2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಳಪೆ ಫಲಿತಾಂಶ ದಾಖಲಿಸಿದ ಖಾಸಗಿ ಅನುದಾನಿತ ಶಾಲೆಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ. ಶಿಕ್ಷಕರ ಬಡ್ತಿ ತಡೆ, ವೇತನ ಅನುದಾನ ರದ್ದು ಸೇರಿದಂತೆ ಹಲವು ಶಿಸ್ತು ಕ್ರಮಗಳನ್ನು ಜಾರಿಗೊಳಿಸಲಾಗುವುದು.

ಬೆಂಗಳೂರು (ಜೂ.18): 2024-25ನೇ ಸಾಲಿನಲ್ಲಿ ನಡೆದ ಎಸ್‌.ಎಸ್‌.ಎಲ್‌.ಸಿ ಮುಖ್ಯ ಪರೀಕ್ಷೆಯಲ್ಲಿ ಖಾಸಗಿ ಅನುದಾನಿತ ಪ್ರೌಢಶಾಲೆಗಳ ಹಲವೆಡೆ ವಿದ್ಯಾರ್ಥಿಗಳ ಉತ್ತೀರ್ಣ ಶೇಕಡಾವಾರು ತೀರಾ ಕಡಿಮೆಯಾಗಿ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಸರಕಾರವು ಗಂಭೀರ ನೋಟಿಸ್‌ಗಳನ್ನು ಜಾರಿಗೊಳಿಸಿ, ಶಿಕ್ಷಕರು ಮತ್ತು ಶಾಲಾ ಆಡಳಿತದ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸೂಚನೆ ನೀಡಿದೆ.

ಫಲಿತಾಂಶದಲ್ಲಿ ನಿರೀಕ್ಷಿತ ಮಟ್ಟ ಮೀರಿ ಹಿನ್ನಡೆ

ರಾಜ್ಯದ ಹಲವಾರು ಅನುದಾನಿತ ಶಾಲೆಗಳು ಶೇ.60ಕ್ಕಿಂತ ಕಡಿಮೆ ಉತ್ತೀರ್ಣತೆಯ ಫಲಿತಾಂಶ ದಾಖಲಿಸಿರುವುದು ಅಧಿಕಾರಿಗಳಿಗೆ ತೀವ್ರ ಆತಂಕವನ್ನುಂಟುಮಾಡಿದೆ. ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟವನ್ನು ಸುಧಾರಿಸಲು ಸರ್ಕಾರವು ವರ್ಷಾರಂಭದಲ್ಲೇ ಪ್ರತ್ಯೇಕ ಮಾರ್ಗಸೂಚಿಗಳನ್ನು ಜಾರಿಗೊಳಿಸಿದ್ದರೂ ಕೂಡ ಫಲಿತಾಂಶ ನಿರಾಶೆ ತಂದಿದೆ. ಶಾಲಾ ಆಡಳಿತಗಳು ಮತ್ತು ವಿಷಯ ಶಿಕ್ಷಕರು ಸರಿಯಾದ ಕೌಶಲ್ಯ ಹಾಗೂ ಮಾರ್ಗದರ್ಶನ ನೀಡದೇ ಇರುವುದು ಈ ಫಲಿತಾಂಶಗಳಿಂದ ಸ್ಪಷ್ಟವಾಗಿದೆ.

ಅನುದಾನವನ್ನು ತಡೆಹಿಡಿಯುವ ಕಠಿಣ ಕ್ರಮಗಳು:

ಸರ್ಕಾರದ ಇಡಿ 14 ಎಸ್‌ಇಪಿ 2017 ಆದೇಶ ಆಧಾರದಲ್ಲಿ ಈ ಕೆಳಗಿನ ಪ್ರಮುಖ ಕ್ರಮಗಳನ್ನು ಕೈಗೊಳ್ಳಲಾಗಿದೆ:

ವಿಷಯ ಶಿಕ್ಷಕರ ಬಡ್ತಿ ತಡೆ – ಶೇ.60ಕ್ಕಿಂತ ಕಡಿಮೆ ಫಲಿತಾಂಶ ಬಂದಿರುವ ವಿಷಯಗಳಲ್ಲಿ ಬಡ್ತಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗುವುದು.

ವೇತನ ಅನುದಾನ ತಡೆ – ಮೂರು ವರ್ಷ ಶೇ.60ಕ್ಕಿಂತ ಕಡಿಮೆ ಫಲಿತಾಂಶ ನೀಡಿದ ಶಿಕ್ಷಕರ ವೇತನ ಅನುದಾನವನ್ನೂ ತಡೆಯಲಾಗುತ್ತದೆ.

ಶಾಲೆಗಳ ವೇತನ ಅನುದಾನ ರದ್ದು – ಐದು ವರ್ಷಗಳ ಕಾಲ ಶೇ.50ಕ್ಕಿಂತ ಕಡಿಮೆ ಉತ್ತೀರ್ಣ ಶೇಕಡಾವಾರು ನೀಡಿದ ಶಾಲೆಗಳಿಗೆ ನೀಡುವ ವೇತನ ಅನುದಾನವನ್ನೂ ಹಿಂಪಡೆಯಲಾಗುವುದು.

ಅರ್ಹತೆ ಮೌಲ್ಯಮಾಪನ – ಹೊಸ ನೇಮಕಾತಿಗೆ ಅರ್ಹರಾಗುವ ಶಿಕ್ಷಕರಿಗೂ ಫಲಿತಾಂಶ ಆಧಾರಿತ ಮೌಲ್ಯಮಾಪನ ಮಾಡಲಾಗುತ್ತದೆ.

ಶಾಲಾ ಮುಖ್ಯಸ್ಥರಿಗೆ ನೋಟಿಸ್ ಜಾರಿ: ಶೇ.60ಕ್ಕಿಂತ ಕಡಿಮೆ ಫಲಿತಾಂಶ ದಾಖಲಿಸಿರುವ ಶಾಲಾ ಮುಖ್ಯಸ್ಥರಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳ ಅಡಿಯಲ್ಲಿ ನೋಟಿಸ್‌ಗಳನ್ನು ಜಾರಿಗೊಳಿಸಲಾಗಿದೆ. ಈ ನೋಟಿಸ್‌ಗೆ 7 ದಿನಗಳ ಒಳಗಾಗಿ ಲಿಖಿತ ಸಮಜಾಯಿಷಿ ನೀಡಬೇಕೆಂದು ಸೂಚನೆ ನೀಡಲಾಗಿದೆ. ಸಮರ್ಪಕ ಸ್ಪಷ್ಟನೆ ನೀಡದಿದ್ದರೆ ಮುಂದಿನ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಲಾಗಿದೆ ಎಂದು ಸ್ವತಃ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯ ಆಯುಕ್ತ ಡಾ.ಕೆ.ವಿ. ತ್ರಿಲೋಕಚಂದ್ರ ಅವರು ನೊಟೀಸ್ ನೀಡಿದ್ದಾರೆ.

ಶಿಕ್ಷಣಾಧಿಕಾರಿಗಳಿಗೆ ವರದಿ ನೀಡಲು ಸೂಚನೆ: ಜಿಲ್ಲಾ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನಿಗದಿತ ಅವಧಿಯೊಳಗೆ ಕ್ರಮ ತೆಗೆದುಕೊಂಡ ಬಗ್ಗೆ ಆಯುಕ್ತರಿಗೆ ವರದಿ ನೀಡಬೇಕೆಂದು ನಿರ್ದೇಶಿಸಲಾಗಿದೆ. ಈ ಮೂಲಕ ರಾಜ್ಯದ ಶೈಕ್ಷಣಿಕ ಮಟ್ಟದ ಉನ್ನತಿಗೆ ಹೊಸ ಬಾಗಿಲು ತೆರೆದು, ಗಣನೀಯ ಫಲಿತಾಂಶ ಸಾಧಿಸುವತ್ತ ಸರ್ಕಾರ ನಿರಂತರ ಪ್ರಯತ್ನಶೀಲವಾಗಿದೆ.