Asianet Suvarna News Asianet Suvarna News

ಬಳ್ಳಾರಿ ವಿವಿಯಿಂದ ಅಲ್ಲಂ ವೀರಭದ್ರಪ್ಪರಿಗೆ ಅವಮಾನ..!

*  ಕುಲಪತಿ ವಿರುದ್ಧ ಉನ್ನತ ಶಿಕ್ಷಣ ಸಚಿವರಿಗೆ ದೂರು
*  ಕುಲಪತಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂಬ ಕೂಗು
*  ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾದ ಕುಲಪತಿಗಳ ನಡೆ 
 

Sri Krishnadevaraya University Insult to MLC Allam Veerabhadrappa grg
Author
Bengaluru, First Published Oct 11, 2021, 2:31 PM IST
  • Facebook
  • Twitter
  • Whatsapp

ಬಳ್ಳಾರಿ(ಅ.11):  ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ(Sri Krishnadevaraya University) ವಿದ್ಯಾವಿಷಯಕ ಪರಿಷತ್‌ ಸದಸ್ಯರೂ ಆಗಿರುವ ವಿಧಾನಪರಿಷತ್‌ ಸದಸ್ಯ ಅಲ್ಲಂ ವೀರಭದ್ರಪ್ಪ ಅವರಿಗೆ ವಿಶ್ವವಿದ್ಯಾಲಯ ಕುಲಪತಿ ಅಗೌರವ ತೋರಿಸಿದ್ದು, ಈ ಕುರಿತು ಅಲ್ಲಂ ವೀರಭದ್ರಪ್ಪ(Allam Veerabhadrappa) ಅವರು ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆದು ಮುಂದಿನ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಕುಲಪತಿ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವವರೆಗೂ ವಿವಿಯ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂತಲೂ ಪತ್ರದಲ್ಲಿ ತಿಳಿಸಿದ್ದಾರೆ.

ಏನಿದು ಘಟನೆ?:

ಕಳೆದ 2020ರ ಜೂನ್‌ 12ರಂದು ವಿಧಾನಪರಿಷತ್‌ ಸದಸ್ಯ ಅಲ್ಲಂ ವೀರಭದ್ರಪ್ಪ ಅವರನ್ನು ಬಳ್ಳಾರಿ(Ballari) ವಿಎಸ್‌ಕೆ ವಿವಿ ವಿದ್ಯಾವಿಷಯಕ ಪರಿಷತ್‌ ಸದಸ್ಯರನ್ನಾಗಿ ನಾಮ ನಿರ್ದೇಶನಗೊಳಿಸಿ ಆದೇಶ ಹೊರಡಿಸಲಾಗಿತ್ತು. ಈ ಹಿಂದಿನ ಮೂರು ವರ್ಷದ ಅವಧಿಗೆ ವಿಧಾನಪರಿಷತ್‌ ಸದಸ್ಯ ಕೆ.ಸಿ. ಕೊಂಡಯ್ಯ ಅವರನ್ನು ನೇಮಿಸಲಾಗಿತ್ತು. ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅಲ್ಲಂ ವೀರಭದ್ರಪ್ಪ ಅವರನ್ನು ನೇಮಕ ಮಾಡಲಾಗಿತ್ತು.

ಆದರೆ, ಸರ್ಕಾರದ(Government) ಆದೇಶ ಬಂದು ಎರಡು ತಿಂಗಳ ಬಳಿಕ ಅಂದರೆ 2020 ಆಗಸ್ಟ್‌ 17ರಂದು ಅಧಿಸೂಚನೆ ಹೊರಡಿಸಿದ ಕುಲಪತಿಗಳು(Chancellor), ನಾಲ್ಕು ತಿಂಗಳ ಬಳಿಕ ಈ ಪತ್ರವನ್ನು ಸಾಮಾನ್ಯ ಅಂಚೆ ಮೂಲಕ ಅಲ್ಲಂ ವೀರಭದ್ರಪ್ಪ ಅವರಿಗೆ ಕಳುಹಿಸಿದ್ದರು. ಈ ಪತ್ರವು 2020ರ ಡಿಸೆಂಬರ್‌ 1ರಂದು ಅಲ್ಲಂ ಅವರ ಕೈ ಸೇರಿತ್ತು. ಈ ಅವಧಿಯೊಳಗೆ ನಡೆದಿರುವ ಪರಿಷತ್‌ ಸಭೆಗಳ ಮಾಹಿತಿಯನ್ನು ಸಹ ಅಲ್ಲಂ ವೀರಭದ್ರಪ್ಪ ಅವರ ಗಮನಕ್ಕೆ ತರದ ಕುಲಪತಿ ಸಿದ್ದು ಪಿ. ಆಲಗೂರು ನಡೆಯಿಂದ ತೀವ್ರ ಅಸಮಾಧಾನಗೊಂಡಿರುವ ಅಲ್ಲಂ ವೀರಭದ್ರಪ್ಪ ಅವರು ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆದು ಕುಲಪತಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರಲ್ಲದೆ, ಈ ವರೆಗೆ ವಿಶ್ವವಿದ್ಯಾಲಯದ ಸಭೆಗೆ ಹಾಜರಾಗಿಲ್ಲ.

ಪ್ರಶ್ನೆಪತ್ರಿಕೆ ಸೋರಿಕೆ: ಸೈಬರ್‌ ಕ್ರೈಂಗೆ ದೂರು ನೀಡಲು ಕೃಷ್ಣದೇವರಾಯ ವಿವಿ ನಿರ್ಧಾರ

ಕುಲಪತಿಗಳ ನಿರ್ಲಕ್ಷ್ಯದಿಂದಾಗಿಯೇ ಕಳೆದ ಒಂದೂವರೆ ವರ್ಷದಿಂದ ವಿವಿ ಪರಿಷತ್‌ ಸಭೆಗೆ ಅಲ್ಲಂ ವೀರಭದ್ರಪ್ಪ ಅವರು ಹಾಜರಾಗಲು ಸಾಧ್ಯವಾಗಿಲ್ಲ. ಇದು ಸಾರ್ವಜನಿಕ ವಲಯದಲ್ಲಿಯೂ ತೀವ್ರ ಟೀಕೆಗೆ ಗುರಿಯಾಗಿದ್ದು, ಕುಲಪತಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂಬ ಕೂಗು ಬಲಗೊಳ್ಳುತ್ತಿವೆ.

ಮುತ್ಸದ್ದಿ ರಾಜಕಾರಣಿ

ವಿಧಾನ ಪರಿಷತ್‌ ಸದಸ್ಯ ಅಲ್ಲಂ ವೀರಭದ್ರಪ್ಪ ಅವರು ಜಿಲ್ಲೆಯ ಹಿರಿಯ ಕಾಂಗ್ರೆಸ್‌(Congress) ಮುಖಂಡರು ಹಾಗೂ ಸರಳ ಸಜ್ಜನಿಕೆಯ ಮುತ್ಸದ್ದಿ ರಾಜಕಾರಣಿ(Politician) ಎಂದು ಹೆಸರು ಮಾಡಿದವರು. ಐದಾರು ದಶಕಗಳಿಂದ ರಾಜಕೀಯ(Politics) ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಅಲ್ಲಂ ವೀರಭದ್ರಪ್ಪ ಅವರು ಈ ಹಿಂದೆ ರಾಜ್ಯ ಸರ್ಕಾರದಲ್ಲಿ ಸಚಿವರಾಗಿ, ಶಾಸಕರಾಗಿ ಕೆಪಿಸಿಸಿ(KPCC) ಅಧ್ಯಕ್ಷರಾಗಿ, ವಿಧಾನಪರಿಷತ್‌ ಸದಸ್ಯರಾಗಿ ಸೇವೆ ಸಲ್ಲಿಸಿದವರು. ಇಂತಹ ವ್ಯಕ್ತಿಗಳನ್ನೇ ನಿರ್ಲಕ್ಷ್ಯ ಮಾಡಿರುವ ಕುಲಪತಿ ನಡೆ ಎಷ್ಟು ಸರಿ ಎಂಬ ಪ್ರಶ್ನೆ ಮೂಡಿದೆ.

ಅಧಿಸೂಚನೆ(Notification) ಹೊರಡಿಸಿದ ಪತ್ರವನ್ನು ಕಳುಹಿಸುವಲ್ಲಿ ನಿರ್ಲಕ್ಷ್ಯ ವಹಿಸಿರುವ ವಿಎಸ್‌ಕೆ ವಿವಿ ಕುಲಪತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಲ್ಲಂ ವೀರಭದ್ರಪ್ಪ ಅವರು ವಿಧಾನಪರಿಷತ್‌ ಹಕ್ಕು ಬಾಧ್ಯತಾ ಸಮಿತಿಗೂ ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ.
 

Follow Us:
Download App:
  • android
  • ios