Asianet Suvarna News Asianet Suvarna News

ಪಠ್ಯದಲ್ಲಿ ಬಸವಣ್ಣನ ಕೆಲ ಅಂಶಗಳಿಗೂ ಕತ್ತರಿ, ಹೋರಾಟದ ಎಚ್ಚರಿಕೆ ನೀಡಿದ ಸ್ವಾಮೀಜಿ

* ಪಠ್ಯದಲ್ಲಿ ಬಸವಣ್ಣನ ಕೆಲ ಅಂಶಗಳಿಗೆ ಕತ್ತರಿ
* ಸಾಣೇಹಳ್ಳಿ ತರಳುಬಾಳು ಶಾಖಾಮಠದ ಸಾಣೇಹಳ್ಳಿಯ ಪಂಡಿತಾರಾದ್ಯ ಶ್ರೀಗಳು ಅಸಮಾಧಾನ
* ಈ ಕುರಿತು ಮುಖ್ಯಮಂತ್ರಿಗೆ ಪತ್ರ ಬರೆದ ಸ್ವಾಮೀಜಿ

sri panditaradhya swamiji Protest Warns Over Basavanna Some Points Cuts In School Text Book  rbj
Author
Bengaluru, First Published May 31, 2022, 11:58 AM IST

ಬೆಂಗಳೂರು, (ಮೇ.31): ಕರ್ನಾಟಕದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ತಾರಕಕಕ್ಕೇರಿದೆ. ಪಠ್ಯ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ವಿರುದ್ಧ ಕ್ರಮಕ್ಕೆ ಆಗ್ರಹಗಳು ವ್ಯಕ್ತವಾಗುತ್ತಿವೆ. ಇದರ ಮಧ್ಯೆ ಪಠ್ಯದಲ್ಲಿ ಬಸವಣ್ಣನ ಕೆಲ ಅಂಶಗಳನ್ನ ತೆಗೆದು ಹಾಕಲಾಗಿದೆ ಎಂದು ತಿಳಿದುಬಂದಿದೆ.

ಹೌದು.. 9ನೇ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ತಕ ಭಾಗ -1 ರಲ್ಲಿ ಬಸವಣ್ಣನವರ ಪಾಠದಲ್ಲಿ ಕೆಲ ಅಂಶ ತೆಗೆದುಹಾಕಲಾಗಿದೆ. ಇದರಿಂದ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿ ತರಳುಬಾಳು ಶಾಖಾಮಠದ ಸಾಣೇಹಳ್ಳಿಯ ಪಂಡಿತಾರಾದ್ಯ ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪಂಡಿತಾರಾದ್ಯ ಶ್ರೀಗಳು ಪತ್ರ ಬರೆದಿದ್ದು, ಪಠ್ಯ ಪುಸ್ತಕವನ್ನ ತಡೆಹಿಡಿದು ಸರಿ ಪಡಿಸುವಂತೆ ಆಗ್ರಹಿಸಿದ್ದಾರೆ.

ಪಠ್ಯ ಪರಿಷ್ಕರಣೆ ವಿವಾದ: ಅನುಮತಿ ಹಿಂಪಡೆದ ಇನ್ನೊಬ್ಬ ಸಾಹಿತಿ!

ಸ್ವಾಮೀಜಿ ಬರೆದ ಪತ್ರದಲ್ಲಿ ಏನಿದೆ?
ಪಠ್ಯಪುಸ್ತಕ ರಚನಾ ಸಮಿತಿ ಮತ್ತು ಅದು ಬದಲಾಯಿಸಿರುವ ಪಠ್ಯ ಕುರಿತು ಸಾಕಷ್ಟು ಮತ್ತು ಆಪಾದನೆ ಕೇಳಿಬರುತ್ತಿವೆ. ಯಾವ ಹಂತದಲ್ಲಿ ಏನೇನು ಬದಲಾಯಿಸಿದ್ದಾರೆ ಎನ್ನುವುದನ್ನು ಗಮನಿಸೋಣ ಎಂದರೆ ಪಠ್ಯಪುಸ್ತಕಗಳೇ ಎಲ್ಲೂ ದೊರೆಯುತ್ತಿಲ್ಲ. ಶಾಲೆಗಳು ಪ್ರಾರಂಭವಾಗಿ 15 ದಿನಗಳಾಗಿವೆ. ಆದರೂ ಪಠ್ಯ ಮಸ್ತಕಗಳಿಲ್ಲ ಎಂದರೆ ಶಿಕ್ಷಕರು ಹೇಗೆ ಪಾಠ ಮಾಡಬೇಕು? ಈಗಿನ ಪಠ್ಯಸಮಿತಿಯಲ್ಲಿರುವವರು ಒಂದು ವರ್ಗಕ್ಕೆ ಸೇರಿದವರೆ ಮೇಲ್ನೋಟಕ್ಕೆ ಎದ್ದು ತೋರುವುದು. ಶಿಕ್ಷಣ ಕ್ಷೇತ್ರದಲ್ಲಿ ದುಡಿದವರು, ಶಿಕ್ಷಣ ತಜ್ಞರು, ಸಾಮಾಜಿಕ ಕಾಳಜಿಯುಳ್ಳ ದೂರದೃಷ್ಟಿಯುಳ್ಳವರು ಪಠ್ಯರಚನಾ ಸಮಿತಿಯಲ್ಲಿರಬೇಕಾದ್ದು ಅಪೇಕ್ಷಣೀಯ, ಅಲ್ಲಿ ಜಾತಿ, ಪಕ್ಷ ರಾಜಕಾರಣ ಹೆಡೆಯಾಡಬಾರದು ಎಂದಿದ್ದಾರೆ.

ವಾಟ್ಸಾಪ್‍ನಲ್ಲಿ ನಾವು ನೋಡಿರುವಂತೆ 9ನೇ ತರಗತಿಯ ‘ಸಮಾಜ ವಿಜ್ಞಾನ’ ಪಠ್ಯಪುಸ್ತಕ (ಪರಿಷ್ಕೃತ-2022) ಭಾಗ-1 ರಲ್ಲಿ ಬಸವಣ್ಣನವರನ್ನು ಕುರಿತ ಪಾಠವಿದೆ. ಕಳೆದ ವರ್ಷವೂ ಈ ಪಾಠವಿತ್ತು. ಆದರೆ ಅದರಲ್ಲಿನ ಪ್ರಮುಖ ಸಾಲುಗಳನ್ನು ತೆಗೆದು ತಮಗೆ ಬೇಕಾದವುಗಳನ್ನು ಸೇರಿಸಿದ್ದಾರೆ. ಕಳೆದ ವರ್ಷದ ಪಾಠದಲ್ಲಿ ಮಧ್ಯಕಾಲದ ಕರ್ನಾಟಕದ ಸಮಾಜವನ್ನು ಸುಧಾರಿಸಲು ಹೋರಾಡಿದ ಆದ್ಯ ಪ್ರವರ್ತಕರಲ್ಲಿ ಬಸವೇಶ್ವರರು ಒಬ್ಬರಾಗಿದ್ದಾರೆ.

ವೈದಿಕ ಮೂಲ ಧರ್ಮದಲ್ಲಿ ಬೇರೂರಿದ್ದ ಅಸಂಖ್ಯಾ ಧಾರ್ಮಿಕ ಆಚರಣಾ ವಿಧಿ ವಿಧಾನಗಳನ್ನು ಬದಿಗೊತ್ತಿ ಮಾನವೀಯ ಮೌಲ್ಯ ಆಧಾರಿತ ಸರಳ ವೀರಶೈವ ಸಿದ್ಧಾಂತವನ್ನು ಬಸವೇಶ್ವರರು ಹಾಗೂ ಅವರ ಅನುಯಾಯಿಗಳಾದ ಶರಣರು ಪ್ರಚಾರಪಡಿಸಿದರು. ಜಾತಿವ್ಯವಸ್ಥೆಯ ಕಡುವಿರೋಧಿಯಾಗಿದ್ದ ಬಸವೇಶ್ವರರು ತಮ್ಮ ಉಪನಯನದ ಯಜ್ಯೋಪವೀತವನ್ನು ಕಿತ್ತೆಸೆದು ಕೂಡಲಸಂಗಮಕ್ಕೆ ನಡೆದರು. ಉನ್ನತಾಧಿಕಾರದಲ್ಲಿದ್ದರೂ ಹಣ, ಅಧಿಕಾರ, ಅಧಿಪತ್ಯ ಇವ್ಯಾವುದರಿಂದಲೂ ಇವರು ವಿಚಲಿತರಾಗಲಿಲ್ಲ. ತಮ್ಮ ಇಡೀ ಜೀವನವನ್ನು ಸಮಾಜ ಮತ್ತು ಧರ್ಮದಲ್ಲಿನ ಅನಿಷ್ಟ ಪದ್ಧತಿಗಳನ್ನು ತೊಡೆದುಹಾಕಲು ಮೀಸಲಿರಿಸಿದರು. ಸಮಾಜ, ಧರ್ಮದ ಪುನಶ್ವೇತನಕ್ಕೆ ಟೊಂಕಕಟ್ಟಿದರು. ಸ್ವಾವಲಂಬನೆಯ ತತ್ವವನ್ನು, ದೇಹವೇ ದೇಗುಲ, ಈ ಬಗೆಯ ಸಂವೇದನೆಗಳು ಇಂದಿಗೂ ನಮ್ಮ ಸಮಾಜಕ್ಕೆ ದಾರಿದೀಪಗಳಾಗಿವೆ ಎಂದು ತಿಳಿಸಿದ್ದಾರೆ.

ಅವರು ಸರಳ ಕನ್ನಡವನ್ನು ಬಳಸುವ ಮೂಲಕ ತಮ್ಮ ಚಳವಳಿಯನ್ನು ಜನಮುಖಿಯಾಗಿಸಿದರು. ಅನೇಕ ಮಹತ್ವದ ಅಂಶಗಳನ್ನೇ ತೆಗೆದುಹಾಕಿ ತಮಗೆ ಬೇಕಾದಂತೆ ತಿರುಚಿದ್ದಾರೆ. ಬಸವಣ್ಣ ಮತ್ತು ಅವರು ಪ್ರತಿಪಾದಿಸಿದ ಲಿಂಗಾಯತ ಧರ್ಮದ ಬಗ್ಗೆ ತಪ್ಪು ಅಭಿಪ್ರಾಯ ಬರುವಂತೆ ಮಾಡಿದ್ದಾರೆ. ಈ ಬದಲಾವಣೆ ನಿಜಕ್ಕೂ ಖಂಡನಾರ್ಹ. ಬಸವಣ್ಣನವರ ಶುದ್ಧ, ಪಾರದರ್ಶಕ ಬದುಕಿಗೆ ಕಳಂಕ ತಂದಂತೆ. ವಚನಕಾರರು ವೀರಶೈವ ಮತವನ್ನು ಸುಧಾರಿಸಿದರು ಎನ್ನುವುದು ಶುದ್ಧ ಸುಳ್ಳು. ಅವರು ಲಿಂಗಾಯತ ಧರ್ಮವನ್ನು ಜಾರಿಯಲ್ಲಿ ತಂದರು ಎಂದಾಗಬೇಕಿತ್ತು. ಇಂತಹ ಹಲವು ದೋಷಗಳಾಗಿವೆ. ಆದುದರಿಂದ ತಕ್ಷಣ ಇಡೀ ಪಠ್ಯವನ್ನೇ ತಡೆಹಿಡಿದು ಎಲ್ಲಿಯೂ ದೋಷವಾಗದಂತೆ ಪರಿಷ್ಕರಣೆ ಮಾಡಬೇಕು. ಇಲ್ಲವೇ ಹಿಂದಿನ ಪಠ್ಯವನ್ನೇ ಮುಂದುವರಿಸಬೇಕು. ಈ ಬಗ್ಗೆ ಕೂಡಲೇ ಕ್ರಮ ಜರುಗಿಸದಿದ್ದರೆ ನಾಡಿನಾದ್ಯಂತ ಹೋರಾಟ ನಡೆಯುವುದು ಅನಿವಾರ್ಯವಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

Follow Us:
Download App:
  • android
  • ios