SSLC Result: ಯಾವ ಪುರುಷಾರ್ಥಕ್ಕೆ ಸರ್ಕಾರ ಬೋರ್ಡ್ ಪರೀಕ್ಷೆ ನಡೆಸುತ್ತಿದೆ: ಕ್ಯಾಮ್ಸ್ ಪ್ರಶ್ನೆ
ಹತ್ತು ಹನ್ನೆರಡು ವರ್ಷ ಶಾಲೆಯಲ್ಲಿ ಕಲಿತರೂ 10ನೇ ತರಗತಿಯಲ್ಲಿ ಕನಿಷ್ಠ 25 ಅಂಕ ಗಳಿಸಲು ಆಗದ ಮಕ್ಕಳ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಸರ್ಕಾರವೇ ಕಾರಣ. ಇದಕ್ಕೆ ಪರಿಹಾರ ಹುಡುಕುವ ಬದಲು ಮಕ್ಕಳ ಹಿತದೃಷ್ಟಿಯ ಹೆಸರಲ್ಲಿ ಗ್ರೇಸ್ ಅಂಕದ ಪ್ರಮಾಣ ಹೆಚ್ಚಿಸುತ್ತಿರುವುದು ಆಶ್ಚರ್ಯಕರ ಸಂಗತಿ.
ಬೆಂಗಳೂರು (ಮೇ.11): ಹತ್ತು ಹನ್ನೆರಡು ವರ್ಷ ಶಾಲೆಯಲ್ಲಿ ಕಲಿತರೂ 10ನೇ ತರಗತಿಯಲ್ಲಿ ಕನಿಷ್ಠ 25 ಅಂಕ ಗಳಿಸಲು ಆಗದ ಮಕ್ಕಳ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಸರ್ಕಾರವೇ ಕಾರಣ. ಇದಕ್ಕೆ ಪರಿಹಾರ ಹುಡುಕುವ ಬದಲು ಮಕ್ಕಳ ಹಿತದೃಷ್ಟಿಯ ಹೆಸರಲ್ಲಿ ಗ್ರೇಸ್ ಅಂಕದ ಪ್ರಮಾಣ ಹೆಚ್ಚಿಸುತ್ತಿರುವುದು ಆಶ್ಚರ್ಯಕರ ಸಂಗತಿ. ಸರ್ಕಾರ ಯಾವ ಪುರುಷಾರ್ಥಕ್ಕೆ ಬೋರ್ಡ್ ಪರೀಕ್ಷೆ ನಡೆಸುತ್ತಿದೆ ಎಂದು ಖಾಸಗಿ ಶಾಲಾ ಸಂಘಟನೆ ಕ್ಯಾಮ್ಸ್ ಪ್ರಶ್ನಿಸಿದೆ.
ಮಕ್ಕಳ ಕಲಿಕಾ ಸಾಮರ್ಥ್ಯ ಕುಸಿಯುತ್ತಿರುವುದಕ್ಕೆ ಕಾರಣ ಹುಡುಕಬೇಕಾದ ಸರ್ಕಾರ ಸಿಸಿ ಕ್ಯಾಮರಾ, ವೆಬ್‌ಕಾಸ್ಟಿಂಗ್‌ನಿಂದ ಫಲಿತಾಂಶ ಕಡಿಮೆಯಾಗಿದೆ ಎಂದು ಗ್ರೇಸ್ ಅಂಕದ ಪ್ರಮಾಣ ಹೆಚ್ಚಿಸಿ, ಗ್ರೇಸ್ ಅಂಕ ಪಡೆಯುವ ಅರ್ಹತಾ ಅಂಕಗಳ ಪ್ರಮಾಣವನ್ನು ಇಳಿಸಿರುವುದು ತನ್ನ ತಪ್ಪು ಹಾಗೂ ಅಸಲಿಯತ್ತು ಮರೆಮಾಚಿಕೊಳ್ಳಲು ಅನುಸರಿಸಿರುವ ದಾರಿ. ಇದರಿಂದ ನೈಜ ಸಾಮರ್ಥ್ಯವಿರುವ ಮಕ್ಕಳಿಗೂ ಅನ್ಯಾಯವಾಗಿದೆ ಎಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ಕಟುವಾಗಿ ಟೀಕಿಸಿದ್ದಾರೆ.
ಆರ್‌ಟಿಇ 2019ರ ತಿದ್ದುಪಡಿ ಅನುಷ್ಠಾನ ಮಾಡದೆ ಇದ್ದಲ್ಲಿ ಕನಿಷ್ಠ ಗುಣಮಟ್ಟ ಮುಂದಿನ ವರ್ಷಗಳಲ್ಲಿ ಫಲಿತಾಂಶ ಇನ್ನೂ ಕುಸಿಯುವುದು ಖಚಿತ. ಸರ್ಕಾರ ಇನ್ನಾದರೂ ಈ ಕಾಯ್ದೆ ಜಾರಿಗೆ ಕ್ರಮ ವಹಿಸಿ 5 ಮತ್ತು 8ನೇ ತರಗತಿ ಮೌಲ್ಯಾಂಕನ ಪರೀಕ್ಷೆ ನಡೆಸಿ ಹೆಚ್ಚುವರಿ ಕಲಿಕೆಗೆ ಕ್ರಮ ವಹಿಸಬೇಕು. ಬುದ್ಧಿಜೀವಿಗಳು, ಅಧಿಕಾರಿಗಳು ಮಕ್ಕಳ ಹಿತದೃಷ್ಟಿ ಹೆಸರಲ್ಲಿ ಮಕ್ಕಳಿಗೆ ಅನ್ಯಾಯ ಮಾಡುತ್ತಿರುವುದನ್ನು ಅರ್ಥೈಸಿಕೊಂಡು ಇದರ ಪರಿಷ್ಕರಣೆಗೆ ಚಿಂತನೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ಎಸ್‌ಎಸ್‌ಎಲ್‌ಸಿ ರಿಸಲ್ಟ್: ಯಾದಗಿರಿಯಲ್ಲಿ 675 ಶಿಕ್ಷಕರ ಕೊರತೆ ಮಧ್ಯೆಯೂ ಉತ್ತಮ ಫಲಿತಾಂಶ
ಕರ್ನಾಟಕ ಶಾಲಾ ಕಾಲೇಜು ಪೊಷಕ ಸಂಘಟನೆಗಳ ಸಮನ್ವಯ ಸಮಿತಿ ಕೂಡ ಗ್ರೇಸ್ ಅಂಕದ ಪ್ರಮಾಣ ಶೇ.20ಕ್ಕೆ ಹೆಚ್ಚಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು. ಸರ್ಕಾರ ಹೀಗೆ ಗ್ರೇಸ್ ಅಂಕ ನೀಡಿ ಮಕ್ಕಳನ್ನು ಮಾಡುವುದಾದರೆ ಪರೀಕ್ಷೆಯಲ್ಲಿ ಪಾರದರ್ಶಕತೆಗೆ ಸಿಸಿಕ್ಯಾಮರಾ, ವೆಬ್‌ಕಾಸ್ಟಿಂಗ್ ವ್ಯವಸ್ಥೆ ಜಾರಿ ಮಾಡಿ ಏನು ಪ್ರಯೋಜನ? ಅಲ್ಲಿ ಅಕ್ರಮ ನಡೆಸಲಾಗದೆ ಫೇಲಾದವರನ್ನು ಇಲ್ಲಿ ಗ್ರೇಸ್ ಅಂಕ ನೀಡಿ ಪಾಸು ಮಾಡುವುದಾದರೆ ಈ ಪರೀಕ್ಷೆಯಾದರೂ ಏಕೆ ಬೇಕು ಎಂದು ಸಮಿತಿ ಅಧ್ಯಕ್ಷ ಯೋಗಾನಂದ್ ಪ್ರಶ್ನಿಸಿದ್ದಾರೆ.