ್ ಇಕೋಸಿಸ್ಟಮ್ ಇ-ಪೋರ್ಟಲ್ ಅನ್ನು ಪ್ರಾರಂಭಿಸಲಾಗುವುದು ಎಂದು ತಮ್ಮ ಬಜೆಟ್ ಭಾಷಣದಲ್ಲಿ ನಿರ್ಮಲಾ ಸೀತರಾಮನ್ ಹೇಳಿದ್ದಾರೆ.
Union Budget 2022: ರೈಲ್ವೇಗೆ ಭಾರೀ ಉಡುಗೊರೆ? ವಂದೇ ಭಾರತ್ ಜೊತೆ ಅನೇಕ ಘೋಷಣೆಗಳಾಗುವ ಸಾಧ್ಯತೆ
ಬಜೆಟ್ ನಲ್ಲಿ ಶಿಕ್ಷಣಕ್ಕೆ ನೀಡಿರುವ ಮಹತ್ವ ಇಂತಿದೆ:
- ಕೌಶಲ್ಯಾಭಿವೃದ್ಧಿಗೆ ಆನ್‌ಲೈನ್ ತರಬೇತಿ
- ಮಾತೃಭಾಷೆಯಲ್ಲಿಯೇ ಡಿಟಿಟಲ್ ಪಠ್ಯ
- ಸರ್ಕಾರಿ ಶಾಲೆ ಮಕ್ಕಳಿಗೆ ಒಂದು ವರ್ಗ ಒಂದು ಟಿವಿ ಕಾರ್ಯಕ್ರಮ ಯೋಜನೆ
- ಡಿಜಿಟಲ್ ವಿಶ್ವವಿದ್ಯಾಲಯ ಸ್ಥಾಪನೆಗೆ ಒತ್ತು
- 200 ಟಿವಿ ಚಾನೆಲ್‌ಗಳ ಮೂಲಕ ಪರ್ಯಾಯ ಶಿಕ್ಷಣ ಯೋಜನೆ
- ಕೊರೊನಾ ಸಾಂಕ್ರಾಮಿಕದಿಂದ ಶಿಕ್ಷಣದಿಂದ ವಂಚಿತರಾದ ಮಕ್ಕಳಿಗೆ ಸ್ಥಳೀಯ ಭಾಷೆಯಲ್ಲಿ ಪಾಠ
- 1 ರಿಂದ 12 ನೇ ತರಗತಿ ವರೆಗೆ ಆನ್‌ಲೈನ್ ಶಿಕ್ಷಣಕ್ಕೆ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆ
- 2 ಲಕ್ಷ ಅಂಗನವಾಡಿಗಳ ಉನ್ನತೀಕರಣಕ್ಕೆ ಒತ್ತು
- ಕೃಷಿ ವಿಶ್ವವಿದ್ಯಾಲಯಗಳ ಪಠ್ಯಕ್ರಮವನ್ನು ಪರಿಷ್ಕೃತಗೊಳಿಸಿ, ನೈಸರ್ಗಿಕ, ಕಡಿಮೆ ವೆಚ್ಚ, ಜೈವಿಕ ಕೃಷಿ, ಆಧುನಿಕ ಕೃಷಿ ಸಂಸ್ಕೃತಿಗೆ ತಕ್ಕಂತೆ ಅಳವಡಿಸುವ ಯೋಜನೆ
- ಯುವಜನತೆ ಕೌಶಲ ತರಬೇತಿ ನೀಡುವುದು, ರೀಸ್ಕಿಲಿಂಗ್ ಗಾಗಿ DESH e-portal ಸ್ಥಾಪನೆ
- ಆನ್‌ಲೈನ್ ಶಿಕ್ಷಣಕ್ಕಾಗಿ ಉತ್ತಮ ತರಬೇತಿಯನ್ನು ಶಿಕ್ಷಕರಿಗೂ ನೀಡಲು ಗುಣಮಟ್ಟದ ಇ-ಮಾಹಿತಿ ಅಭಿವೃದ್ಧಿ.