ಪಠ್ಯ ಪರಿಷ್ಕರಣೆ ವಿವಾದ: ಅನುಮತಿ ಹಿಂಪಡೆದ ಇನ್ನೊಬ್ಬ ಸಾಹಿತಿ!
ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಪ್ರತಿಷ್ಠಾನದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ 9ನೇ ತರಗತಿಯ ಪಠ್ಯದಲ್ಲಿ ಅಳವಡಿಸಲಾದ ತಮ್ಮ ‘ಮನೆಗೆಲಸದ ಹೆಣ್ಣುಮಗಳು’ ಪದ್ಯವನ್ನು ಬೋಧಿಸಲು ನೀಡಿದ್ದ ಅನುಮತಿಯನ್ನು ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಹಿಂಪಡೆದಿದ್ದಾರೆ.
ಬೆಂಗಳೂರು (ಮೇ.31): ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಪ್ರತಿಷ್ಠಾನದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ 9ನೇ ತರಗತಿಯ ಪಠ್ಯದಲ್ಲಿ ಅಳವಡಿಸಲಾದ ತಮ್ಮ ‘ಮನೆಗೆಲಸದ ಹೆಣ್ಣುಮಗಳು’ ಪದ್ಯವನ್ನು ಬೋಧಿಸಲು ನೀಡಿದ್ದ ಅನುಮತಿಯನ್ನು ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಹಿಂಪಡೆದಿದ್ದಾರೆ. ಇತ್ತೀಚೆಗೆ ಸಾಹಿತಿ ದೇವನೂರ ಮಹಾದೇವ, ಜಿ.ರಾಮಕೃಷ್ಣ ಅವರು ಅನುಮತಿ ಹಿಂಪಡೆದಿದ್ದರು. ಸೋಮವಾರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಪತ್ರ ಬರೆದಿರುವ ಎಸ್.ಜಿ.ಸಿದ್ದರಾಮಯ್ಯ, ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಶಿಕ್ಷಣದ ಮೇಲಿನ ಕೋಮುವಾದೀಕರಣವನ್ನು ನೋಡಿದರೆ ಆತಂಕ ಮತ್ತು ಭಯ ಉಂಟಾಗುತ್ತಿದೆ.
ಪಠ್ಯ ಪರಿಷ್ಕರಣೆಯ ಅಸಂವಿಧಾನಿಕ ನಡವಳಿಕೆಗಳು ಶೈಕ್ಷಣಿಕ ವಾತಾವರಣದಲ್ಲಿ ಅನಾರೋಗ್ಯಕರ ಬೆಳವಣಿಗೆಗಳಾಗಿವೆ. ಕನ್ನಡ ಪರಂಪರೆಗೆ ದುಡಿದ ಮಹನೀಯರಿಗೆ ಮತ್ತು ಕನ್ನಡ ಪರಂಪರೆಗೆ ಧಕ್ಕೆ ಎಸಗುತ್ತಿರುವುದು ಕನ್ನಡ, ಕನ್ನಡಿಗ ಮತ್ತು ಕರ್ನಾಟಕಕ್ಕೆ ಎಸಗಿದ ದ್ರೋಹದ ಕೃತ್ಯವಾಗಿದೆ. ಈ ಹಿನ್ನೆಲೆಯಲ್ಲಿ ನನ್ನ ಒಂದು ಕವಿತೆ ‘ಮನೆಗೆಲಸದ ಹೆಣ್ಣುಮಗಳು’ 9ನೇ ತರಗತಿಯ ದ್ವಿತೀಯ ಭಾಷಾ ಪಠ್ಯವಾಗಿ ಸೇರಿದೆ. ಅದನ್ನು ಪಠ್ಯವಾಗಿ ಬೋಧಿಸಲು ನೀಡಿದ್ದ ಅನುಮತಿಯನ್ನು ಹಿಂಪಡೆದಿದ್ದೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
22 ಬ್ರಾಹ್ಮಣರ ಬರಹ ಸೇರಿಸಿದ್ದು ಬರಗೂರು: ರೋಹಿತ್ ಚಕ್ರತೀರ್ಥ
ತಮ್ಮ ಪಠ್ಯವನ್ನೂ ಸಹ ಕೈಬಿಡಿ ಎಂದ ಸಾಹಿತಿ ದೇವನೂರು ಮಹಾದೇವ: ಕರ್ನಾಟದಲ್ಲಿ ಬಿಜೆಪಿ ಸರ್ಕಾರದ ನೂತನ ಪಠ್ಯ ಪರಿಷ್ಕರಣೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇದಕ್ಕೆ ಸಾಹಿತಿ ದೇವನೂರು ಮಹಾದೇವ ಧ್ವನಿಗೂಡಿಸಿದ್ದು, ತಮ್ಮ ಪಠ್ಯಯನ್ನೂ ಸಹ ಕೈಬಿಡಬೇಕೆಂದಿದ್ದಾರೆ. ಈ ಬಗ್ಗೆ ದೇವನೂರು ಮಹಾದೇವ ಅವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಈ ಹಿಂದೆ ಪಠ್ಯಗಳಲ್ಲಿದ್ದ ಎಲ್.ಬಸವರಾಜು, ಎ.ಎನ್. ಮೂರ್ತಿರಾವ್, ಪಿ. ಲಂಕೇಶ್, ಸಾರಾ ಅಬೂಬಕರ್ ಮುಂತಾದವರ ಕತೆ, ಲೇಖನಗಳನ್ನು ಕೈ ಬಿಡಲಾಗಿದೆ ಎಂದರೆ, ಯಾರು ಕೈ ಬಿಟ್ಟಿದ್ದಾರೋ ಅವರಿಗೆ ಕನ್ನಡ ನಾಡು-ನುಡಿ-ಸಂಸ್ಕೃತಿ ಬಗ್ಗೆ ಏನನೂ ತಿಳಿದಿಲ್ಲ ಎಂತಲೇ ಅರ್ಥ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ತಮ್ಮ ಪಠ್ಯವನ್ನು ಕೈ ಬಿಡಲು ಆಗ್ರಹಿಸಿದ್ದಾರೆ.
ದೇವನೂರು ಮಹಾದೇವ ಬರೆದ ಪತ್ರ ಇಂತಿದೆ: ಪಠ್ಯ ಪರಿಷ್ಕರಣೆಯ ವಾದ ವಿವಾದಗಳು ನಡೆಯುತ್ತಿದೆ. ಹತ್ತನೇ ತರಗತಿ ಕನ್ನಡ ಪಠ್ಯಪುಸ್ತಕದಲ್ಲಿ ನನ್ನದೂ ಒಂದು ಕಥನ ಸೇರಿದೆ ಎನ್ನಲಾಗುತ್ತಿದೆ. ಪಠ್ಯದ ಪಿಡಿಎಫ್ ಬರಹಗಳನ್ನು ಇಲ್ಲ ಅಂತ, ಉಂಟು ಅಂತ, ಕೆಲವು ಸಲ ಸೇರಿದನ್ನು ಕೈ ಬಿಡುವುದು, ಮತ್ತೆ ಸೇರಿಸುವುದು ಇತ್ಯಾದಿ ಗಳಿಗೆಗಳಿಗೆಗೂ ಬದಲಾಗುತ್ತಿದೆ. ಇರಲಿ, ನನ್ನ ಕಥನದ ಭಾಗ ಪಠ್ಯದಲ್ಲಿ ಸೇರಿಸಿರದಿದ್ದರೆ ನನಗೆ ಹೆಚ್ಚು ಸಂತೋಷವಾಗುತ್ತದೆ. ಸೇರಿದರೆ ಅದಕ್ಕೆ ನನ್ನ ಒಪ್ಪಿಗೆ ಇಲ್ಲ ಎಂದು ಸ್ಪಷ್ಟ ಪಡಿಸುವುದಕ್ಕಾಗಿ ಈ ಪುಕಟಣೆ ನೀಡುತ್ತಿದ್ದೇನೆ. ಈ ಹಿಂದೆ ಹಳೇ ಪಠ್ಯಕ್ಕೆ ನೀಡಿದ ಅನುಮತಿಯನ್ನು ಹಿಂತೆಗೆದುಕೊಂಡಿದ್ದೇನೆ
ಯಾಕೆಂದರೆ, ಈ ಹಿಂದೆ ಪಠ್ಯಗಳಲ್ಲಿದ್ದ ಎಲ್.ಬಸವರಾಜು, ಎ.ಎನ್. ಮೂರ್ತಿರಾವ್, ಪಿ. ಲಂಕೇಶ್, ಸಾರಾ ಅಬೂಬಕರ್ ಮುಂತಾದವರ ಕತೆ, ಲೇಖನಗಳನ್ನು ಕೈ ಬಿಡಲಾಗಿದೆ ಎಂದರೆ, ಯಾರು ಕೈ ಬಿಟ್ಟಿದ್ದಾರೋ ಅವರಿಗೆ ಕನ್ನಡ ನಾಡು-ನುಡಿ-ಸಂಸ್ಕೃತಿ ಬಗ್ಗೆ ಏನನೂ ತಿಳಿದಿಲ್ಲ ಎಂತಲೇ ಅರ್ಥ. ಪಠ್ಯಪುಸ್ತಕ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರು ತನಗೆ ಲೇಖಕರ ಜಾತಿ ತಿಳಿದಿಲ್ಲ ಎನ್ನುತ್ತಾರೆ! ಭಾರತದಂತಹ ಸಂಕೀರ್ಣ ದೇಶದಲ್ಲಿ ಪ್ರಜ್ಞಾಪೂರ್ವಕವಾಗಿ ಜಾತಿಯನ್ನು ಗುರುತಿಸದಿದ್ದರೆ ಅಲ್ಲಿ ಸಹಜವಾಗಿ ಶೇ.90ರಷ್ಟು ಅವರ ಜಾತಿಯವರೇ ತುಂಬಿಕೊಳ್ಳುತ್ತಾರೆ. ಅವರವರ ಅಡಿಗೆ ಮನೆ ವಾಸನೆ ಪ್ರಿಯವಾಗುವಂತೆ.
ಪಠ್ಯ ಪುಸ್ತಕ ಪರಿಷ್ಕರಣೆ, ದಿನಕ್ಕೊಂದು ತಿರುವು: ಸಿಎಂ ಮಧ್ಯಪ್ರವೇಶಕ್ಕೆ ಸಾಹಿತಿಗಳ ಆಗ್ರಹ!
ಹೀಗಾಗಿ ಭಾರತದ ಬಹುತ್ವ, ಪಾರ್ಟಿಸಿಪೇಟರಿ ಪುಜಾಪ್ರಭುತ್ವ ಕಣ್ಮರೆಯಾಗುತ್ತಿದೆ. ಇದು ಈಗಿನದ್ದಲ್ಲ. ಡಾ. ಮುರಳಿ ಮನೋಹರ ಜೋಷಿಯವರು ಕೇಂದ್ರ ಶಿಕ್ಷಣ ಸಚಿವರಾಗಿದ್ದ ಕಾಲದಿಂದಲೂ ನಡೆದುಕೊಂಡು ಬಂದಿದೆ. ಚಾತುವರ್ಣ ಹಿಂದೂ ಪ್ರಭೇದದ ಆರೆಸ್ಸೆಸ್ ಸಂತಾನವಾದ ಬಿಜೆಪಿ ಆಳ್ವಿಕೆಯಲ್ಲಿ ಮೊದಲು ಕೈಹಾಕುವುದೇ ಶಿಕ್ಷಣ ಮತ್ತು ಇತಿಹಾಸಗಳ ಕುತ್ತಿಗೆಗೆ. ಇಲ್ಲೂ ಇದೇ ಆಗಿದೆ. ಈ ಪಠ್ಯಗಳಲ್ಲಾ ಪ್ರಕಟವಾದ ಮೇಲೆ ಅವುಗಳನ್ನು ಪರಿಶೀಲಿಸಿ, ಅಲ್ಲಿನ ತಪ್ಪು ಮತ್ತು ಕೊರತೆಗಳನ್ನು ತುಂಬಲು, ನಮ್ಮ ಶಾಲಾ ಮಕ್ಕಳಿಗೆ ಪರ್ಯಾಯ ಪಾಠಗಳನ್ನು, ಪೂರಕ ವಿಷಯಗಳನ್ನು ಮುಖ್ಯವಾಗಿ ಸಂವಿಧಾನವನ್ನು ಬಿತ್ತರಿಸುವ ವಾಟ್ಸಾಪ್, ಇ ಮೇಲ್ ಆನ್ಲೈನ್ ಕ್ಲಾಸ್ ಇತ್ಯಾದಿಗಳನ್ನು ರೂಪಿಸಲು ಆಲೋಚಿಸುತ್ತಿರುವ ನಾಡಿನ ಆರೋಗ್ಯವಂತ ಮನಸ್ಸುಗಳ ಜೊತೆ ನಾನಿರಲು ಬಯಸುತ್ತೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.