Asianet Suvarna News Asianet Suvarna News

ಮುಸ್ಲಿಂ ವಿದ್ಯಾರ್ಥಿಗೆ ಸಹಪಾಠಿಗಳಿಂದ ಕಪಾಳಮೋಕ್ಷ ಮಾಡಿಸಿದ ಶಿಕ್ಷಕಿ..!

ಈ ಘಟನೆಗೆ ರಾಜಕೀಯ ಪಕ್ಷಗಳ ಜತೆಗೆ ಸೆಲೆಬ್ರಿಟಿಗಳು ಕೂಡ ಖಂಡನೆ ವ್ಯಕ್ತಪಡಿಸಿದ್ದು, ಶಾಲೆಯಂತಹ ಜ್ಞಾನದೇಗುಲದಲ್ಲಿ ಕೋಮುದ್ವೇಷ ಬಿತ್ತುತ್ತಿರುವ ಶಿಕ್ಷಕಿಯನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕು ಎಂದು ಆಗ್ರಹಿಸಿದ್ದಾರೆ. 

Teacher Slapped Muslim Student by His Classmates in Uttar Pradesh grg
Author
First Published Aug 27, 2023, 2:00 AM IST

ಮುಜಾಫ್ಫರ್‌ನಗರ(ಆ.27):  5ನೇ ಮಗ್ಗಿ ಕಲಿತಿಲ್ಲ ಎಂಬ ಕಾರಣ ನೀಡಿ 2ನೇ ತರಗತಿಯ ಮುಸ್ಲಿಂ ವಿದ್ಯಾರ್ಥಿಯೊಬ್ಬನಿಗೆ ಶಿಕ್ಷಕಿಯೊಬ್ಬಳು ತರಗತಿಯ ಎಲ್ಲ ಸಹಪಾಠಿಗಳಿಂದ ಕಪಾಳಮೋಕ್ಷ ಮಾಡಿಸಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಇದರ ಜತೆಗೆ, ಆ ವಿದ್ಯಾರ್ಥಿಯ ಸಮುದಾಯದ ಬಗ್ಗೆಯೂ ಆಕ್ಷೇಪಾರ್ಹ ಮಾತುಗಳನ್ನು ಆಡಿದ್ದಾಳೆ. ಈ ವಿಡಿಯೋ ವೈರಲ್‌ ಆಗಿದ್ದು, ರಾಜಕೀಯ ವಾಕ್ಸಮರ ಕಾರಣವಾಗಿದೆ. ಅಲ್ಲದೆ ಸರ್ವತ್ರ ಆಕ್ರೋಶಕ್ಕೂ ಗುರಿಯಾಗಿದೆ. ಇದರ ಬೆನ್ನಲ್ಲೇ ಶಿಕ್ಷಕಿ ವಿರುದ್ಧ ಎಫ್‌ಐಆರ್‌ ದಾಖಲು ಮಾಡಲಾಗಿದೆ.

ಈ ಘಟನೆಗೆ ರಾಜಕೀಯ ಪಕ್ಷಗಳ ಜತೆಗೆ ಸೆಲೆಬ್ರಿಟಿಗಳು ಕೂಡ ಖಂಡನೆ ವ್ಯಕ್ತಪಡಿಸಿದ್ದು, ಶಾಲೆಯಂತಹ ಜ್ಞಾನದೇಗುಲದಲ್ಲಿ ಕೋಮುದ್ವೇಷ ಬಿತ್ತುತ್ತಿರುವ ಶಿಕ್ಷಕಿಯನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ನಡುವೆ, ಹಿಂಸೆ ಸೃಷ್ಟಿಸುವ ಸಲುವಾಗಿ ವಿಡಿಯೋವನ್ನು ತಿರುಚಲಾಗಿದೆ. ಸಹಪಾಠಿಗಳಿಂದ ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡಿಸಿದ್ದು ತಪ್ಪು. ಆದರೆ, ಬಾಲಕ ನಾನು ಹೇಳಿದ ಕೆಲಸ ಮಾಡಿರಲಿಲ್ಲ. ಅಲ್ಲದೆ ನಾನು ದಂಡಿಸುವುದಕ್ಕೆ ಆತ ನನ್ನ ಹತ್ತಿರದಲ್ಲೂ ಇರಲಿಲ್ಲ ಎಂದು ಸ್ವತಃ ಶಿಕ್ಷಕಿ ತಿಳಿಸಿದ್ದಾಳೆ.

CHANDRAYAAN: ಮೂರು ಮುಖ್ಯ ಉದ್ದೇಶಗಳಲ್ಲಿ 2 ಪೂರ್ಣ; ಇನ್ನೊಂದು ಪ್ರಗತಿಯಲ್ಲಿದೆ: ಇಸ್ರೋ

ಆಗಿದ್ದೇನು?:

ಉತ್ತರಪ್ರದೇಶದ ಮುಜಾಫ್ಫರ್‌ನಗರ ಜಿಲ್ಲೆಯ ಖುಬ್ಬಾಪುರ ಗ್ರಾಮದ ಶಾಲೆಯಲ್ಲಿ ಈ ಘಟನೆ ನಡೆದಿದೆ. ಮಗ್ಗಿ ಹೇಳಲು ಹರುವುದಿಲ್ಲ ಎಂಬ ಕಾರಣಕ್ಕೆ 8 ವರ್ಷದ ಬಾಲಕನಿಗೆ ಕಪಾಳಮೋಕ್ಷ ಮಾಡಲು ವಿದ್ಯಾರ್ಥಿಗಳಿಗೆ ಶಿಕ್ಷಕಿ ತೃಪ್ತಿ ತ್ಯಾಗಿ ತಾಕೀತು ಮಾಡುತ್ತಾಳೆ. ಸಹಪಾಠಿಗಳು ಮೆತ್ತಗೆ ಹೊಡೆದಾಗ, ಜೋರಾಗಿ ಹೊಡೆಯಲು ಸೂಚಿಸುತ್ತಾಳೆ. ಕೆಲಹೊತ್ತಿನ ಬಳಿಕ, ‘ಮುಖ ಕೆಂಪಾಗಿದೆ. ಹೀಗಾಗಿ ಸೊಂಟಕ್ಕೆ ಹೊಡೆಯಿರಿ’ ಎಂದು ಕರೆ ಕೊಡುತ್ತಾಳೆ. ಜತೆಗೆ ಮುಸಲ್ಮಾನರ ಬಗ್ಗೆ ಆಕ್ಷೇಪಾರ್ಹ ಮಾತುಗಳನ್ನು ಆಡುತ್ತಾಳೆ. ಇದು ವಿಡಿಯೋದಲ್ಲಿ ರೆಕಾರ್ಡ್‌ ಆಗಿದೆ.

ಬಾಲಕನ ಸಂಬಂಧಿಯೊಬ್ಬ ಶಾಲೆಗೆ ತೆರಳಿದ್ದಾಗ ಈ ಘಟನೆ ಕಂಡು ವಿಡಿಯೋ ಮಾಡಿದ್ದಾನೆ. ಮಗ್ಗಿ ಬರುವುದಿಲ್ಲ ಎಂದು ಶಿಕ್ಷಕಿ ಹೊಡೆಸಿದರು. ಒಂದು ತಾಸು ನನಗೆ ಕಪಾಳ ಮೋಕ್ಷ ಮಾಡಿಸಿದರು ಎಂದು ಬಾಲಕ ತಿಳಿಸಿದ್ದಾನೆ.

ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ, ರಾಜಕೀಯ ಪಕ್ಷಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ ಹಾಗೂ ಆರೆಸ್ಸೆಸ್‌ನ ದ್ವೇಷದ ರಾಜಕೀಯ ಇದಾಗಿದೆ ಎಂದು ಸಮಾಜವಾದಿ ಪಕ್ಷ ದೂರಿದೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕೂಡ ಘಟನೆಯನ್ನು ಖಂಡಿಸಿದ್ದಾರೆ.

ವಿಮಾನದಲ್ಲಿ ಚಂದ್ರಯಾನ ಲ್ಯಾಂಡಿಂಗ್ ಘೋಷಿಸಿದ ಪೈಲೆಟ್, ಪ್ರಯಾಣಿಕರ ಪ್ರತಿಕ್ರಿಯೆ ವೈರಲ್!

ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಥಳಿಸುವುದು ಸಾಮಾನ್ಯ. ಆದಾಗ್ಯೂ ಸಮಾಜವಾದಿ ಪಕ್ಷ ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ಬಿಜೆಪಿ ತಿರುಗೇಟು ಕೊಟ್ಟಿದೆ. ಬಿಜೆಪಿ ಸಂಸದ ವರುಣ್‌ ಗಾಂಧಿ ಅವರು ಈ ಘಟನೆ ನಾಚಿಕೆಗೇಡಿನದ್ದು ಎಂದು ಹರಿಹಾಯ್ದಿದ್ದಾರೆ. ಬಾಲಿವುಡ್‌ ಗೀತರಚನೆಕಾರ ಜಾವೇದ್‌ ಅಖ್ತರ್‌, ನಟರಾದ ರೇಣುಕಾ ಸಹಾನೆ ಹಾಗೂ ಪ್ರಕಾಶ್‌ ರಾಜ್‌ ಅವರು ಶಿಕ್ಷಕಿ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಕೋಮುಬಣ್ಣ ಇಲ್ಲ: ನದೀಂ

ಈ ನಡುವೆ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ವಿಡಿಯೋ ಮಾಡಿದ ನದೀಂ, ನಾನೇ ಘಟನೆಯನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು. ಶಿಕ್ಷಕಿ ಯಾವುದೇ ಕೋಮು ವಿರೋಧಿ ಹೇಳಿಕೆಯಾಗಲಿ, ಮುಸ್ಲಿಮರನ್ನು ಟೀಕಿಸುವ ಹೇಳಿಕೆ ನೀಡಿಲ್ಲ. ಮುಸ್ಲಿಂ ಮಹಿಳೆಯರು ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ ಎಂಬುದಷ್ಟೇ ಅವರ ಆರೋಪವಾಗಿತ್ತು ಎಂದು ಹೇಳಿಕೆ ನೀಡಿದ್ದಾನೆ.

Follow Us:
Download App:
  • android
  • ios