ಮರುಪರಿಷ್ಕೃತ ಪಠ್ಯ ವೆಬ್‌ಸೈಟ್‌ನಲ್ಲಿ ಬಿಡುಗಡೆ
ಸೆಪ್ಟೆಂಬರ್ ಅಂತ್ಯದೊಳಗೆ ಶಾಲೆಗಳಿಗೂ ರವಾನೆ, 31 ಪುಟಗಳಲ್ಲಿ ತಿದ್ದುಪಡಿ
ಬೆಂಗಳೂರು(ಆ.20): ಪರಿಷ್ಕರಿಸಲಾಗಿದ್ದ ಪಠ್ಯದ ಬಗ್ಗೆ ಆಕ್ಷೇಪಣೆಗಳು ಕೇಳಿಬಂದಿದ್ದ ಹಿನ್ನೆಲೆಯಲ್ಲಿ ವಿವಿಧ ಪಾಠಗಳನ್ನು ಮರು ಪರಿಷ್ಕರಣೆ ಮಾಡಿರುವ ಕರ್ನಾಟಕ ಪಠ್ಯಪುಸ್ತಕ ಸಂಘ, ಅದನ್ನು ತನ್ನ ವೆಬ್‌ಸೈಟ್ (krbs.kar.nic.in)ನಲ್ಲಿ ಪ್ರಕಟಿಸಿದೆ. ಮರು ಪರಿಷ್ಕೃತ ಅಧ್ಯಾಯಗಳ ಪ್ರತಿಗಳು ಪ್ರತ್ಯೇಕವಾಗಿ ಸೆಪ್ಟೆಂಬರ್ ಅಂತ್ಯದೊಳಗೆ ಶಾಲೆಗಳಿಗೂ ತಲುಪಲಿವೆ. ‘ಪರಿಷ್ಕೃತ- 2022ರ ಪಠ್ಯಪುಸ್ತಕಗಳ ತಿದ್ದೋಲೆ’ ಎಂಬ ಶೀರ್ಷಿಕೆ ಅಡಿ ಮರು ಪರಿಷ್ಕೃತ ಪಠ್ಯವನ್ನು ಬಿಡುಗಡೆ ಮಾಡಲಾಗಿದೆ. 31 ಪುಟಗಳನ್ನು ಇದು ಹೊಂದಿದ್ದು ಯಾವ ತರಗತಿ, ಯಾವ ವಿಷಯದ ಪಾಠದಲ್ಲಿ ಏನೇನು ತಿದ್ದುಪಡಿ ಮಾಡಿಕೊಂಡು ಬೋಧಿಸಬೇಕೆಂದು ತಿಳಿಸಲಾಗಿದೆ.
ಮರು ಪರಿಷ್ಕೃತ ಅಧ್ಯಾಯಗಳ ಪ್ರತಿಯನ್ನು ಸದ್ಯ ಶಾಲಾ ಮುಖ್ಯಸ್ಥರು ಸಂಘದ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಬೋಧಿಸಬಹುದಾಗಿದೆ. ಈ ಪಾಠಗಳ ಮುದ್ರಣ ಕಾರ್ಯ ಪ್ರಗತಿಯಲ್ಲಿದ್ದು ಹಂತ ಹಂತವಾಗಿ ಸೆಪ್ಟಂಬರ್ ಅವಧಿಯೊಳಗೆ ಶಾಲೆಗಳಿಗೆ ಪೂರೈಕೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
UUCMS ಜಾರಿ ಕಡ್ಡಾಯ: ಜಾರಿ ಮಾಡದ ವಿವಿ ಕುಲಸಚಿವರ ವಿರುದ್ಧ ಕ್ರಮ
ಸಂಘವು 200 ಕೋಟಿ ರು. ವೆಚ್ಚದಲ್ಲಿ ಪರಿಷ್ಕೃತ ಪಠ್ಯಗಳನ್ನು ಮುದ್ರಣ ಮಾಡಿ ಶೇ.99ರಷ್ಟುಸರಬರಾಜು ಮಾಡಿತ್ತು. ಈ ಮಧ್ಯೆ, ಪರಿಷ್ಕೃತ ಪಠ್ಯದಲ್ಲಿ ಡಾ. ಅಂಬೇಡ್ಕರ್, ಬಸವಣ್ಣ, ನಾರಾಯಣಗುರು, ಕುವೆಂಪು ಸೇರಿದಂತೆ ಹಲವು ಮಹನೀಯರು ಹಾಗೂ ಅವರ ವಿಷಯಗಳಿರುವ ಪಾಠಗಳಿಗೆ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಅವುಗಳನ್ನು ಈಗ ಮರು ಪರಿಷ್ಕರಿಸಿದ್ದು, ಮುದ್ರಿಸಲು 12 ಲಕ್ಷ ರು. ಹೆಚ್ಚುವರಿ ಹೊರೆಯಾಗಿದೆ.
ಏನೇನು ಬದಲಾವಣೆ?
9ನೇ ತರಗತಿ:
ಸಮಾಜ ವಿಜ್ಞಾನದ (ಭಾಗ 1) ‘ನಮ್ಮ ಸಂವಿಧಾನ’ ಪಾಠದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಈ ಹಿಂದೆ ಕೈಬಿಟ್ಟಿದ್ದ ಸಂವಿಧಾನ ಶಿಲ್ಪಿ ಎಂಬ ಗೌರವವನ್ನು ಪುನರ್ ಸೇರಿಸಲಾಗಿದೆ. ‘ಭಾರತದ ಮತ ಪ್ರವರ್ತಕರು’ ಪಠ್ಯದಲ್ಲಿ ಬಸವಣ್ಣನವರು ಉಪನಯನವಾದ ನಂತರ ಕೂಡಲ ಸಂಗಮಕ್ಕೆ ತೆರಳಿದರು. ಶೈವ ಗುರುಗಳಿಂದ ಲಿಂಗದೀಕ್ಷೆ ಪಡೆದು ವೀರಶೈವ ಮತವನ್ನು ಅಭಿವೃದ್ಧಿಪಡಿಸಿದರು ಎಂಬ ಇತ್ಯಾದಿ ಆಕ್ಷೇಪಾರ್ಹ ಅಂಶಗಳನ್ನು ಕೈಬಿಟ್ಟು ಮೊದಲಿದ್ದಂತೆ ಮರು ಪರಿಷ್ಕರಿಸಲಾಗಿದೆ. ಅವರಿಂದಾದ ಸಾಮಾಜಿಕ, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಪರಿವರ್ತನೆಗಳ ಬಗ್ಗೆ ವಿವರವಾಗಿ ತಿಳಿಸಲಾಗಿದೆ. ಜೊತೆಗೆ ‘ಕಳಬೇಡ ಕೊಲಬೇಡ...’ ವಚನವನ್ನೂ ಸೇರಿಸಲಾಗಿದೆ.
7ನೇ ತರಗತಿ:
ಸಮಾಜ ವಿಜ್ಞಾನ (ಭಾಗ 1) ಪಠ್ಯದಲ್ಲಿ ‘ಭಕ್ತಿ ಪಂಥ ಹಾಗೂ ಸೂಫಿ ಪರಂಪರೆ’ ಎಂಬ ಪಾಠವನ್ನು ಸೇರಿಸಿಕೊಳ್ಳಬೇಕೆಂದು ಸೂಚಿಸಲಾಗಿದೆ. ‘ಮೈಸೂರು ಮತ್ತು ಇತರೆ ಸಂಸ್ಥಾನಗಳು’ ಪಾಠದಲ್ಲಿ ಸುರಪುರದ ನಾಯಕರ ವಿಷಯ ಸೇರಿಸಲಾಗಿದೆ. ಸಮಾಜ ವಿಜ್ಞಾನ ಭಾಗ 2ರಲ್ಲಿ ‘ಕರ್ನಾಟಕ ರಾಜ್ಯ ಏಕೀಕರಣ ಮತ್ತು ಗಡಿ ವಿವಾದಗಳು’ ಪಾಠದಲ್ಲಿ ಕೈಬಿಡಲಾಗಿದ್ದ ರಾಷ್ಟ್ರಕವಿ ಕುವೆಂಪು ಮತ್ತು ಹುಯಿಲಗೋಳ ನಾರಾಯಣರಾವ್ ಅವರ ಭಾವಚಿತ್ರಗಳನ್ನು ಪುನರ್ ಸೇರಿಸಲಾಗಿದೆ. ಕನ್ನಡ ಪ್ರಥಮ ಭಾಷೆ ಪಠ್ಯದಲ್ಲಿ ‘ಗೊಂಬೆ ಕಲಿಸುವ ನೀತಿ’ ಪಠ್ಯದ ರಚನಕಾರರ ಹೆಸರನ್ನು ಈ ಹಿಂದೆ ಆರ್.ಎನ್.ಜಯಗೋಪಾಲ್ ಎಂದು ತಪ್ಪಾಗಿ ಮುದ್ರಿಸಲಾಗಿತ್ತು. ಇದನ್ನು ಸರಿಪಡಿಸಿ ಚಿ. ಉದಯಶಂಕರ್ ಎಂದು ಪರಿಷ್ಕರಿಸಿ ಅವರ ಪರಿಚಯ ನೀಡಲಾಗಿದೆ.
ಕನಕಗಿರಿ ಪ್ರೌಢಶಾಲಾ ಶಿಕ್ಷಕರಿಗೆ ಎರಡೂವರೆ ತಿಂಗಳಿಂದ ವೇತನವಿಲ್ಲ!
6ನೇ ತರಗತಿ:
ಸಮಾಜ ವಿಜ್ಞಾನ (ಭಾಗ 1) ‘ನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕ’ ಅಧ್ಯಾಯದಲ್ಲಿ ಸಿದ್ಧಗಂಗಾ ಮಠ, ಆದಿಚುಂಚನಗಿರಿ ಮಠ, ಮುರುಘಾ ಮಠ, ಸಿರಿಗೆರೆ ತರಳಬಾಳು ಮಠಗಳ ಶೈಕ್ಷಣಿಕ ಸೇವೆ ಬಗ್ಗೆ ಕೆಲವು ಸಾಲುಗಳಲ್ಲಿ ವಿವರಿಸಲಾಗಿದೆ.
4ನೇ ತರಗತಿ:
ಪರಿಸರ ಅಧ್ಯಯನ ಪಠ್ಯದಲ್ಲಿ ‘ಪ್ರತಿಯೊಬ್ಬರು ವಿಶಿಷ್ಟ’ ಎಂಬ ಅಧ್ಯಾಯದಲ್ಲಿರುವ ಕುವೆಂಪು ಪರಿಚಯದಲ್ಲಿ ‘ಅನೇಕರ ಪ್ರೋತ್ಸಾಹದಿಂದ ಇವರು ಮುಂದೆ ಪ್ರಖ್ಯಾತ ಕವಿ ಎನಿಸಿಕೊಂಡರು’ ಎಂಬ ಆಕ್ಷೇಪಾರ್ಹ ಸಾಲುಗಳನ್ನು ಕೈಬಿಡಲಾಗಿದೆ.