ಧಾರವಾಡ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ನಿರಾಸೆ ಮೂಡಿಸಿದ್ದು, ಕಳಪೆ ಪ್ರದರ್ಶನ ತೋರಿದ ಶಾಲೆಗಳಿಗೆ ಜಿಲ್ಲಾಡಳಿತ ನೋಟಿಸ್ ಜಾರಿ ಮಾಡಿದೆ. ಶೂನ್ಯ ಫಲಿತಾಂಶ ಪಡೆದ ಎರಡು ಅನುದಾನಿತ ಶಾಲೆಗಳನ್ನು ಬಂದ್ ಮಾಡಲು ಜಿಲ್ಲಾ ಪಂಚಾಯ್ತಿ ಸಿಇಓ ಆದೇಶ ನೀಡಿದ್ದಾರೆ.

ವರದಿ : ಪರಮೇಶ್ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾ

ಧಾರವಾಡ (ಜೂ.5): ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿದ್ಯಾಕಾಶಿ ಎಂಬ ಹಿರಿಮೆ ಹೊತ್ತಿರುವ ಧಾರವಾಡವನ್ನು ಶತಾಯಗತಾಯ ಟಾಪ್ 10 ಸ್ಥಾನದಲ್ಲಿ ಬರುವಂತೆ ಮಾಡಲು ಜಿಲ್ಲಾಡಳಿತ ಮಾಡಿದ ಪ್ರಯತ್ನ ಅಷ್ಟಿಷ್ಟಲ್ಲ ಮಿಷನ್ ವಿದ್ಯಾಕಾಶಿ ಎಂಬ ಹೆಸರಿನಡಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಹುರುಪು ಹುಮ್ಮಸ್ಸು ತುಂಬಲು ಸ್ವತಃ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರೇ ಫೀಲ್ಡಿಗೆ ಇಳಿದಿದ್ದರು ಆದರೆ ಈ ಬಾರಿಯ ಫಲಿತಾಂಶ ಮಾತ್ರ ಮತ್ತೂ ಕೈಕೊಟ್ಟಿದೆ ಹೀಗಾಗಿ ಕಳಪೆ ಪ್ರದರ್ಶನ ತೋರಿದ ಶಾಲೆಗಳಿಗೆ ಇದೀಗ ಜಿಲ್ಲಾಡಳಿತ ಶಾಕ್ ನೀಡಿದೆ.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಗಣನೀಯ ಪ್ರಮಾಣದಲ್ಲಿ ಸಾಧನೆ ಮಾಡಬೇಕು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳ ಮಾಡುವ ಸಂಬಂಧ ಸಾಕಷ್ಟು ಯೋಜನೆಗಳನ್ನು ರೂಪಿಸಬೇಕು ಎಂಬ ಸಿಎಂ ಸೂಚನೆ ಮೆರೆಗೆ ಧಾರವಾಡ ಜಿಲ್ಲಾಡಳಿತ ಕೂಡ ಕಾರ್ಯೋನ್ಮುಖವಾಗಿತ್ತು ಆದರೆ ಈ ಬಾರಿಯ ಫಲಿತಾಂಶದಲ್ಲಿ ಧಾರವಾಡ ಜಿಲ್ಲೆಯ 104 ಶಾಲೆಗಳು ಶೇ.50 ರಷ್ಟು ಫಲಿತಾಂಶ ಮಾಡಿವೆ ಜಿಲ್ಲೆಯ 6 ಶಾಲೆಗಳು ಶೂನ್ಯ ಫಲಿತಾಂಶ ಮಾಡಿವೆ ಜಿಲ್ಲೆಯ ಈ ಆರು ಶಾಲೆಗಳಲ್ಲಿ ಒಂದೂ ವಿದ್ಯಾರ್ಥಿ ಪಾಸ್ ಆಗದೇ ಇರವುದರಿಂದ ಈ ಶಾಲೆಗಳಿಗೆ ಇದೀಗ ನೋಟಿಸ್ ಜಾರಿ ಮಾಡಲಾಗಿದೆ ಈ ಆರು ಶಾಲೆಗಳಲ್ಲಿ 4 ಅನುದಾನ ರಹಿತ ಹಾಗೂ 2 ಅನುದಾನಿತ ಶಾಲೆಗಳಿವೆ ಹೀಗಾಗಿ ಶೂನ್ಯ ಫಲಿತಾಂಶ ತೋರಿದ ಎರಡು ಅನುದಾನಿತ ಶಾಲೆಗಳನ್ನು ಇದೀಗ ಬಂದ್ ಮಾಡಲು ಜಿಲ್ಲಾ ಪಂಚಾಯ್ತಿ ಸಿಇಓ ನೋಟಿಸ್ ಜಾರಿ ಮಾಡಿದ್ದಾರೆ

ಈ ಎರಡು ಶಾಲೆಗಳ ಜೊತೆಗೆ ಅನುದಾನ ರಹಿತ ನಾಲ್ಕು ಶಾಲೆಗಳು ಕೂಡ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಶೂನ್ಯ ಸಾಧನೆ ಮಾಡಿವೆ ಈ ಶಾಲೆಗಳ ಬಗ್ಗೆ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವಂತೆಯೂ ಸಿಇಓ ಅವರು ಡಿಡಿಪಿಐ ಅವರಿಗೆ ಸೂಚಿಸಿದ್ದಾರೆ ಈಗಾಗಲೇ ಈ ಆರೂ ಶಾಲೆಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಈ ಬಗ್ಗೆ ಶಿಕ್ಷಣ ಇಲಾಖೆಗೂ ಮಾಹಿತಿ ನೀಡಲಾಗಿದ್ದು ಬರುವ ದಿನಗಳಲ್ಲಿ ಉಳಿದ ಶಾಲೆಗಳು ಇದೇ ರೀತಿ ಫಲಿತಾಂಶ ಕೊಟ್ಟಿದ್ದೇ ಆದಲ್ಲಿ ಅವುಗಳ ಮೇಲೂ ಕ್ರಮ ಕೈಗೊಳ್ಳುವುದಾಗಿ ಸಿಇಓ ತಿಳಿಸಿದ್ದಾರೆ ಅಣ್ಣಿಗೇರಿಯ ಬಿ.ಸಿ.ದೇಶಪಾಂಡೆ ಹುಬ್ಬಳ್ಳಿಯ ಕೃಪಾದಾನಂ, ಗೌತಮ್ ಪ್ರೌಢಶಾಲೆ,ಮೌಲಾನಾ ಆಜಾದ್ ಶಾಲೆ ಸೇರಿ ಒಟ್ಟು ಆರು ಶಾಲೆಗಳಿಗೆ ಸದ್ಯ ನೋಟಿಸ್ ಜಾರಿಯಾಗಿದೆ.ಇನ್ನು ಈ ಕುರಿತು ಜಿಲ್ಲಾ ಉಸ್ತುವಾರಿ‌ ಸಚಿವ ಸಂತೋಷ್ ಲಾಡ್ ಅವರು ಶಿಕ್ಷಣ ಇಲಾಖೆಯ ಮೇಲೆ ಅಸಮಾಧಾನವನ್ನ ಹೊರ ಹಾಕಿದ್ದಾರೆ..

ಒಟ್ಟಾರೆ ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಧಾರವಾಡ ಜಿಲ್ಲೆಯ ಹೇಳಿಕೊಳ್ಳುವಷ್ಟು ಸಾಧನೆ ಮಾಡಲಿಲ್ಲವಾದರೂ ಕಳಪೆ ಪ್ರದರ್ಶನ ತೋರಿದ ಶಾಲೆಗಳಿಗಂತೂ ಬಿಸಿ ಮುಟ್ಟಿಸುವ ಕೆಲಸವಂತೂ ನಡೆದಿದೆ ಜಿಲ್ಲಾಡಳಿತದ ಈ ಶಾಕ್‌ಗೆ ಬರುವ ದಿನಗಳಲ್ಲಾದರೂ ಉಳಿದ ಶಾಲೆಗಳ ಶೈಕ್ಷಣಿಕ ಗುಣಮಟ್ಟ ಸುಧಾರಿಸಿದರೆ ಅಷ್ಟೇ ಸಾಕು