Asianet Suvarna News Asianet Suvarna News

CET: ಪೂರ್ಣ ಇಲ್ಲ, ಶೇ.60ರಷ್ಟು ಮಾತ್ರ ಪರಿಹಾರ: ತಜ್ಞರು

ಹೊಸ ರ‍್ಯಾಂಕಿಂಗ್‌ನಲ್ಲಿ ಈಗಾಗಲೇ ಪ್ರಕಟಿಸಿರುವ ರ‍್ಯಾಂಕಿಂಗ್‌ನಲ್ಲಿ ಉನ್ನತ ಕ್ರಮಾಂಕದಲ್ಲಿರುವ ಹೊಸ ವಿದ್ಯಾರ್ಥಿಗಳ ಸ್ಥಾನ ಅಷ್ಟಾಗಿ ಬದಲಾವಣೆಯಾಗುವುದಿಲ್ಲ. 

Only 60 Percent Solution of CET Crisis Says Experts
Author
First Published Sep 24, 2022, 9:00 AM IST

ಬೆಂಗಳೂರು(ಸೆ.24):  ಪ್ರಸಕ್ತ ಸಾಲಿನ ವೃತ್ತಿರ ಕೋರ್ಸುಗಳ ಪ್ರವೇಶಕ್ಕೆ ಸರ್ಕಾರದ ಸಮನ್ವಯ ಸೂತ್ರ ಅನುಸರಿಸಿ ಹೊಸ ರ‍್ಯಾಂಕಿಂಗ್‌ ಪಟ್ಟಿ ಪ್ರಕಟಿಸುವುದರಿಂದ ಸಿಇಟಿ ಬಿಕ್ಕಟ್ಟಿಗೆ ಶೇ.100ರಷ್ಟು ಪರಿಹಾರ ಸಿಗುವುದಿಲ್ಲ. ಭಾಗಶಃ ಅಂದರೆ ಶೇ.50ರಿಂದ 60ರಷ್ಟು ಪರಿಹಾರ ಸಿಗಬಹುದು ಎಂಬುದು ತಜ್ಞರ ಅಂದಾಜು ಲೆಕ್ಕಾಚಾರ. ಅಂದರೆ, ಹೊಸ ರ‍್ಯಾಂಕಿಂಗ್‌ನಲ್ಲಿ ಈಗಾಗಲೇ ಪ್ರಕಟಿಸಿರುವ ರ‍್ಯಾಂಕಿಂಗ್‌ನಲ್ಲಿ ಉನ್ನತ ಕ್ರಮಾಂಕದಲ್ಲಿರುವ (ಶೇ.91ರಿಂದ 100ರಷ್ಟುಫಲಿತಾಂಶ) ಹೊಸ ವಿದ್ಯಾರ್ಥಿಗಳ ಸ್ಥಾನ ಅಷ್ಟಾಗಿ ಬದಲಾವಣೆಯಾಗುವುದಿಲ್ಲ. ಏಕೆಂದರೆ ಪುನರಾವರ್ತಿತ ಅಭ್ಯರ್ಥಿಗಳು ಪರೀಕ್ಷೆ ಇಲ್ಲದೆ ಪಡೆದ ಪಿಯುಸಿ ಫಲಿತಾಂಶದಲ್ಲಿ ನೀಡಲಾಗಿದ್ದ ಗ್ರೇಸ್‌ ಅಂಕದಷ್ಟು ಪ್ರಮಾಣದ (ಪ್ರತಿ ವಿಷಯದಲ್ಲಿ 100ಕ್ಕೆ 6 ಅಂಕದಂತೆ) ಅಂಕ ಕಡಿತಗೊಳಿಸಲಾಗುತ್ತದೆ.

ಇವರಲ್ಲಿ ಗ್ರೇಸ್‌ ಅಂಕಗಳಿಂದಲೇ ಉನ್ನತ ಶ್ರೇಣಿ ಫಲಿತಾಂಶ ಪಡೆದವರು ಈ ನೀತಿಯಿಂದ ಉನ್ನತ ಕ್ರಮಾಂಕದ ರ‍್ಯಾಂಕಿಂಗ್‌ ಪಡೆಯುವ ಸಾಧ್ಯತೆಯಿಲ್ಲ. ಆದರೆ, ಮಧ್ಯಮ ಕ್ರಮಾಂಕದ (ಶೇ.70ರಿಂದ 90ರಷ್ಟುಫಲಿತಾಂಶ) ರಾರ‍ಯಂಕಿಂಗ್‌ ಪಡೆದಿರುವ ಹೊಸ ವಿದ್ಯಾರ್ಥಿಗಳ ಸ್ಥಾನಗಳು ಮಾತ್ರ ಖಚಿತವಾಗಿ ಏರುಪೇರಾಗಲಿದೆ. ಈ ನೀತಿಯಿಂದ ಈಗಾಗಲೇ ನೀಡಲಾಗಿರುವ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಬದಲಾವಣೆಯಾಗುವುದು ಖಚಿತ. 2021ರ ಕೋವಿಡ್‌ ಅವಧಿಯ ಪುನರಾವರ್ತಿತ ವಿದ್ಯಾರ್ಥಿಗಳ ರ‍್ಯಾಂಕಿಂಗ್‌ ಮೇಲೇರಲಿದೆ. ಹೊಸ ಅಭ್ಯರ್ಥಿಗಳ ರಾರ‍ಯಂಕಿಂಗ್‌ ಕೆಳಗಿಳಿಯಲಿದೆ ಎನ್ನಲಾಗುತ್ತಿದೆ. ಈ ಏರಿಳಿತದಿಂದ ಹೊಸ ವಿದ್ಯಾರ್ಥಿಗಳಿಗೆ ಆಗುವ ಸೀಟು ನಷ್ಟ ಸರಿದೂಗಿಸಲು ಅತಿ ಹೆಚ್ಚು ಬೇಡಿಕೆ ಇರುವ ಮಾಹಿತಿ ತಂತ್ರಜ್ಞಾನ ವಿಭಾಗದ ಸೀಟುಗಳ ಪ್ರಮಾಣವನ್ನು ಶೇ.10ರಷ್ಟು ಹೆಚ್ಚಿಸಿದರೂ ಕೂಡ ಒಂದಷ್ಟು ಮಕ್ಕಳಿಗೆ ಸೀಟು ಸಿಗದೆ ಹೋಗುವ ಸಾಧ್ಯ ಹೆಚ್ಚಾಗಿದೆ ಎನ್ನುವುದು ತಜ್ಞರ ಅಭಿಪ್ರಾಯ.

ಸಿಇಟಿ ರ‍್ಯಾಂಕ್‌ ಸೂತ್ರ: ರಿಪೀಟರ್ಸ್‌ಗೆ 6% ಕಡಿತ, ರ‍್ಯಾಂಕಿಂಗ್‌ ಪಟ್ಟಿ ಪ್ರಕಟಕ್ಕೆ ಹೈಕೋರ್ಟ್‌ ಆದೇಶ

ಇನ್ನು ಸಾಧಾರಣ ಕ್ರಮಾಂಕದ ವಿದ್ಯಾರ್ಥಿಗಳ ರ‍್ಯಾಂಕಿಂಗ್‌ನಲ್ಲೂ ಬದಲಾವಣೆಗಳಾಗುತ್ತದಾದರೂ ಭಾರೀ ಬೇಡಿಕೆಯ ಐಟಿ, ಕಂಪ್ಯೂಟರ್‌ ಸೈನ್ಸ್‌ ಮತ್ತಿತರ ವಿಭಾಗದ ಸೀಟುಗಳು ಹೇಗಿದ್ದರೂ ಲಭ್ಯವಾಗುವುದಿಲ್ಲ. ಇತರೆ ವಿಭಾಗದ ಸೀಟುಗಳು ಸಾಕಷ್ಟು ಸಂಖ್ಯೆಯಲ್ಲಿ ಇರುವುದರಿಂದ ಅವರ ರ‍್ಯಾಂಕಿಂಗ್‌ ಏರುಪೇರಾದರು ಸೀಟು ದೊರೆಯಲು ಸಮಸ್ಯೆಯಾಗುವುದಿಲ್ಲ. ಆದರೆ, ಉತ್ತಮ ಕಾಲೇಜುಗಳಲ್ಲಿ ಸೀಟು ಸಿಗುವುದು ಕಷ್ಟವಾಗಬಹುದು ಎನ್ನಲಾಗಿದೆ.
ಒಟ್ಟಿನಲ್ಲಿ ಸಮನ್ವಯ ಸೂತ್ರವಿಲ್ಲದೆ ರ‍್ಯಾಂಕಿಂಗ್‌ ಪಟ್ಟಿ ಬದಲಿಸಿದ್ದರೆ ಪುನರಾವರ್ತಿತ ಅಭ್ಯರ್ಥಿಗಳಿಗೆ ಆಗುತ್ತಿದ್ದ ಹೆಚ್ಚು ಅನುಕೂಲವನ್ನು ಕಡಿಮೆ ಮಾಡಲಾಗಿದೆ. ಹೊಸ ವಿದ್ಯಾರ್ಥಿಗಳಿಗೆ ಆಗುತ್ತಿದ್ದ ಅನ್ಯಾಯದಲ್ಲಿ ಭಾಗಶಃ ಸರಿದೂಗಿಸುವ ಪ್ರಯತ್ನ ನಡೆದಿದೆ ಎನ್ನಬಹುದು. ಇಂತಹ ಬಿಕ್ಕಟ್ಟುಗಳಲ್ಲಿ ಶೇ. 100 ರಷ್ಟು ಪರಿಹಾರ ಹುಡುಕುವುದೂ ಕಷ್ಟಸಾಧ್ಯ ಎನ್ನಲಾಗಿದೆ.

ಹೊಸ ರ‍್ಯಾಂಕಿಂಗ್‌ ಪಟ್ಟಿ 29ಕ್ಕೆ ಅ.3ರಿಂದ ಕೌನ್ಸೆಲಿಂಗ್‌

ಬೆಂಗಳೂರು: ಸಿಇಟಿ ಬಿಕ್ಕಟ್ಟು ಪರಿಹಾರಕ್ಕೆ ಸಮನ್ವಯ ಸೂತ್ರ ಅಳವಡಿಕೆಗೆ ಹೈಕೋರ್ಟ್‌ ಸಮ್ಮತಿಸಿದ ಬೆನ್ನಲ್ಲೇ ಸೆ.29ಕ್ಕೆ ಪರಿಷ್ಕೃತ ರ‍್ಯಾಂಕಿಂಗ್‌ ಪ್ರಕಟಿಸಿ ಅಕ್ಟೋಬರ್‌ 3ರಿಂದ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಕೌನ್ಸೆಲಿಂಗ್‌ ಪ್ರಕ್ರಿಯೆಯನ್ನು ನಡೆಸುವುದಾಗಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಘೋಷಿಸಿದ್ದಾರೆ.

ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ವೃತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಸಿಇಟಿ ರಾರ‍ಯಂಕಿಂಗ್‌ಗೆ ಸಂಬಂಧಿಸಿದಂತೆ ಉಂಟಾಗಿದ್ದ ಬಿಕ್ಕಟ್ಟನ್ನು ಬಗೆಹರಿಸಲು ರಾಜ್ಯ ಸರ್ಕಾರ ನೇಮಿಸಿದ್ದ ಸಮಿತಿಯ ವರದಿಯನ್ನು ಹೈಕೋರ್ಟ್‌ ಒಪ್ಪಿಕೊಂಡಿದೆ. ಇದು ಸ್ವಾಗತಾರ್ಹ ಹಾಗೂ ಸಂತಸ ತಂದಿದೆ. ಸಮನ್ವಯ ಸೂತ್ರ ಬಳಸಿ ಹೊಸ ವಿದ್ಯಾರ್ಥಿಗಳಿಗಾಗಲಿ, ಹಳೆಯ ವಿದ್ಯಾರ್ಥಿಗಳಿಗಾಗಲಿ ಯಾರಿಗೂ ಸಮಸ್ಯೆಯಾಗದಂತೆ ಕ್ರಮ ವಹಿಸಲಾಗುವುದು. ಯಾರಿಗೂ ಅನ್ಯಾಯ ಆಗಬಾರದು ಎಂಬುದು ಸರ್ಕಾರದ ಉದ್ದೇಶ. ಅದರಂತೆ ಕ್ರಮ ವಹಿಸುತ್ತೇವೆ. ಯಾವುದೇ ವಿದ್ಯಾರ್ಥಿಗಳು ಆತಂಕ ಪಡಬೇಕಾಗಿಲ್ಲ ಎಂದು ತಿಳಿಸಿದ್ದಾರೆ.
 

Follow Us:
Download App:
  • android
  • ios