Asianet Suvarna News Asianet Suvarna News

ನರ್ಸಿಂಗ್‌, ಆರೋಗ್ಯ ಕೋರ್ಸ್‌ಗೆ ಸೆಪ್ಟೆಂಬರ್ 28ರಿಂದ ದಾಖಲೆ ಪರಿಶೀಲನೆ

2022ನೇ ಸಾಲಿನ ಬಿಎಸ್ಸಿ ನರ್ಸಿಂಗ್‌ , ಆರೋಗ್ಯ ಕೋರ್ಸ್‌ಗೆ ಸೆ.28ರಿಂದ 30 ರವರೆಗೂ ದಾಖಲೆ ಪರಿಶೀಲನೆ. -ಆಯಾ ಜಿಲ್ಲಾ ವೈದ್ಯಕೀಯ ಕಾಲೇಜುಗಳಲ್ಲಿ ಪರಿಶೀಲನೆ.

Record Verification for BSc Nursing and Health Course start from September 28th gow
Author
First Published Sep 25, 2022, 11:18 PM IST

ಬೆಂಗಳೂರು (ಸೆ.25): ಪ್ರಸಕ್ತ 2022ನೇ ಸಾಲಿನ ಬಿಎಸ್ಸಿ ನರ್ಸಿಂಗ್‌ ಸೇರಿದಂತೆ ಇತರೆ ಆನ್ವಯಿಕ ಆರೋಗ್ಯ ವಿಜ್ಞಾನ ಕೋರ್ಸ್‌ಗಳ ಪ್ರವೇಶ ಬಯಸುವ ಆಕಾಂಕ್ಷಿಗಳ ದಾಖಲಾತಿ ಪರಿಶೀಲನೆಯನ್ನು ಸೆ.28ರಿಂದ 30 ರವರೆಗೂ ನಡೆಸಲಾಗುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ. ಬಿಎಸ್‌ಸಿ ನರ್ಸಿಂಗ್‌, ಬಿಪಿಒ, ಬಿಪಿಟಿ, ಬಿಎಸ್ಸಿ ಅಲೈಡ್‌ ಹೆಲ್ತ್‌ ಸೈನ್ಸ್‌ ಕೋರ್ಸ್‌ಗಳ ಪ್ರವೇಶಾತಿಗೆ ಅರ್ಹರಿರುವ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆಯು ಆಯಾ ಜಿಲ್ಲಾ ವೈದ್ಯಕೀಯ ಕಾಲೇಜುಗಳಲ್ಲಿ ನಡೆಯಲಿದೆ. ಯುಜಿ ಸಿಇಟಿ 2022ರ ಇಂಜನಿಯರಿಂಗ್‌, ಕೃಷಿ ವಿಜ್ಞಾನ  ಮುಂತಾದ ಕೋರ್ಸ್‌ಗಳ ಪ್ರವೇಶಾತಿಗೆ ಈಗಾಗಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳಲ್ಲಿ ವ್ಯಾಸಂಗ ಪ್ರಮಾಣ ಪತ್ರಗಳನ್ನು ಪರಿಶೀಲಿಸಿಕೊಂಡಿರುವ ಅಭ್ಯರ್ಥಿಗಳು ಮತ್ತೊಮ್ಮೆ ದಾಖಲಾತಿ ಪರಿಶೀಲನೆ ಮಾಡಿಸುವ ಅಗತ್ಯವಿರುವುದಿಲ್ಲ. ಸೆ.28ರಂದು 4 ಸಾವಿರ ರ‍್ಯಾಂಕ್‌ವರೆಗೆ, 29ರಿಂದ 4001ರಿಂದ 9 ಸಾವಿರ, ಸೆ.30ರಂದು 9001ರಿಂದ ಕೊನೆಯ ರ‍್ಯಾಂಕ್‌ವರೆಗೂ ಪರಿಶೀಲನೆ ನಡೆಯಲಿದೆ. ಅಭ್ಯರ್ಥಿಗಳು ಮೂಲ ದಾಖಲೆಗಳು ಮತ್ತು ದೃಢೀಕರಿಸಿದ ಒಂದು ಸೆಟ್‌ ಝೆರಾಕ್ಸ್‌ ಪ್ರತಿಯೊಂದಿಗೆ ಹಾಜರಾಗುವಂತೆ ಕೆಇಎ ಪ್ರಕಟಣೆ ತಿಳಿಸಿದೆ.

ಅರ್ಜಿ ಆಹ್ವಾನ: ಕೆಇಎ ನಡೆಸುವ 2022ರ ಸಿಇಟಿ ಬರೆದಿರುವ, ವಾಸ್ತುಶಿಲ್ಪ ಪ್ರವೇಶಕ್ಕೆ ಕೌನ್ಸೆಲ್‌ ಅರ್ಕಿಟೆಕ್ಚರ್‌ ನಡೆಸುವ ನಾಟಾ ಪರೀಕ್ಷೆಗೆ ಹಾಜರಾಗಿ ನಾಟಾ ಸ್ಕೋರ್‌ ಪಡೆದಿರುವ ಅಭ್ಯರ್ಥಿಗಳಿಂದ ಡಿಪ್ಲೊಮಾ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಸೆ.27ರಿಂದ ಆನ್‌ಲೈನ್‌ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ನೋಂದಣಿ ಶುಲ್ಕ ಪಾವತಿಸಲು ಅ.7ರವರೆಗೆ ಅವಕಾಶವಿದೆ. ಪರೀಕ್ಷೆಯ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಕೆಇಎ ತಿಳಿಸಿದೆ.

ಸಿಇಟಿ ಕೌನ್ಸೆಲಿಂಗ್‌ ಬಿಕ್ಕಟ್ಟಿಗೆ ಕಡೆಗೂ ತೆರೆ: ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಪುನರಾವರ್ತಿತ ವಿದ್ಯಾರ್ಥಿಗಳ 2021ನೇ ಸಾಲಿನ ಪಿಯು ಅಂಕಗಳನ್ನು 2022ನೇ ಸಾಲಿನ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಪರಿಗಣಿಸುವ ವಿಚಾರದಲ್ಲಿ ಉಂಟಾಗಿದ್ದ ಬಿಕ್ಕಟ್ಟಿಗೆ ಅಂತಿಮ ತೆರೆ ಎಳೆದಿರುವಹೈಕೋರ್ಟ್‌, ತಜ್ಞರ ಸಮಿತಿ ಶಿಫಾರಸು ಮಾಡಿರುವ ರೂಟ್‌ ಮೀನ್‌ ಸ್ವೇರ್ (ಆರ್‌ಎಂಎಸ್‌) ವಿಧಾನ ಅಳವಡಿಸಿ ಹೊಸದಾಗಿ ಸಿಇಟಿ ರ‍್ಯಾಂಕ್‌ ಪಟ್ಟಿಪ್ರಕಟಿಸಲು ಸರ್ಕಾರಕ್ಕೆ ಅನುಮತಿ ನೀಡಿ ಆದೇಶಿಸಿದೆ.

ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನ ಉಪಾಧ್ಯಕ್ಷ ಪ್ರೊ.ಬಿ. ತಿಮ್ಮೇಗೌಡ ಅಧ್ಯಕ್ಷತೆಯ ತಜ್ಞರ ಸಮಿತಿ ಸೂಚಿಸಿರುವ ಆರ್‌ಎಂಎಸ್‌ ವಿಧಾನದಂತೆ ಸಿಇಟಿ ಪುನರಾವರ್ತಿತ (ರಿಪೀಟರ್ಸ್‌) ವಿದ್ಯಾರ್ಥಿಗಳು 2021ನೇ ಸಾಲಿನಲ್ಲಿ ದ್ವಿತೀಯ ಪಿಯು ಪರೀಕ್ಷೆಯ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ವಿಷಯಗಳಲ್ಲಿ ಪಡೆದಿರುವ ಅಂಕಗಳಲ್ಲಿ ಸರಾಸರಿ ಐದರಿಂದ ಏಳು ಅಂಕಗಳನ್ನು ಕಡಿತಗೊಳಿಸಬೇಕು. ಆಗ 100 ಅರ್ಹತಾ ಅಂಕಗಳಿಗೆ 6 ಅಂಕ ಕಡಿಮೆಯಾಗುತ್ತದೆ. ಈ ಕಡಿತಗೊಂಡ ಪಿಯು ಅಂಕಗಳ ಶೇ.50 ಹಾಗೂ 2022ನೇ ಸಾಲಿನ ಸಿಇಟಿಯಲ್ಲಿ ಪಡೆದ ಶೇ. 50 ಅಂಕಗಳನ್ನು ರ‍್ಯಾಂಕಿಂಗ್‌ಗೆ ಪರಿಗಣಿಸಬೇಕು ಎಂದುಹೈಕೋರ್ಟ್‌ ಆದೇಶಿಸಿದೆ.

ಇದರೊಂದಿಗೆ ಹೊಸ ವಿದ್ಯಾರ್ಥಿಗಳ ರ‍್ಯಾಂಕ್‌ ಪ್ರಕಟಿಸಲು ಅವರ ದ್ವಿತೀಯ ಪಿಯು ಪರೀಕ್ಷೆಯ ಶೇ.50 ಮತ್ತು ಸಿಇಟಿಯ ಶೇ.50 ಅಂಕಗಳನ್ನು ಪರಿಗಣಿಸಲಾಗುತ್ತದೆ.

ಸಿಇಟಿ ಪುನರಾವರ್ತಿತ ವಿದ್ಯಾರ್ಥಿಗಳ ದ್ವಿತೀಯ ಪಿಯು ಪರೀಕ್ಷೆಯ ಶೇ.50 ಅಂಕ ಹಾಗೂ ಸಿಇಟಿಯ ಶೇ.50 ಅಂಕಗಳನ್ನು ಪರಿಗಣಿಸಿ ಹೊಸದಾಗಿ ರ‍್ಯಾಂಕ್‌ ಪಟ್ಟಿಪ್ರಕಟಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ನಿರ್ದೇಶಿಸಿ ಸೆ.3 ರಂದು ಹೈಕೋರ್ಟ್‌ ಏಕಸದಸ್ಯ ಪೀಠ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್‌ ಆರಾಧೆ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ವಿಚಾರಣೆ ವೇಳೆ ಆರ್‌ಎಂಎಸ್‌ ವಿಧಾನವನ್ನು ಸರ್ಕಾರ ಮತ್ತು ಸಿಇಟಿ ಪುನರಾವರ್ತಿತ ವಿದ್ಯಾರ್ಥಿಗಳ ಪರ ವಕೀಲರು ಸಮ್ಮತಿಸಿದರು. ಅದನ್ನು ಪರಿಗಣಿಸಿದ ಪೀಠ, ಸಮಿತಿ ಸೂಚಿಸಿರುವ ಆರ್‌ಎಂಎಸ್‌ ವಿಧಾನ ಅಳವಡಿಸಿಕೊಂಡು ಹೊಸದಾಗಿ ಸಿಇಟಿ ರ‍್ಯಾಂಕಿಂಗ್‌ ಪಟ್ಟಿಪ್ರಕಟಿಸಲು ಸರ್ಕಾರಕ್ಕೆ ಸೂಚಿಸಿದೆ.

CET: ಪೂರ್ಣ ಇಲ್ಲ, ಶೇ.60ರಷ್ಟು ಮಾತ್ರ ಪರಿಹಾರ: ತಜ್ಞರು

ಐಟಿ ಸೀಟು ಶೇ.10 ಹೆಚ್ಚಳಕ್ಕೆ ಶಿಫಾರಸು: ಅಲ್ಲದೆ, ಸಮಿತಿ ಶಿಫಾರಸಿನಂತೆ ಹೊಸದಾಗಿ ರ‍್ಯಾಂಕ್‌ ಪ್ರಕಟಿಸುವುದರಿಂದ ಪುನರಾವರ್ತಿತ ವಿದ್ಯಾರ್ಥಿಗಳ ಶ್ರೇಣಿ ಸುಧಾರಿಸಿ, ರ‍್ಯಾಂಕಿಂಗ್‌ ಮಟ್ಟಮೇಲೇರುತ್ತದೆ. ಅದೇ ರೀತಿ 2022ನೇ ಸಾಲಿನ ವಿದ್ಯಾರ್ಥಿಗಳ (ಮಧ್ಯಮ ಕ್ರಮಾಂಕದಲ್ಲಿರುವ) ರ‍್ಯಾಂಕ್‌ ಮಟ್ಟಕುಸಿಯುತ್ತದೆ. ಈ ವ್ಯತ್ಯಯ ಸಾಧ್ಯವಾದಷ್ಟು ಸರಿದೂಗಿಸಿ ಹೊಸ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅತಿಹೆಚ್ಚು ಬೇಡಿಕೆಯಿರುವ ಮಾಹಿತಿ ತಂತ್ರಜ್ಞಾನ (ಐಟಿ) ವಿಭಾಗದ ಸೀಟುಗಳ ಪ್ರಮಾಣವನ್ನು ಶೇ.10ರಷ್ಟು ಹೆಚ್ಚಿಸಬಹುದು ಸಹ ಸಮಿತಿ ಶಿಫಾರಸು ಮಾಡಿದೆ.

ಸಿಇಟಿ ರ‍್ಯಾಂಕ್‌ ಸೂತ್ರ: ರಿಪೀಟರ್ಸ್‌ಗೆ 6% ಕಡಿತ, ರ‍್ಯಾಂಕಿಂಗ್‌ ಪಟ್ಟಿ ಪ್ರಕಟಕ್ಕೆ

ಆ ಶಿಫಾರಸನ್ನು ಪರಿಗಣಿಸುವಂತೆಯೂ ಸರ್ಕಾರಕ್ಕೆ ನಿರ್ದೇಶಿಸಿರುವ ವಿಭಾಗೀಯ ಪೀಠ, ಹೊಸದಾಗಿ ಸಿಇಟಿ ರ‍್ಯಾಂಕ್‌ ಲಿಸ್ಟ್‌ ಪ್ರಕಟಿಸುವುದು ಸೀಮಿತ ಉದ್ದೇಶಕ್ಕೆ ಮಾತ್ರ. 2020-21ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯ ಅರ್ಹತಾ ಅಂಕಗಳು ಮತ್ತು 2022-23ನೇ ಸಾಲಿನ ಸಿಇಟಿಯ ಅಂಕಗಳನ್ನು ಪರಿಗಣಿಸಬೇಕು ಎಂದು ಸ್ಪಷ್ಟಪಡಿಸಿ ಮೇಲ್ಮನವಿ ಇತ್ಯರ್ಥಪಡಿಸಿದೆ.

Follow Us:
Download App:
  • android
  • ios