SSLC ಪರೀಕ್ಷೆಯಲ್ಲಿ ರಾಯಚೂರು ಜಿಲ್ಲೆಗೆ ಫಸ್ಟ್ , ಆಧಾರ್ ಕಾರ್ಡ್‌ಗಾಗಿ ಅಲೆದಾಡಿ ಸುಸ್ತು!
* SSLC ಪರೀಕ್ಷೆಯಲ್ಲಿ ಜಿಲ್ಲೆಗೆ ಫಸ್ಟ್!
* ಆಧಾರ್ ಕಾರ್ಡ್ ಇಲ್ಲದೆ ವಿದ್ಯಾರ್ಥಿನಿ ಪರದಾಟ
* 11 ಬಾರಿ ಅರ್ಜಿ ಹಾಕಿದ್ರೂ ಆಧಾರ್ ಕಾರ್ಡ್ ಇಲ್ಲದೆ ವಿದ್ಯಾರ್ಥಿನಿ ಅಲೆದಾಟ!
ವರದಿ : ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್
ರಾಯಚೂರು, (ಮೇ.26): ಜಿಲ್ಲೆಯ ಸಿಂಧನೂರು ತಾಲೂಕಿನ ಗೌಡನಭಾವಿ ಗ್ರಾಮದ ವಿದ್ಯಾರ್ಥಿನಿ ಬಸವಲೀಲಾ ಈ ವರ್ಷದ SSLC ಪರೀಕ್ಷೆಯಲ್ಲಿ 625 ಅಂಕಗಳಿಗೆ 624 ಅಂಕಗಳು ಪಡೆದ ಜಿಲ್ಲೆಗೆ ಫಸ್ಟ್ ರ್ಯಾಂಕ್ ಬಂದಿದ್ದಾಳೆ. ಆದ್ರೆ ಈ ವಿದ್ಯಾರ್ಥಿನಿ ತನ್ನ ಮುಂದಿನ ವಿದ್ಯಾಭ್ಯಾಸಕ್ಕಾಗಿ ಆಧಾರ ಕಾರ್ಡ್ ಗಾಗಿ ಆಧಾರ್ ಕಾರ್ಡ್ ಕೇಂದ್ರಗಳನ್ನು ಅಲೆಯುತ್ತಿದ್ದಾಳೆ.
ಸಿಂಧನೂರು ತಾಲೂಕಿನ ಒಳಬಳ್ಳಾರಿಯ ಗ್ರಾಮದ ತಮ್ಮ ಅಜ್ಜಿಯ ಮನೆಯಲ್ಲಿ ಇದ್ದುಕೊಂಡು ಅಭ್ಯಾಸ ಮಾಡಿ SSLC ಪರೀಕ್ಷೆ ಬರೆದು ಉತ್ತಮ ಸಾಧನೆ ಮಾಡಿ ರಾಯಚೂರು ಜಿಲ್ಲೆ ಮತ್ತು ಸಿಂಧನೂರು ತಾಲೂಕಿಗೆ ಕೀರ್ತಿ ತಂದಿದ್ದಾಳೆ. ಆದ್ರೆ ಇಲ್ಲಿಯವರೆಗೂ ತನ್ನ ಆಧಾರ್ ಕಾರ್ಡ್ ಮಾಡಿಸಿಕೊಳ್ಳುವಲ್ಲಿ ಮಾತ್ರ ವಿದ್ಯಾರ್ಥಿನಿ ಬಸವಲೀಲಾ ಹಿಂದೆ ಬಿದ್ದಿದ್ದಾಳೆ. ಕಳೆದ 10 ವರ್ಷಗಳಿಂದ ಆಧಾರ್ ಕಾರ್ಡ್ ಪಡೆಯಲು 11ಬಾರಿ ಬಸವಲೀಲಾ ಆಧಾರ್ ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸಿದರು. ನಾನಾ ಕಾರಣಗಳಿಂದ ಆಧಾರ್ ಕಾರ್ಡ್ ಬರದೇ ತಿರಸ್ಕಾರವಾಗಿದೆ.
Aadhaar Card : ಮಕ್ಕಳ ಆಧಾರ್ ಕಾರ್ಡ್ ಗೆ ಪರದಾಡ್ಬೇಕಿಲ್ಲ! ಮಗು ಹುಟ್ಟುತ್ತಲೇ ಆಸ್ಪತ್ರೆಯಲ್ಲಿ ಸಿಗಲಿದೆ ನಂಬರ್
SSLCಯಲ್ಲಿ ರ್ಯಾಂಕ್ ಬಂದ್ರೂ ಪ್ರವೇಶಕ್ಕೆ ಆಧಾರ್ ಕಡ್ಡಾಯ
ಬಸವಲೀಲಾ SSLCಯಲ್ಲಿ ಉತ್ತಮ ಅಂಕ ಪಡೆದು ಪಾಸ್ ಆಗಿದ್ದಾಳೆ. ಕಾಲೇಜು ಪ್ರದೇಶಕ್ಕೆ ಹೋದ ಕಡೆಯಲ್ಲಿ ಆಧಾರ್ ಕಾರ್ಡ್ ಕಡ್ಡಾಯವಾಗಿ ಬೇಕು ಅಂತ ಹೇಳುತ್ತಿದ್ದಾರೆ. ಇತ್ತ ಆಧಾರ್ ಕಾರ್ಡ್ ಗಾಗಿ ಬಸವಲೀಲಾ ಮಸ್ಕಿ ಮತ್ತು ಸಿಂಧನೂರು ತಾಲೂಕಿನಲ್ಲಿ ಹೋಗಿ ಅರ್ಜಿ ಹಾಕಿದ್ರೂ ಟೆಕ್ನಿಕಲ್ ತೊಂದರೆಯಿಂದ ನಿಮ್ಮ ಅರ್ಜಿ ತಿರಸ್ಕೃತಗೊಂಡಿದೆ ಎಂದು ಆಧಾರ್ ಕಾರ್ಡ್ ಮಾಡುವ ಕೇಂದ್ರದ ಸಿಬ್ಬಂದಿ ಹೇಳುತ್ತಿದ್ದಾರೆ. ಹೀಗಾಗಿ ವಿದ್ಯಾರ್ಥಿನಿ ಬಸವಲೀಲಾ ಆಧಾರ ಕಾರ್ಡ್ ಇಲ್ಲದೇ ಮುಂದಿನ ವಿದ್ಯಾಭ್ಯಾಸ ಹೇಗೆ ಮಾಡುವುದು ಎಂಬ ಗೊಂದಲದಲ್ಲಿ ವಿದ್ಯಾರ್ಥಿನಿ ಇದ್ದಾಳೆ.
ಆಧಾರ್ ಗಾಗಿ 11 ಬಾರಿ ಅರ್ಜಿ ಸಲ್ಲಿಕೆ:
SSLC ಪರೀಕ್ಷೆಯಲ್ಲಿ ರ್ಯಾಂಕ್ ಗಳಿಸಿದ ವಿದ್ಯಾರ್ಥಿನಿ ಬಸವಲೀಲಾ..2016 ರಿಂದ ಆಧಾರ್ ಕಾರ್ಡ್ ಪಡೆಯಲು ತಹಸೀಲ್ದಾರ್ ಕಚೇರಿಗೆ ಅಲೆದು ಅರ್ಜಿ ಹಾಕುತ್ತಾ ಬಂದಿದ್ದಾಳೆ. ಈವರೆಗೂ ಸಹ ವಿದ್ಯಾರ್ಥಿನಿಗೆ ಆಧಾರ್ ಕಾರ್ಡ್ ಸಿಕ್ಕಿಲ್ಲ. ಆಧಾರ್ ಕಾರ್ಡ್ ಇಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿನಿಗೆ ಸರ್ಕಾರದಿಂದ ಸಿಗಬೇಕಾದ ಸ್ಕಾಲರ್ ಶಿಪ್ ಹಾಗೂ ಇತರೆ ಸೌಲಭ್ಯ ಸಿಗುತ್ತಿಲ್ಲವೆಂದು ವಿದ್ಯಾರ್ಥಿನಿ ತನ್ನ ಸಮಸ್ಯೆ ಹೇಳಿಕೊಂಡಳು..ಇನ್ನೂ ಮುಂದೆ ನಾನು ಓದಿ ವೈದ್ಯಳಾಗುವ ಕನಸ್ಸು ಕಂಡಿದ್ದು ನನ್ನ ವಿದ್ಯಾಭ್ಯಾಸ ಹಾಗೂ ಸರ್ಕಾರದ ಸೌಲಭ್ಯಕ್ಕಾಗಿ ಆಧಾರ ಕಾರ್ಡ್ ಅವಶ್ಯಕವಾಗಿದೆ.
ಬಸವಲೀಲಾ ಮನೆ ಅಧಿಕಾರಿ ಭೇಟಿ:
ಇಡೀ ಜಿಲ್ಲೆಗೆ SSLCಯಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿನಿ ಆಧಾರ್ ಕಾರ್ಡ್ ಗಾಗಿ ಅಲೆದಾಟದ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಹರಿದಾಟ ನಡೆಸಿತ್ತು. ಈ ವಿಚಾರದ ಬಗ್ಗೆ ಏಷ್ಯಾನೆಟ್ ಸುವರ್ಣನ್ಯೂಸ್ ವರದಿಗಾರರು ಸಹ ಸಿಂಧನೂರು ತಹಸೀಲ್ದಾರ್ ಅವರ ಗಮನಕ್ಕೆ ತಂದಾಗ ತಹಸೀಲ್ದಾರ್ ಅವರು ಕೂಡಲೇ ಆರ್ ಐ ಮತ್ತು ವಿಎ ಗಮನ ತಂದು ವಿದ್ಯಾರ್ಥಿನಿ ಮನೆಗೆ ಹೋಗಲು ಸೂಚನೆ ನೀಡಿದ್ರು. ತಹಸೀಲ್ದಾರ್ ಅವರ ಸೂಚನೆಯಂತೆ ವಿದ್ಯಾರ್ಥಿನಿ ಬಸವಲೀಲಾ ಮನೆಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲನೆ ನಡೆಸಿ ಈಗ ಹೊಸ ಆಧಾರ್ ಕಾರ್ಡ್ ಗಾಗಿ ಮತ್ತೆ ವಿಎ ನೇತೃತ್ವದಲ್ಲಿ ಅರ್ಜಿ ಸಲ್ಲಿಕೆ ಮಾಡಲಾಗಿದೆ.
ಒಟ್ಟಾರೆ ಈ ವಿದ್ಯಾರ್ಥಿನಿ ಬಸವಲೀಲಾಗೆ ಕೂಡಲೇ ಆಧಾರ್ ಕಾರ್ಡ್ ಸಿಕ್ಕಿ..ವಿದ್ಯಾರ್ಥಿನಿ ವಿದ್ಯಾಭ್ಯಾಸಕ್ಕೆ ಅನುಕೂಲವಾಗಬೇಕು ಎಂಬುವುದೇ ನಮ್ಮ ಆಶಯ.