Asianet Suvarna News Asianet Suvarna News

ಎಸ್ಸೆಸ್ಸೆಲ್ಸಿ ಪರೀಕ್ಷೆ: ಶೇ.100ರಷ್ಟು ಪಾಸ್‌ಗೆ ಖಾಸಗಿ ಶಾಲೆಗಳ ಕುತಂತ್ರ

ಖಾಸಗಿ ಶಾಲೆಗಳು ಶೇ.100ರಷ್ಟು ಫಲಿತಾಂಶ ಪಡೆಯಲು ಕಲಿಕೆಯಲ್ಲಿ ಹಿಂದುಳಿದ ಶಾಲಾ ವಿದ್ಯಾರ್ಥಿಗಳನ್ನು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಖಾಸಗಿ ಅಭ್ಯರ್ಥಿಗಳಾಗಿ ನೋಂದಾಯಿಸುವ ಕುತಂತ್ರ ನಡೆಸಿದರೆ ಮಾನ್ಯತೆ ಜೊತೆಗೆ ಶಾಲಾ ಸಂಕೇತ ಸಹ ರದ್ದಾಗಲಿದೆ. 

SSLC Exam 100 Percent Pass by Private Schools Trick gvd
Author
First Published Oct 21, 2024, 11:00 AM IST | Last Updated Oct 21, 2024, 10:59 AM IST

ಬೆಂಗಳೂರು (ಅ.21): ಖಾಸಗಿ ಶಾಲೆಗಳು ಶೇ.100ರಷ್ಟು ಫಲಿತಾಂಶ ಪಡೆಯಲು ಕಲಿಕೆಯಲ್ಲಿ ಹಿಂದುಳಿದ ಶಾಲಾ ವಿದ್ಯಾರ್ಥಿಗಳನ್ನು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಖಾಸಗಿ ಅಭ್ಯರ್ಥಿಗಳಾಗಿ ನೋಂದಾಯಿಸುವ ಕುತಂತ್ರ ನಡೆಸಿದರೆ ಮಾನ್ಯತೆ ಜೊತೆಗೆ ಶಾಲಾ ಸಂಕೇತ ಸಹ ರದ್ದಾಗಲಿದೆ. ಇಂತಹ ಕಠಿಣ ಕ್ರಮದ ಎಚ್ಚರಿಕೆಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನೀಡಿದೆ.

ಎಸ್ಸೆಸ್ಸೆಲ್ಸಿಯಲ್ಲಿ ತಮ್ಮ ಶಾಲೆಯ ಫಲಿತಾಂಶ ಕಡಿಮೆಯಾಗದಂತೆ ನೋಡಿಕೊಳ್ಳಲು ಕೆಲವು ಖಾಸಗಿ ಶಾಲೆಗಳು ಕಲಿಕೆಯಲ್ಲಿ ಹಿಂದುಳಿದ ಅಥವಾ ಫೇಲಾಗಬಹುದೆಂದು ಅಂದಾಜಿಸಿದ ಶಾಲಾ ಮಕ್ಕಳಿಗೆ ವರ್ಗಾವಣೆ ಪ್ರಮಾಣ ಪತ್ರ ನೀಡಿ ಎಸ್ಸೆಸ್ಸೆಲ್ಸಿಯಲ್ಲಿ ಖಾಸಗಿ ಅಭ್ಯರ್ಥಿಗಳಾಗಿ ನೋಂದಾಯಿಸುತ್ತಿರುವ ಬಗ್ಗೆ ಪ್ರತಿ ವರ್ಷ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದೆ. 2025ನೇ ಏಪ್ರಿಲ್‌ನಲ್ಲಿ ನಡೆಯುವ ಎಸ್ಸೆಸ್ಸೆಲ್ಸಿ ಪರೀಕ್ಷೆ 1ಕ್ಕೆ ಶಾಲಾ ವಿದ್ಯಾರ್ಥಿಗಳು, ಖಾಸಗಿ ಅಭ್ಯರ್ಥಿಗಳು ಮತ್ತು ಪುನರಾವರ್ತಿತ ವಿದ್ಯಾರ್ಥಿಗಳ ನೋಂದಣಿಗೆ ಇತ್ತೀಚೆಗೆ ಹೊರಡಿಸಿರುವ ವಿವರವಾದ ಸುತ್ತೋಲೆಯಲ್ಲಿ ಶಾಲೆಗಳು ಫಲಿತಾಂಶ ಉತ್ತಮಪಡಿಸಿಕೊಳ್ಳಲು ನಡೆಸುತ್ತಿರುವ ಒಳಸಂಚಿನ ಬಗ್ಗೆ ಉಲ್ಲೇಖಿಸಿದೆ.

ಬಿಬಿಎಂಪಿ ವ್ಯಾಪ್ತಿ ಇ-ಖಾತಾ ವರ್ಗಾವಣೆಗೆ ಆಯ್ಕೆಯೇ ಇಲ್ಲ: ಪರಿಹಾರವೇನು?

ರಾಜ್ಯದ ಕೆಲವು ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಪೈಕಿ ಕೆಲವರ ಶೈಕ್ಷಣಿಕ ಗುಣಮಟ್ಟ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿರುವುದನ್ನು ಗಮನಿಸಿ ಮತ್ತು ಅನುತ್ತೀರ್ಣರಾಗುತ್ತಾರೆಂದು ಅಂತಹ ವಿದ್ಯಾರ್ಥಿಗಳನ್ನು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಖಾಸಗಿ ಅಭ್ಯರ್ಥಿಗಳಾಗಿ ಪರಿಗಣಿಸುವಂತೆ ಪ್ರಸ್ತಾವನೆ ಸಲ್ಲಿಸುತ್ತಿರುವುದು ಮಂಡಳಿಯ ಗಮನಕ್ಕೆ ಬಂದಿದೆ. ಆದರೆ, ಇದಕ್ಕೆ ಅವಕಾಶ ಇಲ್ಲ. ಶಾಲಾ ವಿದ್ಯಾರ್ಥಿಗಳನ್ನು ಶಾಲಾ ವಿದ್ಯಾರ್ಥಿಯಾಗಿಯೇ ಪರೀಕ್ಷೆಗೆ ನೋಂದಾಯಿಸಬೇಕು. ಖಾಸಗಿ ಅಭ್ಯರ್ಥಿಯಾಗಿ ನೋಂದಾಯಿಸುವ ಕೆಲಸ ಮಾಡಿದರೆ ಕರ್ನಾಟಕ ಶಿಕ್ಷಣ ಕಾಯ್ದೆ ನಿಯಮಾವಳಿ ಅನುಸಾರ ಸಂಬಂಧಿತ ಶಾಲೆಗಳ ಮಾನ್ಯತೆಯನ್ನು ಕೂಡಲೇ ಹಿಂಪಡೆಯಲು ಸೂಕ್ತ ಕ್ರಮ ಜರುಗಿಸಲಾಗುವುದು. ಜೊತೆಗೆ ಶಾಲಾ ಸಂಕೇತವನ್ನೂ ಸಹ ರದ್ದುಪಡಿಸಲು ಕ್ರಮ ವಹಿಸಲಾಗುವುದು ಎಂದು ಮಂಡಳಿ ಅಧ್ಯಕ್ಷರು ಎಚ್ಚರಿಕೆ ನೀಡಿದ್ದಾರೆ.

ಶಾಲೆಗಳ ವೈಫಲ್ಯ: ಶಾಲಾ ಶಿಕ್ಷಣದಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಶಿಕ್ಷಕರು ಪ್ರತಿ ವಿದ್ಯಾರ್ಥಿಯ ಬಗ್ಗೆಯೂ ವಿಶೇಷ ಕಾಳಜಿ ವಹಿಸಬೇಕು. ಓದಿನಲ್ಲಿ ಹಿಂದಿರುವ ಮಕ್ಕಳಿಗೆ ಪ್ರತಿ ವರ್ಷ ವಿಶೇಷ ತರಗತಿ, ಹೆಚ್ಚಿನ ಗಮನ ಹರಿಸಿ ಇತರೆ ಮಕ್ಕಳಂತೆ ಕಲಿಕಾ ಸಾಮರ್ಥ್ಯ ಸುಧಾರಿಸಲು ಶ್ರಮಿಸಬೇಕು. ಆದರೆ, ಪ್ರಾಥಮಿಕ ತರಗತಿಯಿಂದಲೂ ಒಂದು ಶಾಲೆಯಲ್ಲೇ ವ್ಯಾಸಂಗ ಮಾಡಿಕೊಂಡು ಬಂದ ಯಾವುದೇ ವಿದ್ಯಾರ್ಥಿ ಎಸ್ಸೆಸ್ಸೆಲ್ಸಿಗೆ ಬಂದರೂ ಕಲಿಕೆಯಲ್ಲಿ ಹಿಂದುಳಿದಿದ್ದರೆ ಅದು ಸಂಬಂಧಿಸಿದ ಶಾಲೆಯ ವೈಫಲ್ಯವೇ ಸರಿ. ಅಂತಹ ಮಕ್ಕಳಿಗೆ ವಿಶೇಷ ತರಬೇತಿ ನೀಡಿ ಕಲಿಕಾ ಮಟ್ಟ ಹೆಚ್ಚಿಸುವ ಬದಲು ಎಸ್ಸೆಸ್ಸೆಲ್ಸಿಯಲ್ಲಿ ಅವರನ್ನು ವಾಮಮಾರ್ಗದಿಂದ ಖಾಸಗಿ ಅಭ್ಯರ್ಥಿಗಳಾಗಿ ಪರೀಕ್ಷೆಗೆ ನೋಂದಾಯಿಸುವ ಕೆಲಸ ಮಾಡುವುದು ಮಕ್ಕಳ ಶಿಕ್ಷಣದ ಹಕ್ಕು ಉಲ್ಲಂಘನೆ ಎನ್ನುತ್ತಾರೆ ಶಿಕ್ಷಣ ತಜ್ಞರು.

ಅಧಿಕಾರಿಗಳ ಮೊಬೈಲ್‌ ಮೋಹ ಬಿಡಿಸಲು ಸಚಿವ ಪ್ರಿಯಾಂಕ್‌ ಖರ್ಗೆ ಮಾಡಿದ್ದೇನು?

ಪ್ರತಿ ವರ್ಷ ಅನೇಕ ಖಾಸಗಿ ಶಾಲೆಗಳು ಪ್ರವೇಶ ಪಡೆದ ಎಲ್ಲರೂ ಪಾಸ್‌ ಆಗೋದು ಗ್ಯಾರಂಟಿ ಎಂದು ಶಾಲಾ ಪ್ರವೇಶಾತಿ ವೇಳೆ ದೊಡ್ಡ ಬೋರ್ಡ್‌ ಹಾಕಿಕೊಂಡು ಪ್ರಚಾರ ಪಡೆಯುವುದು ಸಾಮಾನ್ಯವಾಗಿದೆ. ದಾಖಲಾತಿ ಹೆಚ್ಚಿಸಿಕೊಳ್ಳುವುದಕ್ಕೋಸ್ಕರ ಶಾಲೆಗಳ ಮಟ್ಟಿಗೆ ಇದೊಂದು ಗೀಳಾಗಿ ಪರಿಣಮಿಸಿದೆ. ಮಕ್ಕಳ ಜೀವನದಲ್ಲಿ ಆಟವಾಡುವ ಶಾಲೆಗಳ ಮಾನ್ಯತೆ ರದ್ದು ಮಾಡಿದರೆ ಸಾಲದು, ಆಡಳಿತ ಮಂಡಳಿಯವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು ಎನ್ನುವುದು ಪೋಷಕರ ವಲಯದ ಅಭಿಪ್ರಾಯ.

Latest Videos
Follow Us:
Download App:
  • android
  • ios