Asianet Suvarna News Asianet Suvarna News

ಕನಕಗಿರಿ ಪ್ರೌಢಶಾಲಾ ಶಿಕ್ಷಕರಿಗೆ ಎರಡೂವರೆ ತಿಂಗಳಿಂದ ವೇತನವಿಲ್ಲ!

  • ಕನಕಗಿರಿ ಪ್ರೌಢಶಾಲಾ ಶಿಕ್ಷಕರಿಗೆ ಎರಡೂವರೆ ತಿಂಗಳಿಂದ ವೇತನವಿಲ್ಲ!
  • ಅಧಿಕಾರಿಗಳು ಮಾಡಿದ ಯಡವಟ್ಟಿನಿಂದ ಸಮಸ್ಯೆ
  • ಪಗಾರ ಆಗದಿದ್ದರಿಂದ ಶಿಕ್ಷಕರಿಗೆ ನಾನಾ ತೊಂದರೆ
Kanakagiri High School teachers have not paid salary for two and a half months koppala kanakagiri
Author
Bengaluru Karnataka, First Published Aug 19, 2022, 10:30 AM IST

ವರದಿ: ಸೋಮರಡ್ಡಿ ಅಳವಂಡಿ

ಕೊಪ್ಪಳ (ಆ.19): :ಒಂದು ತಿಂಗಳ ವೇತನ ಆಗದಿದ್ದರೆ ಶಿಕ್ಷಕರು ಗೋಳಾಡುತ್ತಾರೆ. ಅಂಥದ್ದರಲ್ಲಿ ಕಳೆದ ಎರಡೂವರೆ ತಿಂಗಳಿಂದ(ಜೂನ್‌, ಜುಲೈ) ಕನಕಗಿರಿ ತಾಲೂಕು ವ್ಯಾಪ್ತಿಯ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರ ವೇತನ ಆಗಿಲ್ಲ. ಆಗುವ ಲಕ್ಷಣಗಳು ಇಲ್ಲವಾದ್ದರಿಂದ ಶಿಕ್ಷಕರು ಗೋಳಾಡುತ್ತಿದ್ದಾರೆ. ಕನಕಗಿರಿ ನೂತನ ತಾಲೂಕು ರಚನೆಯಾದ ಮೇಲೆ ತಾಲೂಕು ಪಂಚಾಯಿತಿ ಅಸ್ತಿತ್ವಕ್ಕೆ ಬಂದಿದೆ. ಇಲ್ಲಿಗೆ ಇನ್ನೂ ಬಜೆಟ್‌ ಮಂಜೂರಿಯಾಗಿಲ್ಲ. ಹೀಗಾಗಿ ಗಂಗಾವತಿ ತಾಲೂಕು ವ್ಯಾಪ್ತಿಯಿಂದಲೇ ವೇತನ ಪಾವತಿಯಾಗುತ್ತಿತ್ತು. ಆದರೆ, ಈಗ ಕನಕಗಿರಿ ತಾಲೂಕು ಪಂಚಾಯಿತಿ ವ್ಯಾಪ್ತಿಯ ಅಧಿಕಾರಿಗಳು ತಮಗೆ ಪ್ರತ್ಯೇಕ ಬಜೆಟ್‌ ಮಂಜೂರಿಯಾಗದಿದ್ದರೂ ಸರ್ಕಾರಿ ಪ್ರೌಢಶಾಲೆಯ ಡಿಡಿಒ ಕೋಡ್‌ಗಳನ್ನು ತಮ್ಮ ಲೆಕ್ಕಶೀರ್ಷಿಕೆಗೆ ಮ್ಯಾಪಿಂಗ್‌ ಮಾಡಿಕೊಂಡಿದ್ದಾರೆ. ಬಜೆಟ್‌ ಇಲ್ಲದೆ ಮ್ಯಾಪಿಂಗ್‌ ಮಾಡಿಕೊಂಡಿರುವುದರಿಂದ ಸಮಸ್ಯೆಯಾಗಿದೆ.

ಟೀಸಿಗಾಗಿ ತಾಳಿ ಮಾರಲು ಸಿದ್ದವಾಗಿದ್ದ ತಾಯಿಗೆ BIG 3 ನೆರವು, ಮಗನಿಗೆ ಬೇರೆ ಶಾಲೆಯಲ್ಲಿ ಅಡ್ಮಿಶನ್..!

ಈ ಕುರಿತು ಗಂಗಾವತಿ ತಾಲೂಕು ಪಂಚಾಯಿತಿ(Gangavati Taluku Panchayat) ಅಧಿಕಾರಿಗಳನ್ನು ಕೇಳಿದರೆ, ಕನಕಗಿರಿ ತಾಲೂಕು ವ್ಯಾಪ್ತಿಯ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರ ಲೆಕ್ಕಶೀರ್ಷಿಕೆ ಮ್ಯಾಪಿಂಗ್‌ ಮಾಡಿಕೊಂಡಿರುವುದರಿಂದ ನಾವು ಇಲ್ಲಿ ವೇತನ ಪಾವತಿಸಲು ಬರುವುದಿಲ್ಲ ಎನ್ನುತ್ತಿದ್ದಾರೆ. ಕನಕಗಿರಿಯಲ್ಲಿ ಬಜೆಟ್‌ ಇಲ್ಲ, ಗಂಗಾವತಿಯಲ್ಲಿ ಶಿಕ್ಷಕರ ಹೆಸರಿಲ್ಲ. ಹೀಗಾಗಿ ದೊಡ್ಡ ಸಮಸ್ಯೆಯಾಗಿದೆ. ಈ ಕುರಿತು ನೂರಾರು ಶಿಕ್ಷಕರು ಸಮಸ್ಯೆ ಎದುರಿಸುತ್ತಿದ್ದಾರೆ. ನಿತ್ಯವೂ ಕಚೇರಿಗೆ ಸುತ್ತಾಡಿ ಸುಸ್ತಾಗಿದ್ದಾರೆ. ಪ್ರೌಢಶಾಲಾ ಸಹ ಶಿಕ್ಷಕರ ಸಂಘವೂ ಈ ಕುರಿತು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.

ಹಣಕಾಸು ಇಲಾಖೆಗೆ ಪತ್ರ: ಕನಕಗಿರಿ ತಾಪಂ ಅಧಿಕಾರಿಗಳು, ಬಜೆಟ್‌ ಇಲ್ಲದೆ ಡಿಡಿಒ ಕೋಡ್‌ ಮ್ಯಾಪಿಂಗ್‌ ಮಾಡಿಕೊಂಡಿದ್ದು, ಇದನ್ನು ಸರಿಪಡಿಸುವಂತೆ ಹಣಕಾಸು ಇಲಾಖೆಗೆ ಪತ್ರ ಬರೆದು ಕೈಚೆಲ್ಲಿದ್ದಾರೆ. ಹಣಕಾಸು ಇಲಾಖೆಯ ಅನುಮತಿ ನೀಡುವ ಮುನ್ನ ಹಾಗೂ ಬಜೆಟ್‌ ಮಂಜೂರಾತಿ ನೀಡುವ ಮುನ್ನವೇ ಮ್ಯಾಪಿಂಗ್‌ ಮಾಡಿಕೊಂಡಿದ್ದೇ ದೊಡ್ಡ ಸಮಸ್ಯೆಯಾಗಿದೆ.

ಹಣ ವರ್ಗಾಯಿಸುತ್ತಿಲ್ಲ: ಗಂಗಾವತಿ ತಾಲೂಕು ಪಂಚಾಯಿತಿ ಅಧಿಕಾರಿಗಳು ಬಜೆಟ್‌ಅನ್ನು ಕನಕಗಿರಿ ತಾಲೂಕು ವ್ಯಾಪ್ತಿಗೆ ವರ್ಗಾಯಿಸುತ್ತಿಲ್ಲ. ಹಣಕಾಸು ಇಲಾಖೆಯಿಂದ ನಿರ್ದೇಶನ ಬೇಕು ಎನ್ನುತ್ತಿದ್ದಾರೆ. ಈ ನಡುವೆ ಹೆಚ್ಚುವರಿಯಾಗಿ ಇದ್ದ ಬಜೆಟ್‌ನಲ್ಲಿ ಬಾಕಿ ಇದ್ದ ತಮ್ಮ ತಾಲೂಕಿನ ಶಿಕ್ಷಕರ ವೈದ್ಯಕೀಯ ವೆಚ್ಚದ ಬಿಲ್‌ಗಳನ್ನು ಪಾವತಿ ಮಾಡಲಾಗಿದೆ ಎನ್ನಲಾಗುತ್ತಿದೆ. ಇದರ ಕುರಿತು ಆರೋಪಗಳು ಕೇಳಿಬರುತ್ತಿವೆ. ವೇತನದ ಹಣವನ್ನು ವೈದ್ಯಕೀಯ ವೆಚ್ಚಕ್ಕೆ ಪಾವತಿ ಮಾಡುವುದಕ್ಕೆ ಅವಕಾಶ ಇಲ್ಲವಾದರೂ ಯಾಕೆ ಪಾವತಿ ಮಾಡಿದ್ದಾರೆ ಎನ್ನುವುದೇ ದೊಡ್ಡ ಪ್ರಶ್ನೆ. ಈ ನಡುವೆ ಸಮಸ್ಯೆ ಎದುರಿಸುತ್ತಿರುವವರು ಮಾತ್ರ ಕನಕಗಿರಿ ತಾಲೂಕು ವ್ಯಾಪ್ತಿಯ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು.

Koppal: ಮಹಿಳಾ ಅಧಿಕಾರಿ ಜತೆ ಬಿಜೆಪಿ ಶಾಸಕನ ಲವ್ವಿ-ಡವ್ವಿ: ವರದಿ ಕೇಳಿದ ಶಿಸ್ತು ಸಮಿತಿ

ಪ್ರತಿ ತಿಂಗಳು ಸಾಲದ ಕಂತು ಸೇರಿದಂತೆ ಹಲವು ಕಡೆ ಹಣವನ್ನು ಪಾವತಿ ಮಾಡುವ ಅಗತ್ಯ ಇರುತ್ತದೆ. ಈ ರೀತಿ ಎರಡೂವರೆ ತಿಂಗಳ ವೇತನ ಪಾವತಿಯಾಗದಿದ್ದರೆ ಹೇಗೆ ಜೀವನ ನಡೆಸುವುದು ಎನ್ನುವುದು ಶಿಕ್ಷಕರ ಪ್ರಶ್ನೆಯಾಗಿದೆ. ಈಗ ಸಮಸ್ಯೆ ಇತ್ಯರ್ಥ ಮಾಡುವ ಹೊಣೆ ಯಾರದ್ದು ಎನ್ನುವ ಗೊಂದಲವಿದೆ. ಮೇಲಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ. ಕನಕಗಿರಿ ತಾಪಂ ಅಧಿಕಾರಿಗಳು ಹಣಕಾಸು ಇಲಾಖೆಗೆ ಪತ್ರ ಬರೆದು ಕೈಚೆಲ್ಲಿದ್ದಾರೆ.

ಕನಕಗಿರಿ ತಾಲೂಕಿನ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರ ವೇತನ ಪಾವತಿಗೆ ತಾಂತ್ರಿಕ ಸಮಸ್ಯೆ ಅಡ್ಡಿಯಾಗಿದೆ. ಈಗಾಗಲೇ ಸರಿಪಡಿಸಲು ಕ್ರಮ ವಹಿಸಲಾಗಿದೆ.

ಮುತ್ತುರಡ್ಡಿ, ಡಿಡಿಪಿಐ, ಕೊಪ್ಪಳ

ಎರಡೂವರೆ ತಿಂಗಳಿಂದಲೂ ವೇತನ ಪಾವತಿಯಾಗಿಲ್ಲ. ಕೇಳಿದರೂ ಸರಿಯಾಗಿ ಯಾರೂ ಸ್ಪಂದಿಸುತ್ತಿಲ್ಲ. ಇದರಿಂದ ಶಿಕ್ಷಕರಿಗೆ ದೊಡ್ಡ ಸಮಸ್ಯೆಯಾಗಿದೆ.

ಅನಿಲಕುಮಾರ ಅಧ್ಯಕ್ಷರು, ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕರ ಸಂಘ ತಾಲೂಕು ಘಟಕ ಕನಕಗಿರಿ

ವೇತನ ಸಮಸ್ಯೆ ಕುರಿತು ಈಗಾಗಲೇ ಅನೇಕ ಬಾರಿ ಮನವಿ ಸಲ್ಲಿಸಿದ್ದೇವೆ. ಅಧಿಕಾರಿಗಳ ಗಮನಕ್ಕೂ ತಂದಿದ್ದೇವೆ. ಆದರೂ ಪರಿಹಾರ ದೊರೆಯುತ್ತಿಲ್ಲ. ಸಮಸ್ಯೆ ಇತ್ಯರ್ಥ ಮಾಡುತ್ತಿಲ್ಲ.

ಸೋಮಶೇಖರ ಹರ್ತಿ ಜಿಲ್ಲಾಧ್ಯಕ್ಷರು, ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಕೊಪ್ಪಳ

Follow Us:
Download App:
  • android
  • ios