ಅಮ್ಮನ ಶವ ಮನೆಯಲ್ಲಿದ್ದರೂ ಪರೀಕ್ಷೆ ಬರೆದ ಯುವತಿ
* ಸ್ಫೂರ್ತಿಯ ಧೈರ್ಯ, ಶಿಕ್ಷಣ ಪ್ರೀತಿ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ
* ಬಿಎಸ್‌ಸಿ ಕೃಷಿ ಪದವಿಗೆ ಪ್ರವೇಶ ಪರೀಕ್ಷೆ ಬರೆದ ಯುವತಿ
* ಚಿಕಿತ್ಸೆ ಸ್ಪಂದಿಸದೇ ನಿಧನರಾಗಿದ್ದ ತಾಯಿ ಅನುರಾಧ
ಶಿವಮೊಗ್ಗ(ಜು.13): ಬೆಟ್ಟದಷ್ಟು ಪ್ರೀತಿ ನೀಡಿ, ಸಾಕಿ ಬೆಳೆಸಿದ ತಾಯಿಯ ಶವ ಮನೆಯಲ್ಲಿದ್ದರೂ ನೋವು ನುಂಗಿ ಯುವತಿಯೊಬ್ಬಳು ಬಿಎಸ್‌ಸಿ ಕೃಷಿ ಪದವಿಗೆ ಪ್ರವೇಶ ಪರೀಕ್ಷೆ ಬರೆದಿದ್ದಾರೆ. ಪರೀಕ್ಷಾ ಕೊಠಡಿಯಿಂದ ಹೊರಬರುತ್ತಿದ್ದಂತೆ ಮನದಲ್ಲಿ ಅದುಮಿಟ್ಟುಕೊಂಡಿದ್ದ ದುಃಖದ ಕಟ್ಟೆಯೊಡೆದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಹೊಸನಗರ ತಾಲೂಕಿನ ಕೋಡೂರು ಸಮೀಪದ ಶಾಂತಪುರದ ನಾಗರಾಜ್ ಮತ್ತು ಅನುರಾಧ ದಂಪತಿಯ ಪುತ್ರಿ ಸ್ಫೂರ್ತಿ ಪದವಿ ಪ್ರವೇಶ ಪರೀಕ್ಷೆ ಬರೆದ ವಿದ್ಯಾರ್ಥಿನಿ. ಶಿವಮೊಗ್ಗದ ಮಹೇಶ್ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಮುಗಿಸಿದ್ದ ಸ್ಫೂರ್ತಿ ಬಿಎಸ್‌ಸಿ ಕೃಷಿ ಪದವಿ ಮಾಡುವ ಇಚ್ಛೆ ಹೊಂದಿದ್ದರು. ಈ ಮಧ್ಯೆ ತಾಯಿ ಅನುರಾಧ ತೀವ್ರ ರಕ್ತದೊತ್ತಡದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಅವರನ್ನು ಸೋಮವಾರ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಕರೆತರಲಾಗಿತ್ತು. ಚಿಕಿತ್ಸೆ ಸ್ಪಂದಿಸದೇ ಅವರು ನಿಧನರಾಗಿದ್ದಾರೆ. ಮನೆಗೆ ಅವರ ಶವ ತರಲಾಗಿತ್ತು. ಆದರೂ ಸ್ಫೂರ್ತಿ ಶಿಕ್ಷಣದ ಹಂಬಲದಿಂದ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಪರೀಕ್ಷೆ ಬರೆದು ಮಾದರಿಯಾಗಿದ್ದಾರೆ.
ಕಲಿಕೆಗೆ ಬೆಳಕು ನೀಡಿದ ಸೂರ್ಯ: ವಸತಿ ಶಾಲೆಯಲ್ಲಿ ಸೋಲಾರ್‌ನಿಂದ ಸ್ಮಾರ್ಟ್ ಕ್ಲಾಸ್
ಮಂಗಳವಾರ ಬೆಳಗ್ಗೆ ಬಿಎಸ್‌ಸಿ ಕೃಷಿ ಪದವಿಗೆ ಕೃಷಿ ಕೋಟಾದಲ್ಲಿ ಪ್ರವೇಶ ಪಡೆಯಲು ಪ್ರಾಯೋಗಿಕ ಪರೀಕ್ಷೆ ಇತ್ತು. ಅನುರಾಧ ಅವರ ಶವ ಮನೆಯಲ್ಲಿದ್ದರೂ ಮಗಳು ಸ್ಫೂರ್ತಿ ಇಚ್ಛೆಯಂತೆ ಕುಟುಂಬದವರು ಪರೀಕ್ಷೆಗೆ ಕಳುಹಿಸಿದ್ದಾರೆ. ಶಿವಮೊಗ್ಗದ ಕೃಷಿ ಕಾಲೇಜಿನಲ್ಲಿ ಬೆಳಗ್ಗೆ 9 ಗಂಟೆಗೆ ಪರೀಕ್ಷಾ ಕೇಂದ್ರಕ್ಕೆ ಬಂದ ಸ್ಫೂರ್ತಿ ಪರೀಕ್ಷೆ ಮುಗಿಸಿ ನಂತರ ಅಮ್ಮನ ಶವಸಂಸ್ಕಾರದಲ್ಲಿ ಭಾಗಿಯಾಗಿದರು. ಅಮ್ಮನ ಶವ ಮನೆಯಲ್ಲಿದ್ದರೂ ಪರೀಕ್ಷೆ ಬರೆದ ಸ್ಫೂರ್ತಿಯ ಧೈರ್ಯ, ಶಿಕ್ಷಣ ಪ್ರೀತಿ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.