4ನೇ ಸೆಮಿಸ್ಟರ್‌ ಅಂಕಪಟ್ಟಿ ಮಕ್ಕಳ ಕೈ ಸೇರಿಲ್ಲ, 5ನೇ ಸೆಮಿಸ್ಟರ್‌ ಪರೀಕ್ಷೆ ಮುಗಿದು 2 ತಿಂಗಳಾದರೂ ಇನ್ನೂ ಫಲಿತಾಂಶವಿಲ್ಲ

ಶೇಷಮೂರ್ತಿ ಅವಧಾನಿ
ಕಲಬುರಗಿ(ಆ.13):
ಗುಲ್ಬರ್ಗ ವಿವಿ ಪದವಿ ಅಧ್ಯಯನ ವಿಭಾಗದಲ್ಲಿನ ಪ್ರಸಕ್ತ ವರ್ಷದ ಶೈಕ್ಷಣಿಕ ಶಿಸ್ತು ಸಂಪೂರ್ಣ ಹಳಿ ತಪ್ಪಿದೆಯೆ? ಅತ್ಯಂತ ಮಹತ್ವದ ಪರೀಕ್ಷಾಂಗ, ಮೌಲ್ಯಮಾಪನ ವಿಭಾಗಗಳಲ್ಲಿ ಯಾವ ಕೆಲಸವೂ ನಿಗದಿಯಂತೆ ನಡೆಯುತ್ತಿಲ್ಲವೆ? ಇಂತಹ ಪ್ರಶ್ನೆಗಳು ಇದೀಗ ಗುವಿವಿ ಶೈಕ್ಷಣಿಕ ವಲಯದಲ್ಲಿ, ಪದವಿ ಕಾಲೇಜು ಪ್ರಾಚಾರ್ಯರು, ಉಪನ್ಯಾಸಕರ ಸಮೂಹದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಏಕೆಂದರೆ ಬಿಎ, ಬಿಎಸ್‌ಸಿ, ಬಿಕಾಂ ಪದವಿ ಅಧ್ಯಯನದ 5ನೇ ಸೆಮಿಸ್ಟರ್‌ ಪರೀಕ್ಷೆ ಮುಗಿದು 2 ತಿಂಗಳ ಮೇಲಾದರೂ ಇನ್ನೂ ಫಲಿತಾಂಶ ಪ್ರಕಟವಾಗಿಲ್ಲ, 4ನೇ ಸೆಮಿಸ್ಟರ್‌ ಅಂಕಪಟ್ಟಿಮಕ್ಕಳ ಕೈ ಸೇರಿಲ್ಲ, ಇದಿಷ್ಟೇ ಅಲ್ಲ, 6ನೇ ಸೆಮಿಸ್ಟರ್‌ ವಿಳಂಬ ಆರಂಭ, ಹೀಗಾಗಿ ಪಠ್ಯಕ್ರಮ ಮುಗಿಸೋದು ಆಗೋದಿಲ್ಲವೆಂಬ ಅನಿಶ್ಚಿತತೆ ಕಾಡುತ್ತಿದೆ.

ಇವೆಲ್ಲ ಕಾರಣಗಳಿಂದಾಗಿ ಗುವಿವಿ ಜ್ಞಾನಗಂಗೆಯಲ್ಲಿ ಪದವಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಗೊಂದಲಕ್ಕೊಳಗಾಗಿದ್ದಾರೆ. ಮುಂಚೆ ಇದೇ ವಿವಿಯಲ್ಲಿ ಸೆಮಿಸ್ಟರ್‌ ಪರೀಕ್ಷೆ ನಡೆದ ನಂತರ 30 ರಿಂದ 40 ದಿನಗಳಲ್ಲಿ ಫಲಿತಾಂಶ ಪ್ರಕಟವಾಗುತ್ತಿತ್ತು. ಆದರೀಗ ಪರೀಕ್ಷೆ ಮುಗಿದು 2 ತಿಂಗಳಾದರೂ ಫಲಿತಾಂಶದ ಸುಳಿವಿಲ್ಲ.

ಗುಲ್ಬರ್ಗಾ ವಿವಿಯಲ್ಲಿ ದುಡ್ಡು ಕೊಟ್ರೆ ಸಾಕು ಫೇಲಾಗಿದ್ರೂ ಪಾಸಾಗಿರುವ ಮಾರ್ಕ್ಸ್ ಕಾರ್ಡ್ ಸಿಗುತ್ತೆ!

ಅನ್ಯ ವಿವಿಗಳು ಮುಂದೆ, ಗುವಿವಿ ಹಿಂದೆ:

ಅನ್ಯ ವಿವಿಗಳು ಅದಾಗಲೇ 6ನೇ ಸೆಮಿಸ್ಟರ್‌ ಪರೀಕ್ಷೆ ನಡೆಸಿ ಫಲಿತಾಂಶ ಸಹ ನೀಡಿ ಮಕ್ಕಳಿಗೆ ಪದವಿ ಪ್ರದಾನ ಮಾಡಿದ್ದರೂ ಗುಲ್ಬರ್ಗ ವಿವಿ ಫಲಿತಾಂಶಕ್ಕೇ ಅಮರಿಕೊಂಡಿರುವ ಆಮೆವೇಗ ಬಿಟ್ಟಿಲ್ಲ. ಇದರಿಂದಾಗಿ ಗುವಿವಿ ಪದವಿ ಮಕ್ಕಳು ಮುಂದೆ ಉನ್ನತ ಶಿಕ್ಷಣ ಸ್ನಾತಕೋತ್ತರ ಪದವಿ ಅಧ್ಯಯನಕ್ಕೆ ಅನ್ಯ ವಿವಿಗಳಿಗೆ ಹೋಗಬೇಕಾದರೂ ಅಸಾಧ್ಯ ಎಂಬಂತಹ ವಾತಾವರಣ ಸೃಷ್ಟಿಯಾಗಿದೆ. ಇನ್ನು ಪ್ಲೇಸ್ಮೆಂಟ್‌ ಆದವರೂ ಒದಗಿಬಂದ ನೌಕರಿ ಭಾಗ್ಯ ಹೊಂದಲಾಗದೆ ಪರಿತಪಿಸುವಂತಾಗಿದೆ.

ಗಳಿಗ್ಗೊಂದು ಸುತ್ತೋಲೆ:

ಇಲ್ಲಿನ ಪರೀಕ್ಷಾಂಗ ಅದ್ಯಾವ ರೀತಿ ಕೆಲಸ ಮಾಡುತ್ತಿದೆ ಎಂದರೆ ಪರೀಕ್ಷೆಯ ಸಮಯದಲ್ಲಿ ಬೆಳಗ್ಗೆ, ಮಧ್ಯಾಹ್ನ, ಸಂಜೆ ಹೀಗೆ ಸುತ್ತೋಲೆ ಹೊರಡಿಸುತ್ತ ಆಯೋಮಯ ವಾತಾವರಣ ಹುಟ್ಟು ಹಾಕಿದೆ. ಹೀಗೆ ಸುತ್ತೋಲೆಗಳು ಬಂದಲ್ಲಿ ಅದ್ಹೇಗೆ ಕೆಲಸ ಮಾಡಬೇಕು? ಸುತ್ತೋಲೆಯ ಸಂದೇಶ ಅರಿತು ಅದರಂತೆ ನಡೆಯಲಾದರೂ ಸಮಯ ಬೇಕು ತಾನೆ? ಹೀಗೆ ಸುತ್ತೋಲೆಯಿಂದಲೇ ನಾವು ಸುಸ್ತಾಗಿದ್ದೇವೆ ಎಂದು ಪದವಿ ಕಾಲೇಜು ಉಪನ್ಯಾಸಕರು, ಸಿಬ್ಬಂದಿ ಗುವಿವಿ ಸುತ್ತೋಲೆಗಳು, ಪರೀಕ್ಷಾಂಗ, ಮೌಲ್ಯಮಾನ ವಿಭಾಗಗಳ ಬಗ್ಗೆ ಆಡಿಕೊಳ್ಳುತ್ತಿದ್ದಾರೆ.

ಗುಲ್ಬರ್ಗ ವಿವಿಯಲ್ಲಿ ಹೇಮರೆಡ್ಡಿ ಮಲ್ಲಮ್ಮ ಅಧ್ಯಯನ ಪೀಠದ ನೂತನ ಕಟ್ಟಡ ಉದ್ಘಾಟನೆ

ಉದ್ಯೋಗ ಅವಕಾಶದಿಂದ ವಂಚಿತ

ಫಲಿತಾಂಶ ವಿಳಂಬದಿಂದಾಗಿ ಅನೇಕರು ತಮಗೆ ದೊರಕಿದಂತಹ ಉದ್ಯೋಗ ಅವಕಾಶಗಳಿಂದಲೂ ವಂಚಿತರಾಗುತ್ತಿದ್ದಾರೆ. ಇಲ್ಲಿನ ನೂತನ ವಿದ್ಯಾಲಯ ಪದವಿ ವಿದ್ಯಾಲಯದಲ್ಲಿ ಬಿಎಸ್‌ಸಿ 6ನೇ ಸೆಮಿಸ್ಟರ್‌ ವಿದ್ಯಾರ್ಥಿನಿಯೊಬ್ಬಳು ಕ್ಯಾಂಪಸ್‌ ಸೆಲೆಕ್ಷನ್‌ನಲ್ಲಿ ಕೇಪ್‌ ಜೇಮಿನಿ ಕಂಪನಿಯಲ್ಲಿ ಮಾಸಿಕ 30 ಸಾವಿರ ರು. ಪ್ಯಾಕೇಜ್‌ನ ನೌಕರಿ ಗಿಟ್ಟಿಸಿಕೊಂಡಿದ್ದಳು. ಕಂಪನಿಯವರು ’ಆಫರ್‌ ಲೇಟರ್‌’ ಸಹ ಈಕೆಗೆ ರವಾನಿಸಿ 5 ನೇ ಸೆಮಿಸ್ಟರ್‌ ಅಂಕಪಟ್ಟಿಕೊಟ್ಟು ತಮ್ಮ ಉದ್ಯೋಗದ ಆಫರ್‌ ಖಚಿತಪಡಿಸಿಕೊಳ್ಳುವಂತೆ ಸೂಚಿಸಿದಾಗ ಈಕೆ ಪರೇಶಾನ್‌. ಏಕೆಂದರೆ ಈಕೆ 5ನೇ ಸೆಮಿಸ್ಟರ್‌ ಪರೀಕ್ಷೆ ಬರೆದರೂ ಅಂಕಪಟ್ಟಿಮಾತಿರಲಿ, ಫಲಿತಾಂಶವೇ ಪ್ರಕಟವಾಗದ ಕಾರಣ ಏನೇನೋ ಸಮಜಾಯಿಷಿ ಕಂಪನಿಗೆ ನೀಡಿದರೂ ಅವರು ತಮ್ಮ ಆಫರ್‌ ರದ್ದು ಮಾಡಿ ಬಿಟ್ಟರು. ತನ್ನದಲ್ಲದ ತಪ್ಪಿನಿಂದ ಈಕೆ ಸಿಕ್ಕ ಉದ್ಯೋಗ ಅವಕಾಶದಿಂದಲೂ ವಂಚಿತಳಾಗಿದ್ದಾಳೆ. ಇದೇ ರೀತಿ ಅನೇಕರು ಉದ್ಯೋಗ ಅವಕಾಶಗಳಿಂದ ವಂಚಿತರಾಗಿದ್ದಾರೆ.

ಜ್ಞಾನಗಂಗೆ ಪರೀಕ್ಷಾಂಗ, ಮೌಲ್ಯಮಾಪನ ವಿಭಾಗದಲ್ಲಿ ವಿದ್ಯಾರ್ಥಿ ಹಿತಾಸಕ್ತಿ ಕಡೆಗಣಿಸಲ್ಪಡುತ್ತಿರೋದರಿಂದಲೇ ಫಲಿತಾಂಶ, ತರಗತಿಗಳ ವಿಳಂಬ ಸೇರಿದಂತೆ ಶೈಕ್ಷಣಿಕ ಅಶಿಸ್ತು ತಾಂಡವವಾಡುತ್ತಿದೆ. ಇದರ ಕೆಟ್ಟ ಪರಿಣಾಮ ವಿದ್ಯಾರ್ಥಿಗಳ ಮೇಲಾಗುತ್ತಿದೆ. ಈಗ 6ನೇ ಸೆಮಿಸ್ಟರ್‌ ಬೋಧನೆ ಶುರುವಾಗಿ ತಿಂಗಳಾಗಿಲ್ಲ, ಇನ್ನೊಂದು ತಿಂಗಳಲ್ಲಿ ಪರೀಕ್ಷೆ ನಡೆಸಿ ಅಂತ ಕೂಡ್ತಾರೆ, ಪಠ್ಯ ಮುಗಿಸೋದು ಯಾವಾಗ? ಪರೀಕ್ಷೆ ಯಾವಾಗ ಮಾಡೋಣ? ವಿದ್ಯಾರ್ಥಿಗಳಿಗೆ ಏನೆಂದು ಉತ್ತರಿಸೋಣ? ಅಂತ ಕಲಬುರಗಿಯ (ಹೆಸರು ಬಹಿರಂಗ ಇಚ್ಚಿಸದ) ಪದವಿ ಕಾಲೇಜು ಪ್ರಾಚಾರ್ಯರು ತಿಳಿಸಿದ್ದಾರೆ.