Guest Lecturers: ಅತಿಥಿ ಉಪನ್ಯಾಸಕ ಹುದ್ದೆಗೆ ಅರ್ಜಿಗಳ ಮಹಾಪೂರ
* ಅತಿಥಿ ಉಪನ್ಯಾಸಕ ಹುದ್ದೆಗೆ ಅರ್ಜಿಗಳ ಮಹಾಪೂರ
* ಗುರುವಾರದವರೆಗೆ 30 ಸಾವಿರಕ್ಕೂ ಹೆಚ್ಚು ಅರ್ಹ ಅಭ್ಯರ್ಥಿಗಳು ಆನ್-ಲೈನ್ ಮೂಲಕ ಅರ್ಜಿ
* ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ಮಾಹಿ
ಬೆಂಗಳೂರು, (ಜ.20): 2021-22ನೇ ಶೈಕ್ಷಣಿಕ ಸಾಲಿಗೆ ಅನ್ವಯವಾಗುವಂತೆ ರಾಜ್ಯದಲ್ಲಿ ಆರಂಭಿಸಿರುವ ಅತಿಥಿ ಉಪನ್ಯಾಸಕರ ನೇಮಕ ಪ್ರಕ್ರಿಯೆಗೆ ಭಾರೀ ಸ್ಪಂದನ ವ್ಯಕ್ತವಾಗಿದೆ.
ಗುರುವಾರದವರೆಗೆ 30 ಸಾವಿರಕ್ಕೂ ಹೆಚ್ಚು ಅರ್ಹ ಅಭ್ಯರ್ಥಿಗಳು ಆನ್-ಲೈನ್ ಮೂಲಕ ಅರ್ಜಿ ಹಾಕಿಕೊಂಡಿದ್ದಾರೆ ಎಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, `ರಾಜ್ಯ ಸರಕಾರವು ಇತ್ತೀಚೆಗೆ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಬಳವನ್ನು ಎರಡೂವರೆ ಪಟ್ಟಿಗಿಂತ ಹೆಚ್ಚು ಏರಿಸಿದೆ. ಇದು ಅರ್ಹ ಅಭ್ಯರ್ಥಿಗಳಲ್ಲಿ ಸಕಾರಾತ್ಮಕ ಪರಿಣಾಮವನ್ನು ಉಂಟುಮಾಡಿದೆ ಎನ್ನುವುದಕ್ಕೆ ಇಷ್ಟೊಂದು ಪ್ರಮಾಣದಲ್ಲಿ ಅರ್ಜಿಗಳು ಬಂದಿರುವುದೇ ಸಾಕ್ಷಿ’ ಎಂದಿದ್ದಾರೆ.
Guest Lecturers: ಅತಿಥಿ ಉಪನ್ಯಾಸಕರ ಸೇವೆ ಕಾಯಂ ಮಾಡಲು ಸಾಧ್ಯವಿಲ್ಲ: ಸಚಿವ ಅಶ್ವತ್ಥ್
ಅಲ್ಲದೆ, ಅರ್ಜಿ ಹಾಕಿಕೊಳ್ಳಲು ಶುಕ್ರವಾರ ಮಧ್ಯರಾತ್ರಿ 12 ಗಂಟೆಯವರೆಗೂ ಅವಕಾಶವಿದೆ. ಇದುವರೆಗೂ ಅರ್ಜಿ ಹಾಕದೆ ಇರುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಇಂಥವರು https://dec.karnataka/gov.in ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಅವರು ಹೇಳಿದ್ದಾರೆ.
ಸರಕಾರವು ಕಳೆದ ವಾರ ಅತಿಥಿ ಉಪನ್ಯಾಸಕರ ವೇತನವನ್ನು ಗರಿಷ್ಠ 32 ಸಾವಿರ ರೂ.ವರೆಗೂ ಹೆಚ್ಚಳ ಮಾಡಿ ಆದೇಶ ಹೊರಡಿಸಿರುವುದನ್ನು ಇಲ್ಲಿ ನೆನೆಯಬಹುದು.
ಕರ್ತವ್ಯಕ್ಕೆ ಹಾಜರಾಗಲು ಮನವಿ
ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಲು ಸಾಧ್ಯವಿಲ್ಲ. ನೇರ ನೇಮಕಾತಿಯಾದ ಉಪನ್ಯಾಸಕರಿಗೆ ಮಾತ್ರ ಸೇವಾ ಭದ್ರತೆ ಇರಲಿದೆ. 8 ಗಂಟೆ ಮಾತ್ರ ಪಾಠ ಮಾಡುತ್ತಿದ್ದ ಉಪನ್ಯಾಸಕರಿಗೆ ಇನ್ನಷ್ಟುಪಾಠ ಮಾಡಲು ಅವಕಾಶ ಮಾಡಿಕೊಡುತ್ತಿದ್ದೇವೆ. 13 ಸಾವಿರ ಅತಿಥಿ ಉಪನ್ಯಾಸಕರಲ್ಲಿ ಕೇವಲ ನಾಲ್ಕೂವರೆ ಸಾವಿರ ಮಂದಿ ಮಾತ್ರ ಯುಜಿಸಿ ಪ್ರಕಾರ ಅರ್ಹತೆ ಹೊಂದಿದ್ದಾರೆ. 9 ಸಾವಿರ ಮಂದಿ ಅರ್ಹತೆ ಇರುವವರು ಮತ್ತು 5 ಸಾವಿರ ಮಂದಿ ಅರ್ಹತೆ ಇಲ್ಲದವರು ಕೂಡ ನೇಮಕ ಆಗಲಿದ್ದಾರೆ ಎಂದು ಸಚಿವರು ಹೇಳಿದ್ದಾರೆ.
ಅಶ್ವತ್ಥ್ ನಾರಾಯಣ ಗರಂ: ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸಿ ಅವರ ವೇತವನ್ನು ಎರಡು ಪಟ್ಟಿಗಿಂತಲೂ ಹೆಚ್ಚು ಏರಿಸಿರುವುದರಿಂದ ಎಲ್ಲರೂ ಮುಷ್ಕರ ಕೈಬಿಟ್ಟು ತಕ್ಷಣ ಬೋಧನಾ ಕಾರ್ಯಕ್ಕೆ ಹಿಂದಿರುಗಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಮನವಿ ಮಾಡಿದ್ದಾರೆ. 2022-23ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಆನ್‌ಲೈನ್ ಮೂಲಕ ಅತಿಥಿ ಉಪನ್ಯಾಸಕರನ್ನು ನೇಮಕ (Recruitment) ಮಾಡಿಕೊಳ್ಳುವ ಪ್ರಕ್ರಿಯೆ ಸೋಮವಾರದಿಂದ (ಜ.17) ಆರಂಭವಾಗಲಿದ್ದು, ಮುಷ್ಕರ ಬಿಟ್ಟು ಅರ್ಜಿ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಸಚಿವರು ಅತಿಥಿ ಉಪನ್ಯಾಸಕರಿಗೆ ಸೂಚನೆ ನೀಡಿದ್ದಾರೆ.
ಸರ್ಕಾರ ಘೋಷಿಸಿರುವ ವೇತನ ಹೆಚ್ಚಳದ ಪ್ಯಾಕೇಜ್‌ನಿಂದ ಸಮಾಧಾನವಾಗಿಲ್ಲ. ನಾವು ಕೇಳಿರುವುದು ಸೇವಾ ಭದ್ರತೆ, ಅದು ಈಡೇರುವವರೆಗೂ ನಮ್ಮ ಹೋರಾಟ ಮುಂದುವರೆಸುತ್ತೇವೆ’ ಎಂದು ಕೆಲ ಅತಿಥಿ ಉಪನ್ಯಾಸಕರ ಸಂಘಟನೆಗಳು ಹೇಳಿಕೆ ನೀಡಿವೆ. ಈ ಹಿನ್ನೆಲೆಯಲ್ಲಿ ಸಚಿವರು ಪತ್ರಿಕಾ ಪ್ರಕಟಣೆ ಮೂಲಕ ಈ ಮನವಿ ಮಾಡಿದ್ದಾರೆ. ‘ಅತಿಥಿ ಉಪನ್ಯಾಸಕರಿಗೆ ನಮ್ಮ ಸರ್ಕಾರ ಅತ್ಯುತ್ತಮವಾದ ಪ್ಯಾಕೇಜ್ ನೀಡಿದೆ. ಇದುವರೆಗೂ ಯುಜಿಸಿ ಅರ್ಹತೆ ಇಲ್ಲದವರು ಕೇವಲ 11 ಸಾವಿರ ರು., ಯುಜಿಸಿ ಅರ್ಹತೆ ಇರುವವರಿಗೆ 13 ಸಾವಿರ ಅಷ್ಟೇ ಮಾಸಿಕ ವೇತನ ಇತ್ತು. ಅದನ್ನು ನಮ್ಮ ಸರ್ಕಾರ ಒಮ್ಮೆಲೇ ಕ್ರಮವಾಗಿ 28 ಸಾವಿರ ರು. ಮತ್ತು 32 ಸಾವಿರ ರು.ಗಳಿಗೆ ಹೆಚ್ಚಳ ಮಾಡಿದೆ. ಆದರೂ, ಇದು ಸಮಾಧಾನ ಇಲ್ಲ ಎಂದು ಹೇಳಿ ಮುಷ್ಕರ ಮುಂದುವರೆಸಿರುವುದು ಸರಿಯಲ್ಲ. ಕೂಡಲೇ ಕರ್ತವ್ಯಕ್ಕೆ ಹಾಜರಾಗಿ’ ಎಂದು ಅವರು ಕೋರಿದ್ದಾರೆ.