ಕರ್ನಾಟಕದ ಏಳು ಹೊಸ ವಿಶ್ವವಿದ್ಯಾಲಯಗಳ ಸ್ಥಿತಿ ಅತಂತ್ರ..!
ಈ ಏಳು ವಿವಿಗಳ ವೇತನಕ್ಕಾಗಿ ತಲಾ ಒಂದು ಕೋಟಿ ರು. ಮಂಜೂರು ಮಾಡಲಾಗಿದೆ ಎಂದು ಆದೇಶ ಹೊರಡಿಸಲಾಗಿದೆ. ಆದರೆ, ಈವರೆಗೆ ಕೆಲವು ವಿವಿಗಳಿಗೆ ಈ ಹಣವೇ ಬಂದಿಲ್ಲ. ಕುಲಪತಿಗಳಿಗೆ ವೇತನ ಪಾವತಿಯಾಗಿಲ್ಲ.
ಅಂಶಿ ಪ್ರಸನ್ನಕುಮಾರ್
ಮೈಸೂರು(ಮಾ.09): ಅತ್ತ ಅನುದಾನವನ್ನೂ ನೀಡುತ್ತಿಲ್ಲ, ಇತ್ತ ವಿಲೀನವನ್ನೂ ಮಾಡುತ್ತಿಲ್ಲ...!. ಇದು ರಾಜ್ಯದಲ್ಲಿ ಆರಂಭವಾಗಿರುವ ಏಳು ಹೊಸ ವಿಶ್ವವಿದ್ಯಾನಿಲಯಗಳ ಪರಿಸ್ಥಿತಿ. ಈ ವಿವಿಗಳದ್ದು ಅತ್ತ ಧರಿ, ಇತ್ತ ಪುಲಿ ಎಂಬಂತಾಗಿದೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ 2022-23ನೇ ಸಾಲಿನಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಆಯವ್ಯಯದಲ್ಲಿ ಚಾಮರಾಜನಗರ, ಬೀದರ್, ಹಾವೇರಿ, ಹಾಸನ, ಕೊಡಗು, ಕೊಪ್ಪಳ, ಬಾಗಲಕೋಟೆ ಜಿಲ್ಲೆಗಳಲ್ಲಿ ವಿನೂತನ ಮಾದರಿಯ ಹೊಸ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸುವುದಾಗಿ ಪ್ರಕಟಿಸಿದರು. ಸಾಂಪ್ರದಾಯಿಕ ವಿವಿಗಳಿಂದ ಭಿನ್ನವಾಗಿ ತಂತ್ರಜ್ಞಾನದ ಗರಿಷ್ಠ ಬಳಕೆಯೊಂದಿಗೆ ಇವುಗಳನ್ನು ಸ್ಥಾಪಿಸಲಾಗುವುದು ಎಂದಿದ್ದರು. ಅದರಂತೆ 2022ರ ಏ.18 ಹಾಗೂ 2022 ರ ನ.11 ರಂದು ಸರ್ಕಾರಿ ಆದೇಶವಾಯಿತು.
ಆದರೆ, ನಂತರ ವಿಧಾನಸಭಾ ಚುನಾವಣೆ ನಡೆದು, ಬಿಜೆಪಿ ಸರ್ಕಾರ ಹೋಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂತು. ಅಂದಿನಿಂದಲೂ ಈ ವಿವಿಗಳಿಗೆ ಕೊಡಲು ಹಣವಿಲ್ಲ, ಆದ್ದರಿಂದ ಮುಚ್ಚಲಾಗುವುದು ಅರ್ಥಾತ್ ಹಿಂದಿನ ವಿವಿಗಳ ಜೊತೆ ವಿಲೀನಗೊಳಿಸಲಾಗುವುದು ಎಂಬರ್ಥದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಹೇಳಿಕೊಂಡು ಬಂದಿದ್ದಾರೆ.
ಮುಂದಿನ ವರ್ಷವೇ 'ವಚನ ವಿಶ್ವವಿದ್ಯಾಲಯ' ಸ್ಥಾಪನೆ: ಸಿಎಂ ಘೋಷಣೆ
ಈ ಏಳು ವಿವಿಗಳ ವೇತನಕ್ಕಾಗಿ ತಲಾ ಒಂದು ಕೋಟಿ ರು. ಮಂಜೂರು ಮಾಡಲಾಗಿದೆ ಎಂದು ಆದೇಶ ಹೊರಡಿಸಲಾಗಿದೆ. ಆದರೆ, ಈವರೆಗೆ ಕೆಲವು ವಿವಿಗಳಿಗೆ ಈ ಹಣವೇ ಬಂದಿಲ್ಲ. ಕುಲಪತಿಗಳಿಗೆ ವೇತನ ಪಾವತಿಯಾಗಿಲ್ಲ.
ಈ ವಿವಿಗಳ ಕುಲಪತಿ, ಕುಲಸಚಿವರ ಓಡಾಟಕ್ಕೆ ಯಾವುದೇ ವಾಹನ ವ್ಯವಸ್ಥೆ ಇಲ್ಲ. ಸಿಬ್ಬಂದಿ ವರ್ಗದವರ ವೇತನ, ಸೆಮಿಸ್ಟರ್ ಪರೀಕ್ಷೆ, ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಲು ಸಾದ್ವಿಲಾರು ವೆಚ್ಚ ಅಥವಾ ಯಾವುದೇ ಪರೀಕ್ಷಾ ಮಂಡಳಿ, ಅಧ್ಯಯನ ಮಂಡಳಿ ಸಭೆಗಳ ವೆಚ್ಚ ಸೇರಿದಂತೆ ದೈನಂದಿನ ಖರ್ಚು- ವೆಚ್ಚಗಳಿಗೆ ಒಂದು ರು.ಕೂಡ ನೀಡಿಲ್ಲ. ಈ ವೆಚ್ಚಗಳನ್ನು ತಮ್ಮ ಸ್ವಂತ ಜೇಬಿನಿಂದ ಭರಿಸುತ್ತಿರುವ ಕುಲಪತಿಗಳು ಇತ್ತ ವೇತನವೂ ಅತ್ತ ಅನುದಾನವೂ ಇಲ್ಲದೇ ಹೈರಣಾಗಿ ಹೋಗಿದ್ದಾರೆ.
ವಿಧಾನ ಮಂಡಲದ ಉಭಯ ಸದನಗಳಲ್ಲಿ ಮಂಡಿಸಿ, ಒಪ್ಪಿಗೆ ಪಡೆದು ಏಳು ವಿವಿಗಳನ್ನು ಸ್ಥಾಪಿಸಲಾಗಿದೆ. ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗ [ಯುಜಿಸಿ] ಅನುಮೋದನೆಯೂ ಸಿಕ್ಕಿದೆ. ಹೀಗಿರುವಾಗ ಹಿಂದಿನ ಬಿಜೆಪಿ ಸರ್ಕಾರ ಸ್ಥಾಪಿಸಿದೆ ಹಾಗೂ ತಮಗೆ ಬೇಕಾದವರನ್ನು ಕುಲಪತಿಗಳಾಗಿ ನೇಮಕ ಮಾಡಿದೆ ಎಂಬ ಏಕೈಕ ಕಾರಣದಿಂದ ಈ ರೀತಿ ಮಾಡುತ್ತಿರುವುದು ಕಾರ್ಯಸಾಧುವಲ್ಲ. ಹೊಸ ವಿವಿ ಸ್ಥಾಪಿಸುವುದು ಎಷ್ಟು ಕಷ್ಟವೋ, ಮುಚ್ಚುವುದು ಕೂಡ ಅಷ್ಟೇ ಕಷ್ಟ. ಇದೊಂದು ದ್ವೇಷದ ನಡೆ, ಜೊತೆಗೆ ಶೈಕ್ಷಣಿಕವಾಗಿಯೂ ಸಾಕಷ್ಟು ಗೊಂದಲಗಳಿಗೆ ಕಾರಣವಾಗಲಿದೆ ಎಂಬುದು ಶಿಕ್ಷಣತಜ್ಞರ ಅಭಿಮತ
ಮೈಸೂರು ವಿವಿ ಘಟಿಕೋತ್ಸವ: ಮಾಜಿ ಸಿಎಂ ಎಸ್ ಎಂ ಕೃಷ್ಣ ಸೇರಿದಂತೆ ನಾಲ್ವರಿಗೆ ಗೌರವ ಡಾಕ್ಟರೇಟ್ ಪ್ರದಾನ
ಈ ಮೊದಲು ಮೈಸೂರು ವಿವಿ ಅಧೀನದಲ್ಲಿದ್ದ ಮಂಡ್ಯದ ತೂಬಿನಕೆರೆಯ ಸರ್ ಎಂ.ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರ 2022 ರಲ್ಲಿ ಮಂಡ್ಯ ವಿವಿಗೆ ಸೇರ್ಪಡೆಯಾಗಿದೆ. ಅಲ್ಲಿ ಕೆಲಸ ಮಾಡುತ್ತಿದ್ದ 32 ಬೋಧಕೇತರ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯಲಾಗಿದೆ. ಮಂಡ್ಯ ವಿವಿ ಮೇಲೆ ಮೈಸೂರು ವಿವಿಯವರು, ಮೈಸೂರು ವಿವಿಯ ಮೇಲೆ ಮಂಡ್ಯ ವಿವಿಯವರು ಹೇಳಿಕೊಂಡು ಈ ನೌಕರರನ್ನು ಬೀದಿಪಾಲು ಮಾಡಿದ್ದಾರೆ. ಇದೊಂದು ನಿದರ್ಶನ ಮಾತ್ರ.
ಉನ್ನತ ಶಿಕ್ಷಣ ಸಚಿವರು ತಮಗೂ, ಏಳು ಹೊಸ ವಿವಿಗಳ ಗೊಂದಲಕ್ಕೂ ಸಂಬಂಧವೇ ಇಲ್ಲ ಎಂಬಂತೆ ಎಲ್ಲವನ್ನು ಮುಖ್ಯಮಂತ್ರಿ ಅವರ ಮೇಲೆ ಹಾಕಿ ನಿಶ್ಚಿಂತೆಯಿಂದ ಇದ್ದಾರೆ. ಆದ್ದರಿಂದ ಸಿದ್ದರಾಮಯ್ಯ ಅವರು ತಕ್ಷಣ ಗಮನಹರಿಸಿ, ಹೊಸ ವಿವಿಗಳಿಗೆ ಅನುದಾನ ನೀಡಬೇಕು. ಸಿಬ್ಬಂದಿ ವರ್ಗದವರಿಗೆ ಆಪ್ಟ್ ಇನ್ ಅಥವಾ ಆಪ್ಟ್ ಔಟ್ ಆದೇಶ ನೀಡಬೇಕು. ಆ ಮೂಲಕ ಹೊಸ ವಿವಿಗಳು ಸರಿಯಾಗಿ ಕೆಲಸ ಮಾಡುವ ವಾತಾವರಣ ಸೃಷ್ಟಿಸಬೇಕು ಎಂಬುದು ಶಿಕ್ಷಣತಜ್ಞರ ಆಗ್ರಹ.
ಮುಂದಿನ ವರ್ಷದಿಂದ ವಚನ ವಿಶ್ವವಿದ್ಯಾಲಯ ಆರಂಭಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಕಟಿಸಿದ್ದಾರೆ. ವಚನ ವಿವಿ ಇರಲಿ, ನಿಮಗೆ ನಿಜವಾಗಲೂ ಶೈಕ್ಷಣಿಕ ಕ್ಷೇತ್ರದ ಬಗ್ಗೆ ಕಾಳಜಿ ಇದ್ದಲ್ಲಿ ಮೊದಲು ಈ ಏಳು ಹೊಸ ವಿವಿಗಳ ಸಮಸ್ಯೆ ಬಗೆಹರಿಸಿ, ಗೊಂದಲ ನಿವಾರಿಸಿ. ಆ ಮೂಲಕ ಅಧ್ಯಾಪಕರು, ಅಧ್ಯಾಪಕೇತರರು ಹಾಗೂ ವಿದ್ಯಾರ್ಥಿಗಳಿಗೆ ನೆಮ್ಮದಿಯ ಗ್ಯಾರಂಟಿ ನೀಡಿ ಎಂದು ಹೆಸರು ಹೇಳಲಿಚ್ಚಿಸದ ಪ್ರಾಧ್ಯಾಪಕರು ತಿಳಿಸಿದ್ದಾರೆ.