ಮಂಗ್ಳೂರಲ್ಲಿ ಹಿಜಾಬ್ ವಿವಾದ: ವಿದ್ಯಾರ್ಥಿಗಳ ಪ್ರತಿಭಟನೆ
* ಹೈಕೋರ್ಟ್ ಆದೇಶ ಕಟ್ಟುನಿಟ್ಟು ಪಾಲನೆಗೆ ಕಾಲೇಜು ಆಡಳಿತ ಸೂಚನೆ
* ಹಿಜಾಬ್ ಧರಿಸಿ ತರಗತಿಗೆ ಹಾಜರಾದ 44ಕ್ಕೂ ಅಧಿಕ ಮುಸ್ಲಿಂ ವಿದ್ಯಾರ್ಥಿನಿಯರು
* ಸೋಮವಾರವರೆಗೆ ಕಾಯುವಂತೆ ಡಿಸಿ ಭರವಸೆ
ಮಂಗಳೂರು(ಮೇ.27): ಮಂಗಳೂರಿನಲ್ಲಿ ಮತ್ತೆ ಹಿಜಾಬ್ ವಿವಾದ ಕಾಣಿಸಿದೆ. ನಗರದ ಹಂಪನಕಟ್ಟೆಯಲ್ಲಿರುವ ವಿಶ್ವವಿದ್ಯಾಲಯದ ಘಟಕ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ತರಗತಿ ಪ್ರವೇಶಕ್ಕೆ ಅವಕಾಶ ನೀಡಿರುವುದನ್ನು ವಿರೋಧಿಸಿ ಗುರುವಾರ ವಿದ್ಯಾರ್ಥಿಗಳೇ ತರಗತಿ ಬಹಿಷ್ಕರಿಸಿ ಅಂಗಳಕ್ಕೆ ಇಳಿದಿದ್ದಾರೆ. ಗುರುವಾರ ಮಧ್ಯಾಹ್ನ ವರೆಗೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ತರಗತಿಗೆ ಹಿಜಾಬ್ ಧರಿಸಲು ಅವಕಾಶ ಇಲ್ಲ ಎಂದು ಹೈಕೋರ್ಟ್ ನೀಡಿದ ಆದೇಶವನ್ನು ವಿವಿ ಕಾಲೇಜು ಪಾಲಿಸುತ್ತಿಲ್ಲ. ಇಲ್ಲಿ ಸುಮಾರು 44ಕ್ಕೂ ಅಧಿಕ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗೆ ಹಾಜರಾಗುತ್ತಿದ್ದಾರೆ. ಹೈಕೋರ್ಟ್ ಆದೇಶಕ್ಕೆ ವಿವಿ ಕಾಲೇಜಿನಲ್ಲಿ ಮನ್ನಣೆ ನೀಡುತ್ತಿಲ್ಲ ಎಂದು ಆರೋಪಿಸಿ ಪದವಿ ತರಗತಿಯ ಇತರೆ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿದರು.
ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದ ಕಾರು: ಮಾನವೀಯತೆ ಮೆರೆದ ದ.ಕ ಜಿಲ್ಲಾಧಿಕಾರಿ
ಪ್ರಾಂಶುಪಾಲರ ವಿರುದ್ಧ ಆರೋಪ:
ಕಾಲೇಜಿನ ಪ್ರಾಂಶುಪಾಲರಿಂದಾಗಿ ನಮ್ಮ ಕಾಲೇಜಿನಲ್ಲಿ ಹಿಜಾಬ್ ವಿವಾದ ಶುರುವಾಗಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಹಿಜಾಬ್ ಕೋರ್ಟ್ ಆದೇಶದ ಬಗ್ಗೆ ಪ್ರಾಂಶುಪಾಲರಿಗೆ ಪತ್ರ ಕೊಟ್ಟಿದ್ದೆವು. ಮೇ 16ರ ಸಭೆಯಲ್ಲಿ ಚರ್ಚಿಸಿ ನಾವು ನೋಡಿಕೊಳ್ಳುತ್ತೇವೆ ಎಂದಿದ್ದರು. ಬಳಿಕ ಕಾಲೇಜ್ ಕ್ಯಾಂಪಸ್ ನಲ್ಲಿ ಹಿಜಾಬ್ ಹಾಕಬಹುದು ಎಂದು ನಿರ್ಧರಿಸಿದ್ದರು. ಆದರೆ ಮುಸ್ಲಿಂ ವಿದ್ಯಾರ್ಥಿನಿಯರು ಶಿಕ್ಷಕರು ಇಲ್ಲದಾಗ ತರಗತಿಯಲ್ಲೂ ಹಿಜಾಬ್ ಧರಿಸುತ್ತಿದ್ದರು.
ಅಲ್ಲದೆ ಕೆಲವು ಶಿಕ್ಷಕರು ಕೂಡ ಹಿಜಾಬ್ ಧರಿಸುವಂತೆ ಬೆಂಬಲ ನೀಡಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು. ನೋಟಿಸ್ ಬೋರ್ಡ್‌ನಲ್ಲಿ ದಿಢೀರ್ ಸೂಚನೆ: ವಿವಾದ ಗಂಭೀರ ಸ್ವರೂಪಕ್ಕೆ ತಿರುವುದನ್ನು ಗ್ರಹಿಸಿದ ಕಾಲೇಜು ಆಡಳಿತ, ಹಿಜಾಬ್ ನಿರ್ಬಂಧದ ಬಗ್ಗೆ ದಿಢೀರನೆ ಬೋರ್ಡ್‌ನಲ್ಲಿ ನೋಟಿಸ್ ಹಾಕಿದೆ. ಮಹಿಳಾ ವಿಶ್ರಾಂತಿ ಕೊಠಡಿಯಲ್ಲಿ ಶಿರವಸ್ತ್ರ ತೆಗೆಯಲು ಸೂಚನೆ ನೀಡಿದೆ. ಕಾಲೇಜು ಕ್ಯಾಂಪಸ್ ಮತ್ತು ತರಗತಿಯಲ್ಲಿ ಹಿಜಾಬ್ ಹಾಕದಂತೆ ಸೂಚನೆ ಹೊರಡಿಸಿದೆ.
ಕಾಲೇಜು ವಠಾರದಲ್ಲಿ ಸಮವಸ್ತ್ರ ಹೊರತುಪಡಿಸಿ ಬೇರೆ ಉಡುಪುಗಳಿಗೆ ಅನುಮತಿ ಇಲ್ಲ. ನಿಯಮ ಉಲ್ಲಂಘಿಸಿದಲ್ಲಿ ಶಿಸ್ತು ಕ್ರಮದ ಎಚ್ಚರಿಕೆ ನೀಡಿ ನೋಟೀಸ್
ವಿವಿ ರಿಜಿಸ್ಟ್ರಾರ್ ಭೇಟಿ: ವಿವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ತಾರಕಕ್ಕೆ ಏರುತ್ತಲೇ ಮಂಗಳೂರು ವಿವಿ ರಿಜಿಸ್ಟ್ರಾರ್ ಡಾ.ಕಿಶೋರ್ ಕುಮಾರ್ ಅವರು ಸ್ಥಳಕ್ಕೆ ಆಗಮಿಸಿದರು. ವಿದ್ಯಾರ್ಥಿಗಳು, ವಿದ್ಯಾರ್ಥಿ ಮುಖಂಡರು, ಉಪನ್ಯಾಸಕರು ಹಾಗೂ ಪ್ರಾಂಶುಪಾಲರೊಂದಿಗೆ ಮಾತುಕತೆ ನಡೆಸಿದರು.
ಈ ವೇಳೆ ಕಾಲೇಜು ಪ್ರಾಂಶುಪಾಲರು ಮತ್ತು ಕೆಲವು ಶಿಕ್ಷಕರ ವಿರುದ್ಧ ವಿದ್ಯಾರ್ಥಿಗಳು ದೂರು ನೀಡಿದ ವಿದ್ಯಮಾನ ನಡೆಯಿತು. ಎರಡು ತಿಂಗಳಿನಿಂದ ಹಿಜಾಬ್ ನಿಯಮ ಪಾಲಿಸಿಲ್ಲ ಎಂದು ವಿದ್ಯಾರ್ಥಿಗಳು ದೂರಿದರು. ನಿಯಮ ಪಾಲಿಸದ ಪ್ರಾಂಶುಪಾಲರು ಮತ್ತು ಶಿಕ್ಷಕರ ವಿರುದ್ಧ ಕ್ರಮಕ್ಕೆ ವಿದ್ಯಾರ್ಥಿಗಳು ಆಗ್ರಹಿಸಿದರು. ಕಾಲೇಜು ವಿದ್ಯಾರ್ಥಿ ಸಂಘದ ನಾಯಕನ ಬದಲಾವಣೆಗೂ ಆಗ್ರಹ ವ್ಯಕ್ತವಾಯಿತು.
ಕೊನೆಗೆ ಹಿಜಾಬ್ ನಿಯಮ ಕಟ್ಟುನಿಟ್ಟಾಗಿ ಪಾಲಿಸುವ ಭರವಸೆಯನ್ನು ರಿಜಿಸ್ಟ್ರಾರ್ ನೀಡಿದರು. ಶುಕ್ರವಾರದಿಂದ ಯಾವುದೇ ಕಾರಣಕ್ಕೆ ಹಿಜಾಬ್ ಧರಿಸಿದವರನ್ನು ತರಗತಿಗೆ ಹಾಜರಾಗಲು ಬಿಡುವುದಿಲ್ಲ ಎಂದು ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟರು. ಮೇ 27ರಂದು ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರಾಗಿರುವ ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆಯಲ್ಲಿ ಕಾಲೇಜಿನಲ್ಲಿ ಸಭೆ ನಡೆಯಲಿದೆ ಎಂದು ತಿಳಿದುಬಂದಿದೆ.
ಸೋಮವಾರ ವರೆಗೆ ಕಾಯುವಂತೆ ಡಿಸಿ ಭರವಸೆ: ವಿದ್ಯಾರ್ಥಿನಿ
ಹಿಜಾಬ್ ಆದೇಶ ಬಂದಾಗಲೂ ನಮ್ಮ ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅವಕಾಶವಿತ್ತು. ಮಧ್ಯದಲ್ಲಿ ಬಲವಂತವಾಗಿ ಹೇರಲಾಗುತ್ತಿದೆ. ಹೈಕೋರ್ಚ್ ಆದೇಶದಲ್ಲಿ ಪದವಿಗೆ ಅನ್ವಯವಾಗುತ್ತದೆ ಎಂದು ಹೇಳಿಲ್ಲ. ತರಗತಿಯಿಂದ, ಲೈಬ್ರೆರಿಯಿಂದ ನಮ್ಮನ್ನು ಹೊರಗೆ ಹಾಕಿದ್ದಾರೆ. ಅನಧಿಕೃತವಾಗಿ ಮೇ 16ರ ರಾತ್ರಿ ಸಂದೇಶ ಕಳುಹಿಸಲಾಗಿದೆ. ಅನಂತರ ಕಾಲೇಜಿಗೆ ಬಂದಾಗ ಹೊರಗೆ ಹಾಕಿದ್ದರು. ಕಾನೂನಾತ್ಮಕವಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ವಿದ್ಯಾರ್ಥಿನಿ ಗೌಸಿಯಾ ಎಂಬಾಕೆ ಸುದ್ದಿಗಾರರಲ್ಲಿ ಪ್ರತಿಕ್ರಿಯಿಸಿದ್ದಾರೆ.
Mangaluru ಮಸೀದಿಯಲ್ಲಿ ದೈವೀ ಶಕ್ತಿ ಇತ್ತೆಂದ ತಾಂಬೂಲ ಪ್ರಶ್ನೆ
ಜಿಲ್ಲಾಧಿಕಾರಿಗಳು ಸೋಮವಾರದವರೆಗೆ ಕಾಯುವಂತೆ ತಿಳಿಸಿದ್ದಾರೆ. ಈ ಪ್ರತಿಭಟನೆಯ ಹಿಂದೆ ಪಿತೂರಿ ಇದೆ. ಮಾಚ್‌ರ್ 15ಕ್ಕೆ ತೀರ್ಪು ಬಂದಿದ್ದರೂ ಏಪ್ರಿಲ್‌ನಲ್ಲಿ, ಮೇ 7ರ ವರೆಗೆ ಹಿಜಾಬ್ ಧರಿಸಿ ಪರೀಕ್ಷೆ ಬರೆದಿದ್ದೆವು. ಈಗ ರಾತ್ರೋ ರಾತ್ರಿ ನೋಟ್‌ಬ್ಯಾನ್‌ನಂತೆ ಹಿಜಾಬ್ ನಿಷೇಧಿಸಿದ್ದಾರೆ. ನಮ್ಮ ಹಕ್ಕು ನಮಗೆ ನೀಡಿ, ಶಿರವಸ್ತ್ರದೊಂದಿಗೆ ವಿದ್ಯೆ ಕಲಿಯುತ್ತೇವೆ. ಡಿಸಿ ಅವರಿಂದ ಆಗುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದಾರೆ. ನಾವು ವಿದ್ಯೆ ಮುಂದುವರಿಸುತ್ತೇವೆ ಎಂದು ತನ್ನ 15 ಮಂದಿ ಹಿಜಾಬ್ ಸಹಪಾಠಿಗಳ ಜತೆ ಜಿಲ್ಲಾಧಿಕಾರಿಗಳ ಭೇಟಿ ಬಳಿಕ ವಿದ್ಯಾರ್ಥಿನಿ ತಿಳಿಸಿದ್ದಾರೆ.
ನಮ್ಮ ಕಾಲೇಜಿನ ಯೋಜನಾ ಪುಸ್ತಿಕೆ(ಪ್ರಾಸ್ಪೆಕ್ಟಸ್)ಯಲ್ಲಿ ಶಾಲಾ ಸಮವಸ್ತ್ರ ಬಣ್ಣದ ಶಿರವಸ್ತ್ರ ಧರಿಸುವ ಬಗ್ಗೆ ಉಲ್ಲೇಖ ಇದೆ. ಹೀಗಾಗಿ ವಿದ್ಯಾರ್ಥಿನಿಯರು ಅದೇ ರೀತಿಯಲ್ಲಿ ಶಿರವಸ್ತ್ರ ಧರಿಸಿಕೊಂಡು ಬರುತ್ತಿದ್ದರು. ಹೈಕೋರ್ಚ್ ಆದೇಶ ಬಳಿಕ ತರಗತಿಗೆ ಶಿರವಸ್ತ್ರ ಧರಿಸಿ ಬಾರದಂತೆ ಸೂಚಿಸಿದ್ದೆವು. ಈಗ ಬೆರಳೆಣಿಕೆ ವಿದ್ಯಾರ್ಥಿನಿಯರು ಶಿರವಸ್ತ್ರ ಧರಿಸುತ್ತಿದ್ದಾರೆ. ಇದನ್ನು ವಿರೋಧಿಸಿ ಕೆಲವು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಯಾವುದೇ ಕಾರಣಕ್ಕೂ ಹಿಜಾಬ್‌ಗೆ ಅವಕಾಶ ಇಲ್ಲ ಎಂದು ತಿಳಿಸಲಾಗಿದೆ. ಪ್ರತಿಭಟನೆಯ ವಿಚಾರವನ್ನು ಜಿಲ್ಲಾಡಳಿತ ಹಾಗೂ ವಿವಿ ಆಡಳಿತದ ಗಮನಕ್ಕೆ ತರಲಾಗಿದೆ ಅಂತ ಹಂನಪಕಟ್ಟೆ ಮಂಗಳೂರು ವಿವಿ ಕಾಲೇಜು ಪ್ರಾಂಶುಪಾಲೆ ಡಾ.ಅನಸೂಯ ರೈ ತಿಳಿಸಿದ್ದಾರೆ.