Education : ಅನ್ವೇಷಣೆ, ಆವಿಷ್ಕಾರಗಳೇ ಹೊಸತನದ ನಾಂದಿ, ಎಂ.ಆರ್.ದೊರೆಸ್ವಾಮಿ ಅಭಿಮತ
* ಅನ್ವೇಷಣೆ, ಆವಿಷ್ಕಾರಗಳೇ ಹೊಸತನಕ್ಕೆ ನಾಂದಿ: ಎಂ.ಆರ್.ದೊರೆಸ್ವಾಮಿ
* ವಿಇಎಸ್ ವಿವಿಯಲ್ಲಿ ಸಂಭ್ರಮ ಸಾಂಸ್ಕೃತಿಕ ಕಾರ್ಯಕ್ರದಲ್ಲಿ ಅಭಿಮತ
* ಶೈಕ್ಷಣಿಕ ಚಟುವಟಿಕೆ ಜತೆಗೆ ನಮ್ಮ ನಾಡು ನುಡಿಯ ಬಗ್ಗೆ ಗೌರವ ಅಗತ್ಯ
ಬೆಂಗಳೂರು(ಫೆ. 21) ಅನ್ವೇಷಣೆ, ಆವಿಷ್ಕಾರಗಳೇ (Research) ಹೊಸತನಕ್ಕೆ ನಾಂದಿ ಎಂದು ಪಿಇಎಸ್ (PES)ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಎಂ.ಆರ್.ದೊರೆಸ್ವಾಮಿ ಅಭಿಪ್ರಾಯಪಟ್ಟರು.
ನಗರದ (Bengaluru) ಪಿಇಎಸ್ ವಿಶ್ವವಿದ್ಯಾಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಸಂಭ್ರಮ’ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಚಟುವಟಿಕೆಗಳಿಂದ ದೂರವಿದ್ದರು. ಇದೀಗ ಪರಿಸ್ಥಿತಿ ಮೊದಲಿನ ಸ್ಥಿತಿಗೆ ಮರಳುತ್ತಿದ್ದು, ಶೈಕ್ಷಣಿಕ ಸಂಸ್ಥೆಗಳು ಪ್ರತಿಭಾ ಶೋಧನೆಯಲ್ಲಿ ಕಾರ್ಯ ನಿರತವಾಗಬೇಕು. ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಮೂಲಕ ಹೊಸ ಅನ್ವೇಷಣೆ, ಆವಿಷ್ಕಾರಗಳಿಗೆ ಅಗತ್ಯ ಸಹಕಾರ, ಒತ್ತು ನೀಡಬೇಕು. ಇವುಗಳೇ ಹೊಸತನಕ್ಕೆ ನಾಂದಿ ಹಾಡುತ್ತದೆ ಎಂದರು.
ಪಿಇಎಎಸ್ ಸಂಸ್ಥಾಪಕ, ಶೈಕ್ಷಣಿಕ ಸಲಹೆಗಾರ ಡಾ. ದೊರೆಸ್ವಾಮಿಯವರ ಯಶೋಗಾಥೆ ಇದು!
ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಚಟುವಟಿಕೆ ಜತೆಗೆ ನಮ್ಮ ನಾಡು ನುಡಿಯ ಬಗ್ಗೆ ಗೌರವ ಬೆಳೆಸಿಕೊಳ್ಳಬೇಕು. ನಾಡಿನ ಸಾಂಸ್ಕೃತಿಕ ಮಹತ್ವವನ್ನು ಅರಿಯುವ ಪ್ರಯತ್ನ ಮಾಡಬೇಕು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳೂ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗುತ್ತವೆ. ಆದ್ದರಿಂದ ಲಲಿತ ಕಲೆಗಳಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗಾಗಿಯೇ ಪಿಇಎಸ್ ವಿಶ್ವವಿದ್ಯಾಲಯದಲ್ಲಿ ಸಾಹಿತ್ಯ, ಸಂಗೀತಕ್ಕೆ ಸಂಬಂಧಿಸಿದ ಕೋರ್ಸುಗಳನ್ನು ಆರಂಭಿಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಿಇಎಸ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಜೆ. ಸೂರ್ಯಪ್ರಸಾದ್, ಡೀನ್ ಕೃಷ್ಣನ್, ಹನುಮಂತ ನಗರ ಪಿಇಎಸ್ ಕ್ಯಾಂಪಸ್ ನಿರ್ದೇಶಕ ಎಂ.ವಿ.ಸತ್ಯನಾರಾಯಣ, ಪದವಿ ಹಾಗೂ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಸಿ.ನಾರಾಯಣ ರೆಡ್ಡಿ ಉಪಸ್ಥಿತರಿದ್ದರು. ಅನೇಕ ವಿದ್ಯಾರ್ಥಿಗಳ ಪಾಲಕ, ಪೋಷಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.
ವಿದ್ಯಾರ್ಥಿಯ ವ್ಯಕ್ತಿತ್ವ ವಿಕಸನದಲ್ಲಿ ಶಿಕ್ಷಕ ಪಾತ್ರ ಮುಖ್ಯ: ಗುರು ಹಿರಿಯರಲ್ಲಿ ಅಪಾರವಾದ ಜ್ಞಾನದ ಅನುಭವವಿರುತ್ತದೆ. ಅವರನ್ನು ಸನ್ಮಾನಿಸಿ ಗೌರವಿಸುವುದು ನಮ್ಮ ಆದ್ಯ ಕರ್ತವ್ಯವೆಂದು ಪ್ರವಚನಕಾರ ತಳಗವಾರ ಆನಂದ್ ನುಡಿದರು.
ಚಿಂತಾಮಣಿ ತಾಲೂಕಿನ ಕೊಂಗನಹಳ್ಳಿ ಸ.ಹಿ.ಪ್ರಾ.ಶಾಲೆಯ ಹಳೆಯ ವಿದ್ಯಾರ್ಥಿಗಳ ಹಾಗೂ ಗ್ರಾಮಸ್ಥರಿಂದ ನಡೆದ ಗುರುವಂದನೆಯಲ್ಲಿ ಮಾತನಾಡಿ, ಮುಂದಿನ ಪೀಳಿಗೆಯ ವಿದ್ಯಾರ್ಥಿಗಳು ಇದನ್ನು ಅನುಸರಿಸುತ್ತಾರೆ. ವಿದ್ಯಾರ್ಥಿಯ ಬಹುಮುಖ ವ್ಯಕ್ತಿತ್ವವನ್ನು ವಿಕಾಸಗೊಳಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವವಾದುದೆಂದರು.
ಶೌಕ್ಷಣಿಕ ಸೌಲಭ್ಯ ಬಳಸಿಕೊಳ್ಳಿ: ಸಮೂಹ ಸಂಪನ್ಮೂಲ ವ್ಯಕ್ತಿ ಈಶ್ವರರೆಡ್ಡಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಕರಿದ್ದಾರೆ. ಗ್ರಾಮದಲ್ಲಿ ಶಾಲೆಯಿದ್ದರೆ ಮಾತ್ರ ವರ್ಷಪೂರ್ತಿ ಕಾರ್ಯಕ್ರಮಗಳನ್ನು ಆಯೋಜಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಸಾಧ್ಯವಾಗುತ್ತದೆ. ಸರ್ಕಾರವು ವಿದ್ಯಾರ್ಥಿಗಳಿಗೆ ಹಲವಾರು ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಿದ್ದು ಇದರ ಸದುಪಯೋಗವನ್ನು ಪಡೆಯಬೇಕೆಂದರು.
ಹಿರಿಯ ನಿವೃತ್ತ ಶಿಕ್ಷಕರಾದ ರಾಮಕೃಷ್ಣಶಾಸ್ತಿ್ರ, ಡಿ.ವಿ.ಶ್ರೀರಾಮರೆಡ್ಡಿ, ಆರ್.ಪ್ರಭಾವತಿ, ಕೆ.ಸುಜಾತಮ್ಮ, ಮುಖ್ಯಶಿಕ್ಷಕ ಆರ್.ಕೆ.ವಿನೋದ, ಸಹಶಿಕ್ಷಕಿ ಶಾಹಿನಾ ಬೇಗಂರನ್ನು ಶಾಲು, ಸ್ಮರಣಫಲಕ, ಫಲಪುಷ್ಪವನ್ನು ನೀಡಿ ಸನ್ಮಾನಿಸಲಾಯಿತು. ಚಿಂತಾಮಣಿ ಶ್ರೀ ಸಾಯಿ ಕಲಾನಿಕೇತನದ ವಿದ್ಯಾರ್ಥಿ ವೃಂದದವರಿಂದ ಭರತನಾಟ್ಯ ಹಾಗೂ ಕೊಂಗನಹಳ್ಳಿ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿ ಬಂದವು.
ಅನು ಮತ್ತು ಸಂಗಡಿಗರು ಪ್ರಾರ್ಥಿಸಿ ಕೆ.ಪಿ.ಮುನಿರಾಜು ಪ್ರಸ್ತಾವಿಕ ನುಡಿ, ಶಿಕ್ಷಕಿ ಚೈತ್ರ ನಿರೂಪಿಸಿದರು. ಕ್ಷೇತ್ರ ಸಮಸ್ವಯಾಧಿಕಾರಿ ಬಿ.ಎಚ್.ಮಂಜುನಾಥ್, ಶಿಕ್ಷಣ ಸಂಯೋಜಕ ಮುರಳಿಕೃಷ್ಣ, ಹಳೆಯ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು, ಎಸ್.ಡಿ.ಎಂ.ಸಿ ಸದಸ್ಯರುಗಳು ಸೇರಿದಂತೆ ಜನಪ್ರತಿನಿಧಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.