ಕಳೆದ 2020-21ನೇ ಸಾಲಿನ ಪಿಯು ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು 2022ನೇ ಸಾಲಿನ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಪರಿಗಣಿಸುವುದಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕಳೆದ ಜು.30ರಂದು ಹೊರಡಿಸಿದ್ದ ಟಿಪ್ಪಣಿಯನ್ನು ರದ್ದುಪಡಿಸಿದ್ದ ಹೈಕೋರ್ಚ್‌ನ ಏಕಸದಸ್ಯ ನ್ಯಾಯಪೀಠದ ತೀರ್ಪು ಪ್ರಶ್ನಿಸಿ ರಾಜ್ಯ ಸರ್ಕಾರ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದೆ.

ಬೆಂಗಳೂರು (ಸೆ.14) : ಕಳೆದ 2020-21ನೇ ಸಾಲಿನ ಪಿಯು ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು 2022ನೇ ಸಾಲಿನ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಪರಿಗಣಿಸುವುದಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕಳೆದ ಜು.30ರಂದು ಹೊರಡಿಸಿದ್ದ ಟಿಪ್ಪಣಿಯನ್ನು ರದ್ದುಪಡಿಸಿದ್ದ ಹೈಕೋರ್ಚ್‌ನ ಏಕಸದಸ್ಯ ನ್ಯಾಯಪೀಠದ ತೀರ್ಪು ಪ್ರಶ್ನಿಸಿ ರಾಜ್ಯ ಸರ್ಕಾರ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದೆ.

CET Crisis : ಮುಂದಿನ ನಡೆ ಇಂದು ನಿರ್ಧಾರ?

ಸರ್ಕಾರದ ವಾದ ಏನು?

  • 2020-21ನೇ ವಿದ್ಯಾರ್ಥಿಗಳು ಪಿಯು ಪರೀಕ್ಷೆಯನ್ನೇ ಬರೆದಿಲ್ಲ
  • ಸರ್ಕಾರ ಹೊರಡಿಸಿದ ಆದೇಶದ ಅನ್ವಯ ಅಂಕ ಪಡೆದಿದ್ದಾರೆ
  • ಪರೀಕ್ಷೆ ಬರೆಯದವರ ಜೊತೆ, ಬರೆದವರನ್ನು ಹೋಲಿಸಲಾಗದು
  • ಹೀಗೆ ಮಾಡಿದರೆ 600ಕ್ಕೆ 600 ಅಂಕ ಪಡೆದವರಿಗೆ ಅನ್ಯಾಯ
  • ಮೆರಿಟ್‌ ಲಿಸ್ಟ್‌ನಲ್ಲಿ 1 ಲಕ್ಷ ವಿದ್ಯಾರ್ಥಿಗಳ ರಾರ‍ಯಂಕಿಂಗ್‌ ಕುಸಿತ

2020-21ನೇ ಸಾಲಿನ ಪಿಯು ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು 2022ನೇ ಸಾಲಿನ ಸಿಇಟಿ ಫಲಿತಾಂಶಕ್ಕೆ ಪರಿಗಣಿಸದ ಕೆಇಎ ಕ್ರಮ ಪ್ರಶ್ನಿಸಿ 50ಕ್ಕೂ ಅಧಿಕ ಸಿಇಟಿ ಪುನರಾವರ್ತಿತ ವಿದ್ಯಾರ್ಥಿಗಳು 9 ತಕರಾರು ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಗಳನ್ನು ಪುರಸ್ಕರಿಸಿದ್ದ ನ್ಯಾಯಮೂರ್ತಿ ಎಸ್‌.ಆರ್‌.ಕೃಷ್ಣಕುಮಾರ್‌ ಅವರ ಏಕ ಸದಸ್ಯ ನ್ಯಾಯಪೀಠ, ಸಿಇಟಿ ಪುನರಾವರ್ತಿತ ವಿದ್ಯಾರ್ಥಿಗಳ ಪಿಯುಸಿಯ ಶೇ.50 ಅಂಕ ಹಾಗೂ ಸಿಇಟಿಯ ಶೇ.50 ಅಂಕಗಳನ್ನು ಪರಿಗಣಿಸಿ ಹೊಸದಾಗಿ ರಾರ‍ಯಂಕ್‌ ಪಟ್ಟಿಪ್ರಕಟಿಸುವಂತೆ ಕೆಇಎಗೆ ಸೆ.3ರಂದು ಆದೇಶಿಸಿತ್ತು. ಈ ಆದೇಶವನ್ನು ರದ್ದುಪಡಿಸುವಂತೆ ಕೋರಿ ಇದೀಗ ರಾಜ್ಯ ಉನ್ನತ ಶಿಕ್ಷಣ ಇಲಾಖೆಗೆ ವಿಭಾಗೀಯ ನ್ಯಾಯಪೀಠಕ್ಕೆ ಮೇಲ್ಮನವಿ ಸಲ್ಲಿಸಿದೆ. ಮೇಲ್ಮನವಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.

ಏನು ಆಕ್ಷೇಪಣೆ?:

ಮೂಲ ಅರ್ಜಿದಾರರಾದ ಸಿಇಟಿ ಪುನರಾವರ್ತಿತ ವಿದ್ಯಾರ್ಥಿಗಳು, 2020-2021ನೇ ಸಾಲಿನಲ್ಲಿ ಪಿಯು ಪರೀಕ್ಷೆಯನ್ನೇ ಎದುರಿಸಿಲ್ಲ. ಕೋವಿಡ್‌ ಹಿನ್ನೆಲೆಯಲ್ಲಿ ಸರ್ಕಾರ ಹೊರಡಿಸಿದ್ದ ಆದೇಶದ ಅನುಸಾರ ಅವರು ಅಂಕಗಳನ್ನು ಪಡೆದುಕೊಂಡಿದ್ದಾರೆ. 2020-2021ನೇ ಸಾಲಿನಲ್ಲಿ ಪಿಯು ವಿದ್ಯಾರ್ಥಿಗಳು ಅನುತ್ತೀರ್ಣ ಆಗಿರಲಿಲ್ಲ. 2021-22ನೇ ಸಾಲಿನ ವಿದ್ಯಾರ್ಥಿಗಳು ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸಿದ್ದ ಪರೀಕ್ಷೆಯನ್ನು ಎದುರಿಸಿದ್ದರು. ಹಲವು ವಿದ್ಯಾರ್ಥಿಗಳು 600ಕ್ಕೆ 600 ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ. ಹಿಂದಿನ ಸಾಲಿನ ವಿದ್ಯಾರ್ಥಿಗಳು ಇಷ್ಟುಅಂಕಗಳನ್ನು ಪಡೆದುಕೊಂಡಿಲ್ಲ. ಪರೀಕ್ಷೆಯನ್ನೇ ಬರೆಯದೇ ಉತ್ತೀರ್ಣವಾಗಿರುವ ವಿದ್ಯಾರ್ಥಿಗಳನ್ನು ಪರೀಕ್ಷೆ ಎದುರಿಸಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳೊಂದಿಗೆ ಸಮಾನವಾಗಿ ನೋಡಲಾಗದು ಎಂದು ಮೇಲ್ಮನವಿಯಲ್ಲಿ ಸರ್ಕಾರ ಆಕ್ಷೇಪಿಸಿದೆ.

CET Rank: ಸಿಇಟಿ ರ‍್ಯಾಂಕ್‌ ಪಟ್ಟಿ ರದ್ದು: ಹೈಕೋರ್ಟ್‌ ಮಹತ್ವದ ಆದೇಶ

ಅಲ್ಲದೆ, ಏಕ ಸದಸ್ಯ ನ್ಯಾಯಪೀಠದ ಆದೇಶವನ್ನು ಅನುಷ್ಠಾನ ಮಾಡಿದರೆ, 2022ನೇ ಸಾಲಿನಲ್ಲಿ ಮೆರಿಟ್‌ ಪಡೆದಿರುವ ಒಂದು ಲಕ್ಷಕ್ಕೂ ವಿದ್ಯಾರ್ಥಿಗಳು ರಾರ‍ಯಂಕ್‌ ಲಿಸ್ಟ್‌ನಲ್ಲಿ ಕೆಳಗೆ ಹೋಗುತ್ತಾರೆ. ಯಾವುದೇ ತಪ್ಪು ಮಾಡದ ಅವರಿಗೆ ಅನ್ಯಾಯವಾಗಲಿದ್ದು, ಅವರ ಭವಿಷ್ಯಕ್ಕೆ ಮಾರಕವಾಗಲಿದೆ. ಏಕ ಸದಸ್ಯ ನ್ಯಾಯಪೀಠವು 2021-22ನೇ ಸಾಲಿನ ವಿದ್ಯಾರ್ಥಿಗಳ ವಾದವನ್ನು ಆಲಿಸಿಲ್ಲ. ಮುಖ್ಯವಾಗಿ ‘ಕರ್ನಾಟಕ ಅಭ್ಯರ್ಥಿಗಳ ಆಯ್ಕೆ ನಿಯಮಗಳು-2006’ (ಸಿಇಟಿ ಪ್ರವೇಶಾತಿ ನಿಯಮಗಳು-2006)ರ ನಿಯಮ 4(1)(ಸಿ) ವಿನ ಧ್ಯೇಯೋದ್ದೇಶವನ್ನೇ ಏಕ ಸದಸ್ಯ ಪೀಠ ಪರಿಗಣಿಸಿಲ್ಲ. ಆದ್ದರಿಂದ ಏಕ ಸದಸ್ಯ ನ್ಯಾಯಪೀಠದ ಸೆ.3ರ ಆದೇಶ ರದ್ದುಪಡಿಸಬೇಕು ಎಂದು ಸರ್ಕಾರ ಮೇಲ್ಮನವಿಯಲ್ಲಿ ವಿಭಾಗೀಯ ನ್ಯಾಯಪೀಠವನ್ನು ಕೋರಿದೆ.