ಪರೀಕ್ಷೆಗೆ ಮೋದಿ 'ಪಂಚ'ತಂತ್ರ: ಪರೀಕ್ಷಾ ಪೇ ಚರ್ಚಾದಲ್ಲಿ ಕಿವಿಮಾತು
ಒತ್ತಡಕ್ಕೆ ಶರಣಾಗಬೇಡಿ, ಡಿಜಿಟಲ್ ಉಪವಾಸ ಮಾಡಿ ಹಾಗೂ ಸಾಮರ್ಥ್ಯ ಅರಿಯಿರಿ ಎಂದು ಪರೀಕ್ಷಾ ಪೇ ಚರ್ಚಾದಲ್ಲಿ ಪ್ರಧಾನಿ ಮೋದಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ.
ನವದೆಹಲಿ: ಪರೀಕ್ಷೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಒತ್ತಡಕ್ಕೆ ಸಿಲುಕುವ ವಿದ್ಯಾರ್ಥಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮನೆಯ ಹಿರಿಯನಂತೆ ಶುಕ್ರವಾರ ಹಲವು ಕಿವಿಮಾತುಗಳನ್ನು ಹೇಳುವ ಮೂಲಕ ಒತ್ತಡ ದೂರಗೊಳಿಸಲು ಯತ್ನಿಸಿದ್ದಾರೆ. ನಿಮ್ಮ ಓದಿಗೆ ಪೋಷಕರು ಒತ್ತಡ ಹೇರುವುದು ಸಹಜ. ಆದರೆ ಯಾವುದೇ ಕಾರಣಕ್ಕೂ ಒತ್ತಡಕ್ಕೆ ಒಳಗಾಗಿ ಕುಗ್ಗಬೇಡಿ. ಟೀಕೆ ಮತ್ತು ದೂರಿನ ನಡುವಿನ ವ್ಯತ್ಯಾಸ ಅರಿತುಕೊಳ್ಳಿ, ಕಾಲಕಾಲಕ್ಕೆ ಡಿಜಿಟಲ್ ಉಪವಾಸ ಮಾಡಿ, ನಿಮ್ಮ ಸಾಮರ್ಥ್ಯವನ್ನು ನೀವು ಅರ್ಥೈಸಿಕೊಂಡರೆ ಅರ್ಧ ಯುದ್ಧ ಗೆದ್ದಂತೆ, ಪರೀಕ್ಷೆಯೇ ಜೀವನದ ಕೊನೆಯ ದಾರಿಯಲ್ಲ ಎನ್ನುವ 5 ಅಂಶಗಳನ್ನು ಗಮನಲ್ಲಿಡಿ ಎನ್ನುವ ಮೂಲಕ ಪರೀಕ್ಷೆ ಸೇರಿದಂತೆ ಜೀವನ ಗೆಲ್ಲಲು ಬೇಕಾದ ‘ಪಂಚತಂತ್ರ’ಗಳನ್ನು ಹೇಳಿಕೊಟ್ಟಿದ್ದಾರೆ.
ಆರನೇ ವರ್ಷದ ‘ಪರೀಕ್ಷಾ ಪೇ ಚರ್ಚೆ’ಯಲ್ಲಿ ಭಾರತ ಸೇರಿದಂತೆ 155 ದೇಶಗಳಿಂದ ಪಾಲ್ಗೊಂಡಿದ್ದ 38 ಲಕ್ಷ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮೋದಿ ಶುಕ್ರವಾರ ಮಾತನಾಡಿದರು. ಇದೇ ವೇಳೆ, ಗ್ಯಾಜೆಟ್‌ಗಳನ್ನು ವಿಪರೀತವಾಗಿ ಬಳಸಲು ಹೋಗಬೇಡಿ. ನಿಮ್ಮ ಸ್ಮಾರ್ಟ್‌ತನದ ಬಗ್ಗೆ ನಂಬಿಕೆ ಇಡಿ, ಮೊಬೈಲ್ ಫೋನ್ ಮೇಲಲ್ಲ. ತಂತ್ರಜ್ಞಾನದಿಂದ ಲಕ್ಷ್ಯ ಕಳೆದುಕೊಳ್ಳಬೇಡಿ. ಮೊಬೈಲ್ ಫೋನ್ ಬಳಕೆ ಮಾಡುವುದಕ್ಕೂ ಪ್ರತ್ಯೇಕ ಸಮಯ ಮೀಸಲಿರಿಸಿ. ಆನ್‌ಲೈನ್ ಗೇಮ್‌ಗಳು ಹಾಗೂ ಸಾಮಾಜಿಕ ಜಾಲತಾಣಗಳಿಗೆ ದಾಸರಾಗಬೇಡಿ ಎಂದು ಬುದ್ಧಿವಾದ ಹೇಳಿದರು.
ಇದನ್ನು ಓದಿ: PARIKSHA PE CHARCHA 2023: ಅವಕಾಶ ತಪ್ಪಿತು ಎಂದೇ ಭಾವಿಸಿದ್ದ ರಾಜ್ಯದ ಮಕ್ಕಳಿಗೆ ಮೊದಲ ಸಾಲಿನ ಆಸನ
ಕಾಲಕಾಲಕ್ಕೆ ‘ತಂತ್ರಜ್ಞಾನ ನಿರಶನ’ (ಮೊಬೈಲ್‌ನಿಂದ ದೂರ ಇರುವುದು) ಹಾಗೂ ಪ್ರತಿ ಮನೆಯಲ್ಲೂ ‘ತಂತ್ರಜ್ಞಾನ ಮುಕ್ತ ವಲಯ’ ಘೋಷಣೆ ಮಾಡುವುದರಿಂದ ಜೀವನವನ್ನು ಖುಷಿಯಿಂದ ಅನುಭವಿಸಬಹುದು. ತನ್ಮೂಲಕ ಮಕ್ಕಳನ್ನು ಗ್ಯಾಜೆಟ್ ಮೇಲಿನ ಅತಿಯಾದ ಅವಲಂಬನೆಯಿಂದ ಹೊರತರಬಹುದು ಎಂದು ಪೋಷಕರಿಗೂ ಮೋದಿ ಸಲಹೆ ಮಾಡಿದರು.
ನಾನು ಮತ್ತು ಮೊಬೈಲ್:
ಮೊಬೈಲ್ ಮೇಲೆ ವಿಪರೀತ ಅವಲಂಬಿತವಾಗಿರುವ ಮಕ್ಕಳಿಗೆ ತಮ್ಮದೇ ಉದಾಹರಣೆಯನ್ನು ಮೋದಿ ನೀಡಿದರು. ನಾನು ಮೊಬೈಲ್ ಫೋನ್ ಜತೆ ಕಾಣಿಸಿಕೊಳ್ಳುವುದು ತೀರಾ ವಿರಳ. ಹಾಗಂತ ತಂತ್ರಜ್ಞಾನವನ್ನು ದೂರ ಇಡಬಾರದು. ಅದನ್ನು ಅವಶ್ಯಕತೆಗೆ ತಕ್ಕಂತೆ ಸೀಮಿತಗೊಳಿಸಬೇಕು. ನಾವು ಸ್ಮಾರ್ಟೋ ಅಥವಾ ಗ್ಯಾಜೆಟ್ ಸ್ಮಾರ್ಟೋ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು ಎಂದರು.
ಇದನ್ನು ಓದಿ: ಮಾಧ್ಯಮ, ವಿರೋಧ ಪಕ್ಷಗಳ ಟೀಕೆ ಹೇಗೆ ಎದುರಿಸ್ತೀರಾ? ಮಕ್ಕಳ ಪ್ರಶ್ನೆಗೆ ಮೋದಿ ನೀಡಿದ್ರು ಉತ್ತರ!
ಶಾರ್ಟ್‌ಕಟ್ ಮೊರೆ ಹೋಗಬಾರದು. ಪರೀಕ್ಷಾ ಅಕ್ರಮ ದೀರ್ಘಾವಧಿಯಲ್ಲಿ ಸಹಾಯಕ್ಕೆ ಬರುವುದಿಲ್ಲ. ಕಠಿಣ ಪರಿಶ್ರಮ ಜೀವನದಲ್ಲಿ ಮುಂದುವರಿಯಲು ವಿದ್ಯಾರ್ಥಿಗಳ ನೆರವಿಗೆ ಬರುತ್ತದೆ. ನಿಮ್ಮ ಮೇಲೆ ಕುಟುಂಬದ ಸದಸ್ಯರು ನಿರೀಕ್ಷೆ ಇಟ್ಟುಕೊಳ್ಳುವುದು ಸಹಜ. ಆದರ ಅದು ಸಾಮಾಜಿಕ ಸ್ಥಾನಮಾನದ ಜತೆ ತಳುಕು ಹಾಕಿಕೊಳ್ಳಬಾರದು. ಪರೀಕ್ಷಾ ಫಲಿತಾಂಶ ಎಂಬುದು ಜೀವನದ ಅಂತ್ಯವೇನಲ್ಲ ಎಂದು ಹೇಳಿದರು.
ಕ್ರಿಕೆಟ್ ಮೈದಾನದಲ್ಲಿ ಫೋರ್ ಹಾಗೂ ಸಿಕ್ಸ್ ಎಂದು ಜನ ಕೂಗುತ್ತಿದ್ದರೂ ತಲೆಕೆಡಿಸಿಕೊಳ್ಳದೆ ಯಾವ ರೀತಿ ಬ್ಯಾಟರ್ ಬಾಲ್ ಬಗ್ಗೆ ಗಮನ ಹರಿಸುತ್ತಾನೋ ಅದೇ ರೀತಿ ವಿದ್ಯಾರ್ಥಿಗಳು ಓದಿನ ಮೇಲೆ ಗಮನ ಕೇಂದ್ರೀಕರಿಸಬೇಕು ಎಂದು ಹೇಳಿದರು.
ಸಮಯ ನಿರ್ವಹಣೆ ಬಗ್ಗೆ ನಿಮ್ಮ ತಾಯಿ ನೋಡಿ
ಸಮಯ ನಿರ್ವಹಣೆ ಎಂಬುದು ಅತ್ಯಂತ ಮಹತ್ವದ್ದು. ಇದು ಪರೀಕ್ಷೆ ಅಲ್ಲ, ದೈನಂದಿನ ಜೀವನಕ್ಕೂ ಪ್ರಮುಖವಾದದ್ದು. ಬೇಕಾದರೆ ನಿಮ್ಮ ತಾಯಿಯನ್ನು ಗಮನಿಸಿ, ಆಕೆ ಹೇಗೆ ಚೆನ್ನಾಗಿ ಸಮಯ ಹೊಂದಿಸುತ್ತಾಳೆ ಎಂಬುದು ಗೊತ್ತಾಗುತ್ತದೆ ಎಂದು ಮೋದಿ ಅವರು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಪ್ರತಿಪಕ್ಷಗಳ ಟೀಕೆ ಹೇಗೆ ಎದುರಿಸುತ್ತೀರಿ ಎಂದ ಬೆಂಗಳೂರು ವಿದ್ಯಾರ್ಥಿ ಪ್ರಶ್ನೆಗೆ ಔಟಾಫ್ ಸಿಲೆಬಸ್ ಎಂದ ಪ್ರಧಾನಿ!
ಪರೀಕ್ಷಾ ಪೇ ಚರ್ಚೆ ವೇಳೆ ವಿದ್ಯಾರ್ಥಿಯೊಬ್ಬರು ‘ವಿವಿಧ ಪ್ರತಿಪಕ್ಷಗಳಿಂದ ವ್ಯಕ್ತವಾಗುವ ಟೀಕೆಯನ್ನು ಹೇಗೆ ಎದುರಿಸುತ್ತೀರಿ’ ಎಂದು ಕೇಳಿದರು. ಇದಕ್ಕೆ ತಮಾಷೆಯಾಗಿ ಉತ್ತರಿಸಿದ ಮೋದಿ ಅವರು ‘ಈ ಪ್ರಶ್ನೆ ಸಿಲೆಬಸ್ ಹೊರಗಿನದ್ದು’ ಎಂದು ನಗಿಸಿದರು. ಬಳಿಕ ಉತ್ತರ ನೀಡಿದ ಅವರು, ಸಂಪದ್ಭರಿತ ಪ್ರಜಾಪ್ರಭುತ್ವಕ್ಕೆ ಟೀಕೆ ಅಗತ್ಯ. ಇದು ಶುದ್ಧಿ ಯಜ್ಞದಂತೆ. ನೀವು ಕಠಿಣ ಪರಿಶ್ರಮಿಯಾಗಿದ್ದರೆ, ಪ್ರಾಮಾಣಿಕರಾಗಿದ್ದರೆ ಟೀಕೆಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ’ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಟಿಪ್ಸ್
- ಮನೆಯವರ ಒತ್ತಡಕ್ಕೆ ನಲುಗಬೇಡಿ, ಓದಿನ ಮೇಲೆ ಗಮನ ಕೇಂದ್ರೀಕರಿಸಿ
- ಟೀಕೆಗಳನ್ನು ರಚನಾತ್ಮಕವಾಗಿ ಸ್ವೀಕರಿಸಿ. ದೂಷಣೆ ಬೇರೆ, ಟೀಕೆಗಳು ಬೇರೆ
- ಗ್ಯಾಜೆಟ್‌ಗಳ ದಾಸರಾಗಬೇಡಿ. ಕಾಲಕಾಲಕ್ಕೆ ಡಿಜಿಟಲ್ ಉಪವಾಸ ಮಾಡಿ
- ನಿಮ್ಮ ಸಾಮರ್ಥ್ಯವನ್ನು ಅರ್ಥ ಮಾಡಿಕೊಳ್ಳಿ. ಆಗ ಅರ್ಧ ಯುದ್ಧ ಗೆದ್ದಂತೆ
- ಪರೀಕ್ಷೆಯೇ ಜೀವನದ ಕೊನೆಯಲ್ಲ. ಬದುಕು ಅದಕ್ಕಿಂತ ಬಹಳ ದೊಡ್ಡದು
ಶಿಕ್ಷಕರಿಗೆ ಸಲಹೆಗಳು
- ತರಗತಿಯಲ್ಲಿ ಪ್ರಶ್ನೆ ಕೇಳುವ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಿ
- ವಿದ್ಯಾರ್ಥಿ ಪ್ರಶ್ನೆ ಕೇಳಿದರು ಎಂದರೆ ಅವರಲ್ಲಿ ಕುತೂಹಲವಿದೆ ಎಂದರ್ಥ
- ಅದು ನಿಜಕ್ಕೂ ವಿದ್ಯಾರ್ಥಿ/ವಿದ್ಯಾರ್ಥಿನಿಯ ಉತ್ತಮವಾದ ಲಕ್ಷಣ
ಪೋಷಕರಿಗೂ ಸಲಹೆ
- ಪ್ರತಿ ಮನೆಯಲ್ಲೂ ‘ತಂತ್ರಜ್ಞಾನ ಮುಕ್ತ ವಲಯ’ ಘೋಷಿಸಿ
- ಇದರಿಂದ ಜೀವನವನ್ನು ಖುಷಿಯಿಂದ ಅನುಭವಿಸಬಹುದು
- ತನ್ಮೂಲಕ ಮಕ್ಕಳ ಗ್ಯಾಜೆಟ್ ಅವಲಂಬನೆ ತಗ್ಗಿಸಬಹುದು
- ಪರೀಕ್ಷೆ ಬಳಿಕ ಮಕ್ಕಳಿಗೆ ಹಣ ಕೊಟ್ಟು ಪ್ರವಾಸಕ್ಕೆ ಕಳುಹಿಸಿ
- ಅಲ್ಲಿ ಹೋಗಿ ನೋಡಿ ಬಂದಿದ್ದನ್ನು ಬರೆದುಕೊಡಲು ಹೇಳಿ
- ಮಕ್ಕಳು ವಿವಿಧ ವರ್ಗದ ಜನರನ್ನು ಭೇಟಿ ಆಗಲು ಉತ್ತೇಜಿಸಿ
- ಮಕ್ಕಳ ಮೇಲೆ ನಿರ್ಬಂಧ ಹೇರಬೇಡಿ, ಅವರ ದೃಷ್ಟಿವಿಸ್ತರಿಸಿ