*   ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಘೋಷಣೆ*  8, 9 ತರಗತಿ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಒಟ್ಟಾರೆ ಶೇ. 50ರಷ್ಟು ತರಗತಿ ನಡೆಸಲು ಅನುಮತಿ*  ಕೋವಿಡ್‌ ಗುಣ ಲಕ್ಷಣಗಳಿರುವ ಮಕ್ಕಳನ್ನು ಪಾಲಕರು ಶಾಲಾ ಕಾಲೇಜುಗಳಿಗೆ ಕಳುಹಿಸಿ ಕೊಡಬಾರದು 

ಕಾರವಾರ(ಜ.21): ಜಿಲ್ಲೆಯ ಯಲ್ಲಾಪುರ, ದಾಂಡೇಲಿ, ಶಿರಸಿ, ಹೊನ್ನಾವರ, ಕುಮಟಾ ತಾಲೂಕಿನ 9 ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ ಕೋವಿಡ್‌(Covid-19) ಸೋಂಕು ಕಂಡುಬಂದ ಹಿನ್ನೆಲೆಯಲ್ಲಿ ಜ. 25ರ ತನಕ ಆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ತಿಳಿಸಿದ್ದಾರೆ.

ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಲ್ಲಾಪುರದ ಮದರ ಥೆರಸಾ ಪ್ರೌಢ ಶಾಲೆಯಲ್ಲಿ 5, ದಾಂಡೇಲಿಯ ಎಸ್‌.ಎಚ್‌. ಸೂರಗಾವಿ ಇಂಟರ್‌ ನ್ಯಾಶನಲ್‌ ಸ್ಕೂಲ್‌ನಲ್ಲಿ 10, ಬಿ.ಸಿ. ಕಾಲೋನಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ 9 ಹಾಗೂ ಕಿರಿಯ ಪ್ರಾಥಮಿಕ ಶಾಲೆ ಆಡಿಟ್‌ ನಂ 2ರಲ್ಲಿ 5, ಮತ್ತು ಜನತಾ ವಿದ್ಯಾಲಯ ಪ್ರೌಢ ಶಾಲೆಯಲ್ಲಿ 10, ಶಿರಸಿಯ ಮಾರಿಕಾಂಬಾ ಪ್ರೌಢ ಶಾಲೆಯಲ್ಲಿ 20, ಹೊನ್ನಾವರದ ಹೊಲಿರೋಸರಿ ಕಾನ್ವೆಂಟ್‌ ಪ್ರೌಢ ಶಾಲೆಯಲ್ಲಿ 20, ಇಡಗುಂಜಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ 19, ಹೊದ್ಕೆಶಿರೂರನ ಸರ್ಕಾರಿ ಪ್ರೌಢ ಶಾಲೆಯಲ್ಲಿ 10, ಕುಮಟಾ ತಾಲೂಕಿನ ಸಂತೆಗುಳಿ ಕರ್ನಾಟಕ ಪಬ್ಲಿಕ್‌ ಪ್ರೌಢ ಶಾಲೆಯಲ್ಲಿನ 7 ವಿದ್ಯಾರ್ಥಿಗಳಿಗೆ(Students) ಕೊರೋನಾ(Coronavirus) ದೃಢಪಟ್ಟಿದೆ.

Guest Lecturers: ಅತಿಥಿ ಉಪನ್ಯಾಸಕ ಹುದ್ದೆಗೆ ಅರ್ಜಿಗಳ ಮಹಾಪೂರ

ಈ ಹಿನ್ನೆಲೆಯಲ್ಲಿ ಮೇಲ್ಕಾಣಿಸಿದ ಶಾಲೆಗಳಿಗೆ(Schools) ಒಂದು ವಾರ ಅಂದರೆ ಜ. 25ರ ವರೆಗೆ 1ರಿಂದ 7 ತರಗತಿಯವರೆಗೆ ರಜೆ ನೀಡಲಾಗುತ್ತಿದೆ. 8, 9 ತರಗತಿ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಒಟ್ಟಾರೆ ಶೇ. 50ರಷ್ಟು ತರಗತಿಗಳನ್ನು ನಡೆಸಲು ಅನುಮತಿ ನೀಡಲಾಗಿದೆ, ಕೋವಿಡ್‌ ಗುಣ ಲಕ್ಷಣಗಳಿರುವ ಮಕ್ಕಳನ್ನು ಪಾಲಕರು ಶಾಲಾ ಕಾಲೇಜುಗಳಿಗೆ ಕಳುಹಿಸಿ ಕೊಡಬಾರದು ಎಂದು ಅವರು ತಿಳಿಸಿದರು.

15ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ(Vaccine) ನೀಡುವುದರಲ್ಲಿ ಸರಕಾರದ ನಿಯಮಾವಳಿಯಂತೆ ಜಿಲ್ಲೆಯಲ್ಲಿ ಶೇ.82ರಷ್ಟು ಲಸಿಕಾಕರಣವಾಗಿದೆ. ಜಿಲ್ಲೆಯ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ನೋಡಿದಲ್ಲಿ ಶೇ 90ರಷ್ಟು ಲಸಿಕೆ ನೀಡಲಾಗಿದೆ. ಕೇವಲ ಭಟ್ಕಳದಲ್ಲಿ ಲಸಿಕೆ ಪ್ರಮಾಣ ಕಡಿಮೆಯಿದ್ದು ಅಲ್ಲಿ ಕೂಡ ಮನವೊಲಿಸಿ ಲಸಿಕೆ ಹಾಕುವ ಮೂಲಕ 15ರಿಂದ 18 ವರ್ಷದ ಮಕ್ಕಳ ಲಸಿಕೆ ನೀಡುವಿಕೆಯಲ್ಲಿ ಶೇ.100 ರಷ್ಟು ಗುರಿ ಸಾಧಿಸಲಾಗುವುದು ಎಂದರು.
ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಹೆಚ್‌. ಕೆ. ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರದ ನಾಯಕ, ಡಾ. ರಮೇಶ ರಾವ ಇದ್ದರು.

ದಾಂಡೇಲಿ ನಗರ ಪ್ರದೇಶದಲ್ಲಿ 1ರಿಂದ 8ನೇ ತರಗತಿ ತನಕ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಜ. 20ರಿಂದ ಜ. 26ರ ತನಕ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ. ದಾಂಡೇಲಿ ನಗರದ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳಲ್ಲಿ ಶೇ.50ರ ಹಾಜರಾತಿಯಲ್ಲಿ ತರಗತಿಗಳು ನಡೆಯಲಿವೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

Covid 19: ಜನವರಿ 24 ರಿಂದಲೇ ಶಾಲೆಗಳು ಆರಂಭ ಸಾಧ್ಯತೆ, ಮುಖ್ಯಮಂತ್ರಿ ನೇತೃತ್ವದ ಸಭೆಯ ಬಳಿಕ ನಿರ್ಧಾರ

56 ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್‌

ಉತ್ತರ ಕನ್ನಡ(Uttara Kannada) ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳ 56 ವಿದ್ಯಾರ್ಥಿಗಳಲ್ಲಿ ಕೊರೋನಾ ಪಾಸಿಟಿವ್‌ ದೃಢಪಟ್ಟಿದೆ.

ಶಾಲೆಗಳು ಹಾಗೂ ಕೊರೋನಾ ಪಾಸಿಟಿವ್‌ ಖಚಿತಪಟ್ಟ ವಿದ್ಯಾರ್ಥಿಗಳ ವಿವರ ಹೀಗಿದೆ.

ಶಿರಸಿಯ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆ 22, ಚೈತನ್ಯ ಪಿಯು ಕಾಲೇಜ್‌ 14, ದಾಂಡೇಲಿ ಸೋರಗಾವಿ ಇಂಟರ್‌ ನ್ಯಾಶನಲ್‌ ಸ್ಕೂಲ್‌ 9, ದಾಂಡೇಲಿ ಎಚ್‌ಕೆಪಿ ಸ್ಕೂಲ್‌ 9, ಅಂಕೋಲಾ ಜಿಸಿ ಪಿಯು ಕಾಲೇಜ್‌ 6, ದಾಂಡೇಲಿ ಜೆವಿಡಿ ಇಂಗ್ಲಿಷ್‌ ಮೀಡಿಯಂ ಸ್ಕೂಲ್‌ 6, ಪ್ರಾಥಮಿಕ ಶಾಲೆ ಕೆರವಾಡ 5, ದಾಂಡೇಲಿ ಜೆವಿಡಿ ಕನ್ನಡ ಪ್ರಾಥಮಿಕ ಶಾಲೆ 7, ದಾಂಡೇಲಿ ತೌಹಿದ್‌ ಕಾಮರ್ಸ್‌ ಕಾಲೇಜ್‌ 3, ಶಾರದಾಂಬಾ ಹೈಸ್ಕೂಲ್‌ ಸಂಶಿ ಹೊನ್ನಾವರ 3 ಹಾಗೂ ಮುಂಡಗೋಡ ಕಲ್ಲೇಬೈಲ್‌ ಪ್ರಾಥಮಿಕ ಶಾಲೆ 3 ವಿದ್ಯಾರ್ಥಿಗಳು ಕೊರೋನಾ ಸೋಂಕಿತರಾಗಿದ್ದಾರೆ.