*   ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಪಿಯು ಇಲಾಖೆ ಚಿಂತನೆ*   ಉಡುಪಿ ಕಾಲೇಜಲ್ಲಿ ಹಿಜಾಬ್‌ ವಿವಾದ: ಕ್ರಮಕ್ಕೆ ಸಜ್ಜು*   ಪಿಯು ಮಂಡಳಿಗೆ ಕಾಲೇಜಿನ ಪತ್ರ 

ಬೆಂಗಳೂರು(ಜ.21):  ಕರಾವಳಿ ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜೊಂದರಲ್ಲಿ ಉದ್ಭವಿಸಿರುವ ‘ಹಿಜಾಬ್‌’ (ಶಿರವಸ್ತ್ರ) ವಿವಾದ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಪಿಯು ಕಾಲೇಜು ವಿದ್ಯಾರ್ಥಿಗಳಿಗೂ ಸಮವಸ್ತ್ರ(Uniform) ಪರಿಚಯಿಸಬಹುದಾ ಎಂಬ ಬಗ್ಗೆ ಸರ್ಕಾರದ ಮುಂದೆ ಪ್ರಸ್ತಾವನೆ ಇಡಲು ಇಲಾಖೆ ಮುಂದಾಗಿದೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌(BC Nagesh) ಅವರೊಂದಿಗೆ ಇಲಾಖೆಯ ಮುಂದಿನ ಸಭೆಯಲ್ಲಿ ಈ ವಿಷಯ ಕುರಿತು ಚರ್ಚಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ಪದೇ ಪದೇ ಇಂತಹ ವಿವಾದಗಳಾಗುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ತೆರೆ ಎಳೆಯುವ ಅಗತ್ಯವಿದ್ದು, ಇದಕ್ಕಾಗಿ ಏನು ಕ್ರಮ ಕೈಗೊಳ್ಳಬಹುದು? ಶಾಲಾ ಹಂತದಲ್ಲಿ ಇರುವಂತೆ ಪಿಯು ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೂ(Students) ಸಮವಸ್ತ್ರ ಪರಿಚಯಿಸಬಹುದಾ ಎಂಬ ಬಗ್ಗೆ ಗಂಭೀರ ಚರ್ಚೆ ನಡೆಸಲು ಇಲಾಖೆಯ ನಿರ್ದೇಶಕರಾದ ಸ್ನೇಹಲ್‌ ಸಿದ್ಧತೆ ಮಾಡಿಕೊಂಡಿದ್ದಾರೆ.

Coronavirus ಕೊರೋನಾ ಹೆಚ್ಚಳ, ಶಾಲಾ-ಕಾಲೇಜು ಬಂದ್ ಮಾಡುವಂತೆ ಸರ್ಕಾರಕ್ಕೆ ಎಚ್‌ಡಿಕೆ ಸಲಹೆ

ಈ ಸಂಬಂಧ ‘ಕನ್ನಡಪ್ರಭ’ದೊಂದಿಗೆ(Kannada Prabha) ಮಾತನಾಡಿದ ಅವರು, ಕೆಲ ಕಾಲೇಜಿನಲ್ಲಿ ಉಂಟಾಗಿರುವ ಹಿಜಾಬ್‌(Hijab) ವಿವಾದವನ್ನು ಮುಂದಿನ ಸಭೆಯಲ್ಲಿ ನಮ್ಮ ಇಲಾಖಾ ಸಚಿವರ ಗಮನಕ್ಕೆ ತರಲಾಗುವುದು. ಸಮವಸ್ತ್ರ ವಿಚಾರದ ಪ್ರಸ್ತಾವನೆಯನ್ನು ಅವರ ಮುಂದೆ ಇಟ್ಟು ಚರ್ಚಿಸಲಾಗುವುದು. ಒಟ್ಟಿನಲ್ಲಿ ವಿವಾದವನ್ನು ಬಗೆಹರಿಸಲು ಏನು ಮಾಡಬಹುದು ಎಂಬ ಬಗ್ಗೆ ಸಚಿವರೊಂದಿಗೆ ಚರ್ಚಿಸಿ ಅವರ ಸಲಹೆ, ಸೂಚನೆಗಳ ಅನುಸಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಪಿಯು ಮಂಡಳಿಗೆ ಕಾಲೇಜಿನ ಪತ್ರ:

ಉಡುಪಿಯ(Udupi) ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮುಸ್ಲಿಂ(Muslim) ಸಮುದಾಯದ ವಿದ್ಯಾರ್ಥಿನಿಯರು ‘ಹಿಜಾಬ್‌’ ಧರಿಸಿ ಬರುವ ಕುರಿತು ಉಂಟಾಗಿರುವ ವಿವಾದ ಮೂರು ವಾರ ಕಳೆದರೂ ತಣ್ಣಗಾಗಿಲ್ಲ. ಇದು ವಿದ್ಯಾರ್ಥಿಗಳು ಮತ್ತು ಕಾಲೇಜಿನ ಆಡಳಿತ ಮಂಡಳಿ ನಡುವೆ ಹಟ-ಬಿಕ್ಕಟ್ಟು ಸೃಷ್ಟಿಸಿದೆ. ವಿದ್ಯಾರ್ಥಿನಿಯರು ಹಿಜಾಬ್‌ ಧರಿಸುವುದು ನಮ್ಮ ಹಕ್ಕು, ಹಿಜಾಬ್‌ ಧರಿಸಿ ತರಗತಿಗೆ ಬರಲು ಅವಕಾಶ ನೀಡುವಂತೆ ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಹಿಜಾಬ್‌ ಧರಿಸಿ ತರಗತಿಗೆ ಹಾಜರಾಗಿ ಪಾಠ ಕೇಳುವ ನಿಯಮ ನಮ್ಮಲ್ಲಿಲ್ಲ ಎಂದು ಕಾಲೇಜು ಹೇಳಿದೆ. ಇದರಿಂದ ಬಿಕ್ಕಟ್ಟು ಮುಂದುವರೆದಿದೆ.

ಈ ಮಧ್ಯೆ, ಇಲಾಖೆ ಮೂಲಗಳ ಪ್ರಕಾರ ಕಾಲೇಜಿನ ಪ್ರಾಂಶುಪಾಲರು ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದು, ವಿದ್ಯಾರ್ಥಿಗಳ ವಸ್ತ್ರ ಸಂಹಿತೆ ವಿಚಾರದಲ್ಲಿ ಸೂಕ್ತ ನಿರ್ದೇಶನ ನೀಡುವಂತೆ ಕೋರಿದ್ದಾರೆ. ಅಂತಿಮವಾಗಿ ಬೋರ್ಡ್‌ ಕೈಗೊಳ್ಳುವ ನಿರ್ಧಾರಕ್ಕಾಗಿ ಕಾಲೇಜು ಕಾಯುತ್ತಿದೆ.

Covid 19: ಜನವರಿ 24 ರಿಂದಲೇ ಶಾಲೆಗಳು ಆರಂಭ ಸಾಧ್ಯತೆ, ಮುಖ್ಯಮಂತ್ರಿ ನೇತೃತ್ವದ ಸಭೆಯ ಬಳಿಕ ನಿರ್ಧಾರ

ಏನಿದು ವಿವಾದ?

- ಉಡುಪಿಯ ಸರ್ಕಾರಿ ಪಿಯು ಕಾಲೇಜಿಗೆ ಹಿಜಾಬ್‌ ಧರಿಸಿ ಬರುತ್ತಿರುವ ಮುಸ್ಲಿಂ ವಿದ್ಯಾರ್ಥಿನಿಯರು
- ಕಾಲೇಜಿನಲ್ಲಿ ಹಿಜಾಬ್‌ ಧರಿಸಿ ಪಾಠ ಕೇಳುವ ನಿಯಮ ನಮ್ಮಲ್ಲಿಲ್ಲ ಎಂದು ಪ್ರಾಂಶುಪಾಲರ ಸೂಚನೆ
- ಹಿಜಾಬ್‌ ಧರಿಸದೆ ನಾವು ಕಾಲೇಜಿಗೆ ಬರುವುದಿಲ್ಲ ಎಂದು ವಿದ್ಯಾರ್ಥಿನಿಯರ ಬಿಗಿ ಪಟ್ಟು: ವಿವಾದ
- ಪಿಯು ಇಲಾಖೆಗೆ ಪತ್ರ ಬರೆದು ವಸ್ತ್ರಸಂಹಿತೆ ಬಗ್ಗೆ ನಿರ್ದೇಶನ ನೀಡುವಂತೆ ಪ್ರಾಂಶುಪಾಲರ ಮನವಿ

ಪೊಂಪೈ ಕಾಲೇಜಿನಲ್ಲಿ ಕೇಸರಿ ಶಾಲು ವಿವಾದ, ಮಂಗಳೂರು ವಿವಿ ಕುಲಪತಿ ಅಸಮಾಧಾನ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸ್ಕಾರ್ಫ್ ಹಾಗೂ ಕೇಸರಿ ಶಾಲು ವಿವಾದವನ್ನು ಸಂಬಂಧಪಟ್ಟಂತೆ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಯಡಪಡಿತ್ತಾಯ ಇತ್ತೀಚೆಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಮಂಗಳೂರು ವಿವಿ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಡಳಿತ ಮಂಡಳಿ ಸೂಕ್ತ ಕ್ರಮ ಕೈಗೊಳ್ಳದ್ದಕ್ಕೆ ಬೇಸರ ವ್ಯಕ್ತ ಪಡಿಸಿದ್ದರು.