ಎಸ್ಎಸ್ಎಲ್ಸಿಯಿಂದ ನಾರಾಯಣ ಗುರು ಪಠ್ಯ ಎತ್ತಂಗಡಿ ,7ನೇ ತರಗತಿಗೆ ಸೇರ್ಪಡೆ!
* ಕರ್ನಾಟಕದಲ್ಲಿ ಶಾಲಾ ಪಠ್ಯ ಪರಿಷ್ಕರಣೆ ವಿವಾದ
* ಎಸ್‌ಎಸ್‌ಎಲ್‌ಸಿ ಪಠ್ಯದಿಂದ ಸಮಾಜ ಸುಧಾರಕ ನಾರಾಯಣ ಗುರುಗೆ ಕೊಕ್
* 7ನೇ ತರಗತಿಯಲ್ಲಿ ನಾರಾಯಣ ಗುರು ಪಠ್ಯ!
ವರದಿ: ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು
ಮಂಗಳೂರು, (ಮೇ.19): ಎಸ್‌ಎಸ್‌ಎಲ್‌ಸಿ ಪಠ್ಯದಿಂದ ಸಮಾಜ ಸುಧಾರಕ ನಾರಾಯಣ ಗುರುಗಳ ಪಠ್ಯಕ್ಕೆ ಕೊಕ್ ನೀಡಿರುವುದು ಭಾರೀ ವಿವಾದಕ್ಕೆ ಕಾರಣವಾಗಿರುವ ಬೆನ್ನಲ್ಲೇ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ನಾರಾಯಣ ಗುರುಗಳ ಪಾಠವನ್ನು ಪಠ್ಯದಿಂದ ಕೈ ಬಿಟ್ಟಿಲ್ಲ ಎಂದು ಹೇಳಿದಂತೆ. ಅದರಂತೆ ಎಸ್ಸೆಸ್ಸೆಲ್ಸಿ ಬದಲಾಗಿ ಏಳನೇ ತರಗತಿ ಪಠ್ಯದಲ್ಲಿ ನಾರಾಯಣ ಗುರುಗಳ ಜೀವನ ಚರಿತ್ರೆಯನ್ನು ಉಳಿಸಿಕೊಳ್ಳಲಾಗಿದೆ.
ಏಳನೇ ತರಗತಿ ಪಠ್ಯದಲ್ಲಿ ನಾರಾಯಣ ಗುರುಗಳ ಬಗ್ಗೆ ಮಾಹಿತಿ ಸೇರ್ಪಡೆ ಮಾಡಲಾಗಿದ್ದು, ಎಸ್‌ಎಸ್‌ಎಲ್‌ಸಿ ಪಠ್ಯದಿಂದ ತೆಗೆದು ಏಳನೇ ತರಗತಿ ಪಠ್ಯದಲ್ಲಿ ಸೇರ್ಪಡೆಗೊಳಿಸಲಾಗಿದೆ. ಏಳನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದ ಭಾಗ-2ರ ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆ ವಿಭಾಗದಲ್ಲಿ ನಾರಾಯಣ ಗುರುಗಳ ಬಗ್ಗೆ ವಿಚಾರ ಸೇರ್ಪಡೆ ಮಾಡಲಾಗಿದೆ.
Belagavi: ಆರ್‌ಎಸ್ಎಸ್ ಮುಖ್ಯಸ್ಥ ಹೆಡ್ಗೆವಾರ್ ಬಗ್ಗೆ ಪಠ್ಯಪುಸ್ತಕದಲ್ಲಿ ಸೇರಿಸೋರೆ': ಎಂಎಲ್‌ಸಿ ರವಿಕುಮಾರ್
ಸುಮಾರು ಸುಮಾರು 19 ಗೆರೆಗಳ ಈ ಪಠ್ಯದಲ್ಲಿ ನಾರಾಯಣ ಗುರುಗಳ ಹುಟ್ಟು, ಸಾಮಾಜಿಕ ಚಳುವಳಿ ಹಾಗೂ ಸಿದ್ದಾಂತಗಳ ಬಗ್ಗೆ ಮಾಹಿತಿ ಇದೆ. ದಕ್ಷಿಣ ಭಾರತದಲ್ಲಿ ಸಾಮಾಜಿಕ ಕ್ರಾಂತಿ ಮಾಡಿದ್ದ ನಾರಾಯಣ ಗುರುಗಳ ಪಠ್ಯವನ್ನು 10ನೇ ತರಗತಿ ಸಮಾಜ ವಿಜ್ಞಾನ ಪಾಠ ಪುಸ್ತಕದಿಂದ ಕಿತ್ತು ಹಾಕಲಾಗಿದೆ ಎಂಬ ವಿವಾದ ಸೃಷ್ಟಿಯಾಗಿತ್ತು. ಶ್ರೀನಾರಾಯಣ ಗುರು ಧರ್ಮಪರಿಪಾಲನಾ ಯೋಗಂ ಹೆಸರಿನ ಪಠ್ಯ ಈ ಹಿಂದಿನ ಎಸ್ಸೆಸ್ಸೆಲ್ಸಿ ಪಠ್ಯ ಪುಸ್ತಕದಲ್ಲಿ ಇತ್ತು. ಆದರೆ ಹೊಸ ಸಮಿತಿ ನಾರಾಯಣ ಗುರುಗಳ ಜೀವನ ಚರಿತ್ರೆಯನ್ನೇ ಎಸ್ಸೆಸ್ಸೆಲ್ಸಿ ಪಠ್ಯದಿಂದ ತೆಗೆದು ಹಾಕಿತ್ತು. ಅಧ್ಯಾಯ 5ರ ಸಾಮಾಜಿಕ ಮತ್ತು ಧಾರ್ಮಿಕ ಚಳುವಳಿ ವಿಭಾಗದಿಂದ ನಾರಾಯಣ ಗುರುಗಳು ಪಠ್ಯ ಔಟ್ ಆಗಿತ್ತು. ಬ್ರಹ್ಮ ಸಮಾಜ, ಆರ್ಯ ಸಮಾಜ, ವಿವೇಕಾನಂದರ ಪಠ್ಯದ ಜೊತೆಗೆ ನಾರಾಯಣ ಗುರುಗಳ ಜೀವನ ಚರಿತ್ರೆ ಕೂಡ ಈ ಹಿಂದೆ ಮುದ್ರಿತವಾಗಿತ್ತು. ಈ ನಡುವೆ ನಾರಾಯಣ ಗುರುಗಳ ಜೊತೆಗೆ ಪೆರಿಯಾರ್ ಪಠ್ಯಕ್ಕೂ ಸಮಿತಿ ಕತ್ತರಿ ಹಾಕಿದ್ದು, ನಾರಾಯಣ ಗುರು ಪಠ್ಯ ತೆಗೆದಿದ್ದಕ್ಕೆ ಗುರು ಅನುಯಾಯಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಇದೀಗ ಏಳನೇ ತರಗತಿ ಪಠ್ಯದಲ್ಲಿ ಈ ವಿಚಾರ ಕಾಣಿಸಿಕೊಂಡಿದೆ. ಹೀಗಿದ್ದರೂ ಹತ್ತನೇ ತರಗತಿ ಪಠ್ಯದಲ್ಲೇ ನಾರಾಯಣ ಗುರುಗಳ ವಿಚಾರ ಇರಬೇಕು ಅಂತ ಗುರು ಅನುಯಾಯಿಗಳು ಆಗ್ರಹಿಸಿದ್ದಾರೆ.
'ಪಠ್ಯದಲ್ಲಿ ಸೇರಿಸದಿದ್ದರೆ ಪ್ರತಿಭಟನೆ
10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ನಾರಾಯಣಗುರು ಮತ್ತು ಪೆರಿಯಾರ್ ಅವರ ಕುರಿತಾದ ಪಠ್ಯಭಾಗವನ್ನು ಪಠ್ಯಪುಸ್ತಕ ಪರಿಷ್ಕರಣ ಸಮಿತಿ ಕೈಬಿಟ್ಟಿದ್ದು ಖಂಡನೀಯ ಎಂದು ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಮಾಜ ಸುಧಾರಕ ಸಂತರೆನಿಸಿಕೊಂಡ ಇವರಿಬ್ಬರ ಸಂದೇಶಗಳಿರುವ ಪಠ್ಯ ಭಾಗವನ್ನು, ಪಠ್ಯಪುಸ್ತಕ ಪರಿಷ್ಕರಣೆಯ ವೇಳೆ ಪರಿಗಣಿಸದೇ ನಿರ್ಲಕ್ಷಿಸಿರುವುದು, ಜಾತಿ-ಧರ್ಮಗಳ ಕಲಹದ ಬೇಗೆಯಲ್ಲಿ ರಾಜಕೀಯದ ಬೇಳೆ ಬೇಯಿಸಿಕೊಳ್ಳುವ ಪಕ್ಷಗಳ ದುರುದ್ದೇಶಪೂರಿತ ನಡೆಯಾಗಿದೆ. ಪಠ್ಯ ಪರಿಷ್ಕರಣ ಸಮಿತಿ, ಇಲಾಖೆ ಅಥವಾ ಸರಕಾರ ಈ ಕುರಿತು ಯಾವುದೇ ಸ್ಪಷ್ಟೀಕರಣ ನೀಡದೇ ಈ ಸಂತರ ತತ್ವ-ಸಿದ್ಧಾಂತಗಳನ್ನು ಅನುಸರಿಸುತ್ತಿರುವ ಅವರ ಅನುಯಾಯಿಗಳಿಗೆ ಮಾಡಿದ ಬಹಿರಂಗ ಅವಮಾನ ಎಂಬುದು ಸತ್ಯ.
ಜಾತಿಪದ್ಧತಿಯ ಕಪಿ ಮುಷ್ಟಿಯಲ್ಲಿ ನಲುಗಿ, ಅಸ್ಪೃಶ್ಯತೆಯ ಪರಾಕಾಷ್ಠೆ ತಲುಪಿ, ಮತಾಂತರದ ಸುಳಿಗೆ ಸಿಲುಕಿದ್ದ ಸನಾತನ ಹಿಂದೂಧರ್ಮದ ಬಹುಸಂಖ್ಯಾತ ಹಿಂದುಳಿದ ವರ್ಗದ ಜನರ ಧ್ವನಿಯಾಗಿ, ಧಾರ್ಮಿಕ ಸುಧಾರಣೆಯ ಮೂಲಕ ಸಾಮಾಜಿಕ ಪರಿವರ್ತನೆಯ ಹರಿಕಾರರೆನಿಸಿದ ನಾರಾಯಣ ಗುರುಗಳ ತತ್ವ ಸಂದೇಶ, ಪ್ರಸ್ತುತ ಸನ್ನಿವೇಶದಲ್ಲಿ ಇಂದಿನ ಯುವ ಪೀಳಿಗೆಗೆ ಅತ್ಯಂತ ಮಹತ್ವಪೂರ್ಣದ್ದಾಗಿದೆ. ಅಸಹಿಷ್ಣುತೆ, ಅಸ್ಪೃಶ್ಯತೆ, ಕೋಮುಭಾವನೆ ಕೆರಳಿಸುವ ಘಟನೆಗಳು ಸೇರಿದಂತೆ ಪ್ರಪಂಚದಾದ್ಯಂತ ಆಂತರಿಕ ಕಲಹಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ, ಮುಂದಿನ ಪೀಳಿಗೆ ಶಾಂತಿ ಸೌಹಾರ್ದತೆಯಿಂದ ಬಾಳಿ ಬದುಕಲು ಇಂತಹ ತತ್ವಜ್ಞಾನಿಗಳ, ಸಾಮಾಜಿಕ ಪರಿವರ್ತಕರ ಜೀವನ ಸಂದೇಶ ಅತೀ ಅವಶ್ಯಕವಾದುದು. ಆದ್ದರಿಂದ ಸರಕಾರ ಈ ಕುರಿತು ಮರುಚಿಂತನೆ ನಡೆಸಬೇಕಾಗಿ ಅವರು ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ಈ ಸಮುದಾಯದ ಪ್ರತಿಭಟನೆ ಎದುರಿಸಿ ಅಂತ ಎಚ್ಚರಿಕೆ ನೀಡಿದ್ದಾರೆ.