Asianet Suvarna News Asianet Suvarna News

ತಡವಾಗಿ ಬೇಡಿಕೆ ಸಲ್ಲಿಸಿದ ಶಾಲೆಗಳಿಗೆ ಮಾತ್ರ ಪಠ್ಯ ಪೂರೈಕೆಯಾಗಿಲ್ಲ: ಕೆಟಿಬಿಎಸ್‌

ರಾಜ್ಯದ 1,826 ಖಾಸಗಿ ಶಾಲೆಗಳು 5.46 ಲಕ್ಷದಷ್ಟು ಹೆಚ್ಚುವರಿ ಪಠ್ಯಪುಸ್ತಕಗಳಿಗೆ ಕಳೆದ ಆಗಸ್ಟ್‌ನಲ್ಲಿ ತಡವಾಗಿ ಬೇಡಿಕೆ ಸಲ್ಲಿಸಿದ್ದು ಈ ಶಾಲೆಗಳಿಗೆ ಇನ್ನೊಂದು ವಾರದಲ್ಲಿ ಪಠ್ಯಪುಸ್ತಕಗಳನ್ನು ಪೂರೈಸಲಾಗುವುದು.

Only those schools which have submitted their demand late have not been supplied with textbooks says ktbs gvd
Author
First Published Nov 10, 2022, 11:35 AM IST

ಬೆಂಗಳೂರು (ನ.10): ರಾಜ್ಯದ 1,826 ಖಾಸಗಿ ಶಾಲೆಗಳು 5.46 ಲಕ್ಷದಷ್ಟು ಹೆಚ್ಚುವರಿ ಪಠ್ಯಪುಸ್ತಕಗಳಿಗೆ ಕಳೆದ ಆಗಸ್ಟ್‌ನಲ್ಲಿ ತಡವಾಗಿ ಬೇಡಿಕೆ ಸಲ್ಲಿಸಿದ್ದು ಈ ಶಾಲೆಗಳಿಗೆ ಇನ್ನೊಂದು ವಾರದಲ್ಲಿ ಪಠ್ಯಪುಸ್ತಕಗಳನ್ನು ಪೂರೈಸಲಾಗುವುದು. ಈ ಶಾಲೆಗಳನ್ನು ಹೊರತುಪಡಿಸಿ ಉಳಿದೆಲ್ಲ ಶಾಲೆಗಳಿಗೂ ಸಕಾಲದಲ್ಲಿ ಪಠ್ಯಪುಸ್ತಕ ಸರಬರಾಜು ಮಾಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಕರ್ನಾಟಕ ಪಠ್ಯ ಪುಸ್ತಕ ಸಂಘ (ಕೆಟಿಬಿಎಸ್‌) ಸ್ಪಷ್ಟಪಡಿಸಿದೆ.

ರಾಜ್ಯದ ವಿವಿಧ ಭಾಗಗಳಲ್ಲಿ ಖಾಸಗಿ ಶಾಲೆಗಳಿಗೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಪಠ್ಯಪುಸ್ತಕ ಸರಬರಾಜಾಗದ ಬಗ್ಗೆ ‘ಕನ್ನಡಪ್ರಭ’ ಕಳೆದ ಭಾನುವಾರ ವಿಶೇಷ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತುಕೊಂಡ ಸಂಘವು, ತಡವಾಗಿ ಅಂದರೆ ಆಗಸ್ಟ್‌ನಲ್ಲಿ ಬೇಡಿಕೆ ಸಲ್ಲಿಸಿದ ಶಾಲೆಗಳಿಗೆ ಮಾತ್ರ ಪಠ್ಯ ಪುಸ್ತಕ ಪೂರೈಕೆಯಾಗಿಲ್ಲ ಉಳಿದೆಲ್ಲಾ ಶಾಲೆಗಳಿಗೆ ಬೇಡಿಕೆಗನುಗುಣವಾಗಿ ಪೂರೈಕೆಯಾಗಿದೆ ಎಂದು ಸ್ಪಷ್ಟನೆ ನೀಡಿದೆ. ಆದರೆ ತಡವಾಗಿ ಬೇಡಿಕೆ ಸಲ್ಲಿಸಿದರೂ ಪಠ್ಯ ಪುಸ್ತಕ ಪೂರೈಕೆಗೆ ಮೂರು ತಿಂಗಳು ಬೇಕಾ ಎಂಬುದು ಖಾಸಗಿ ಶಾಲಾ ಆಡಳಿತ ಮಂಡಳಿಗಳ ಪ್ರಶ್ನೆಯಾಗಿದೆ.

ನ.11ರಂದು ಬೆಂಗಳೂರಲ್ಲಿ ಪ್ರಧಾನಿ ಮೋದಿ ಮಿಂಚಿನ ಸಂಚಾರ

ಸಂಘದ ಸ್ಪಷ್ಟನೆ ಏನು?: 2022-23ನೇ ಸಾಲಿಗೆ ಅಗತ್ಯ ಪಠ್ಯಪುಸ್ತಕಗಳಿಗೆ ಸಂಬಂಧಿಸಿದಂತೆ 2021 ಡಿಸೆಂಬರ್‌ನಲ್ಲಿ ಸ್ಟೂಡೆಂಟ್‌ ಅಚೀವ್ಮೆಂಟ್‌ ಟ್ರ್ಯಾಕಿಂಗ್‌ ಸಿಸ್ಟಮ್‌(ಎಸ್‌ಎಟಿಎಸ್‌) ಪೋರ್ಟಲ್‌ ಮೂಲಕ ರಾಜ್ಯದ ಸರ್ಕಾರಿ, ಅನುದಾನಿತ ಶಾಲೆಗಳು ಬೇಡಿಕೆ ಸಲ್ಲಿಸಿದ್ದವು. ಖಾಸಗಿ ಶಾಲೆಗಳು ಕೂಡ ನಿಯಮಾನುಸಾರ ಶೇ.10ರಷ್ಟುಮುಂಗಡ ಪಾವತಿಸಿ 1,36,29,468 ಪುಸ್ತಕಗಳಿಗೆ ಬೇಡಿಕೆ ಸಲ್ಲಿಸಿದ್ದವು. ಆ ಬೇಡಿಕೆ ಅನ್ವಯ ಪಠ್ಯಪುಸ್ತಕಗಳನ್ನು ಸಕಾಲದಲ್ಲಿ ಮುದ್ರಿಸಿ ಶಾಲೆಗಳಿಗೆ ಸರಬರಾಜು ಮಾಡಲಾಗಿದೆ. ಜತೆಗೆ ಶೇ.10ರಷ್ಟುಮುಂಗಡ ಪಾವತಿಸದ ಶಾಲೆಗಳಿಗೂ ಅವರ ಬೇಡಿಕೆಯ ಶೇ.50ರಷ್ಟುಪುಸ್ತಕಗಳನ್ನು ಮುದ್ರಿಸಲಾಗಿತ್ತು. ನಂತರ ನಿಗದಿಪಡಿಸಿದ ಪಠ್ಯಪುಸ್ತಕಗಳ ದರವನ್ನು ಪಾವತಿಸಿದ ಖಾಸಗಿ, ಅನುದಾನ ರಹಿತ ಶಾಲೆಗಳ ಬೇಡಿಕೆಯ ಅನ್ವಯ ಪಠ್ಯಪುಸ್ತಕಗಳನ್ನು ಪೂರೈಕೆ ಮಾಡಲಾಗಿದೆ ಎಂದು ರಾಜ್ಯ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆದರೆ, ರಾಜ್ಯದ 17,710 ಅನುದಾನ ರಹಿತ ಖಾಸಗಿ ಶಾಲೆಗಳ ಪೈಕಿ 1,826 ಶಾಲೆಗಳು 2022ರ ಆಗಸ್ಟ್‌ನಲ್ಲಿ ಹೆಚ್ಚುವರಿಯಾಗಿ 5,46,547 ಪಠ್ಯಪುಸ್ತಕಗಳಿಗೆ ಮತ್ತೊಮ್ಮೆ ಬೇಡಿಕೆ ಸಲ್ಲಿಸಿದ್ದವು. ತಡವಾಗಿ ಸಲ್ಲಿಸಿದ ಹೆಚ್ಚುವರಿ ಬೇಡಿಕೆಯ ಪಠ್ಯಪುಸ್ತಕಗಳು ಮಾತ್ರ ಶಾಲೆಗಳಿಗೆ ಪೂರೈಕೆ ಆಗಿಲ್ಲ. ಪಠ್ಯಪುಸ್ತಕ ಮುದ್ರಕರಿಗೆ ಹೆಚ್ಚುವರಿ ಈ ಬೇಡಿಕೆಯ ಪಠ್ಯಪುಸ್ತಕ ಮುದ್ರಿಸಿ, ಸರಬರಾಜು ಮಾಡಲು ಕಾರ್ಯಾದೇಶ ನೀಡಿದ್ದು, ಒಟ್ಟು ಬೇಡಿಕೆಯ ಶೇ.60ರಷ್ಟುಪುಸ್ತಕಗಳು ಈಗಾಗಲೇ ಬ್ಲಾಕ್‌ ಹಂತಕ್ಕೆ ಸರಬರಾಜು ಮಾಡಲಾಗಿದೆ. ಉಳಿದ ಪುಸ್ತಕಗಳನ್ನು ಒಂದು ವಾರದೊಳಗೆ ಖಾಸಗಿ ಶಾಲೆಗಳಿಗೆ ಸರಬರಾಜು ಮಾಡಲು ಕ್ರಮ ವಹಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದು ಹಸಿ ಸುಳ್ಳು, ಕಣ್ಣೊರೆಸುವ ಸ್ಪಷ್ಟನೆ: ತಡವಾಗಿ ಬೇಡಿಕೆ ಸಲ್ಲಿಸಿದ ಶಾಲೆಗಳಿಗೆ ಮಾತ್ರ ಪಠ್ಯ ಪೂರೈಕೆಯಾಗಿಲ್ಲ ಎಂಬ ಶಿಕ್ಷಣ ಇಲಾಖೆಯ ಸ್ಪಷ್ಟನೆ ಹಸಿ ಸುಳ್ಳು ಹಾಗೂ ಕಣ್ಣೊರೆಸುವ ತಂತ್ರ ಎಂದು ಖಾಸಗಿ ಶಾಲಾ ಸಂಘಟನೆ ಕ್ಯಾಮ್ಸ್‌ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್‌ ಹೇಳಿದ್ದಾರೆ. ಸಿಬಿಎಸ್‌ಇ, ಐಸಿಎಸ್‌ಇ ಶಾಲೆಗಳು ರಾಜ್ಯ ಶಿಕ್ಷಣ ಇಲಾಖೆಯಿಂದ ಪಡೆಯುವ ಒಂದೇ ಪುಸ್ತಕವೆಂದರೆ, ಅದು ಕನ್ನಡ ಪುಸ್ತಕ. ಅದನ್ನು ಯಾರೂ ತಡವಾಗಿ ಬೇಡಿಕೆ ಸಲ್ಲಿಸಿಲ್ಲ. ಮೊದಲ ಬೇಡಿಕೆಯಲ್ಲೇ ಸಲ್ಲಿಸಿದ್ದಾರೆ. ಆದರೂ ಇದುವರೆಗೆ ಬಹುತೇಕ ಕಡೆ ಸರಬರಾಜಾಗಿಲ್ಲ. ಇನ್ನು ರಾಜ್ಯಪಠ್ಯಕ್ರಮದ ಇತರೆ ಖಾಸಗಿ ಶಾಲೆಗಳಿಗೆ ಪರಿಷ್ಕರಣೆಯಾಗಿರುವ ಪಠ್ಯಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಸರಬರಾಜಾಗಿಲ್ಲ. 

ಹಿಂದು ಹೇಳಿಕೆ: ಸತೀಶ್‌ ಜಾರಕಿಹೊಳಿ ವಿರುದ್ಧ ಕೋರ್ಟ್‌ಗೆ ದೂರು

ಬೇಡಿಕೆ ಸಲ್ಲಿಸುವಾಗ ಶಾಲೆಗಳು ತಮ್ಮ ಬಳಿ ಇದ್ದ ಪುಸ್ತಕ ಬಿಟ್ಟು ಉಳಿದವಕ್ಕೆ ಬೇಡಿಕೆ ಸಲ್ಲಿಸಿದ್ದವು. ಆದರೆ, ಪಠ್ಯ ಪರಿಷ್ಕರಣೆ ಆದಾಗ ಹಳೆ ಪಠ್ಯ ಬಳಕೆಗೆ ಬರುವುದಿಲ್ಲ. ಹಳೆ ಪಠ್ಯ ವಾಪಸ್‌ ಪಡೆದು ಹೊಸ ಪಠ್ಯಕೊಡಿ ಎಂದರೆ ಇಲಾಖೆಯವರು ಅದಕ್ಕೆ ಮತ್ತೆ ಬೇಡಿಕೆ ಸಲ್ಲಿಸಿ ಎಂದರು. ಅದು 2ನೇ ಬೇಡಿಕೆ. 2ನೇ ಬೇಡಿಕೆಗೆ ಸಂಬಂಧಿಸಿದಂತೆ ಪೂರ್ಣ ಪ್ರಮಾಣದಲ್ಲಿ ಪಠ್ಯಗಳು ಬಂದಿಲ್ಲ. ಅಲ್ಲಿ ಇಲ್ಲಿ ಅಲ್ಪಸ್ವಲ್ಪ ವಿಲೇವಾರಿ ಆಗಬೇಕಿರುವುದು ಬಾಕಿ. ಆದರೂ, ಯಾವ ನೈತಿಕತೆ ಮೇಲೆ ಪಠ್ಯ ಪುಸ್ತಕ ಸೊಸೈಟಿಯವರು ಈ ಸಮರ್ಥನೆ ನೀಡಿದ್ದಾರೆ ಗೊತ್ತಿಲ್ಲ ಎಂದು ಅವರು ಹೇಳಿದ್ದಾರೆ.

Follow Us:
Download App:
  • android
  • ios