*  ವಿಶ್ವವಿದ್ಯಾಲಯ ಶುಲ್ಕ ಬಾಕಿ ಬಾಣ*  ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿಗಳಿಗೆ ತೊಡಕು*  ಸಾವಿರಾರು ವಿದ್ಯಾರ್ಥಿಗಳಿಗೆ ತೊಂದರೆ 

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ(ಜೂ.30):  ಪದವಿ ಪಾಸಾದರೂ ಅಂಕಪಟ್ಟಿ ಕೈಗೆ ಸಿಗದೇ ಉನ್ನತ ಶಿಕ್ಷಣ ಪಡೆಯಲು ಹಾಗೂ ಉದ್ಯೋಗ ಕಂಡುಕೊಳ್ಳಲು ಆಗದೇ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.

ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಸ್ಥಿತಿ ಇದಾಗಿದೆ. ಬಳ್ಳಾರಿ, ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಗಳ ವ್ಯಾಪ್ತಿಯ ಪದವಿ ಕಾಲೇಜ್‌ಗಳು ಈ ವಿಶ್ವವಿದ್ಯಾಲಯ ವ್ಯಾಪ್ತಿಗೆ ಬರುತ್ತವೆ. ಕಾಲೇಜ್‌ಗಳು ವಿಶ್ವವಿದ್ಯಾಲಯ ಶುಲ್ಕವನ್ನು ಬಾಕಿ ಉಳಿಸಿಕೊಂಡಿದ್ದು, ಈಗ ಪದವಿ ಪಾಸಾದ ವಿದ್ಯಾರ್ಥಿಗಳ ಅಂಕಪಟ್ಟಿಗಳನ್ನು ತಡೆಹಿಡಿದು ವಸೂಲಿ ಮಾಡುತ್ತಿವೆ! ಅಂಕಪಟ್ಟಿಗಳನ್ನು ಪಡೆಯಲು ಖುಷಿಯಿಂದ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ಶುಲ್ಕ ಭರಿಸಿದರೆ ಮಾತ್ರ ಅಂಕಪಟ್ಟಿ ನೀಡಲಾಗುತ್ತದೆ ಎಂದು ಕಾಲೇಜ್‌ಗಳ ಪ್ರಾಚಾರ್ಯರು ಹೇಳುತ್ತಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ ಗೊಂದಲದಿಂದ ಪದವಿ ಪರೀಕ್ಷೆ ವಿಳಂಬ: ವಿದ್ಯಾರ್ಥಿಗಳ ಭವಿಷ್ಯ ಅತಂತ್ರ

ಏನಿದು ವಿವಿ ಶುಲ್ಕ?

ಪದವಿ ಕಾಲೇಜ್‌ಗಳಲ್ಲಿ ಬಿ.ಎ., ಬಿಕಾಂ ಮತ್ತು ಬಿಎಸ್ಸಿ ಕೋರ್ಸ್‌ಗಳಿಗೆ ದಾಖಲಾಗುವ ವಿದ್ಯಾರ್ಥಿಗಳು ಸರ್ಕಾರಿ, ಅರೆ ಸರ್ಕಾರಿ ಮತ್ತು ವಿಶ್ವವಿದ್ಯಾಲಯ ಶುಲ್ಕ ಪಾವತಿಸಬೇಕು. ಈ ಪೈಕಿ ವಿಶ್ವವಿದ್ಯಾಲಯ ಶುಲ್ಕವನ್ನು ಎಸ್ಸಿ, ಎಸ್ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಶಿಷ್ಯ ವೇತನದಿಂದ ಭರಿಸಲಾಗುತ್ತದೆ. ಆದರೆ, ಎಸ್ಸಿ, ಎಸ್ಟಿವಿದ್ಯಾರ್ಥಿಗಳು ಸ್ಕಾಲರ್‌ ಶಿಪ್‌ ಫಾಮ್‌ರ್‍ ಭರ್ತಿ ಮಾಡಿದ್ದು, ಉಳಿದವರು ಭರ್ತಿ ಮಾಡಿಲ್ಲ. ಹಾಗಾಗಿ, ಈಗ ಅಂಕಪಟ್ಟಿಗಳನ್ನು ಪಡೆಯಲು ಬರುವ ವಿದ್ಯಾರ್ಥಿಗಳಿಂದ ಪಡೆಯಲಾಗುತ್ತಿದೆ!.

ವಿದ್ಯಾರ್ಥಿಗಳಿಗೆ ಪೀಕಲಾಟ:

ಕಾಲೇಜ್‌ಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾಗಲೇ ಕಾಲೇಜಿನ ಪ್ರಾಚಾರ್ಯರು, ಪ್ರಾಧ್ಯಾಪಕರು ಇಲ್ಲವೇ ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳ ಗಮನಕ್ಕೆ ತಂದು ಸ್ಕಾಲರ್‌ ಶಿಪ್‌ ಫಾಮ್‌ರ್‍ ಅನ್ನು ಆನ್‌ಲೈನ್‌ನಲ್ಲಿ ಭರ್ತಿ ಮಾಡಲು ತಿಳಿಸಬೇಕಿತ್ತು. ಲಾಕ್‌ಡೌನ್‌ ಇತರೆ ಸಮಸ್ಯೆಯಿಂದಾಗಿ ಸ್ಕಾಲರ್‌ ಶಿಪ್‌ ಫಾಮ್‌ರ್‍ ಭರ್ತಿ ಮಾಡಲಾಗಿಲ್ಲ. ಮೂರು ಜಿಲ್ಲೆಗಳ ಸಾವಿರಾರು ವಿದ್ಯಾರ್ಥಿಗಳು ಸ್ಕಾಲರ್‌ ಶಿಪ್‌ನಿಂದ ವಂಚಿತರಾಗಿದ್ದಾರೆ. ಈಗ ಕಾಲೇಜ್‌ಗಳಲ್ಲಿ ಅಂಕಪಟ್ಟಿಗಳನ್ನು ಪಡೆಯಲು ಹೋದರೆ, ಮೂರು ವರ್ಷಗಳಲ್ಲಿ ತಲಾ .2,100ರಿಂದ .4,100ರ ವರೆಗೆ ಬಾಕಿ ಉಳಿಸಿಕೊಂಡಿದ್ದೀರಿ ಎಂದು ವಸೂಲಿ ಮಾಡಲಾಗುತ್ತಿದೆ. ಶುಲ್ಕ ಪಾವತಿಸದಿದ್ದರೆ ಅಂಕಪಟ್ಟಿಗಳನ್ನು ಕೊಡಲಾಗುವುದಿಲ್ಲ ಎಂದು ವಿದ್ಯಾರ್ಥಿಗಳನ್ನು ಸಾಗ ಹಾಕಲಾಗುತ್ತಿದೆ.

ಒಂದು ಕಡೆ ಉನ್ನತ ಶಿಕ್ಷಣ ಪಡೆಯುವ ಇಲ್ಲವೇ ಉದ್ಯೋಗ ಕಂಡುಕೊಳ್ಳುವ ಇರಾದೆಯಲ್ಲಿರುವ ವಿದ್ಯಾರ್ಥಿಗಳಿಗೆ ಕಾಲೇಜ್‌ಗಳಲ್ಲಿನ ಬಾಕಿ ಹಣದಿಂದಾಗಿ ಅಂಕಪಟ್ಟಿಗಳನ್ನು ಪಡೆದುಕೊಳ್ಳಲು ಆಗುತ್ತಿಲ್ಲ. ಹೊಸಪೇಟೆಯ ಶಂಕರ್‌ ಆನಂದ್‌ ಸಿಂಗ್‌ ಕಾಲೇಜ್‌ಯೊಂದರಲ್ಲೇ 350ಕ್ಕೂ ಅಧಿಕ ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ಶುಲ್ಕ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಅಂಕಪಟ್ಟಿಗಳನ್ನು ತಡೆ ಹಿಡಿಯಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ದಿಕ್ಕುತೋಚದಂತಾಗಿದ್ದಾರೆ.

ಬಳ್ಳಾರಿ ವಿವಿಯಿಂದ ಅಲ್ಲಂ ವೀರಭದ್ರಪ್ಪರಿಗೆ ಅವಮಾನ..!

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಶುಲ್ಕ ಬಾಕಿಯನ್ನು ವಿದ್ಯಾರ್ಥಿಗಳು ಉಳಿಸಿಕೊಂಡಿದ್ದಾರೆ. ಹಾಗಾಗಿ, ಅಂಕಪಟ್ಟಿಗಳನ್ನು ಪಡೆದುಕೊಳ್ಳಲು ಬರುವ ವಿದ್ಯಾರ್ಥಿಗಳ ಬಳಿ ಶುಲ್ಕ ಪಡೆಯಲಾಗುತ್ತಿದೆ. ವಿವಿಯ ಆದೇಶದಂತೆ ಈ ಕಾರ್ಯ ಮಾಡಲಾಗುತ್ತಿದೆ. ಇದರಲ್ಲಿ ನಮ್ಮದೇನೂ ತಪ್ಪಿಲ್ಲ ಅಂತ ಹೊಸಪೇಟೆ ಶಂಕರ್‌ ಆನಂದ್‌ ಸಿಂಗ್‌ ಪದವಿ ಕಾಲೇಜಿನ ಪ್ರಾಚಾರ್ಯ ನಟರಾಜ್‌ ಪಾಟೀಲ್‌ ಹೇಳಿದ್ದಾರೆ. 

ಪದವಿಯಲ್ಲಿ ಪಾಸಾದರೂ ನಮಗೆ ಅಂಕಪಟ್ಟಿಗಳನ್ನು ಕೊಡಲಾಗುತ್ತಿಲ್ಲ. ಅಂಕಪಟ್ಟಿಗಳನ್ನು ಪಡೆಯಲು ಹೋದರೆ ವಿಶ್ವವಿದ್ಯಾಲಯದ ಬಾಕಿ ಮೊತ್ತ ಪಾವತಿಸಬೇಕು ಎಂದು ನಮ್ಮ ಕಡೆ ಹಣ ಪಡೆಯುತ್ತಿದ್ದಾರೆ. ನೀಡದಿದ್ದರೆ ಅಂಕಪಟ್ಟಿಗಳನ್ನು ತಡೆಹಿಡಿಯಲಾಗುತ್ತಿದೆ ಅಂತ ಪದವಿ ಪಾಸಾದ ನೊಂದ ವಿದ್ಯಾರ್ಥಿಗಳು ತಿಳಿಸಿದ್ದಾರೆ.