ಸಿಇಟಿ ರ‍್ಯಾಂಕ್‌ ಸೂತ್ರ: ರಿಪೀಟರ್ಸ್‌ಗೆ 6% ಕಡಿತ, ರ‍್ಯಾಂಕಿಂಗ್‌ ಪಟ್ಟಿ ಪ್ರಕಟಕ್ಕೆ ಹೈಕೋರ್ಟ್‌ ಆದೇಶ

ಹೊಸ ವಿದ್ಯಾರ್ಥಿಗಳ ರ‍್ಯಾಂಕ್‌ ಪ್ರಕಟಿಸಲು ಅವರ ದ್ವಿತೀಯ ಪಿಯು ಪರೀಕ್ಷೆಯ ಶೇ.50 ಮತ್ತು ಸಿಇಟಿಯ ಶೇ.50 ಅಂಕಗಳನ್ನು ಪರಿಗಣಿಸಲಾಗುತ್ತದೆ.
 

High Court Order Publish of CET Ranking List in Karnataka grg

ಬೆಂಗಳೂರು(ಸೆ.24):  ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಪುನರಾವರ್ತಿತ ವಿದ್ಯಾರ್ಥಿಗಳ 2021ನೇ ಸಾಲಿನ ಪಿಯು ಅಂಕಗಳನ್ನು 2022ನೇ ಸಾಲಿನ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಪರಿಗಣಿಸುವ ವಿಚಾರದಲ್ಲಿ ಉಂಟಾಗಿದ್ದ ಬಿಕ್ಕಟ್ಟಿಗೆ ಅಂತಿಮ ತೆರೆ ಎಳೆದಿರುವ ಹೈಕೋರ್ಟ್‌, ತಜ್ಞರ ಸಮಿತಿ ಶಿಫಾರಸು ಮಾಡಿರುವ ರೂಟ್‌ ಮೀನ್‌ ಸ್ಕ್ವೇರ್‌ (ಆರ್‌ಎಂಎಸ್‌) ವಿಧಾನ ಅಳವಡಿಸಿ ಹೊಸದಾಗಿ ಸಿಇಟಿ ರಾರ‍ಯಂಕ್‌ ಪಟ್ಟಿಪ್ರಕಟಿಸಲು ಸರ್ಕಾರಕ್ಕೆ ಅನುಮತಿ ನೀಡಿ ಆದೇಶಿಸಿದೆ.

ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನ ಉಪಾಧ್ಯಕ್ಷ ಪ್ರೊ.ಬಿ. ತಿಮ್ಮೇಗೌಡ ಅಧ್ಯಕ್ಷತೆಯ ತಜ್ಞರ ಸಮಿತಿ ಸೂಚಿಸಿರುವ ಆರ್‌ಎಂಎಸ್‌ ವಿಧಾನದಂತೆ ಸಿಇಟಿ ಪುನರಾವರ್ತಿತ (ರಿಪೀಟರ್ಸ್‌) ವಿದ್ಯಾರ್ಥಿಗಳು 2021ನೇ ಸಾಲಿನಲ್ಲಿ ದ್ವಿತೀಯ ಪಿಯು ಪರೀಕ್ಷೆಯ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ವಿಷಯಗಳಲ್ಲಿ ಪಡೆದಿರುವ ಅಂಕಗಳಲ್ಲಿ ಸರಾಸರಿ ಐದರಿಂದ ಏಳು ಅಂಕಗಳನ್ನು ಕಡಿತಗೊಳಿಸಬೇಕು. ಆಗ 100 ಅರ್ಹತಾ ಅಂಕಗಳಿಗೆ 6 ಅಂಕ ಕಡಿಮೆಯಾಗುತ್ತದೆ. ಈ ಕಡಿತಗೊಂಡ ಪಿಯು ಅಂಕಗಳ ಶೇ.50 ಹಾಗೂ 2022ನೇ ಸಾಲಿನ ಸಿಇಟಿಯಲ್ಲಿ ಪಡೆದ ಶೇ. 50 ಅಂಕಗಳನ್ನು ರಾರ‍ಯಂಕಿಂಗ್‌ಗೆ ಪರಿಗಣಿಸಬೇಕು ಎಂದು ಹೈಕೋರ್ಟ್‌ ಆದೇಶಿಸಿದೆ. ಇದರೊಂದಿಗೆ ಹೊಸ ವಿದ್ಯಾರ್ಥಿಗಳ ರ‍್ಯಾಂಕ್‌ ಪ್ರಕಟಿಸಲು ಅವರ ದ್ವಿತೀಯ ಪಿಯು ಪರೀಕ್ಷೆಯ ಶೇ.50 ಮತ್ತು ಸಿಇಟಿಯ ಶೇ.50 ಅಂಕಗಳನ್ನು ಪರಿಗಣಿಸಲಾಗುತ್ತದೆ.

CET Rank: ಹೈಕೋರ್ಟ್ ತೀರ್ಪು ಪ್ರಶ್ನಿಸಿ ರಾಜ್ಯ ಸರ್ಕಾರದ ಮೇಲ್ಮನವಿ

ಸಿಇಟಿ ಪುನರಾವರ್ತಿತ ವಿದ್ಯಾರ್ಥಿಗಳ ದ್ವಿತೀಯ ಪಿಯು ಪರೀಕ್ಷೆಯ ಶೇ.50 ಅಂಕ ಹಾಗೂ ಸಿಇಟಿಯ ಶೇ.50 ಅಂಕಗಳನ್ನು ಪರಿಗಣಿಸಿ ಹೊಸದಾಗಿ ರ‍್ಯಾಂಕ್‌ ಪಟ್ಟಿಪ್ರಕಟಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ನಿರ್ದೇಶಿಸಿ ಸೆ.3 ರಂದು ಹೈಕೋರ್ಟ್‌ ಏಕಸದಸ್ಯ ಪೀಠ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್‌ ಆರಾಧೆ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ವಿಚಾರಣೆ ವೇಳೆ ಆರ್‌ಎಂಎಸ್‌ ವಿಧಾನವನ್ನು ಸರ್ಕಾರ ಮತ್ತು ಸಿಇಟಿ ಪುನರಾವರ್ತಿತ ವಿದ್ಯಾರ್ಥಿಗಳ ಪರ ವಕೀಲರು ಸಮ್ಮತಿಸಿದರು. ಅದನ್ನು ಪರಿಗಣಿಸಿದ ಪೀಠ, ಸಮಿತಿ ಸೂಚಿಸಿರುವ ಆರ್‌ಎಂಎಸ್‌ ವಿಧಾನ ಅಳವಡಿಸಿಕೊಂಡು ಹೊಸದಾಗಿ ಸಿಇಟಿ ರ‍್ಯಾಂಕಿಂಗ್‌ ಪಟ್ಟಿ ಪ್ರಕಟಿಸಲು ಸರ್ಕಾರಕ್ಕೆ ಸೂಚಿಸಿದೆ.

ಐಟಿ ಸೀಟು ಶೇ.10 ಹೆಚ್ಚಳಕ್ಕೆ ಶಿಫಾರಸು:

ಅಲ್ಲದೆ, ಸಮಿತಿ ಶಿಫಾರಸಿನಂತೆ ಹೊಸದಾಗಿ ರಾರ‍ಯಂಕ್‌ ಪ್ರಕಟಿಸುವುದರಿಂದ ಪುನರಾವರ್ತಿತ ವಿದ್ಯಾರ್ಥಿಗಳ ಶ್ರೇಣಿ ಸುಧಾರಿಸಿ, ರಾರ‍ಯಂಕಿಂಗ್‌ ಮಟ್ಟಮೇಲೇರುತ್ತದೆ. ಅದೇ ರೀತಿ 2022ನೇ ಸಾಲಿನ ವಿದ್ಯಾರ್ಥಿಗಳ (ಮಧ್ಯಮ ಕ್ರಮಾಂಕದಲ್ಲಿರುವ) ರ‍್ಯಾಂಕ್‌ ಮಟ್ಟ ಕುಸಿಯುತ್ತದೆ. ಈ ವ್ಯತ್ಯಯ ಸಾಧ್ಯವಾದಷ್ಟುಸರಿದೂಗಿಸಿ ಹೊಸ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅತಿಹೆಚ್ಚು ಬೇಡಿಕೆಯಿರುವ ಮಾಹಿತಿ ತಂತ್ರಜ್ಞಾನ (ಐಟಿ) ವಿಭಾಗದ ಸೀಟುಗಳ ಪ್ರಮಾಣವನ್ನು ಶೇ.10ರಷ್ಟು ಹೆಚ್ಚಿಸಬಹುದು ಸಹ ಸಮಿತಿ ಶಿಫಾರಸು ಮಾಡಿದೆ.

ಆ ಶಿಫಾರಸನ್ನು ಪರಿಗಣಿಸುವಂತೆಯೂ ಸರ್ಕಾರಕ್ಕೆ ನಿರ್ದೇಶಿಸಿರುವ ವಿಭಾಗೀಯ ಪೀಠ, ಹೊಸದಾಗಿ ಸಿಇಟಿ ರ‍್ಯಾಂಕ್‌ ಲಿಸ್ಟ್‌ ಪ್ರಕಟಿಸುವುದು ಸೀಮಿತ ಉದ್ದೇಶಕ್ಕೆ ಮಾತ್ರ. 2020-21ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯ ಅರ್ಹತಾ ಅಂಕಗಳು ಮತ್ತು 2022-23ನೇ ಸಾಲಿನ ಸಿಇಟಿಯ ಅಂಕಗಳನ್ನು ಪರಿಗಣಿಸಬೇಕು ಎಂದು ಸ್ಪಷ್ಟಪಡಿಸಿ ಮೇಲ್ಮನವಿ ಇತ್ಯರ್ಥಪಡಿಸಿದೆ.

ಆರ್‌ಎಂಎಸ್‌ ವಿಧಾನವೇನು?

ಆರ್‌ಎಂಎಸ್‌ ವಿಧಾನದಲ್ಲಿ 2021ನೇ ಸಾಲಿನ ಪಿಯು ವಿದ್ಯಾರ್ಥಿಗಳಿಗೆ 3 ವಿಷಯಗಳಿಂದ ಒಟ್ಟು 18 ಅಂಕಗಳನ್ನು ಕಡಿತಗೊಳಿಸಿ, ಸಾಮಾನ್ಯೀಕರಿಸಬೇಕು. ಅಂದರೆ ಭೌತಶಾಸ್ತ್ರದ ಸರಾಸರಿ 6 ಅಂಕ, ರಸಾಯನ ಶಾಸ್ತ್ರದ 5 ಅಂಕ ಹಾಗೂ ಗಣಿತದ 7 ಅಂಕಗಳನ್ನು ಕಡಿತಗೊಳಿಸಬೇಕು. ಆಗ 100 ಅರ್ಹತಾ ಅಂಕಗಳಿಗೆ 6 ಅಂಕ ಕಡಿಮೆಯಾಗಲಿದೆ. ಬಳಿಕ 2021ನೇ ಸಾಲಿನ ವಿದ್ಯಾರ್ಥಿಗಳ ಒಟ್ಟು ಪಿಯು ಅಂಕಗಳ ಶೇ. 50 ಹಾಗೂ 2022ರ ಸಿಇಟಿಯಲ್ಲಿ ಅವರು ಪಡೆದ ಶೇ. 50 ಅಂಕ ಪರಿಗಣಿಸಿ ರ‍್ಯಾಂಕಿಂಗ್‌ ಪಟ್ಟಿ ಪ್ರಕಟಿಸಬಹುದು.

ಮಕ್ಕಳಲ್ಲಿ ಗಣಿತದ ಆಸಕ್ತಿ ಮೂಡಿಸುವುದು ಅಗತ್ಯ; ಪ್ರಲ್ಹಾದ್ ಜೋಶಿ

ಈ ವಿಧಾನ ಅನುಸರಿಸುವುದರಿಂದ ಕೋವಿಡ್‌ ಸಂದರ್ಭದಲ್ಲಿ ಪರೀಕ್ಷೆ ಬರೆಯದೆ ದ್ವಿತೀಯ ಪಿಯು ಉತ್ತೀರ್ಣರಾಗಿದ್ದ ವಿದ್ಯಾರ್ಥಿಗಳ (ಸಿಇಟಿ ಪುನರಾವರ್ತಿತರು) ಶ್ರೇಣಿ ಸುಧಾರಿಸುವ ಸಾಧ್ಯತೆಯಿದೆ. ಹಾಗೆಯೇ, ಕೋವಿಡ್‌ ನಂತರದಲ್ಲಿ ಪರೀಕ್ಷೆ ಬರೆದಿದ್ದ ಬ್ಯಾಚ್‌ನ ವಿದ್ಯಾರ್ಥಿಗಳ ಶ್ರೇಯಾಂಕದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಪ್ರಕರಣವೇನು?

2020-21ನೇ ಸಾಲಿನ (ಕೋವಿಡ್‌ ಅವಧಿಯ) ಪಿಯುಸಿ ಅಂಕಗಳನ್ನು 2022ನೇ ಸಾಲಿನ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಪರಿಗಣಿಸಲಾಗದು ಎಂದು ತಿಳಿಸಿ ಕೆಇಎ ಜು.30ರಂದು ಟಿಪ್ಪಣಿ ಹೊರಡಿಸಿತ್ತು. ಅದನ್ನು ಪ್ರಶ್ನಿಸಿ 40ಕ್ಕೂ ಅಧಿಕ ಸಿಇಟಿ ಪುನರಾವರ್ತಿತ ವಿದ್ಯಾರ್ಥಿಗಳು ಹೈಕೋರ್ಚ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳನ್ನು ಪುರಸ್ಕರಿಸಿದ್ದ ಏಕಸದಸ್ಯ ಪೀಠ, ಕೆಇಎ ಹೊರಡಿಸಿದ್ದ ಟಿಪ್ಪಣಿ ರದ್ದುಪಡಿಸಿತ್ತು. ಜತೆಗೆ, ಸಿಇಟಿ ಪುನರಾವರ್ತಿತ ವಿದ್ಯಾರ್ಥಿಗಳ ಪಿಯುಸಿಯ ಶೇ.50 ಅಂಕ ಹಾಗೂ ಸಿಇಟಿಯ ಶೇ.50 ಅಂಕಗಳನ್ನು ಪರಿಗಣಿಸಿ ಹೊಸದಾಗಿ ರಾರ‍ಯಂಕ್‌ ಪಟ್ಟಿ ಪ್ರಕಟಿಸುವಂತೆ ಸೆ.3ರಂದು ಕೆಇಎಗೆ ಆದೇಶಿಸಿತ್ತು. ಈ ತೀರ್ಪು ರದ್ದುಪಡಿಸುವಂತೆ ಕೋರಿ ಸರ್ಕಾರ ಹೈಕೋರ್ಟ್‌ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು.

ಸಮಿತಿ ರಚನೆ:

ಮೇಲ್ಮನವಿ ವಿಚಾರಣೆ ಹಂತದಲ್ಲಿರುವಾಗಲೇ ರಾಜ್ಯ ಸರ್ಕಾರವು ಸಿಇಟಿ ಬಿಕ್ಕಟ್ಟು ಪರಿಹರಿಸಲು ಸಮನ್ವಯ ಸೂತ್ರ ರೂಪಿಸಲು ಸೆ.20ರಂದು ಸಮಿತಿಯನ್ನು ರಚಿಸಿತ್ತು. ಸಮಿತಿ ಸಲ್ಲಿಸಿದ ವರದಿಯನ್ನು ಸೆ.22ರಂದು ಸರ್ಕಾರವು ಹೈಕೋರ್ಟ್‌ಗೆ ನೀಡಿತ್ತು. ಪ್ರಕರಣದ ಎಲ್ಲಾ ಅಂಶ ಪರಿಶೀಲಿಸಿದ್ದ ಸಮಿತಿ, ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಎರಡು ವಿಧಾನ ಪರಿಗಣಿಸಿತ್ತು. ಅದರಲ್ಲಿ ಮೊದಲಿನದು ಮೀನ್‌ ಆ್ಯಂಡ್‌ ಸ್ಟ್ಯಾಂಡರ್ಡ್‌ ಡೀವಿಯೇಷನ್‌ ವಿಧಾನ (ಎಂಎಸ್‌ಡಿ). ಎರಡನೆಯದು ರೂಟ್‌ ಮೀನ್‌ ಸ್ಕ್ವೇವೕರ್‌ (ಆರ್‌ಎಂಎಸ್‌) ವಿಧಾನ. ಬಿಕ್ಕಟ್ಟು ಪರಿಹರಿಸಲು ಎಂಎಸ್‌ಡಿ ವಿಧಾನವು ಅಷ್ಟೊಂದು ಪರಿಣಾಕಾರಿಯಲ್ಲ ಎಂದು ಸಮಿತಿ ತಿಳಿಸಿ ಆರ್‌ಎಂಎಸ್‌ ವಿಧಾನವನ್ನು ಸೂಕ್ತ ಪರಿಹಾರ ಸೂತ್ರ ಎಂದು ಶಿಫಾರಸು ಮಾಡಿತ್ತು.

ಏನಿದು ಸೂತ್ರ?

- 2021ನೇ ಸಾಲಿನವರ ದ್ವಿತೀಯ ಪಿಯು ಅಂಕದಲ್ಲಿ 6 ಅಂಕ ಕಡಿತಗೊಳಿಸಬೇಕು
- ನಂತರ 50% ಪಿಯು ಅಂಕ, 2022ನೇ ಸಾಲಿನ 50% ಸಿಇಟಿ ಅಂಕ ಪರಿಗಣಿಸಬೇಕು
- ಹೊಸ ವಿದ್ಯಾರ್ಥಿಗಳ ರ‍್ಯಾಂಕ್‌ ಪ್ರಕಟಕ್ಕೆ ಪಿಯು 50%, ಸಿಇಟಿ 50% ಅಂಕ ಗಣನೆಗೆ
- ಇದಾದ ಬಳಿಕ ಹೊಸ ರ‍್ಯಾಂಕಿಂಗ್‌ ಪಟ್ಟಿ ಪ್ರಕಟ
 

Latest Videos
Follow Us:
Download App:
  • android
  • ios