SSLC Exam: ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಪಾಸಾಗಲು ತ್ರಾಸಾಗಲ್ಲ..!
* ಕೋವಿಡ್‌ನಿಂದಾಗಿ ಪರೀಕ್ಷೆ ಇಲ್ಲದೆ 8, 9ನೇ ಕ್ಲಾಸ್ ಪಾಸಾಗಿದ್ದ ಮಕ್ಕಳು
* 10ನೇ ಕ್ಲಾಸಿನಲ್ಲಿ ಕಠಿಣ ಪ್ರಶ್ನೆ ನೀಡಿದರೆ ಕಷ್ಟವೆಂದು ಸುಲಭ ಪ್ರಶ್ನೆಪತ್ರಿಕೆ
* ಬಹು ಆಯ್ಕೆ ಮಾದರಿ ಪ್ರಶ್ನೆ ಹೆಚ್ಚಳ ಹೀಗಾಗಿ, ಪಾಸಾಗುವುದು ಸುಲಭ
ಲಿಂಗರಾಜು ಕೋರಾ
ಬೆಂಗಳೂರು(ಮಾ.27): ಕೋವಿಡ್ ತಹಬದಿಗೆ ಬಂದಿರುವುದರಿಂದ ಈ ಬಾರಿಯ ಎಸ್ಸೆಸ್ಸೆಲ್ಸಿ(SSLC) ಪರೀಕ್ಷೆಯನ್ನು ಕೋವಿಡ್(Covid-19) ಪೂರ್ವ ಮಾದರಿಯಲ್ಲಿ ನಡೆಸಲಾಗುತ್ತಿದೆಯಾದರೂ ಪ್ರಶ್ನೆ ಪತ್ರಿಕೆಗಳನ್ನು ಮಾತ್ರ ಮೊದಲಿನಷ್ಟು ಕಠಿಣ ಮಾದರಿಯಲ್ಲಿ ಶಿಕ್ಷಣ ಇಲಾಖೆ(Department of Education) ಸಿದ್ಧಪಡಿಸಿಲ್ಲ. ಬದಲಿಗೆ ಕಲಿಕಾ ಕೊರತೆ ಎದುರಿಸುತ್ತಿರುವ ವಿದ್ಯಾರ್ಥಿಗಳ(Students) ಹಿತದೃಷ್ಟಿಯಿಂದ ಅತ್ಯಂತ ಸರಳ ಹಾಗೂ ಸುಲಭ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿದೆ ಎಂದು ತಿಳಿದುಬಂದಿದೆ.
ಸೋಮವಾರದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು(Examination) ರಾಜ್ಯದ 3444 ಪರೀಕ್ಷಾ ಕೇಂದ್ರಗಳಲ್ಲಿ ಆರಂಭವಾಗಲಿದ್ದು, 8.73 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಈ ಮಕ್ಕಳಿಗೆ ಕಳೆದ ಎರಡು ವರ್ಷಗಳಲ್ಲಿ (8 ಮತ್ತು 9ನೇ ತರಗತಿ) ಸಮರ್ಪಕವಾಗಿ ಭೌತಿಕ ತರಗತಿಗಳು ನಡೆದಿಲ್ಲ. ಅವರು ಪರೀಕ್ಷೆ ಇಲ್ಲದೆ ಎಸ್ಸೆಸ್ಸೆಲ್ಸಿಗೆ ಪಾಸಾಗಿ ಬಂದಿದ್ದಾರೆ. ಹೀಗಾಗಿ ಕಲಿಕಾ ಕೊರತೆ ಎದುರಿಸುತ್ತಿದ್ದಾರೆ. ಜತೆಗೆ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲೂ (2021-22) ಆರಂಭದಲ್ಲಿ ಕೆಲ ತಿಂಗಳು ಕೋವಿಡ್ ಕಾಡಿದ್ದರಿಂದ ಪೂರ್ಣ ಪ್ರಮಾಣದಲ್ಲಿ ಭೌತಿಕ ತರಗತಿಗಳನ್ನು ನಡೆಸಲು ಸಾಧ್ಯವಾಗಿಲ್ಲ. ಹಾಗಾಗಿ ಈ ಬಾರಿ ಕೋವಿಡ್ ಪೂರ್ವ ಮಾದರಿಯಷ್ಟುಕಠಿಣವಾಗಿ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ನೀಡಿದರೆ ಕಷ್ಟವಾಗಬಹುದು ಎಂಬ ತೀರ್ಮಾನಕ್ಕೆ ಬಂದ ಶಿಕ್ಷಣ ಇಲಾಖೆಯು ಸರಳ ಹಾಗೂ ಸಲಭವಾದ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿದೆ ಎಂದು ಇಲಾಖೆಯ ಖಚಿತ ಮೂಲಗಳು ತಿಳಿಸಿವೆ.
News Hour: ತಪ್ಪಿಸಿಕೊಂಡ್ರೆ ಮತ್ತೆ ಪರೀಕ್ಷೆ ಇಲ್ಲ... ಸಲಾಂ ಮಂಗಳಾರತಿ ಬೇಡ!
ಜತೆಗೆ ಈ ಬಾರಿ ಬಹು ಆಯ್ಕೆ ಮಾದರಿ ಪ್ರಶ್ನೆಗಳನ್ನೂ ಹೆಚ್ಚಿಸಲಾಗಿದೆ. ಈ ಮಾದರಿಯಲ್ಲಿ ಪ್ರತಿ ಪ್ರಶ್ನೆಗೆ ನಾಲ್ಕು ಉತ್ತರ ಕೊಡಲಾಗುತ್ತದೆ. ಇದರಲ್ಲಿ ಸರಿಯಾದ ಉತ್ತರವನ್ನು ವಿದ್ಯಾರ್ಥಿಗಳು ಗುರುತಿಸಿ ಟಿಕ್ ಮಾಡಿದರೆ ಸಾಕು. ಅವೂ ಕೂಡ ಸುಲಭವಾಗಿ ಗುರುತಿಸಬಹುದಾದ ಮಾದರಿಯಲ್ಲಿ ಇರುತ್ತವೆ ಎನ್ನಲಾಗಿದೆ. ಇದರಿಂದ ವಿದ್ಯಾರ್ಥಿಗಳು ಪರೀಕ್ಷೆ ಬಗ್ಗೆ ಆತಂಕ, ಭಯಪಡುವ ಅಗತ್ಯವಿಲ್ಲ. ಕಲಿಕೆಯಲ್ಲಿ ಎಷ್ಟೇ ಹಿಂದುಳಿದಿರುವ ವಿದ್ಯಾರ್ಥಿ ಕೂಡ ಪಾಸಾಗಲು ಬೇಕಿರುವ ಶೇ.35ರಷ್ಟು ಅಂಕಗಳನ್ನು ಪಡೆಯಲು ಕಷ್ಟವಾಗುವುದಿಲ್ಲ ಎನ್ನುತ್ತವೆ ಇಲಾಖೆ ಮೂಲಗಳು.
ಕಳೆದ ವರ್ಷ ಎಲ್ಲ 8.71 ಲಕ್ಷ ವಿದ್ಯಾರ್ಥಿಗಳೂ ಪಾಸ್:
ಕಳೆದ ಸಾಲಿನಲ್ಲಿ (2020-21) ಕೋವಿಡ್ ತೀವ್ರವಾಗಿ ಕಾಡಿದ್ದರಿಂದ ಬಹುತೇಕ ಭೌತಿಕ ತರಗತಿಗಳು ನಡೆಯಲಿಲ್ಲ. ಆನ್‌ಲೈನ್, ವಿದ್ಯಾಗಮ ಸೇರಿದಂತೆ ಪರ್ಯಾಯ ಮಾರ್ಗದ ಶಿಕ್ಷಣದ ಮೂಲಕವೇ ಪಠ್ಯಬೋಧನೆ ಮಾಡಲಾಗಿತ್ತು. ಅದು ಭೌತಿಕ ತರಗತಿಯಷ್ಟುಪರಿಣಾಮಕಾರಿ ಅಲ್ಲ. ಹೀಗಾಗಿ ಪರೀಕ್ಷೆಗೆ ಅಷ್ಟು ಸಮರ್ಥವಾಗಿ ಸಿದ್ಧವಾಗಲೂ ಸಾಧ್ಯವಿಲ್ಲ ಎಂದು ವಿದ್ಯಾರ್ಥಿಗಳಿಂದ ಆರೋಪಗಳು ಕೇಳಿಬಂದಿದ್ದವು. ಆದರೂ, ಇಲಾಖೆಯು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ಪ್ರತಿ ಮೂರು ವಿಷಯಗಳಿಗೆ ಒಂದು ಪ್ರಶ್ನೆಪತ್ರಿಕೆ ಸಿದ್ಧಪಡಿಸಿ (ಭಾಷಾ ವಿಷಯಗಳಿಗೆ ಒಂದು, ಕೋರ್ ವಿಷಯಗಳಿಗೆ ಒಂದು ಪತ್ರಿಕೆ) ಕೇವಲ ಎರಡೇ ದಿನದಲ್ಲಿ ಪರೀಕ್ಷೆ ನಡೆಸಿ ಮುಗಿಸಿತ್ತು. ಪ್ರತಿ ವಿಷಯಕ್ಕೆ 40ರಂತೆ ಒಟ್ಟು ಆರು ವಿಷಯಗಳಿಗೆ 240 ಅಂಕಗಳಿಗೆ ಮಾತ್ರ ಪರೀಕ್ಷೆ ನಡೆಸಲಾಗಿತ್ತು. ಅಲ್ಲದೆ, ಮೊದಲೇ ನೀಡಿದ್ದ ಭರವಸೆಯಂತೆ ಪರೀಕ್ಷೆ ಬರೆದಿದ್ದ ಎಲ್ಲ 8.71 ಲಕ್ಷ ವಿದ್ಯಾರ್ಥಿಗಳನ್ನೂ ಸಾಮೂಹಿಕವಾಗಿ ಪಾಸು ಮಾಡಿತ್ತು.
ಸೋಮವಾರ SSLC Exam, ಮುಸ್ಲಿಂ ವಿದ್ಯಾರ್ಥಿನಿಯರಿಗೆ ಅಗ್ನಿ ಪರೀಕ್ಷೆ!
ಆದರೆ, ಈ ಬಾರಿ ಕೋವಿಡ್ ನಿಯಂತ್ರಣಕ್ಕೆ ಬಂದು ಭೌತಿಕ ತರಗತಿಗಳನ್ನು(Offline Classes) ನಡೆಸಲು ಸಾಧ್ಯವಾಗಿದ್ದರಿಂದ ಅಂತಹ ಅವಕಾಶವಿಲ್ಲ. ಪ್ರತಿ ವಿಷಯಕ್ಕೂ ಪ್ರಾಯೋಗಿಕ ಪರೀಕ್ಷೆಗಳೂ ಸೇರಿ 100 ಅಂಕಗಳಿಗೆ (ಪ್ರಥಮ ಭಾಷೆ 125 ಅಂಕ) ಪರೀಕ್ಷೆ ನಡೆಸುತ್ತಿದೆ. ಕೋವಿಡ್ ಪೂರ್ವ ಮಾದರಿಯಲ್ಲೇ ಪ್ರಶ್ನೆ ಪತ್ರಿಕೆಗಳನ್ನು ತಯಾರಿಸಲಾಗಿದೆ. ಕಳೆದ ಎರಡು ವರ್ಷದಲ್ಲಿ ಉಂಟಾಗಿರುವ ಕಲಿಕಾ ಕೊರತೆ ಹಾಗೂ ಈ ಬಾರಿಯೂ ಶೇ.100ರಷ್ಟು ಭೌತಿಕ ತರಗತಿ ನಡೆಸಲಾಗದ ಕಾರಣ ಕೋವಿಡ್ ಪೂರ್ವದ ವರ್ಷಗಳಷ್ಟುಕಠಿಣವಾಗಿ ಪ್ರಶ್ನೆಪತ್ರಿಕೆಗಳನ್ನು ಈ ವರ್ಷವೇ ಸಿದ್ಧಪಡಿಸುವುದು ಬೇಡ ಎಂದು ಶಿಕ್ಷಣ ಇಲಾಖೆ ಮೊದಲೇ ನಿರ್ಧರಿಸಿತ್ತು. ಹಾಗಾಗಿ ಈ ಬಾರಿಯ ಪ್ರತಿ ವಿಷಯದಲ್ಲೂ ಬಹುತೇಕ ಪ್ರಶ್ನೆಗಳು ಸರಳ ಹಾಗೂ ಸುಲಭವಾಗಿರುವ ಸಾಧ್ಯಯೇ ಹೆಚ್ಚು ಎಂದು ತಿಳಿದು ಬಂದಿದೆ.
ಧೈರ್ಯವಾಗಿ ಬರೆಯಿರಿ
ಈ ಬಾರಿ ಪ್ರಶ್ನೆ ಪತ್ರಿಕೆ ಮಾದರಿಯಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ. ಬಹು ಆಯ್ಕೆ ಪ್ರಶ್ನೆಗಳನ್ನು ಪ್ರತಿ ಬಾರಿಗಿಂತ ಹೆಚ್ಚಿಸಲಾಗಿದೆ. ಉತ್ತರವನ್ನು ಸುಲಭವಾಗಿ ಗುರುತಿಸುವಂತೆ ಆಯ್ಕೆಗಳಿರುತ್ತವೆ. ಉತ್ತೀರ್ಣವಾಗಲು ಕನಿಷ್ಠ ಅಂಕಗಳನ್ನು ಪಡೆಯಲು ಮಕ್ಕಳಿಗೆ ಕಷ್ಟವೇನೂ ಆಗುವುದಿಲ್ಲ. ಹಾಗಾಗಿ ಯಾರೂ ಕೂಡ ಭಯ, ಆತಂಕವಿಲ್ಲದೆ ಧೈರ್ಯವಾಗಿ ಪರೀಕ್ಷೆ ಎದುರಿಸಬೇಕು ಅಂತ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್(BC Nagesh) ತಿಳಿಸಿದ್ದಾರೆ.