ಮಂಗಳೂರಿನಲ್ಲಿ ಹಿಜಾಬ್ ಕಿಚ್ಚು, ABVP ಬೆಂಬಲಿತ ಕಾಲೇಜು ಅಧ್ಯಕ್ಷ ರಾಜೀನಾಮೆ!

* ಮಂಗಳೂರಿನಲ್ಲಿ ಹಿಜಾಬ್ ವಿವಾದ
* ವಿದ್ಯಾರ್ಥಿಗಳ ಪ್ರತಿಭಟನೆಗೆನೊಂದು ABVP ಬೆಂಬಲಿತ ಕಾಲೇಜು ಅಧ್ಯಕ್ಷ ರಾಜೀನಾಮೆ!
* ಎಬಿವಿಪಿ ಸಂಘಟನೆ ಬೆಂಬಲಿತ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿನ್ಯಾಸ್ ಆಚಾರ್ಯ

Student Union President  resigned Over Hijab Row In Mangaluru rbj

ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು

ಮಂಗಳೂರು, (ಮೇ.27):
ಮಂಗಳೂರು ವಿವಿ ಘಟಕ ಕಾಲೇಜಿನಲ್ಲಿ ಹಿಜಾಬ್ ವಿವಾದ ವಿಚಾರಕ್ಕೆ ಸಂಬಂಧಿಸಿ ಕಾಲೇಜು ಘಟನೆಗಳಿಂದ ನೊಂದು ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೀನಾಮೆ ನೀಡಿದ್ದಾನೆ. ಎಬಿವಿಪಿ ಸಂಘಟನೆ ಬೆಂಬಲಿತ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿನ್ಯಾಸ್ ಆಚಾರ್ಯ ರಾಜೀನಾಮೆ ನಿರ್ಧಾರ ಪ್ರಕಟಿಸಿದ್ದಾರೆ.

ವಿನ್ಯಾಸ್ ಮಂಗಳೂರು ವಿವಿಯ ಅಂತಿಮ ಬಿಎಸ್ಸಿ ವಿದ್ಯಾರ್ಥಿಯಾಗಿದ್ದು, ರಾಜೀನಾಮೆ ನಿರ್ಧಾರದ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಪ್ರತಿಕ್ರಿಯೆ ನೀಡಿದ್ದಾರೆ. ಕಾಲೇಜಿಗೆ ಹಿಜಾಬ್ ಹಾಕುವ ಬಗ್ಗೆ ನನ್ನದೂ ವಿರೋಧ ಇತ್ತು‌. ಹಿಜಾಬ್ ಬ್ಯಾನ್ ಮಾಡಲು ನಾನು ಪ್ರಾಂಶುಪಾಲರಿಗೆ ಪತ್ರ ಕೊಟ್ಟಿದ್ದೆ. ಹೀಗಾಗಿ ಪ್ರಿನ್ಸಿಪಾಲ್ ಕೂಡ ಹಿಜಾಬ್ ಬ್ಯಾನ್ ಮಾಡಿ ಆದೇಶ ಮಾಡಿದ್ದರು. 

ಮಂಗ್ಳೂರಲ್ಲಿ ಹಿಜಾಬ್‌ ವಿವಾದ: ವಿದ್ಯಾರ್ಥಿಗಳ ಪ್ರತಿಭಟನೆ

ಹೀಗಿದ್ದರೂ ಕೆಲವರು ಕ್ಯಾಂಪಸ್ ಹಾಗೂ ಕ್ಲಾಸ್ ನಲ್ಲಿ ಹಾಕ್ತಾ ಇದ್ದರು. ಇದನ್ನ ಪ್ರಿನ್ಸಿಪಾಲ್ ಗಮನಕ್ಕೆ ತಂದಾಗ ಸಭೆ ನಡೆಸುವ ಭರವಸೆ ನೀಡಿದ್ರು. ಇದರ ಮಧ್ಯೆ ಇಲ್ಲಿ ಶಾಂತಿ ಕದಡುವ ಸ್ಥಿತಿ ಬಂತು, ಕೇಸರಿ ಶಾಲ್ ಹಾಕಲು ಮುಂದಾದರು. ಅಗ ನಾನು ಯೂನಿಯನ್ ಮೀಟಿಂಗ್ ನಲ್ಲಿ ಹಾಗೆಲ್ಲ ಮಾಡೋದು ಬೇಡ ಅಂದೆ. ಪ್ರತಿಭಟನೆ ಮಾಡಿದ್ರೆ ಜಗಳವಾಗಿ ಕಾಲೇಜು ಮರ್ಯಾದೆ ಹೋಗುತ್ತೆ ಅಂದೆ. ಮಂಗಳೂರಿನಲ್ಲಿ ಜಗಳ ಆದ್ರೆ ಜೋರಾಗುತ್ತೆ ಅಂತ ಮನವರಿಕೆ ಮಾಡಿದೆ. ಪ್ರಿನ್ಸಿಪಾಲ್ ಮೀಟಿಂಗ್ ಮಾಡ್ತೇನೆ ಅಂದಾಗ ಪ್ರತಿಭಟನೆ ಬೇಡ ಅಂದೆ. ಆದ್ರೆ ಇದನ್ನ ವಿರೋಧಿಸಿ ನನ್ನ ವಿರುದ್ದ ನಮ್ಮದೇ ತಂಡ ಬೇಸರಗೊಂಡಿದೆ. ನನ್ನ ಈ ನಿರ್ಧಾರ ತಪ್ಪು ಅಂತಾದ್ರೆ ನಾನು ಅಧ್ಯಕ್ಷನಾಗಿದ್ದು ಪ್ರಯೋಜನ ಇಲ್ಲ‌. ಹೀಗಾಗಿ ನಾನು ಯೂನಿಯನ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡ್ತಾ ಇದೀನಿ. ವಿದ್ಯಾರ್ಥಿ ಸಂಘ ನನಗೆ ಸಮಾಧಾನ ಆಗಿಲ್ಲ, ರಾಜೀನಾಮೆ ಸಲ್ಲಿಸ್ತಿದೇನೆ ಎಂದಿದ್ದಾರೆ. 

'ಇದು ಕೇವಲ ಒಂದು ಮುಸ್ಲಿಂ ವಿದ್ಯಾರ್ಥಿನಿಯರ ತಂಡದ ಕೆಲಸ'
ಇನ್ನು ಈ ಹಿಜಾಬ್ ವಿವಾದದ ಬಗ್ಗೆ ಮಂಗಳೂರು ವಿವಿ ಕಾಲೇಜು ಪ್ರಾಂಶುಪಾಲೆ ಡಾ.ಅನುಸೂಯ ರೈ ಹೇಳಿಕೆ ನೀಡಿದ್ದಾರೆ. ಇಡೀ ಕಾಲೇಜಿನಲ್ಲಿ 44 ಮುಸ್ಲಿಂ ಮಕ್ಕಳಿದ್ದು, ವಿವಾದ ಒಂದು ತಂಡದಿಂದಷ್ಟೇ ಆಗಿದೆ. ಒಂದು 15 ಮಂದಿ ವಿದ್ಯಾರ್ಥಿಗಳಷ್ಟೇ ಹಿಜಾಬ್ ಕುರಿತು ಮಾತನಾಡ್ತಿದಾರೆ. ನಿನ್ನೆ ಅವರು ಬಂದಾಗ ನಾವೇ ಅವರನ್ನು ಹಿಜಾಬ್ ತೆಗೆದು ಬನ್ನಿ ಅಂತ ಕಳಿಸಿದ್ದೇವೆ. ಹಾಗಾಗಿ ಅವರು ನಿನ್ನೆ ಡಿಸಿ ಕಚೇರಿಗೆ ಹೋಗಿದ್ದರು, ಆ 15 ಮಂದಿ ಇವತ್ತು ತರಗತಿಗೆ ಬಂದಿಲ್ಲ. ಅವರನ್ನ ಬಿಟ್ಟು ಉಳಿದ ಕೆಲ ಮಕ್ಕಳು ಹಿಜಾಬ್ ತೆಗೆದು ಕಾಲೇಜಿಗೆ ಬಂದಿದ್ದಾರೆ ಎಂದರು.

 ಕೆಲ ವಿದ್ಯಾರ್ಥಿಗಳು ಹೈ ಕೋರ್ಟ್ ತೀರ್ಪಿನ ಬಳಿಕ ಕಾಲೇಜಿಗೆ ಬರ್ತಿಲ್ಲ. ಒಂದು ಮೂರ್ನಾಲ್ಕು ವಿದ್ಯಾರ್ಥಿಗಳು ಟಿಸಿ ತೆಗೆದುಕೊಂಡು ಹೋಗಿದ್ದಾರೆ. ಆದರೆ ಇದು ಎಲ್ಲಾ ವಿದ್ಯಾರ್ಥಿಗಳ ಸಮಸ್ಯೆ ಅಲ್ಲ, ಕೆಲ 15 ವಿದ್ಯಾರ್ಥಿಗಳ ಸಮಸ್ಯೆ ಅಷ್ಡೇ. ಪ್ರಭಾವಿ ಶಾಸಕರ ಒತ್ತಡ ಅಂತ ಏನೂ ಇಲ್ಲ, ಅದು ಮಕ್ಕಳ ಆರೋಪ. ನನಗೆ ಎಲ್ಲಾ ಶಾಸಕರು ಕರೆ ಮಾಡಿ ಜೋರು ಮಾಡ್ತಿದಾರೆ, ಏನ್ ಆಗಿದೆ ಅಂತ. ಆದರೆ ಯಾವ ಶಾಸಕರೂ ಒತ್ತಡ ಹಾಕಿಲ್ಲ, ಅವರಿಗೂ ಅವರದ್ದೇ ಆದ ಪ್ರತಿಷ್ಠೆ ಇದೆ ಎಂದು ಹೇಳಿದರು.

ಆ 15 ವಿದ್ಯಾರ್ಥಿಗಳು ಈ ವರ್ಷದಿಂದ ಆದೇಶ ಯಾಕೆ ಜಾರಿ ಮಾಡ್ತಿದೀರಿ ಅಂತಿದಾರೆ. ಕೋರ್ಟ್ ತೀರ್ಪಿನ ಮೊದಲು ನಮ್ಮ ಕಾಲೇಜಲ್ಲಿ ಶಿರವಸ್ತ್ರ ಹಾಕಲು ಅವಕಾಶ ಇತ್ತು. ಆದರೆ ತೀರ್ಪು ಬಂದ ಬಳಿಕ ಆನ್ ಲೈನ್ ತರಗತಿ ಇತ್ತು. ಆಫ್ ಲೈನ್ ಆದ ನಂತ್ರ ಕೆಲ ವಿದ್ಯಾರ್ಥಿಗಳು ಹಿಜಾಬ್ ಗೆ ವಿರೋಧ ಮಾಡಿದ್ರು. ಹೀಗಾಗಿ ವಿವಿ ಸಿಂಡಿಕೇಟ್ ಸಭೆ ನಡೆಸಿ ಶಿರವಸ್ತ್ರವನ್ನ ಕಾಲೇಜು ನಿಯಮದಿಂದ ತೆಗೆಯಲಾಗಿದೆ. ಹಿಜಾಬ್ ಗೆ ಅವಕಾಶ ಇಲ್ಲ ಅಂತ ನೋಟೀಸ್ ಮಾಡಿದ್ರು ನಿನ್ನೆ ಕೆಲವರು ಬಂದಿದ್ರು. ಹೀಗಾಗಿ ನಾನೇ ಅವರನ್ನು ವಾಪಾಸ್ ಕಳುಹಿಸಿ ಕೊಟ್ಟಿದ್ದೇವೆ.‌ವನಿನ್ನೆ ಕೆಲ ಮಕ್ಕಳು ಕ್ಯಾಂಪಸ್ ಗೂ ಹಿಜಾಬ್ ಬಿಡಬಾರದು ಅಂತ ಹೇಳಿದ್ರು. ಕೊನೆಗೆ ಒತ್ತಾಯಕ್ಕೆ ಮಣಿದು ನಿನ್ನೆ ಕ್ಯಾಂಪಸ್ ನಲ್ಲೂ ನಿಷೇಧ ಮಾಡಲಾಗಿದೆ. ಇವತ್ತು ಕಾಲೇಜು ಯೂನಿಯನ್ ಅಧ್ಯಕ್ಷನ ಬದಲಾವಣೆಗೆ ಸಭೆ ಇದೆ. ವಿಸಿ ನೇತೃತ್ವದಲ್ಲಿ ಶಾಸಕರು ಕೂಡ ಈ ಸಭೆಯಲ್ಲಿ ಇರ್ತಾರೆ ಎಂದು ತಿಳಿಸಿದರು.

ವಿವಿ ಕಾಲೇಜನ್ನ ಜೆ.ಎನ್.ಯು ಮಾಡಲು ಬಿಡಲ್ಲ
ಮಂಗಳೂರು ವಿವಿ ಘಟಕ ಕಾಲೇಜಿನಲ್ಲಿ ಹಿಜಾಬ್ ವಿವಾದ ವಿಚಾರಕ್ಕೆ ಸಂಬಂಧಿಸಿ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಶಾಸಕ ವೇದವ್ಯಾಸ ಕಾಮತ್ ಹೇಳಿಕೆ ನೀಡಿದ್ದಾರೆ. ಸಂಜೆ 4 ಗಂಟೆಗೆ ಮಂಗಳೂರು ವಿವಿ ಕುಲಪತಿಗಳ ನೇತೃತ್ವದಲ್ಲಿ ಸಭೆ ನಡೆಯಲಿದೆ. ನಾನು ಈ ಕಾಲೇಜಿನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಮಾತ್ರ. ವಿಶ್ವವಿದ್ಯಾನಿಲಯದ ಕುಲಪತಿಗಳು ಯೂನಿವರ್ಸಿಟಿ ಕಾಲೇಜಿನ ಮೇಲ್ವೀಚಾರಕರು.‌ ಕುಲಪತಿಗಳು ಸಂಜೆ ಈ ಬಗ್ಗೆ ಸಭೆಯನ್ನು ಕರೆದಿದ್ದಾರೆ, ಸಭೆಯಲ್ಲಿ ಭಾಗವಹಿಸುತ್ತೇನೆ.‌ ಕಾಲೇಜಿನ ಉಪಕುಲಪತಿಗಳಿಂದ ಹಿಡಿದು ಯಾರೂ ನನ್ನ ಗಮನಕ್ಕೆ ತಂದಿಲ್ಲ. ಉಪಕುಲಪತಿಗಳು, ಜಿಲ್ಲಾಧಿಕಾರಿಗಳು ಅವರ ಮನಸ್ಸಿಗೆ ಬಂದ ಹಾಗೆ ಮಾಡಲು ಆಗಲ್ಲ ಎಂದರು.

 ನ್ಯಾಯಾಲಯದ ಆದೇಶ ಪಾಲಿಸಬೇಕಾದ ಅನಿವಾರ್ಯತೆ ಅವರಿಗೆ ಇದೆ. ಡಿಸಿಯವರಿಗೂ ಕೋರ್ಟ್ ಆದೇಶ ಉಲ್ಲಂಘನೆ ‌ಮಾಡೋ ಅಧಿಕಾರ ಇಲ್ಲ. ರಾಜಕೀಯ ಮಾಡಿ ಎಸ್ ಡಿಪಿಐ, ಪಿಎಫ್ ಐ ಮತ್ತು ಕಾಂಗ್ರೆಸ್ ಬೆಂಬಲಿತರು ವಿದ್ಯಾರ್ಥಿಗಳನ್ನು ಎತ್ತಿ ಕಟ್ಟಿದ್ದಾರೆ‌. ಕಾಲೇಜನ್ನ ಜೆಎನ್ ಯೂ ಮಾಡಲು ಮಂಗಳೂರಿನಲ್ಲಿ ನಾವು ಬಿಡಲ್ಲ‌. ಮಂಗಳೂರಿನ ಮಣ್ಣಿನಲ್ಲಿ ಹುಟ್ಡಿದವರಿಗೆ ದೇಶ ಹಾಳು ಮಾಡಲು ಅವಕಾಶ ಇಲ್ಲ. ಸರ್ಕಾರ ಮತ್ತು ಕೋರ್ಟ್ ನಿಯಮ ಪಾಲಿಸದೇ ಇದ್ರೆ ಅಧ್ಯಾಪಕರೇ ಕೋರ್ಟ್ ಮೆಟ್ಟಲು ಹತ್ತಬೇಕಾಗುತ್ತದೆ. ಕಾಲೇಜಿನಲ್ಲಿ ಕೋರ್ಟ್ ನಿಯಮ ಅನುಷ್ಠಾನ ಆಗದ ವಿಚಾರ ಗೊತ್ತಾಗಿದೆ. ಇದರಲ್ಲಿ ಯಾರ ನಿರ್ಲಕ್ಷ್ಯ ಇದೆ ಎಂಬುವುದರ ಬಗ್ಗೆ ಸಭೆ ಮಾಡುತ್ತೇವೆ ಎಂದು ಹೇಳಿದರು.

 ವಿದ್ಯಾರ್ಥಿಗಳು ಕೋರ್ಟ್ ಆದೇಶವನ್ನು ಪಾಲನೆ ಮಾಡಬೇಕು. ಕೋರ್ಟ್ ನಿಯಮವನ್ನು ಯಾರೂ ನಿರ್ಲಕ್ಷ್ಯ ಮಾಡುವಂತಿಲ್ಲ. ಎಲ್ಲರೂ ಕೋರ್ಟ್ ನಿಯಮವನ್ನು ಕಡ್ಡಾಯ ಪಾಲನೆ ಮಾಡಬೇಕು. ಕೆಲ ಅಧ್ಯಾಪಕರು ಹಿಜಾಬ್ ಧಾರಿ ವಿದ್ಯಾರ್ಥಿನಿಯರಿಗೆ ಬೆಂಬಲ ನೀಡಿರುವ ಆರೋಪ ಇದೆ. ಜವಾಬ್ದಾರಿಯುತ ಅಧ್ಯಾಪಕರು ಈ ರೀತಿ ಮಾಡುವುದು ಸರಿಯಲ್ಲ. ವೈಯಕ್ತಿಕ ಹಿತಾಸಕ್ತಿಗಳನ್ನು ವಿದ್ಯಾರ್ಥಿಗಳ ಮೇಲೆ ಹೇರುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ.

Latest Videos
Follow Us:
Download App:
  • android
  • ios