ವಿಮಾನದಲ್ಲಿ ಚಂದ್ರಯಾನ ಲ್ಯಾಂಡಿಂಗ್ ಘೋಷಿಸಿದ ಪೈಲೆಟ್, ಪ್ರಯಾಣಿಕರ ಪ್ರತಿಕ್ರಿಯೆ ವೈರಲ್!
ಚಂದ್ರಯಾನ 3 ಲ್ಯಾಂಡಿಂಗ್ ಅತೀ ಹೆಚ್ಚಿನ ಮಂದಿ ವೀಕ್ಷಿಸಿದ್ದಾರೆ. ಆದರೆ ಅನಿವಾರ್ಯ ಕಾರಣಗಳಿಂದ ಕೆಲವರು ವೀಕ್ಷಿಸಿಲ್ಲ. ವಿಕ್ರಮ್ ಲ್ಯಾಂಡಂರ್ ಚಂದ್ರನ ಮೇಲೆ ಇಳಿಯುತ್ತಿದ್ದಂತೆ ಪ್ರಯಾಣ ಮಾಡುತ್ತಿದ್ದ ವಿಮಾನದ ಪ್ರಯಾಣಿಕರಿಗೆ ಪೈಲೆಟ್ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ನವದೆಹಲಿ(ಆ.26) ಇಸ್ರೋ ವಿಜ್ಞಾನಿಗಳ ಚಂದ್ರಯಾನ 3 ಯಶಸ್ವಿಗೊಳಿಸಿದ್ದಾರೆ. ಚಂದ್ರನ ಮೇಲೆ ಇಳಿದಿರುವ ಪ್ರಗ್ಯಾನ್ ರೋವರ್ ಈಗಾಗಲೇ ಅಧ್ಯಯನ ಆರಂಭಿಸಿದೆ. ವಿಡಿಯೋ, ಪೋಟೋಗಳನ್ನು ಭಾರತಕ್ಕೆ ರವಾನಿಸುತ್ತಿದೆ. ಈ ಚಂದ್ರಯಾನ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಯುವ ನೇರ ಪ್ರಸಾರವನ್ನು ಹಲವರು ಕಣ್ತುಂಬಿಸಿಕೊಂಡಿದ್ದಾರೆ. ಆದರೆ ಕೆಲವರು ಮಿಸ್ ಮಾಡಿಕೊಂಡಿದ್ದಾರೆ. ಹೀಗೆ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯುತ್ತಿದ್ದಂತೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಪೈಲೆಟ್ ಸಿಹಿ ಸುದ್ದಿ ನೀಡಿದ ವಿಡಿಯೋ ವೈರಲ್ ಆಗಿದೆ.
ಇಂಡಿಗೋ ವಿಮಾನ ಪ್ರಯಾಣಿಕರನ್ನು ಹೊತ್ತು ಆಕಾಶಕ್ಕೆ ಹಾರಿತ್ತು. ಇತ್ತ ಚಂದ್ರಯಾನ 3 ಲ್ಯಾಂಡಿಂಗ್ ಕಾರ್ಯಗಳು ನಡೆಯುತ್ತಿತ್ತು. ಇಸ್ರೋ ವಿಜ್ಞಾನಿಗಳು ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಇಳಿಸುವ ಕಾರ್ಯದಲ್ಲಿ ಮಗ್ನರಾಗಿದ್ದರು. ಆಗಸ್ಟ್ 23ರ ಸಂಜೆ 6.04ಕ್ಕೆ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದಿತ್ತು. ಇಡೀ ಭಾರತವೇ ಸಂಭ್ರಮಿಸಿತ್ತು. ಆದರೆ ಚಂದ್ರಯಾನ ಏನಾಯಿತು ಅನ್ನೋ ಸಣ್ಣ ಸುಳಿವು ಇದೇ ವೇಳೆ ವಿಮಾನದಲ್ಲಿ ಪ್ರಯಾಣಿಸುತ್ತದ್ದ ಪ್ರಯಾಣಿಕರಿಗೆ ಇರಲಿಲ್ಲ.
ಚಂದ್ರನ ಮೇಲಿನ ಹೊಸ ವಿಡಿಯೋ ಹಂಚಿಕೊಂಡ ಇಸ್ರೋ, ಪ್ರಗ್ಯಾನ್ ರೋವರ್ ಸಾಹಸಕ್ಕೆ ಜಗತ್ತೆ ಬೆರಗು!
ಇಂಡಿಗೋ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕರು ತಮ್ಮ ಪಾಡಿಗೆ ಇದ್ದರು. ಕೆಲವರು ನಿದ್ದೆಗೆ ಜಾರಿದ್ದರೆ, ಮತ್ತೆ ಕೆಲವರು ಮಾತು, ಹರಟೆಯೊಂದಿಗೆ ಪ್ರಯಾಣ ಮಾಡುತ್ತಿದ್ದರು. ಇದೇ ವೇಳೆ ವಿಮಾನದ ಪೈಲೆಟ್ ಅನೌನ್ಸ್ ಮಾಡಿದ್ದಾರೆ. ಚಂದ್ರಯಾನ 3 ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದಿದೆ. ವಿಕ್ರಮ್ ಲ್ಯಾಂಡರನ್ನು ಇಸ್ರೋ ವಿಜ್ಞಾನಿಗಳು ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಸಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ. ಇದೇ ವೇಳೆ ವಿಮಾನದಲ್ಲಿದ್ದ ಪ್ರಯಾಣಿಕರು ಚಪ್ಪಾಳೆ ತಟ್ಟಿ ಅಭಿನಂದನೆ ಸಲ್ಲಿಸಿದ್ದಾರೆ.
ಇದೀಗ ಭಾರತ ಚಂದ್ರನ ಮೇಲಿದೆ. ಈ ಯಶಸ್ಸಿಗೆ ಕಾರಣರಾದ ಇಸ್ರೋ ವಿಜ್ಞಾನಿಗಳಿಗೆ ಜೋರಾದ ಚಪ್ಪಾಳೆ ಎಂದು ಪೈಲೆಟ್ ಘೋಷಿಸಿದ್ದಾರೆ. ಮತ್ತೆ ಪ್ರಯಾಣಿಕರು ಚಪ್ಪಾಳೆ ತಟ್ಟಿ ಭಾರತದ ಸಾಧನೆ ಕೊಂಡಿಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಚಂದ್ರನ ಅಂಗಳದಲ್ಲಿ ಅತ್ಯಂತ ಕರಾರುವಾಕ್ಕಾಗಿ ಲ್ಯಾಂಡರ್ ಇಳಿಸುವ ಮೂಲಕ ವಿಶ್ವದ ಗಮನಸೆಳೆದಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಇದೇ ಮೊದಲ ಬಾರಿಗೆ ಸೂರ್ಯಯಾನ ಕೈಗೊಳ್ಳಲು ಸಜ್ಜಾಗುತ್ತಿದೆ. ಮುಂದಿನ ವಾರ, ಪ್ರಾಯಶಃ ಸೆ.2ರಂದು ಸೂರ್ಯನ ಅಧ್ಯಯನ ಉದ್ದೇಶ ಹೊಂದಿರುವ ‘ಆದಿತ್ಯ-ಎಲ್1’ ನೌಕೆ ಆಂಧ್ರಪ್ರದೇಶದ ಶ್ರೀಹರಿಕೋಟದಿಂದ ಉಡಾವಣೆಯಾಗುವ ಸಾಧ್ಯತೆ ಇದೆ.
ಚಂದ್ರನ ಮೇಲೆ ಭಾರತದ ನಡಿಗೆ ಆರಂಭ: ರೋವರ್ ಅಧ್ಯಯನ ಶುರು
ಸೂರ್ಯನ ಕರೋನಾದ ಕುರಿತು ಸೂಕ್ಷ್ಮ ಸರ್ವೇಕ್ಷಣೆ ನಡೆಸಿ ಮಾಹಿತಿ ನೀಡುವುದರ ಜತೆಗೆ, ಸೌರ ಮಾರುತದ ಕುರಿತೂ ಈ ನೌಕೆ ಅಧ್ಯಯನ ಕೈಗೊಳ್ಳಲಿದೆ. ಭೂಮಿಯಿಂದ 15 ಲಕ್ಷ ಕಿ.ಮೀ. ದೂರದಲ್ಲಿರುವ ‘ಎಲ್1’ ಪ್ರದೇಶದಲ್ಲಿ ಈ ನೌಕೆಯನ್ನು ನಿಯೋಜನೆ ಮಾಡಲಾಗುತ್ತದೆ. ಸೂರ್ಯ-ಭೂಮಿಯ ಗುರುತ್ವ ಬಲ ಸಮಾನವಾಗಿರುವ ಸ್ಥಳವನ್ನು ಲ್ಯಾಂಗ್ರೇಜಿಯನ್ ಪಾಯಿಂಟ್ ಅಥವಾ ಎಲ್1 ಎಂದು ಕರೆಯಲಾಗುತ್ತದೆ.