Asianet Suvarna News Asianet Suvarna News

ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಚಿಂತಿಸಬೇಕು-  ಕೊಡಗು ಎಸ್‌ಪಿ ಕೆ.ರಾಮರಾಜನ್ ಕಿವಿಮಾತು 

ಯುವ ಜನಾಂಗ ಮಾದಕ ವಸ್ತು ಸೇವನೆಯಂತಹ ದುಶ್ಚಟಗಳಿಗೆ ಬಲಿಯಾಗಿ, ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳದೆ ಸಮಾಜದಲ್ಲಿ ಉತ್ತಮ ನಾಗರೀಕರಾಗಿ ಬದುಕಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

Student dont addict drugs think about the future says SP Ramarajan at kodagu rav
Author
First Published Jun 26, 2023, 8:16 PM IST

ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಡಗು (ಜೂ.26) : ಯುವ ಜನಾಂಗ ಮಾದಕ ವಸ್ತು ಸೇವನೆಯಂತಹ ದುಶ್ಚಟಗಳಿಗೆ ಬಲಿಯಾಗಿ, ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳದೆ ಸಮಾಜದಲ್ಲಿ ಉತ್ತಮ ನಾಗರೀಕರಾಗಿ ಬದುಕಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

 ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಘಟಕ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾ ವಿಶೇಷ ಚೇತನ ಇಲಾಖೆ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಸೋಮವಾರ ನಡೆದ ‘ಅಂತರಾಷ್ಟ್ರೀಯ ಮಾದಕ ವಸ್ತುಗಳ ದುರುಪಯೋಗ ಮತ್ತು ಕಾನೂನು ಬಾಹಿರ ಸಾಗಾಟ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 

ಮಾದಕ ವ್ಯಸನಿ ಯುವಕನನ್ನು ಕೊಲೆ ಮಾಡಿ ದೇವರಮನೆಯಲ್ಲಿ ಎಸೆದ ದುಷ್ಕರ್ಮಿಗಳು

ಸ್ನೇಹಿತರ ಒತ್ತಾಯ, ಗೆಳೆಯರ ಗುಂಪಿನಲ್ಲಿ ಒಂದಾಗಬೇಕು ಎಂಬ ಭಾವನೆ, ಮನೆಯ ವಾತಾವರಣ, ಹೀಗೆ ಅನೇಕ ಕಾರಣಗಳಿಗಾಗಿ ಯುವ ಜನತೆ ಮಾದಕ ವಸ್ತುಗಳ ದಾಸರಾಗುತ್ತಾರೆ ಎಂದು ಅವರು ಹೇಳಿದರು.

ವಿದ್ಯಾರ್ಥಿಗಳ ಮಾದಕ ವಸ್ತುಗಳಿಂದ ದೂರವಿರಬೇಕು. ನಾಳೆಯ ಬಗ್ಗೆ ಚಿಂತಿಸುವಂತಾಗಬೇಕು. ಮಾನವನ ಜೀವನ ಅತ್ಯಂತ ಅಮೂಲ್ಯವಾಗಿದ್ದು, ಭವಿಷ್ಯದಲ್ಲಿ ಉತ್ತಮ ಗುರಿಯನ್ನು ಸಾಧಿಸಲು ನಿರಂತರ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು. 

ವಿದ್ಯಾರ್ಥಿಗಳು ಮಾದಕ ವ್ಯಸನಕ್ಕೆ ತುತ್ತಾಗಾಬಾರದು. ಮಾದಕ ವಸ್ತುಗಳಿಗೆ ಅವಲಂಬಿತರಾದರೆ ಅದರಿಂದ ಪುನಃ ಹೊರಬರುವುದು ತುಂಬ ಕಷ್ಟ. ಹಾಗೂ ಮಾದಕ ವಸ್ತುಗಳನ್ನು ಬಳಸುವುದರಿಂದ ಅಪರಾಧಗಳನ್ನು ಮಾಡುವ ಸಂಭವ ಹೆಚ್ಚಾಗಿರುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಮತ್ತು ಯುವ ಜನತೆ ತಮ್ಮ ಮುಂದಿನ ಭವಿಷ್ಯದ ಬಗ್ಗೆ ಯೋಚಿಸಬೇಕು ಮತ್ತು ತಮ್ಮ ಭಾವನೆಗಳನ್ನು ಹತೋಟಿಯಲ್ಲಿಟ್ಟುಕೊಂಡರೆ ಜೀವನದಲ್ಲಿ ಇಂತಹ ದುಶ್ಚಟಗಳಿಂದ ದೂರವಿರಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಸಲಹೆ ನೀಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಬಿ.ಪ್ರಸಾದ್ ಅವರು ಮಾತನಾಡಿ ಯುವಕರಲ್ಲಿ, ಮಕ್ಕಳಲ್ಲಿ, ವಯಸ್ಕರಲ್ಲಿ ಮಾದಕ ವಸ್ತು ಮತ್ತು ಮಾನವ ಕಳ್ಳಸಾಗಣಿಕೆ ಹೆಚ್ಚುತ್ತಿದ್ದು, ದೇಶದ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯ  ಮೇಲೆ ತೀವ್ರ ದುಷ್ಪಾರಿಣಾಮ ಬೀರುತ್ತಿದೆ ಇವುಗಳನ್ನು ಹತ್ತಿಕ್ಕುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಸಮಾಜದಲ್ಲಿ ವಿದ್ಯಾರ್ಥಿಗಳು ಮಾದಕ ವಸ್ತುಗಳಿಗೆ ಬಲಿಯಾಗಬಾರದು, ವಿದ್ಯಾರ್ಥಿಗಳಿಗೆ ಈ ಹಂತದಲ್ಲಿ ಶಿಕ್ಷಣ, ಸಮಾಲೋಚನೆ, ಮಾರ್ಗದರ್ಶನ ಅತಿ ಅವಶ್ಯಕವಾಗಿದೆ. ಆದ್ದರಿಂದ ಶಿಕ್ಷಕರೊಂದಿಗೆ ಹಾಗೂ ಪೋಷಕರೊಂದಿಗೆ ಸಮಾಲೋಚಿಸಿ ಇದರ ಬಗ್ಗೆ ಹೆಚ್ಚು ಒತ್ತು ನೀಡಬೇಕು. ತಮ್ಮ ಸಹಪಾಠಿಗಳು ಮಾದಕ ವಸ್ತುಗಳ ವ್ಯಸನಿಗಳಾಗಿದ್ದರೆ ಶಾಲಾ ಮುಖ್ಯಸ್ಥರು ಹಾಗೂ ಪೋಷಕರಿಗೆ ತಿಳಿಸಬೇಕು. ಇಂತಹ ಮಾದಕ ವಸ್ತುಗಳ ನಿರ್ಮೂಲನೆಗಾಗಿ ಕಾನೂನ ಸೇವಾ ಪ್ರಾಧಿಕಾರ ವಿವಿಧ ಇಲಾಖೆಗಳ ಸಹಯೋಗದಿಂದ  ರಾಜ್ಯ ಮಟ್ಟ, ಜಿಲ್ಲಾ ಮಟ್ಟ ಹೀಗೆ ನಾನಾ ಹಂತಗಳಲ್ಲಿ  ಮಾದಕ ವಸ್ತುಗಳ ನಿರ್ಮೂಲನೆಗೆ ಶ್ರಮಿಸುತ್ತಿದೆ ಎಂದು ಅವರು ತಿಳಿಸಿದರು.

 

ಬೆಂಗಳೂರು: ಮಾದಕ ವ್ಯಸನ ಮುಕ್ತಿ ಕೇಂದ್ರದ ಮುಖ್ಯಸ್ಥನಿಂದಲೇ ಡ್ರಗ್ಸ್‌ ಮಾರಾಟ..!

2015ರಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ‘ಮಾದಕ ಔಷಧಿಗಳ ದುರ್ಬಳಕೆಗೆ ಬಲಿಯಾದವರಿಗೆ ಮತ್ತು ಮಾದಕ ವಸ್ತು ವಿಪತ್ತಿನ ನಿರ್ಮೂಲನೆಗೆ ಕಾನೂನು ಅರಿವು’ ಎಂಬ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಮಂಪರು ಔಷಧಿಗಳ ಮತ್ತು ಮಾದಕ ವಸ್ತುಗಳ ಕುರಿತು ಇರುವ ಕಾನೂನು ಉಪಬಂಧಗಳ, ಕಾರ್ಯಕ್ರಮಗಳು, ಯೋಜನೆಗಳ ಬಗ್ಗೆ ಜನಸಾಮಾನ್ಯರಲ್ಲಿ, ಶಾಲಾ ಕಾಲೇಜುಗಳಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಅವರು ಹೇಳಿದರು. 

ಜಿಲ್ಲೆಯಲ್ಲಿ ಈಗಾಗಲೇ 15 ಸದಸ್ಯರನ್ನು ಒಳಗೊಂಡ ವಿಶೇಷ ಕಾರ್ಯಪಡೆ ರಚನೆ ಮಾಡಲಾಗಿದ್ದು, ಈ ತಂಡವು ಜಿಲ್ಲೆಯ ಮಾದಕ ವಸ್ತುಗಳಿಗೆ ಬಲಿಯಾಗುವವರನ್ನು ರಕ್ಷಿಸಿ ಅವರ ಚಿಕಿತ್ಸೆ ಹಾಗೂ ನಂತರದ ಪುನರ್ವಸತಿಗಾಗಿ ಶ್ರಮಿಸಲಾಗುತ್ತಿದೆ ಎಂದು ಅವರು ಹೇಳಿದರು. 

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎಂ.ಎ.ನಿರಂಜನ್ ಅವರು ಮಾತನಾಡಿ ದೇಶದಲ್ಲಿ ಯುವಕರ ಪ್ರಮಾಣ ಹೆಚ್ಚಿದೆ, ಇಂತಹ ಮಾದಕ ವಸ್ತುಗಳ ಸೇವನೆಗೆ ತುತ್ತಾದಲ್ಲಿ ದೇಶದ ಅಭಿವೃದ್ಧಿ ಕುಂಠಿತವಾಗುತ್ತದೆ. ಜನರು ಮಾದಕ ವಸ್ತು ಸೇವನೆಯಿಂದ ಅನಾರೋಗ್ಯಕ್ಕೆ ತುತ್ತಾಗಿ ಪ್ರಾಣ ಕಳೆದುಕೊಳ್ಳುತ್ತಾರೆ. ಈ ಪದಾರ್ಥಗಳನ್ನು ಬಳಸುವುದರಿಂದ ಮಾನಸಿಕ ಖಿನ್ನತೆ, ನಿದ್ರಾಹೀನತೆ ಸೇರಿದಂತೆ ಗಂಭೀರವಾದ ಮಾನಸಿಕ ತೊಂದರೆಗೆ ಒಳಗಾಗುತ್ತಾರೆ. ಆದ್ದರಿಂದ ಯುವಕರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ದುಶ್ಚಟಗಳಿಂದ ದೂರವಿರುವಂತೆ ಅವರು ಸಲಹೆ ನೀಡಿದರು. 

ಮನೋವೈದ್ಯರಾದ ಡಾ.ಡೇವಿನ್ ಲಿನೇಕರ್ ಕರ್ಕಡ ಅವರು ಮಾದಕ ವಸ್ತುಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಮಾತನಾಡಿ ಮಾದಕವಸ್ತುಗಳ ಚಟಕ್ಕೆ ದಾಸರಾಗಬೇಡಿ ಎಂದರು. ಮಾದಕ ವಸ್ತುಗಳ ಸೇವನೆ ವ್ಯಕ್ತಿಯ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತದೆ. ಮಾದಕ ವಸ್ತುಗಳ ಬಳಕೆಗೆ ಇಳಿದವರು ದೈನಂದಿನ ಚಟುವಟಿಕೆಗಳಲ್ಲಿ ನಿರಾಸಕ್ತಿ, ಅನವಶ್ಯಕ ವಿವಾದಗಳನ್ನು ಸೃಷ್ಠಿಸುವುದು ಮೊದಲಾದ ಸಮಾಜ ವಿರೋಧಿ ಕಾರ್ಯಗಳಲ್ಲಿ ತೊಡಗುವುದು ಕಂಡು ಬರುತ್ತದೆ. ಆದ್ದರಿಂದ ಇದರಿಂದ ದೂರವಿರಬೇಕು ಎಂದರು.

 ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪಾಲಾಕ್ಷ ಅವರು ಪ್ರತಿಜ್ಞಾವಿಧಿ ಬೋಧಿಸಿದರು. 
ಟೆಲಿ-ಮನಸ್ :ರಾಷ್ಟ್ರೀಯ ಟೆಲಿ-ಮಾನಸಿಕ ಆರೋಗ್ಯ ಕಾರ್ಯಕ್ರಮದ ವತಿಯಿಂದ ಟೆಲಿ-ಮನಸ್ ಭಿತ್ತಿ ಪತ್ರ ಬಿಡುಗಡೆ ಮಾಡಲಾಯಿತು. ವ್ಯಥೆಗೆ ಒಳಪಟ್ಟವರು, ಪರೀಕ್ಷಾ ಒತ್ತಡಕ್ಕೊಳಗಾದವರು, ಕೌಟುಂಬಿಕ ಸಮಸ್ಯೆಗೊಳಗಾದವರು, ಆತ್ಮಹತ್ಯೆ ಆಲೋಚನೆಗಳು, ಮಾದಕ ವಸ್ತು ವ್ಯಸನದ ಸಮಸ್ಯೆಯಲ್ಲಿರುವವರು, ಸಂಬಂಧಗಳ ಸಮಸ್ಯೆಯಲ್ಲಿ ಸಿಲುಕಿರುವವರು, ಜ್ಞಾಪಕಶಕ್ತಿ ತೊಂದರೆಯುಳ್ಳವರು, ಆರ್ಥಿಕ ಒತ್ತಡದಲ್ಲಿರುವವರು, ಇತರೆ ಯಾವುದೇ ಮಾನಸಿಕ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವವರು ಸಹಾಯವಾಣಿ ಸಂಖ್ಯೆ 14416 ಗೆ ಕರೆ ಮಾಡಿ ಸಹಾಯವನ್ನು ಪಡೆಯಬಹುದಾಗಿದೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಕೆ.ಎಂ., ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪಿ.ಆರ್.ವಿಜಯ್, ಜಿಲ್ಲಾ ವಿಕಲಾಂಗ ಕಲ್ಯಾಣಾಧಿಕಾರಿ ವಿಮಲ, ಜಿಲ್ಲಾ ಆರ್ ಸಿಎಚ್ ಅಧಿಕಾರಿ ಡಾ.ಗೋಪಿನಾಥ, ಹಾಗೂ ಕಾಲೇಜಿನ ಅಧ್ಯಾಪಕರು, ವಿದ್ಯಾರ್ಥಿಗಳು  ಇದ್ದರು.

Follow Us:
Download App:
  • android
  • ios