Asianet Suvarna News Asianet Suvarna News

ಕವಿವಿ 72ನೇ ಘಟಿಕೋತ್ಸವ: 9 ಚಿನ್ನದ ಪದಕಕ್ಕೆ ಮುತ್ತಿಟ್ಟ ಸುಜಾತಾ ಜೋಡಳ್ಳಿ

*  ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿಯ ಸಾಧನೆ
*  ಮಾಧ್ಯಮ ಕ್ಷೇತ್ರದಲ್ಲಿ ಬದುಕು ಕಟ್ಟಿಕೊಳ್ಳುವ ಯೋಚನೆ 
*  ಚಿನ್ನದ ಪದಕ ಪಡೆಯುವ ಮೂಲಕ ನಮ್ಮ ಮನತನಕ್ಕೆ ಹೆಮ್ಮೆ ತಂದಿದ್ದಾಳೆ

Sujata Jodalli Got 9 Gold Medals in Karnatak University 72nd Convocation grg
Author
Bengaluru, First Published Jun 8, 2022, 7:27 AM IST

ಧಾರವಾಡ(ಜೂ.08): ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿ ಸುಜಾತಾ ಜೋಡಳ್ಳಿ ವಿಭಾಗಕ್ಕೆ ಅತೀ ಹೆಚ್ಚು ಅಂಕ ಪಡೆದು 72ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರಿಂದ ಬರೋಬ್ಬರಿ ಒಂಭತ್ತು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡರು.

ಬಡತನದಿಂದ ಬಂದಿರುವ ಸುಜಾತಾ ಅವರ ತಂದೆ ನಾಗೇಶ ಕಲಘಟಗಿ ತಾಲೂಕು ಸೂಳಿಕಟ್ಟಿ ಗ್ರಾಪಂ ಡಿ ದರ್ಜೆ ನೌಕರರು. ಮನೆ ಮನೆಗೆ ನೀರು ಪೂರೈಕೆ ಮಾಡುವ ಕೆಲಸದೊಂದಿಗೂ ಮಗಳಿಗೆ ಉತ್ತಮ ಶಿಕ್ಷಣ ನೀಡಿದ್ದಾರೆ. ತಾಯಿ ಗೃಹಿಣಿ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರವಾರ ಕಚೇರಿಯಲ್ಲಿ ಅಪ್ರೆಂಟಿಸ್‌ ಆಗಿ ತರಬೇತಿ ಪಡೆಯುತ್ತಿರುವ ಸುಜಾತಾ, ತಂದೆ, ತಾಯಿ ಹಾಗೂ ಸ್ನೇಹಿತೆ ವಿದ್ಯಾಳ ಸಹಾಯ, ಸಹಕಾರದಿಂದ ಈ ಸಾಧನೆ ಸಾಧ್ಯವಾಯಿತು. ಮಾಧ್ಯಮ ಕ್ಷೇತ್ರದಲ್ಲಿ ಬದುಕು ಕಟ್ಟಿಕೊಳ್ಳುವ ಯೋಚನೆ ಇದೆ ಎಂದು ಹೇಳಿದರು.

ಧಾರವಾಡ ಕೃಷಿ ವಿವಿ 35 ನೇ ಘಟಿಕೋತ್ಸವಕ್ಕೆ ರಾಜ್ಯಪಾಲರಿಂದ ಚಾಲನೆ

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪೂರ ತಾಲೂಕಿನ ಉಚ್ಚಂಳಿ ಗ್ರಾಮದ ವಿಶ್ವನಾಥ ಭಟ್‌ ಮತ್ತು ಗೀತಾ ಭಟ್‌ ಅವರ ಪುತ್ರಿಯಾಗಿರುವ ಡಿ.ವಿ. ಅನುಜ್ಞಾ ಎಂಎಸ್ಸಿಯ ಜೀವರಸಾಯನಶಾಸ್ತ್ರ ವಿಷಯದಲ್ಲಿ ಅತಿ ಹೆಚ್ಚು ಅಂಕಗಳಿಸಿ 8 ಬಂಗಾರದ ಪದಕ ಪಡೆಯುವ ಮೂಲಕ ಅತಿ ಹೆಚ್ಚು ಪದಕ ಪಡೆದವರಲ್ಲಿ 2ನೇ ಸ್ಥಾನ ಪಡೆದಿದ್ದಾರೆ. ಅವರ ತಂದೆ ವಿಶ್ವನಾಥ ಭಟ್‌ ಕೃಷಿಕರಾಗಿದ್ದು, ತಾಯಿ ಗೀತಾ ಭಟ್‌ ಅವರು ಗೃಹಣಿಯಾಗಿದ್ದಾರೆ. ಅನುಜ್ಞಾ, ಮೊದಲಿನಿಂದಲೂ ಓದಿನಲ್ಲಿ ಸದಾ ಮುಂದಿದ್ದರು. 10ನೇ ತರಗತಿಯಲ್ಲಿ ಓದುವಾಗಲೇ ಅವರು ಜೀವರಸಾಯನಶಾಸ್ತ್ರದಲ್ಲಿ ಪದವಿ ಪಡೆಯಬೇಕು ಎಂಬ ಕನಸು ಹೊತ್ತಿದ್ದರು. ಅದಕ್ಕೆ ಸಹಕಾರ ನೀಡಿದ ತಂದೆ-ತಾಯಿ, ಕುಟುಂಬಸ್ಥರು ಆ ಕನಸು ಇದೀಗ ಈಡೇರಿದ್ದು, ಸಾಕಷ್ಟು ಖುಷಿಯಾಗುತ್ತಿದೆ ಎಂದು ಸಂತೋಷ ವ್ಯಕ್ತಪಡಿಸಿದರು.

ಅನುಜ್ಞಾ ಪ್ರಸ್ತುತ ಕವಿವಿಯಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ನೆಟ್‌ ಪರೀಕ್ಷೆ ಎದುರಿಸಿ, ಪ್ರೋಟಿನ್‌ ಜೀವರಸಾಯನಶಾಸ್ತ್ರ ವಿಷಯದಲ್ಲಿ ಪಿಎಚ್‌ ಡಿ ಮಾಡುವ ಆಶಯ ವ್ಯಕ್ತಪಡಿಸಿದರು.

ನಾಲ್ಕು ಮಕ್ಕಳ ಪೈಕಿ ಮೂವರು ಹೆಣ್ಣು ಮಕ್ಕಳಿದ್ದು, ಈಗಾಗಲೇ ಇಬ್ಬರು ಮಕ್ಕಳನ್ನು ಮದುವೆ ಮಾಡಿಕೊಟ್ಟಿದ್ದೇನೆ. ದ್ವಿತೀಯ ಮಗಳಾದ ಸುಜಾತಾ ಕಲಿಯುವ ಇಚ್ಚೆ ಹೊಂದಿದ್ದರಿಂದ ಕಲಿಸಿದ್ದು, ಈಗ ಚಿನ್ನದ ಪದಕ ಪಡೆಯುವ ಮೂಲಕ ನಮ್ಮ ಮನತನಕ್ಕೆ ಹೆಮ್ಮೆ ತಂದಿದ್ದಾಳೆ. ಮಗಳ ಈ ಸಾಧನೆ ಖುಷಿ ತಂದಿದೆ ಅಂತ ಸುಜಾತಾ ತಂದೆ ನಾಗೇಶ ಜೋಡಳ್ಳಿ ಹೇಳಿದ್ದಾರೆ.  

Follow Us:
Download App:
  • android
  • ios