ಉಕ್ರೇನ್ ವೈದ್ಯ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಶೀಘ್ರ ಪರಿಹಾರ: ಕೇಂದ್ರ ಸಚಿವ ಜೈಶಂಕರ್
ನಾವು ಉಕ್ರೇನ್ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದು, ಅಲ್ಲಿನ ವಿದೇಶಾಂಗ ಸಚಿವರೊಡನೆ ಮಾತುಕತೆ ನಡೆಸಿ ಭಾರತೀಯ ವಿದ್ಯಾರ್ಥಿಗಳ ಬಗ್ಗೆ ಗಮನ ಸೆಳೆದಿದ್ದೇನೆ ಎಂದ ಜೈಶಂಕರ್
ರಾಮನಗರ(ಆ.14): ಉಕ್ರೇನ್ ವೈದ್ಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ದೇಶಕ್ಕೆ ಕರೆತರುವುದನ್ನು ಯಶಸ್ವಿಯಾಗಿ ನಿರ್ವಹಿಸಿದ್ದೇವೆ. ಈಗ ಅವರ ವ್ಯಾಸಂಗ ಕುರಿತು ಭಾರತೀಯ ಮೆಡಿಕಲ್ ಕೌನ್ಸಿಲ್, ಕೇಂದ್ರ ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆಗಳು ಗಮನ ಹರಿಸುತ್ತಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ತಿಳಿಸಿದರು. ಸುದ್ದಿಗೋಷ್ಠಿ ನಡೆಸಿದ ಅವರು, ಉಕ್ರೇನ್ ನಿಂದ ಮರಳಿರುವ ವಿದ್ಯಾರ್ಥಿಗಳ ಶಿಕ್ಷಣದ ಸವಾಲು ಎದುರಾಗಿದೆ. ವೈದ್ಯಕೀಯ ಶಿಕ್ಷಣದಲ್ಲಿ ಅಂತಿಮ ಹಂತದಲ್ಲಿರುವ ವಿದ್ಯಾರ್ಥಿಗಳಿಗೆ ಪ್ರಾಕ್ಟಿಕಲ್ ತರಬೇತಿ ಬೇಕಾಗಿದೆ. ನಾವು ಉಕ್ರೇನ್ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದು, ಅಲ್ಲಿನ ವಿದೇಶಾಂಗ ಸಚಿವರೊಡನೆ ಮಾತುಕತೆ ನಡೆಸಿ ಭಾರತೀಯ ವಿದ್ಯಾರ್ಥಿಗಳ ಬಗ್ಗೆ ಗಮನ ಸೆಳೆದಿದ್ದೇನೆ ಎಂದರು.
ಈ ವಿದ್ಯಾರ್ಥಿಗಳ ವ್ಯಾಸಂಗದ ಬಗ್ಗೆ ಪರ್ಯಾಯ ಮಾರ್ಗಗಳ ಬಗ್ಗೆಯೂ ಅವಲೋಕನ ನಡೆಯುತ್ತಿದೆ. ಆದರೆ, ಅದು ಸುಲಭವಲ್ಲ. ಹಲವಾರು ನಿಯಮಗಳನ್ನು ಗಮನಿಸಬೇಕಾಗಿದೆ. ಕೆಲವು ವಿದ್ಯಾರ್ಥಿಗಳು ಸುಪ್ರೀಂ ಕೋರ್ಟಿನ ಮೊರೆ ಹೋಗಿರುವ ಬಗ್ಗೆ ತಮ್ಮ ಗಮನಕ್ಕಿದೆ ಎಂದರು.
Russia-Ukraine War: ಅತಂತ್ರರಾದ ವಿದ್ಯಾರ್ಥಿಗಳ ನೆರವಿಗೆ ಬಂದ ಸಿದ್ಧಗಂಗಾ ಮಠ
ಭಾರತದಲ್ಲಿ ಆ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಮುಂದುವರೆಸಲು ಅವಕಾಶ ಸಿಗಬಹುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಭಾರತೀಯ ಮೆಡಿಕಲ್ ಕೌನ್ಸಿಲ್, ಆರೋಗ್ಯ ಮತ್ತು ಶಿಕ್ಷಣ ಸಚಿವಾಲಯಗಳು ಈ ವಿಚಾರದಲ್ಲಿ ಚಿಂತನೆಗಳನ್ನು ನಡೆಸುತ್ತಿವೆ. ಕೇಂದ್ರ ಸರ್ಕಾರವೂ ಈ ವಿದ್ಯಾರ್ಥಿಗಳು ಎದುರಿಸುತ್ತಿರುವ ಸವಾಲುಗಳ ನಿವಾರಣೆಗೆ ಗಮನ ಕೇಂದ್ರೀಕರಿಸಿದೆ.
ಎಲ್ಲ ಆಯಾಮಗಳಲ್ಲಿಯೂ ವಿದ್ಯಾರ್ಥಿಗಳ ಬಗ್ಗೆ ಚಿಂತನೆ ನಡೆಯುತ್ತಿದೆ. ಶೀಘ್ರದಲ್ಲಿ ಎಲ್ಲ ಸಮಸ್ಯೆಗಳನ್ನು ಪರಿಹರಿಸುತ್ತೇವೆ. ನಮ್ಮ ದೇಶದಲ್ಲಿಯೇ ಓದುವ ಅವಕಾಶ ನೀಡುವ ಬಗ್ಗೆಯೂ ಕಾನೂನಿನ ಅಧ್ಯಯನ ನಡೆಯುತ್ತಿದೆ. ಎಲ್ಲರೂ ಸರ್ಕಾರದ ನೀತಿಗಳ ಬಗ್ಗೆಯೂ ತಿಳಿದುಕೊಳ್ಳಬೇಕಾಗಿದೆ. ಸುಪ್ರಿಂ ಕೋರ್ಟ್ ಏನು ಹೇಳುತ್ತದೆ ಎಂಬ ಬಗ್ಗೆಯೂ ಕಾದು ನೋಡಬೇಕಾಗಿದೆ ಎಂದು ಹೇಳಿದರು.
ಉಕ್ರೇನ್- ರಷ್ಯಾ ಯುದ್ಧ: ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಸುತ್ತೂರು ಮಠ ಆಸರೆ
ಪ್ರತಿ ನೂರು ಕಿಮೀಗೆ ಒಂದು ವಿಮಾನ ನಿಲ್ದಾಣ ಇರಬೇಕು ಎಂಬುದು ಪ್ರಧಾನಿ ಮೋದಿ ಆಶಯ, ಈ ಬಗ್ಗೆ ಸಂಬಂಧಿಸಿದ ಸಚಿವಾಲಯ ಕಾರ್ಯೋನ್ಮುಖವಾಗಿರುತ್ತದೆ. ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಅವರು ವಿಮಾನ ನಿಲ್ದಾಣಗಳಲ್ಲಿನ ಒತ್ತಡ ಕಡಿಮೆ ಮಾಡುವ ವಿಚಾರದ ಬಗ್ಗೆ ಗಮನ ಹರಿಸಿರುತ್ತಾರೆ ಎಂಬ ವಿಶ್ವಾಸವಿದೆ. ತಾವು ದೆಹಲಿಗೆ ಹಿಂದಿರುಗಿದ ನಂತರ ಬೆಂಗಳೂರು ವಿಮಾನ ನಿಲ್ದಾಣದ ಬಗ್ಗೆ ಪ್ರಸ್ತಾಪಿಸುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಭಾರತದ ಲೇಖಕ ಸಲ್ಮಾನ್ ರಷ್ದಿ ಮೇಲೆ ಅಮೇರಿಕಾದಲ್ಲಿ ಹಲ್ಲೆ ನಡೆದಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ಇಡೀ ವಿಶ್ವ ಈ ಹಲ್ಲೆಯನ್ನು ಖಂಡಿಸಿದೆ. ಬೆಳಗ್ಗೆಯಿಂದ ನಾನು ರಾಮನಗರದಲ್ಲೇ ಇದ್ದೇನೆ. ಈ ಬಗ್ಗೆ ಉಭಯ ರಾಷ್ಟದೊಂದಿಗೆ ಮಾತನಾಡುತ್ತೇನೆ ಎಂದರು.
ಬಿಜೆಪಿ ನೇತೃತ್ವದ ಸರ್ಕಾರ ಹಾಗೂ ಹಿಂದಿನ ಸರ್ಕಾರಗಳ ಆಡಳಿತವನ್ನು ಜನರು ಗಮನಿಸಿದ್ದಾರೆ. ಕಳೆದ 8 ವರ್ಷಗಳ ಆಡಳಿತದಲ್ಲಿ ವ್ಯತ್ಯಾಸವೇನು ಎಂಬುದರ ಬಗ್ಗೆ ತಿಳಿದುಕೊಂಡಿದ್ದಾರೆ. ಈ ವ್ಯತ್ಯಾಸವನ್ನು ನಾನು ಹೇಳಿದರೆ ಯಾರೂ ನಂಬವುದಿಲ್ಲ. ಆದರೆ, ವಿವಿಧ ಕಾರ್ಯಕ್ರಮಗಳು, ಯೋಜನೆಗಳಿಂದ ತಮ್ಮ ಜೀವನದಲ್ಲಿ ಆದ ಪರಿವರ್ತನೆ ಮತ್ತು ಪ್ರಗತಿಯ ಬಗ್ಗೆ ಫಲಾನುಭವಿಗಳು ವ್ಯಕ್ತಪಡಿಸಿರುವ ಅನಿಸಿಕೆಗಳು ಮೋದಿ ಸರ್ಕಾರ ಮತ್ತು ಇತರ ಸರ್ಕಾರಗಳ ನಡುವಿನ ವ್ಯತ್ಯಾಸವನ್ನು ಕಾಣಬಹುದು. ಮೋದಿ ಆಡಳಿತದಲ್ಲಿ ಇಡೀ ದೇಶವೇ ಅಭಿವೃದ್ಧಿ ಕಾಣುತ್ತಿದೆ. ಅವರ ಮೂಲಕ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಸೇರಿದಂತೆ ಇಡೀ ದೇಶದಲ್ಲೆ ಗೆಲುವು ಸಾಧಿಸುತ್ತೆವೆ. ತಮ್ಮ ಭೇಟಿ ರಾಜಕೀಯ ಉದ್ದೇಶದಿಂದ ಕೂಡಿಲ್ಲ ಅಂತ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ತಿಳಿಸಿದ್ದಾರೆ.