ಕೊಪ್ಪಳ ವಿವಿ ಕುಲಪತಿ ನೇಮಕಾತಿಗೆ ಆದೇಶ; ನೇಮಕಾತಿ ಪ್ರಕ್ರಿಯೆಗೆ ಚಾಲನೆ
- ಕೊಪ್ಪಳ ವಿವಿ ಕುಲಪತಿ ನೇಮಕಾತಿಗೆ ಆದೇಶ
- ಕುಲಪತಿ ಇಲ್ಲ ಎಂದಿದ್ದ ಸರ್ಕಾರ ಇದೀಗ ನೇಮಕಾತಿ ಪ್ರಕ್ರಿಯೆಗೆ ಚಾಲನೆ
ಸೋಮರಡ್ಡಿ ಅಳವಂಡಿ
ಕೊಪ್ಪಳ (ನ.13) : ಜಿಲ್ಲೆಯಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸುವ ಕುರಿತು ರಾಜ್ಯ ಸರ್ಕಾರ ಗೆಜೆಟ್ ಪ್ರಕಟಣೆ ಮಾಡಿದ ಬೆನ್ನಲ್ಲೆ ಕಾರ್ಯಾನುಷ್ಠಾನ ಚುರುಕುಗೊಂಡಿದೆ. ಈಗಾಗಲೇ ರಾಜ್ಯ ಸರ್ಕಾರ ಕೊಪ್ಪಳ ಸೇರಿದಂತೆ ಏಳು ವಿವಿಗಳಿಗೆ ಕುಲಪತಿ ಹುಡುಕುವ ಕುರಿತು ಸಮಿತಿ ರಚನೆ ಮಾಡಿ ಆದೇಶಿಸಿದೆ.
ಕೊಪ್ಪಳ ನೂತನ ವಿವಿ ಬಳ್ಳಾರಿ ವಿವಿಯ ಅಡಿಯಲ್ಲಿಯೇ ನಡೆಯುತ್ತದೆ ಎನ್ನುವ ಆದೇಶ ಮಾಡಿದ ಬೆನ್ನಲ್ಲೇ ಈಗ ಕುಲಪತಿ ನೇಮಕಕ್ಕೆ ಮುಂದಾಗಿರುವುದು ಉತ್ತಮ ಬೆಳವಣಿಗೆಯಾಗಿದೆ. ಈ ಮೂಲಕ ಕೊಪ್ಪಳದಲ್ಲಿಯೂ ಪೂರ್ಣ ಪ್ರಮಾಣದ ವಿವಿ ಸ್ಥಾಪನೆಯಾಗುವ ಸಾಧ್ಯತೆ ನಿಚ್ಚಳವಾಗುತ್ತಿವೆ.
ಕೊಪ್ಪಳಕ್ಕೆ ಶೀಘ್ರ ವಿಶ್ವವಿದ್ಯಾಲಯ ಮಂಜೂರು: ಸಚಿವ ಅಶ್ವಥನಾರಾಯಣ
ಗೆಜೆಟ್ ಪ್ರಕಟವಾದ ಬೆನ್ನಲ್ಲಿ ಮತ್ತೊಂದು ಆದೇಶ ಹೊರಡಿಸಿ ರಾಜ್ಯ ಸರ್ಕಾರ ಗೊಂದಲ ಸೃಷ್ಟಿಮಾಡಿತ್ತು. ವಿವಿ ಮಂಜೂರಾದರೂ ಹೆಸರಿಗಷ್ಟೇ ಎನ್ನುವಂತಾಗಿತ್ತು. ಯಾವುದೇ ಹೊಸ ಹುದ್ದೆ ಸೃಜಿಸುವಂತೆ ಇಲ್ಲ, ಜಮೀನು ಖರೀದಿಸುವಂತೆ ಇಲ್ಲ ಎಂದು ಸ್ಪಷ್ಟವಾಗಿ ಸೂಚಿಸಿತ್ತು. ಆದರೆ, ನೂತನ ವಿವಿಗೆ ಕುಲಪತಿ ನೇಮಕಾತಿಯ ಮೊದಲ ಪ್ರಕ್ರಿಯೆ ಪ್ರಾರಂಭವಾಗಿರುವುದು ಆಶಾಭಾವನೆಯನ್ನು ಮೂಡಿಸಿದೆ.
ಪ್ರೊಫೆಸರ್, ಸಿಬ್ಬಂದಿ ನಿಯೋಜನೆ:
ಕೊಪ್ಪಳ ನೂತನ ವಿವಿಗೆ ಬಳ್ಳಾರಿ ಕೃಷ್ಣದೇವರಾಯ ವಿವಿಯ ಪ್ರೊಫೆಸರ್ ಮತ್ತು ಸಿಬ್ಬಂದಿಯನ್ನು ಹಂಚಿಕೆ ಮಾಡುವ ಕುರಿತು ಸಹ ಆದೇಶಿಸಲಾಗಿದೆ. ಬಳ್ಳಾರಿ ವಿವಿಯ ಕುಲಪತಿ ಅವರು ಸುತ್ತೋಲೆ ನೀಡಿ ಬಳ್ಳಾರಿ ವಿವಿಯ ವ್ಯಾಪ್ತಿಯ ಪ್ರೊಫೆಸರ್ ಮತ್ತು ಸಿಬ್ಬಂದಿ ಯಾರಿಗೆ ಕೊಪ್ಪಳ ನೂತನ ವಿವಿಗೆ ಹೋಗುವ ಉತ್ಸುಕತೆ ಇದೆ ಎನ್ನುವ ಮಾಹಿತಿ ಕೇಳಿದ್ದಾರೆ.
ವಿದ್ಯಾರ್ಥಿಗಳ ಅನುಪಾತದ ಆಧಾರದಲ್ಲಿ ಹುದ್ದೆಗಳ ವರ್ಗೀಕರಣ ಮಾಡಲಾಗುತ್ತಿದ್ದು, ನೂತನ ವಿವಿಯಲ್ಲಿ ಕೆಲಸ ಮಾಡುವ ಆಸಕ್ತಿ ಯಾರು ಹೊಂದಿದ್ದಾರೆ ಎನ್ನುವ ಮಾಹಿತಿ ಪಡೆದು ಹಂಚಿಕೆಗೊಳಿಸಲಾಗುತ್ತದೆ. ಈ ಮೂಲಕ ರಾಜ್ಯ ಸರ್ಕಾರ ನೂತನ ವಿವಿ ಘೋಷಣೆ ಮಾಡಿದ ಬೆನ್ನಲ್ಲೆ ಕಾರ್ಯಾನುಷ್ಠಾನಕ್ಕೆ ಮುಂದಾಗಿದೆ. ಅದು ಅತ್ಯಂತ ವೇಗವಾಗಿ ಪ್ರಕ್ರಿಯೆ ನಡೆದಿದ್ದು, ಇನ್ನಾರು ತಿಂಗಳೊಳಗಾಗಿ ನೂತನ ವಿವಿ ಕಾರ್ಯಾರಂಭ ಮಾಡಲಿದೆ.
2023- 24ನೇ ಸಾಲಿನ ಶೈಕ್ಷಣಿಕ ವರ್ಷದ ವೇಳೆಗೆ ಕೊಪ್ಪಳ ವಿವಿ ಸಂಪೂರ್ಣ ಪ್ರಾರಂಭವಾಗುವ ಸಾಧ್ಯತೆಗಳಿವೆ. ಈಗಾಗಲೇ ಕೊಪ್ಪಳ ವಿವಿ ವ್ಯಾಪ್ತಿಯನ್ನು ವಿಂಗಡಣೆ ಮಾಡಲಾಗಿದ್ದು, ಅಂಕಪಟ್ಟಿಮುದ್ರಣ ಸೇರಿದಂತೆ ಮೊದಲಾದ ಮುದ್ರಣಗಳನ್ನು ಸಹ ವಿಭಾಗ ಮಾಡಲಾಗುತ್ತಿದೆ.
ನ.17ಕ್ಕೆ ವಿವಿ, ಕಾಲೇಜು ಪುನಾರಂಭಕ್ಕೆ ಭರದ ಸಿದ್ಧತೆ
ವಿವಿ ಸ್ಥಾಪನೆಯ ಕುರಿತು ರಾಜ್ಯ ಸರ್ಕಾರ ಆದೇಶ ಮಾಡಿದ್ದು, ಅನುಷ್ಠಾನ ಪ್ರಕ್ರಿಯೆ ಪ್ರಾರಂಭವಾಗಿದೆ. ಆದರೆ, ವಿವಿ ನೇಮಕ ಮಾಡುವ ಆದೇಶದ ಬಗ್ಗೆ ನನಗೆ ಮಾಹಿತಿ ಇಲ್ಲ. ಸ್ಥಳವಿವಾದ ಕುರಿತು ನಾನೇನು ಹೇಳುವುದಿಲ್ಲ.
ಹಾಲಪ್ಪ ಆಚಾರ, ಸಚಿವ