Asianet Suvarna News Asianet Suvarna News

ಬಿಬಿಎಂಪಿ ವ್ಯಾಪ್ತಿ ಇ-ಖಾತಾ ವರ್ಗಾವಣೆಗೆ ಆಯ್ಕೆಯೇ ಇಲ್ಲ: ಪರಿಹಾರವೇನು?

ಬಿಬಿಎಂಪಿ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಇ-ಖಾತಾ ಪಡೆಯಲು ರೂಪಿಸಿರುವ ಇ-ಆಸ್ತಿ ವೆಬ್‌ಸೈಟ್‌ನಲ್ಲಿ ಖಾತಾ ವರ್ಗಾವಣೆ ಆಯ್ಕೆ ನೀಡದ ಕಾರಣ ಖಾತಾ ವರ್ಗಾವಣೆ (ಖಾತಾ ಟ್ರಾನ್ಸ್‌ಫರ್) ಬಯಸುವ ಆಸ್ತಿ ಮಾಲೀಕರಲ್ಲಿ ಗೊಂದಲ ಉಂಟಾಗಿದೆ. 
 

There is No Option For E Khata Transfer Under BBMP gvd
Author
First Published Oct 21, 2024, 10:35 AM IST | Last Updated Oct 21, 2024, 10:35 AM IST

ಶ್ರೀಕಾಂತ್‌ ಎನ್‌ ಗೌಡಸಂದ್ರ

ಬೆಂಗಳೂರು (ಅ.21): ಬಿಬಿಎಂಪಿ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಇ-ಖಾತಾ ಪಡೆಯಲು ರೂಪಿಸಿರುವ ಇ-ಆಸ್ತಿ ವೆಬ್‌ಸೈಟ್‌ನಲ್ಲಿ ಖಾತಾ ವರ್ಗಾವಣೆ ಆಯ್ಕೆ ನೀಡದ ಕಾರಣ ಖಾತಾ ವರ್ಗಾವಣೆ (ಖಾತಾ ಟ್ರಾನ್ಸ್‌ಫರ್) ಬಯಸುವ ಆಸ್ತಿ ಮಾಲೀಕರಲ್ಲಿ ಗೊಂದಲ ಉಂಟಾಗಿದೆ. ರಾಜ್ಯ ಸರ್ಕಾರವು ಬಿಬಿಎಂಪಿ ವ್ಯಾಪ್ತಿಯಲ್ಲೂ ಆಸ್ತಿಗಳ ನೋಂದಣಿಗೆ ಅ.1ರಿಂದ ಅನ್ವಯವಾಗುವಂತೆ ಇ-ಖಾತಾ ಕಡ್ಡಾಯಗೊಳಿಸಿದೆ. ಇ-ಖಾತಾ ಪಡೆಯಲು ಡಿಜಿಟಲ್‌ ಇಂಟಿಗ್ರೇಷನ್‌ ಖಾತಾ ನಿಯಮ ಪಾಲನೆಗೆ ಸೂಚಿಸಿದ್ದು, ಇದರಡಿ ಆಧಾರ್‌ ಇ-ಕೆವೈಸಿ, ಆಸ್ತಿಯ ಸೂಕ್ತ ದಾಖಲೆಗಳನ್ನು ಸಲ್ಲಿಸಿಯೇ ಇ-ಖಾತಾ ಪಡೆಯಬೇಕು.

ಕಳೆದ 20 ದಿನಗಳಲ್ಲಿ ಇ-ಖಾತಾ ಪಡೆಯಲು ಇದ್ದ ಗೊಂದಲಗಳು ಒಂದೊಂದಾಗಿಯೇ ಬಗೆಹರಿಯುತ್ತಿವೆ. ಆದರೆ ಖಾತಾ ವರ್ಗಾವಣೆ ಮಾದರಿ (ಮಾಡ್ಯುಲ್‌) ಇನ್ನೂ ಸಿದ್ಧವಾಗಿಲ್ಲ. ಹೀಗಾಗಿ ಆಸ್ತಿ ನೋಂದಣಿ ಮಾಡಿಕೊಂಡು ಖಾತಾ ವರ್ಗಾವಣೆ ಮಾಡಿಸಿಕೊಳ್ಳದ ನೂತನ ಖರೀದಿದಾರರು ಖಾತಾ ವರ್ಗಾವಣೆ ಮಾಡಿಕೊಳ್ಳಲು ಇನ್ನೂ ಹೆಣಗಾಡುವ ಪರಿಸ್ಥಿತಿ ಉಂಟಾಗಿದೆ.

ಅಧಿಕಾರಿಗಳ ಮೊಬೈಲ್‌ ಮೋಹ ಬಿಡಿಸಲು ಸಚಿವ ಪ್ರಿಯಾಂಕ್‌ ಖರ್ಗೆ ಮಾಡಿದ್ದೇನು?

ಉದಾಹರಣೆ: 2022ರಲ್ಲಿ ಒಬ್ಬರು ಆಸ್ತಿ ಮಾರಾಟ ಮಾಡಿರುತ್ತಾರೆ. ಆಸ್ತಿ ಖರೀದಿಸಿದವರು ತನ್ನ ಹೆಸರಿಗೆ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಶುದ್ಧ ಕ್ರಯ ಪತ್ರ ನೋಂದಣಿ ಮಾಡಿಸಿಕೊಂಡು ಸುಮ್ಮನಾಗಿರುತ್ತಾರೆ. ಮೂಲ ಮಾಲೀಕನ ಹೆಸರಿನಲ್ಲಿರುವ ಖಾತಾ ವರ್ಗಾವಣೆ ಮಾಡಿಕೊಂಡಿರುವುದಿಲ್ಲ. ಇದೀಗ ಆಸ್ತಿಯ ಹಾಲಿ ಮಾಲೀಕ ಇ-ಖಾತಾಗೆ ಅರ್ಜಿ ಸಲ್ಲಿಸಿದರೆ ಖಾತಾದಲ್ಲಿ ಹಳೆಯ ಮಾಲೀಕನ ಹೆಸರು ತೋರಿಸುತ್ತದೆ. ಸೇಲ್‌ ಡೀಡ್‌ ಫೆಚ್ ಮಾಡಿದರೆ ಶುದ್ಧ ಕ್ರಯಪತ್ರದಲ್ಲಿರುವ ಹೆಸರೇ ಬೇರೆ, ಖಾತಾದಲ್ಲಿನ ಹೆಸರೇ ಬೇರೆ. ಹೀಗಾಗಿ ಇ-ಖಾತಾ ಅರ್ಜಿ ಅಂಗೀಕಾರಗೊಳ್ಳುತ್ತಿಲ್ಲ.

ತರಾತುರಿಯಲ್ಲಿ ಚಾಲನೆಯಿಂದ ಫಜೀತಿ: ಖಾತಾ ವರ್ಗಾವಣೆಗೆ ಬೇರೆ ಮಾಡ್ಯುಲ್‌ ಸಿದ್ಧಪಡಿಸಿ ಬಿಬಿಎಂಪಿ ಇ ಆಸ್ತಿ ವೆಬ್‌ಸೈಟ್‌ನಲ್ಲಿ ಆಯ್ಕೆ ನೀಡಬೇಕಾಗಿತ್ತು. ಆದರೆ ತರಾತುರಿಯಲ್ಲಿ ಇ-ಖಾತಾ ನಿಯಮ ಕಡ್ಡಾಯ ಮಾಡಲಾಗಿದೆ. ಅ.1ರಿಂದ ಇ-ಖಾತಾ ಇಲ್ಲದೆ ಯಾವುದೇ ಆಸ್ತಿ ನೋಂದಣಿ ಮಾಡದಂತೆ ಆದೇಶ ಮಾಡಲಾಗಿದೆ. ಹೀಗಾಗಿ ಖಾತಾ ವರ್ಗಾವಣೆಗೆ ಗೊಂದಲ ಉಂಟಾಗಿದೆ ಎಂದು ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಪರಿಹಾರವೇನು?: ಕ್ರಯಪತ್ರದಲ್ಲೇ ಬೇರೆ ಹೆಸರು, ಖಾತಾದಲ್ಲೇ ಬೇರೆ ಹೆಸರು ಇರುವ ಪ್ರಕರಣದಲ್ಲಿ ಅರ್ಜಿದಾರರು ಕಂದಾಯ ಪರಿವೀಕ್ಷಕರ ಅಥವಾ ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಯಲ್ಲೇ ಹೋಗಿ ಅವರಿಂದಲೇ ದಾಖಲೆಗಳನ್ನು ಅಪ್ಲೋಡ್‌ ಮಾಡಿಸಬೇಕಾದ ಅನಿವಾರ್ಯತೆ ಇದೆ. ಈ ಅರ್ಜಿಯನ್ನು ಕೇಸ್‌ ವರ್ಕರ್‌ ಪರಿಶೀಲನೆ ಮಾಡುತ್ತಾರೆ. ಕಂದಾಯ ಇಲಾಖೆಯಿಂದ ಸೇಲ್‌ ಡೀಡ್‌ ತರಿಸಿಕೊಂಡು ಪರಿಶೀಲನೆ ನಡೆಸಿದ ಬಳಿಕ ಕ್ಲಿಯರ್‌ ಮಾಡುತ್ತಾರೆ. ಬಳಿಕವಷ್ಟೇ ನೂತನ ಆಸ್ತಿ ಮಾಲೀಕರಿಗೆ ಇ-ಖಾತಾ ಲಭ್ಯವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೆಸರು ತಪ್ಪಾಗದಂತೆ ನೋಡಿಕೊಳ್ಳಿ!: ಇ-ಖಾತಾಗೆ ಅರ್ಜಿ ಸಲ್ಲಿಸುವ ವೇಳೆ ಖಾತಾ, ಕ್ರಯಪತ್ರ ಹಾಗೂ ಆಧಾರ್‌ ಯಾವುದರಲ್ಲೂ ಹೆಸರು ಅಥವಾ ಇನಿಷಿಯಲ್‌ನಲ್ಲಿ ವ್ಯತ್ಯಾಸ ಕಾಣಿಸಬಾರದು. ಒಂದೊಮ್ಮೆ ಇನಿಷಿಯಲ್‌ ಹಿಂದೆ ಮುಂದೆ ಇದ್ದರೂ ಅರ್ಜಿ ತಿರಸ್ಕೃತಗೊಳ್ಳುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇ-ಖಾತಾ ವಿತರಣೆಗೆ ಮೂರು ಮಾನದಂಡಗಳನ್ನು ನೋಡಲಾಗುತ್ತದೆ. ಬಿಬಿಎಂಪಿ ಖಾತಾದಲ್ಲಿನ ಹೆಸರು, ಕ್ರಯಪತ್ರದಲ್ಲಿನ ಹೆಸರು ಹಾಗೂ ಇ-ಕೆವೈಸಿಗೆ ನೀಡುವ ಆಧಾರ್‌ ಕಾರ್ಡಿನಲ್ಲಿರುವ ಹೆಸರು. ಯಾವುದರಲ್ಲಾದರೂ ಒಂದರಲ್ಲಿ ಹೆಸರು ಅಥವಾ ಇನಿಷಯಲ್‌ ತಪ್ಪಿದ್ದರೂ ಸಮಸ್ಯೆಯಾಗುತ್ತದೆ.

ಸುಳ್ಳು ಪ್ರಕರಣ ದಾಖಲಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ: ಪೊಲೀಸರ ಪ್ರಕರಣ ಮರು ವಿಚಾರಣೆಗೆ ಹೈಕೋರ್ಟ್‌ ಅಸ್ತು

ಉದಾ: ಸುರೇಶ ಎಂ.ಎಸ್. ಇರುವುದು ಎಂ.ಎಸ್.ಸುರೇಶ ಎಂದು ದಾಖಲಾಗಿದ್ದರೂ ಅನುಮೋದನೆ ಸಿಗುವುದಿಲ್ಲ. ಇದು ಮತ್ತೆ ಕೇಸ್‌ ವರ್ಕರ್‌ ಬಳಿ ಹೋಗಿ ಅವರು ಪರಿಶೀಲಿಸಿ ಟಿಪ್ಪಣಿ ಬರೆದರೆ ಮಾತ್ರ ಎಆರ್‌ಒ ಕ್ಲಿಯರ್‌ ಮಾಡಲು ಸಾಧ್ಯ. ಹೀಗಾಗಿ ಆಧಾರ್‌, ಸೇಲ್‌ ಡೀಡ್ ಎರಡರಲ್ಲೂ ಒಂದೇ ಹೆಸರು ಇರಬೇಕು. ಮದುವೆ ಬಳಿಕ ತಂದೆ ಬದಲಿಗೆ ಗಂಡನ ಅಥವಾ ಅವರ ಮನೆ ಹೆಸರು ಸೇರಿಸಿಕೊಳ್ಳುವುದು. ಆ ಹೆಸರನ್ನು ಆಧಾರ್‌ನಲ್ಲಿ ಬಳಸಿಕೊಳ್ಳುವುದು. ಸರ್ಕಾರಿ ದಾಖಲೆಗಳಲ್ಲಿ ಒಂದು ಹೆಸರು ಆಧಾರ್‌ನಲ್ಲಿ ಒಂದು ಹೆಸರು ಉಳ್ಳವರಿಗೆ ಇದರಿಂದ ಸಮಸ್ಯೆಯಾಗಲಿದೆ. ಮೂರೂ ಕಡೆ ಹೆಸರು ಶೇ.100 ರಷ್ಟು ಮ್ಯಾಚ್‌ ಆದರೆ ಯಾವುದೇ ಸಮಸ್ಯೆಯಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios