Pariksha Pe Charcha 2023: ಅವಕಾಶ ತಪ್ಪಿತು ಎಂದೇ ಭಾವಿಸಿದ್ದ ರಾಜ್ಯದ ಮಕ್ಕಳಿಗೆ ಮೊದಲ ಸಾಲಿನ ಆಸನ
ಇದೊಂದು ಸಣ್ಣ ವಿಚಾರ ಅನ್ನಬಹುದಾದ ಘಟನೆ. ಆದರೆ ಕೆಲವು ಮುಗ್ಧ ಮಕ್ಕಳ ಮನಸ್ಸಿನ ಮೇಲೆ ಬಹುಕಾಲ ಕಹಿ ನೆನಪಾಗಿ ಉಳಿಯಬಹುದಾಗಿತ್ತು. ಆದರೆ ಕರ್ನಾಟಕ ಮತ್ತು ಕೇಂದ್ರ ಸರ್ಕಾರದ ಕೆಲ ಮುಖಂಡರ ಸಕಾಲಿಕ ಸ್ಪಂದನೆಯಿಂದ ಆ ಮಕ್ಕಳಿಗೆ ಅದ್ಭುತ ಎನ್ನಬಹುದಾದ ಸಿಹಿ ಅನುಭವ ಲಭಿಸಿದೆ.
ಉಡುಪಿ (ಜ.27): ಇದೊಂದು ಸಣ್ಣ ವಿಚಾರ ಅನ್ನಬಹುದಾದ ಘಟನೆ. ಆದರೆ ಕೆಲವು ಮುಗ್ಧ ಮಕ್ಕಳ ಮನಸ್ಸಿನ ಮೇಲೆ ಬಹುಕಾಲ ಕಹಿ ನೆನಪಾಗಿ ಉಳಿಯಬಹುದಾಗಿತ್ತು. ಆದರೆ ಕರ್ನಾಟಕ ಮತ್ತು ಕೇಂದ್ರ ಸರ್ಕಾರದ ಕೆಲ ಮುಖಂಡರ ಸಕಾಲಿಕ ಸ್ಪಂದನೆಯಿಂದ ಆ ಮಕ್ಕಳಿಗೆ ಅದ್ಭುತ ಎನ್ನಬಹುದಾದ ಸಿಹಿ ಅನುಭವ ಲಭಿಸಿದೆ.
ಇಷ್ಟಕ್ಕೂ ನಡೆದದ್ದಿಷ್ಟು?: ಜನವರಿ 27ನೇ ತಾರೀಕು, ಪ್ರಧಾನ ಮಂತ್ರಿ ಮೋದಿಯವರು ಪ್ರತೀವರ್ಷದಂತೆ ಪರೀಕ್ಷೆ ಎದುರಿಸುವ ಕೋಟ್ಯಂತರ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವುದಕ್ಕಾಗಿ ಎಲ್ಲಾ ರಾಜ್ಯಗಳ ಮಕ್ಕಳೊಂದಿಗೆ ಪರೀಕ್ಷಾ ಪೇ ಚರ್ಚಾ ( ದೇಶಾದ್ಯಂತ ಸುಮಾರು 38 ಲಕ್ಷ ವಿದ್ಯಾರ್ಥಿಗಳು ಭಾಗಿ ) ಕಾರ್ಯಕ್ರಮ ನಿಗದಿಯಾಗಿತ್ತು. ಪ್ರತೀ ರಾಜ್ಯದಿಂದ ಆಯ್ದ ಕೆಲವು ಪ್ರತಿಭಾವಂತ ಮಕ್ಕಳಿಗೆ ನವದೆಹಲಿಯಲ್ಲಿ ಖುದ್ದು ಪ್ರಧಾನಿಯವರ ಉಪಸ್ಥಿತಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವ ಭಾಗ್ಯ ದೊರೆತಿತ್ತು. ಇವರಲ್ಲಿ ಕರ್ನಾಟಕದಿಂದ ತೇಜ ಚಿನ್ಮಯಿ ಹೊಳ್ಳ, ಪಲ್ಲವಿ, ಪ್ರಹ್ಲಾದ್ ಭಟ್, ಹುಲ್ಲೇಶ್ ಛಲವಾದಿ ಅವಕಾಶ ಪಡೆದಿದ್ದರು. ಈ ಮಕ್ಕಳ ಮತ್ತವರ ಪೋಷಕರ ಆನಂದಕ್ಕೆ ಪಾರವೇ ಇರಲಿಲ್ಲ. ಕೆಲವು ಸೂಚನೆಗಳೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಕ್ಕಳು 24ರಂದೇ ದೆಹಲಿ ಸೇರಿದ್ದರು.
ಕಾರ್ಕಳದ ಪರಶುರಾಮ ಪ್ರತಿಮೆ ಲೋಕಾರ್ಪಣೆ ಮಾಡಿದ ಸಿಎಂ ಬೊಮ್ಮಾಯಿ
ಇವರ ಮೇಲುಸ್ತುವಾರಿಗಾಗಿ ಛಾಯಾ ಎಂಬವರನ್ನು ಸರ್ಕಾರ ಕಳಿಸಿತ್ತು. ಆದರೆ ಅಲ್ಲಿ ಹೋದಾಗ ಮಕ್ಕಳಿಗೆ ಆಘಾತ ಎದುರಾಗಿತ್ತು. ಇತೆರೆಲ್ಲಾ ರಾಜ್ಯದ ಮಕ್ಕಳು ಸೂಕ್ತ ರೀತಿಯಲ್ಲಿ ನಿಯಮ ಅನುಸರಿಸಿ ಕಾರ್ಯಕ್ರಮ ಸ್ಥಳಕ್ಕೆ ಪ್ರವೇಶ ಪಡೆದಾಗಿತ್ತು .ಆದರೆ ಕರ್ನಾಟಕದ ಮಕ್ಕಳಿಗೆ ತಾಂತ್ರಿಕ ಸಮಸ್ಯೆಗಳ ಕಾರಣದಿಂದ ಪ್ರವೇಶ ನಿರಾಕರಿಸಲಾಯಿತು. ನಂತರ ತಿಳಿದು ಬಂದಂತೆ ರಾಜ್ಯದ ಶಿಕ್ಷಣ ಇಲಾಖೆಯ ಕೆಲವು ಅಧಿಕಾರಿಗಳ ಸಣ್ಣ ಕಣ್ತಪ್ಪಿನಿಂದ ಮಕ್ಕಳಿಗೆ ಕೈಗೆ ಬಂದದ್ದು ಬಾಯಿಗೆ ಇಲ್ಲ ಎಂಬ ಸ್ಥಿತಿ ಬಂದಿತ್ತು .ಅಧಿಕಾರಿಗಳಲ್ಲಿ ಪರಿಪರಿಯಾಗಿ ವಿನಂತಿಸಿದರೂ ಪ್ರಯೋಜನವಾಗಿಲ್ಲ. ಬಹಳ ಕಷ್ಟದಲ್ಲಿ ವಸತಿ ವ್ಯವಸ್ಥೆಯನ್ನು ಮಾತ್ರ ಮಾಡಿಕೊಟ್ಟಿದ್ದರು.
ಇತ್ತ ಈ ಮಕ್ಕಳಿಗೆ ಮತ್ತು ಮಾಹಿತಿ ತಿಳಿದ ಪೋಷಕರಿಗೆ ಅವರ ಶಾಲಾ ಶಿಕ್ಷಕರಿಗೆ ಏನು ಮಾಡುವುದೆಂದು ತೋಚದ ಸ್ಥಿತಿ ಕೊನೇ ಕ್ಷಣದ ಪ್ರಯತ್ನವಾಗಿ ಮಕ್ಕಳು ಸ್ಥಳೀಯ ಜನಪ್ರತಿನಿಧಿಗಳು ಪಕ್ಷದ ಮುಖಂಡರನ್ನು ಸಂಪರ್ಕಿಸಲಾರಂಭಿಸಿದರು. ಈ ನಡುವೆ ವಿದ್ಯಾರ್ಥಿಗಳ ಪೈಕಿ ಪ್ರಹ್ಲಾದ್ ಭಟ್ಟನ ಅಪ್ಪ ಮಂಗಳೂರು ಜಿಲ್ಲೆ ಕಡಂದಲೆ ನಿವಾಸಿ ಸ್ಕಂದ ಪ್ರಸಾದರು ತಮ್ಮ ಗುರುಗಳಾದ ಪೇಜಾವರ ಮಠಾಧೀಶರಿಗೆ ಆತಂಕದಿಂದಲೇ ವಿಷಯ ತಿಳಿಸಿ ಏನಾದರೂ ಉಪಕಾರ ಮಾಡುವಂತೆ ಕೋರಿದ್ದರು . ಶ್ರೀಗಳೋ ತಮ್ಮ ಆಪ್ತರಿಗೆ ಈ ಬಗ್ಗೆ ಉಪಕ್ರಮಿಸುವಂತೆ ಸೂಚನೆ ಕೊಟ್ಟಿದ್ದರು. ಮಕ್ಕಳು ಪರೀಕ್ಷಾ ಪೇ ಚರ್ಚಾ ದಲ್ಲಿ ಭಾಗವಹಿಸುವ ಅವಕಾಶದಿಂದ ವಂಚಿತರಾಗಬಾರದು ಎಂದೇ ಶ್ರೀಗಳ ಕಟ್ಟಪ್ಪಣೆಯಾಗಿತ್ತು.
ತಡಮಾಡದೇ ಶ್ರೀಗಳ ಆಪ್ತರು ಕಾರ್ಯಾಚರಣೆಗಳಿದರು .ವಿದ್ಯಾರ್ಥಿಗಳ ಕಡೆಯಿಂದ ಪರಿಸ್ಥಿತಿಯ ಕುರಿತಾಗಿ ಲಿಖಿತ ಮಾಹಿತಿ ಪಡೆದು ಕೇಂದ್ರದ ಮಂತ್ರಿ ಪ್ರಹ್ಲಾದ್ ಜೋಶಿ ಭಗವಂತ ಖೂಬಾ ಶೋಭಾ ಕರಂದ್ಲಾಜೆ , ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿ , ನಳಿನ್ ಕುಮಾರ್ ಕಟೀಲ್ (ಅದಾಗಲೇ ಮಕ್ಕಳ ಕಡೆಯಿಂದಲೂ ಅವರಿಗೆ ಮಾಹಿತಿ ಹೋಗಿತ್ತು ) ಸಚಿವ ಕೋಟ ಶ್ರೀನಿವಾಸ ಪೂಜಾರಿ , ಶಿಕ್ಷಣ ಮಂತ್ರಿ ನಾಗೇಶ್, ಉಡುಪಿ ಶಾಸಕ ರಘುಪತಿ ಭಟ್, ಶಿಕ್ಷಣ ಇಲಾಖೆ ಆಯುಕ್ತ ಡಾ ಆರ್ ವಿಶಾಲ್ ಹೀಗೆ ಪ್ರತಿಯೊಬ್ಬರಿಗೂ WhatsApp ಮೂಲಕ ಮಕ್ಕಳು ಕಳಿಸಿದ ಲಿಖಿತ ವಿಷಯ ಕಳಿಸಿದ ಬಳಿಕ ಮೊಬೈಲ್ ಕರೆ ಮಾಡಲಾರಂಭಿಸಿದರು. ಇಷ್ಟು ಜನರನ್ನು ಸಂಪರ್ಕಿಸಬೇಕಾದ ಅಗತ್ಯ ಇತ್ತೋ ಇಲ್ಲವೋ; ಆದರೆ ಹೇಗಾದರೂ ಕೆಲಸ ಸಾಧಿಸಬೇಕಾದ ಅನಿವಾರ್ಯತೆ . ಅಂತೂ ಎಲ್ಲರಿಗೂ ಕರೆ ಮಾಡಿ ವಿಷಯ ತಿಳಿಸಿದ್ದೂ ಆಯಿತು.
ಒಂದರ್ಧ ಘಂಟೆಯಲ್ಲೇ ಅಚ್ಚರಿಯ ಬೆಳವಣಿಗೆ ಆಮಭವಾಗಿತ್ತು. ಯಾರಿಗೆಲ್ಲಾ ಕರೆ ಮಾಡಿದ್ದರೋ ಅವರ್ಯಾರೂ ಸುಮ್ಮನೆ ಕುಳಿತಿಲ್ಲ. ಅವರೂ ಪ್ರಯತ್ನ ಆರಂಭಿಸಿದರು. ಮತ್ತು ಈ ಮಾಹಿತಿಯನ್ನು ಪೇಜಾವರ ಶ್ರೀಗಳ ಆಪ್ತರಿಗೂ ತಿಳಿಸಲಾರಂಭಿಸಿದಾಗ ಏನೋ ಭರವಸೆಯ ಬೆಳಕು ಸಿಕ್ಕ ಅನುಭವ. ಮಕ್ಕಳಿಗೂ ಈ ವಿಷಯ ತಿಳಿಸಿ ಧೈರ್ಯ, ವಿಶ್ವಾಸ ತುಂಬಿದರು.ದಿನಾಂಕ ಜನವರಿ 26ರಂದು ಸಂಜೆ ಸುಮಾರು 7 ಘಂಟೆಗೆ ಅಂದ್ರೆ ಕಾರ್ಯಕ್ರಮ ನಡೆಯುವ ಕೆಲವೇ ಘಂಟೆಗಳ ಮೊದಲು ಈ ಕಾರ್ಯಾಚರಣೆ ಆರಂಭವಾಗಿತ್ತು. ಸಚಿವ ಕೋಟ, ನಾಗೇಶ್ ಶಾಸಕ ಭಟ್ ರಾಜ್ಯದ ಮುಖ್ಯಮಂತ್ರಿಗಳಿಗೆ, ಮುಖ್ಯಮಂತ್ರಿಗಳು, ರಾಜ್ಯಾಧ್ಯಕ್ಷ ಕಟೀಲ್, ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ಭಗವಂತ್ ಖೂಬಾ ದೆಹಲಿ ಮಟ್ಟದಲ್ಲಿ ಪರಿಸ್ಥಿತಿಯ ಮಾಹಿತಿ ಪಡೆದು ಪ್ರಧಾನ ಮಂತ್ರಿಗಳ ಕಚೇರಿಗೆ ವಿಷಯ ತಿಳಿಸಿದರು.
ರಾಜ್ಯದ ಶಿಕ್ಷಣ ಇಲಾಖೆಯ ಅಧಿಕಾರಿಗಳ ಕಡೆಯಿಂದ ತಾಂತ್ರಿಕ ನಿಯಮ ಪಾಲಿಸುವಲ್ಲಿ ತೊಂದರೆಯಾಗಿ ಹೀಗಾಗಿದೆ; ಆದ್ರಿಂದ ಭದ್ರತಾ ವಿಭಾಗದ ಎನ್ ಎಸ್ ಜಿ ಅಧಿಕಾರಿಗಳನ್ನು ಒಪ್ಪಿಸೋದು ಕಷ್ಟವಾಗ್ತಿದೆ. ಇನ್ನೇನಿದ್ದರೂ ಪ್ರಧಾನಮಂತ್ರಿ ಕಾರ್ಯಾಲಯದವರು ಮಧ್ಯಪ್ರವೇಶಿಸುವಂತೆ ಬಿನ್ನವಿಸುತ್ತಿದ್ದೇವೆ ಎಂದು ಎಲ್ಲರೂ ಶ್ರೀಗಳಿಗೆ ಮಾಹಿತಿ ನೀಡಿದರು. ಈ ನಡುವೆ ಶಿಕ್ಷಣ ಇಲಾಖೆ ಆಯುಕ್ತ ಡಾ ಆರ್ ವಿಶಾಲ್ ಕೂಡಾ ತುರ್ತಾಗಿ ಪ್ರಯತ್ನದ ಜೊತೆಗೆ ಕೈಜೋಡಿಸಿದ್ದರು. ಮಾಹಿತಿ ಪ್ರಧಾನಿ ಮೋದಿಯವರಿಗೂ ತಲುಪಿತು. ಕರ್ನಾಟಕದ ಮಕ್ಕಳಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ಭದ್ರತಾ ವಿಭಾಗಕ್ಕೆ ಸೂಚನೆ ರವಾನೆಯಾಗಿತ್ತು.ಈ ಬೆಳವಣಿಗೆಗಳು ಈ ಎಲ್ಲಾ ಮುಖಂಡರಿಗೆ , ಶ್ರೀಗಳಿಗೆ ಮಕ್ಕಳಿಗೆ ಮಕ್ಕಳ ಪೋಷಕರು ಶಿಕ್ಷಕರಿಗೆ ತಿಳಿಯುತ್ತಲೇ ಎಲ್ಲರಲ್ಲಿ ಮಿಂಚಿನ ಸಂಚಾರ !
ಬಾಬಾ ಕನಸಿನಲ್ಲಿ ಬಂದಿದ್ದಕ್ಕೆ ಭವ್ಯ ಸಾಯಿ ಮಂದಿರ ನಿರ್ಮಿಸಿದ ಉದ್ಯಮಿ ಮಹಾರಾಜ್ ದಿಗ್ಗಿ
ಆಕಾಶವೇ ತಲೆ ಮೇಲೆ ಬಿದ್ದಂತಾಗಿದ್ದ ಮಕ್ಕಳೋ ಪುಟಿದೆದ್ದು ನೆಗೆದರು. ಪೋಷಕರಂತೂ ಆನಂದ ಬಾಷ್ಪ ಸುರಿಸುತ್ತಲೇ ಶ್ರೀಗಳಿಗೆ ಕರೆ ಮಾಡಿ ಧನ್ಯತೆ ಅರ್ಪಿಸಲಾರಂಭಿಸಿದರು. ಇತ್ತ ಕೇಂದ್ರ ಸಚಿವರಾದ ಜೋಶಿ ಖೂಬಾ , ಶೋಭಾ ಸ್ವತಃ ಮಕ್ಕಳಿಗೆ ಕರೆ ಮಾಡಿ ಧೈರ್ಯ ಹೇಳಿದರು.ಅಂತೂ ಇಂದು 27 ರ ಮುಂಜಾನೆ ನಸುಕಿನ ಮೂರು ಘಂಟೆ ವೇಳೆಗೆ ಮಕ್ಕಳಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರವೇಶಾತಿ ಲಭಿಸಿದ ಅಧಿಕೃತ ಮಾಹಿತಿ ಬಂದಾಗಲಂತೂ ಮಕ್ಕಳ ಪಾಲಿಗೆ ದೊಡ್ಡ ವಿಜಯ ಸಾಧಿಸಿದ ಆನಂದ. ಸರ್ಕಾರದ ಸಕಾಲಿಕ ಸ್ಪಂದನೆಯಿಂದ ಸಿಕ್ಕ ಅಮೂಲ್ಯ ಅವಕಾಶದಿಂದ ವಂಚಿತರಾಗಬಹುದಾಗಿದ್ದ ರಾಜ್ಯದ ನಾಲ್ಕು ಮಕ್ಕಳು ಪರೀಕ್ಷಾ ಪೇ ಚರ್ಚೆಯಲ್ಲಿ ಮುಂದಿನ ಸಾಲಿನಲ್ಲೇ ಆಸನಗಿಟ್ಟಿಸಿದ್ದು ಮಾತ್ರವಲ್ಲದೇ ಮೋದಿಯವರೊಡನೆ ಸಂಭಾಷಣೆಯನ್ನೂ ನಡೆಸಿ ಸೆಲ್ಫಿಯನ್ನೂ ಕ್ಲಿಕ್ಲಿಸಿಕೊಂಡು ಜೀವನ ಪರ್ಯಂತ ಸ್ಮರಣಯೋಗ್ಯವಾದ ಸಂದರ್ಭಗಳನ್ನು ಕಣ್ಮನಗಳಲ್ಲಿ ತುಂಬಿಕೊಂಡು ಬರುತ್ತಿರುವುದಕ್ಕೆ ಎಲ್ಲರೂ ಹೆಮ್ಮೆ ಪಡುವಂತಾಗಿದೆ.