Asianet Suvarna News Asianet Suvarna News

‘ಭೂ ಪರಿವರ್ತನೆ’ ವಿರುದ್ಧ ಖಾಸಗಿ ಶಾಲೆಗಳ ಸಮರ..!

ಶೈಕ್ಷಣಿಕ ಉದ್ದೇಶಕ್ಕಾಗಿ ಎಲ್ಲಾ ಶಾಲೆಗಳ ಭೂಮಿ ಪರಿವರ್ತನೆ ಕಡ್ಡಾಯಗೊಳಿಸಿದ ಸರ್ಕಾರ, ಕೋರ್ಟ್‌ ಮೆಟ್ಟಿಲೇರಲು ಆಡಳಿತ ಮಂಡಳಿಗಳ ನಿರ್ಧಾರ

Private Schools Fight Against Land Conversion in Karnataka grg
Author
First Published Nov 25, 2022, 5:00 AM IST

ಲಿಂಗರಾಜು ಕೋರಾ
ಬೆಂಗಳೂರು(ನ.25):
 ರಾಜ್ಯದ ಎಲ್ಲ ಖಾಸಗಿ ಶಾಲೆ, ಪಿಯು ಕಾಲೇಜುಗಳ ನಿವೇಶನ/ಜಾಗವನ್ನು ‘ಶೈಕ್ಷಣಿಕ ಉದ್ದೇಶಕ್ಕಾಗಿ’ ಎಂದು ಭೂ ಪರಿವರ್ತನೆ ಮಾಡಿಸಲು ಮೂರು ತಿಂಗಳ ಗಡುವು ನೀಡಿರುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಕೋರ್ಟ್‌ ಮೆಟ್ಟಿಲೇರಲು ಕೆಲ ಖಾಸಗಿ ಶಾಲಾ, ಪಿಯು ಕಾಲೇಜು ಆಡಳಿತ ಮಂಡಳಿಗಳು ನಿರ್ಧರಿಸಿವೆ.

ಸರ್ಕಾರಿ ಹಾಗೂ ಖಾಸಗಿ ಶಾಲೆ, ಕಾಲೇಜುಗಳೆರಡೂ ಬರುವುದು ಒಂದೇ ಕಾಯ್ದೆ ಅಡಿಯಲ್ಲೇ ಆದರೂ ಸರ್ಕಾರಿ ಶಾಲೆಗಳಿಗೆ ಅನ್ವಯಿಸಿದ ನಿಯಮಗಳನ್ನು ಖಾಸಗಿ ಶಾಲೆಗಳ ಮೇಲೆ ಸರ್ಕಾರ ಹೇರುತ್ತಿದೆ. ಇದು ನ್ಯಾಯಸಮ್ಮತವಲ್ಲ. ಕಟ್ಟಡ ಸುರಕ್ಷತೆ, ಅಗ್ನಿ ಸುರಕ್ಷತೆ ನಿಯಮಗಳ ಬಳಿಕ ಈಗ ಭೂ ಪರಿವರ್ತನೆ ನಿಯಮ ಜಾರಿಗೆ ತಂದಿದೆ. ಇದನ್ನು ಅನುಸರಿಸಲು ಸಾಧ್ಯವಿಲ್ಲ. ಈ ಬಗ್ಗೆ ಶಿಕ್ಷಣ ಇಲಾಖೆಗೆ ಮನವರಿಕೆ ಮಾಡಿಕೊಟ್ಟರೂ ಒಪ್ಪಲು ಸಿದ್ಧವಿಲ್ಲ. ಹಾಗಾಗಿ ಅನಿವಾರ್ಯವಾಗಿ ನ್ಯಾಯಾಲಯದ ಮೆಟ್ಟಿಲೇರಲು ನಿರ್ಧರಿಸಿರುವುದಾಗಿ ಖಾಸಗಿ ಶಾಲಾ ಸಂಘಟನೆಗಳು ಹೇಳುತ್ತಿವೆ.

ಖಾಸಗಿಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಸರ್ಕಾರಿ ಶಾಲೆ ನಿರ್ಮಾಣ : ಜಗದೀಶ ಶೆಟ್ಟರ

ಈ ಸಂಬಂಧ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಖಾಸಗಿ ಶಾಲಾ ಸಂಘಟನೆ ಕ್ಯಾಮ್ಸ್‌ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್‌, ಅನೇಕ ಶಿಕ್ಷಣ ಸಂಸ್ಥೆಗಳು ಕಂದಾಯ, ಬಿ ಖಾತಾ, ಸಿಎ ಸೈಟ್‌, ದಾನ, ದತ್ತಿ ಹೀಗೆ ಬೇರೆ ಬೇರೆ ರೀತಿಯ ಭೂಮಿಯಲ್ಲಿ ನಡೆಯುತ್ತಿವೆ. ಅದರಲ್ಲೂ ಬಾಡಿಗೆ, ಭೋಗ್ಯಕ್ಕೆ ಇತ್ಯಾದಿ ಒಪ್ಪಂದಗಳಿಗೆ ಭೂಮಿ, ಕಟ್ಟಡ ಪಡೆದು ಶಿಕ್ಷಣ ನಡೆಸುತ್ತಿರುವ ಶಾಲೆ, ಕಾಲೇಜುಗಳೂ ಸಾಕಷ್ಟಿವೆ. ಇನ್ನು ನಗರ, ಪಟ್ಟಣ ಪ್ರದೇಶದ ಬಹುತೇಕ ಶಾಲೆಗಳು ವಸತಿ ಪ್ರದೇಶದಲ್ಲೇ ಇವೆ. ಹೀಗಿರುವಾಗ ಇಂತಹ ಶಾಲೆಗಳ ಭೂಮಿಯನ್ನು ಈಗ ಶೈಕ್ಷಣಿಕ ಉದ್ದೇಶಕ್ಕಾಗಿ ಎಂದು ಪರಿವರ್ತಿಸಿಕೊಳ್ಳುವುದು ಸಾಧ್ಯವಾಗದ ಕೆಲಸ ಎಂದು ಹೇಳಿದ್ದಾರೆ.

ಭೂ ಪರಿವರ್ತನೆ ಸಂಬಂಧ 2018ರಲ್ಲಿ ನಿಯಮಗಳನ್ನು ತಂದ ಸರ್ಕಾರ ನಿಯಮ ಜಾರಿಗೂ ಹಿಂದೆ ಆರಂಭವಾದ ಶಾಲೆಗಳಿಗೂ ಪೂರ್ವಾನ್ವಯಗೊಳಿಸಿರುವುದು ಸರಿಯಲ್ಲ. ಈ ಸಂಬಂಧ ಇತ್ತೀಚೆಗೆ ನಡೆದ ಕ್ಯಾಮ್ಸ್‌ ಸದಸ್ಯ ಶಾಲೆಗಳ ಪ್ರತಿನಿಧಿಗಳ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಲಾಗಿದೆ. ಶೇ.95ರಷ್ಟು ಶಾಲೆಗಳು ಸರ್ಕಾರದ ಆದೇಶ ಅನುಸರಿಸರಿಸುವುದು ಕಷ್ಟ. ಈ ಬಗ್ಗೆ ಕಾನೂನು ಹೋರಾಟ ನಡೆಸಲು ಸಹಮತ ವ್ಯಕ್ತಪಡಿಸಿವೆ. ಭೂ ಪರಿವರ್ತನೆಗೆ ಆಗುವ ವೆಚ್ಚವನ್ನು ಹೇಗೆ ಬರಿಸುವುದು? ಮಕ್ಕಳಿಂದ ಹೆಚ್ಚುವರಿ ಶುಲ್ಕ ಪಡೆಯಲೂ ನಿಮಯಗಳಲ್ಲಿ ಅವಕಾಶವಿಲ್ಲ. ಹಾಗಾಗಿ ಭೂ ಪರಿವರ್ತನೆ ಆದೇಶದ ವಿರುದ್ಧ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.

ಆರ್‌ಟಿಐ ಅರ್ಜಿಗೆ ವಿಭಿನ್ನ ಉತ್ತರ

‘ಶೈಕ್ಷಣಿಕ ಉದ್ದೇಶಕ್ಕಾಗಿ ಭೂ ಪರಿವರ್ತನೆ’ ನಿಯಮ ಸರ್ಕಾರಿ ಶಾಲೆಗಳಿಗೆ ಅನ್ವಯಿಸುತ್ತದೆಯೇ ಎಂಬ ಬಗ್ಗೆ ರಾಜ್ಯ ಪಠ್ಯಕ್ರಮದ ಖಾಸಗಿ ಶಾಲೆಗಳ ಸಂಘದ ಅಧ್ಯಕ್ಷ ಪ್ರಭಾಕರ್‌ ಅರಸ್‌ ಅವರು ಮಾಹಿತಿ ಹಕ್ಕು ಕಾಯ್ದೆಯ ಡಿ ಪಡೆದ ಮಾಹಿತಿಯಲ್ಲಿ ವಿವಿಧ ಜಿಲ್ಲೆಗಳ ಕ್ಷೇತ್ರ ಶಿಕ್ಷಣ ಅಧಿಕಾರಿಗಳು ತರಹೇವಾರಿ ಉತ್ತರ ನೀಡಿದ್ದಾರೆ.

ಶಿಕ್ಷಣ ಸಚಿವರ ಕ್ಷೇತ್ರ ತಿಪಟೂರು ತಾಲ್ಲೂಕು ಬಿಇಒ ಸರ್ಕಾರಿ ಶಾಲೆಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ ಎಂದು ಹೇಳಿದ್ದರೆ, ತುರುವೇಕೆರೆ, ಮಧುಗಿರಿ, ವಿರಾಜಪೇಟೆ ತಾಲ್ಲೂಕುಗಳ ಬಿಇಒಗಳು ತಮ್ಮ ವ್ಯಾಪ್ತಿಯ ಯಾವುದೇ ಸರ್ಕಾರಿ ಶಾಲೆಗಳು ಶೈಕ್ಷಣಿಕ ಉದ್ದೇಶಕ್ಕೆ ಭೂ ಪರಿವರ್ತನೆ ಆಗಿಲ್ಲ ಎಂದು ಹೇಳಿದ್ದಾರೆ. ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕು, ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕು ಬಿಇಒಗಳು ತಮ್ಮ ವ್ಯಾಪ್ತಿಯಲ್ಲಿ ಭೂ ಪರಿವರ್ತನೆ ಆಗದೆ ಇರುವ ಜಾಗದಲ್ಲಿ ಯಾವುದೇ ಸರ್ಕಾರಿ ಶಾಲೆಗಳ ಕಟ್ಟಡ ನಿರ್ಮಿಸಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಇದೇ ರೀತಿ ಇನ್ನೂ ಹಲವು ಬಿಇಒಗಳು ಬೇರೆ ಬೇರೆ ರೀತಿಯ ಮಾಹಿತಿ ನೀಡಿರುವುದು ಕಂಡು ಬಂದಿದೆ.

ತಡವಾಗಿ ಬೇಡಿಕೆ ಸಲ್ಲಿಸಿದ ಶಾಲೆಗಳಿಗೆ ಮಾತ್ರ ಪಠ್ಯ ಪೂರೈಕೆಯಾಗಿಲ್ಲ: ಕೆಟಿಬಿಎಸ್‌

ಸರ್ಕಾರದ ಕಡ್ಡಾಯ ಶಿಕ್ಷಣ ಕಾನೂನು ಪ್ರತಿಶತ ಶೇ.55ಕ್ಕೂ ಹೆಚ್ಚು ಅನುಷ್ಠಾನವಾಗುತ್ತಿರುವುದೇ ಖಾಸಗಿ ಅನುದಾನರಹಿತ ಶಾಲೆಗಳಿಂದ. ಇಂತಹ ಸಂಸ್ಥೆಗಳಿಗೆ ಬರೀ ಕಠಿಣ ಆದೇಶಗಳ ಮೂಲಕ ಸರ್ಕಾರ ಕಿರುಕುಳ ಕೊಡುತ್ತಾ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುತ್ತಿದೆ. ಈ ಸಾಲಿಗೆ ಈಗ ಶಾಲಾ ಜಾಗ ಭೂ ಪರಿವರ್ತನೆ ಸೇರಿದೆ. ಮುಖ್ಯಮಂತ್ರಿಗಳು, ಶಿಕ್ಷಣ ಸಚಿವರು ಒಪ್ಪಿದರೂ ಅಧಿಕಾರಿಗಳು ಇದಕ್ಕೆ ಪರ್ಯಾಯ ಮಾರ್ಗದ ವಿನಾಯಿತಿ ನೀಡಲು ಒಪ್ಪುತ್ತಿಲ್ಲ. ಇದರಿಂದ ಅನಿವಾರ್ಯವಾಗಿ ನ್ಯಾಯಾಲಯದ ಮೊರೆ ಹೋಗುವ ಪರಿಸ್ಥಿತಿ ಬಂದಿದೆ ಅಂತ ಕ್ಯಾಮ್ಸ್‌ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್‌ ಹೇಳಿದ್ದಾರೆ. 

ಶಾಲೆ, ಕಾಲೇಜುಗಳನ್ನು ನಡೆಸಲು ಬಳಸುವ ಜಾಗವನ್ನು ‘ಶೈಕ್ಷಣಿಕ ಉದ್ದೇಶಕ್ಕಾಗಿ’ ಪರಿವರ್ತನೆ ಮಾಡಬೇಕೆಂದು ಕಾಯ್ದೆಯಲ್ಲೇ ಇದೆ. ಜತೆಗೆ ಸುಪ್ರೀಂಕೋರ್ಟ್‌ ನಿರ್ದೇಶನವೂ ಇದೆ. ಅದನ್ನು ಅನುಷ್ಠಾನ ಮಾಡಲು ನಮ್ಮ ಅಧಿಕಾರಿಗಳು ಕ್ರಮ ವಹಿಸಿದ್ದಾರೆ. ಏನಾದರೂ ಸಮಸ್ಯೆ ಆದಾಗ ಸರ್ಕಾರವನ್ನೇ ದೂರುವುದು. ಖಾಸಗಿ ಶಾಲೆಗಳು ಆದೇಶ ಪಾಲಿಸದೆ ನ್ಯಾಯಾಲಯಕ್ಕೆ ಹೋಗುವುದಾದರೆ ಒಳ್ಳೆಯದು ಅಂತ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್‌ ತಿಳಿಸಿದ್ದಾರೆ.  

Follow Us:
Download App:
  • android
  • ios