ನ.17ಕ್ಕೆ ವಿವಿ, ಕಾಲೇಜು ಪುನಾರಂಭಕ್ಕೆ ಭರದ ಸಿದ್ಧತೆ
ಕೆಲವು ಕಾಲೇಜುಗಳಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗಷ್ಟೇ ಅವಕಾಶ, ನಂತರ ಇತರರಿಗೆ ಕ್ಲಾಸ್| ಮಾರ್ಗಸೂಚಿ ಪ್ರಕಾರ ತರಗತಿ ಆರಂಭಕ್ಕೆ ಸಿದ್ಧತೆ| ಕೊರೋನಾ ಕಾರ್ಯಪಡೆ ರಚನೆ ಪ್ರಕ್ರಿಯೆ ಶುರು| ಆನ್‌ಲೈನ್ ಶಿಕ್ಷಣದ ಮಾಹಿತಿ ರವಾನಿಸಲು ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ ಸಂಗ್ರಹ|
ಬೆಂಗಳೂರು(ನ.11): ರಾಜ್ಯದ ಎಲ್ಲ ಪದವಿ, ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೊಮಾ ಕಾಲೇಜುಗಳು ಮತ್ತು ಸಂಬಂಧಿಸಿದ ವಿಶ್ವವಿದ್ಯಾಲಯಗಳು ನ.17ರಿಂದ ಶೈಕ್ಷಣಿಕ ಚಟುವಟಿಕೆಗಳನ್ನು ಪುನಾರಂಭಿಸಲು ಪೂರ್ವ ಸಿದ್ಧತೆಗಳನ್ನು ಆರಂಭಿಸಿವೆ
ವಿಶ್ವವಿದ್ಯಾಲಯಗಳ ಕುಲಪತಿಗಳು, ಕುಲಸಚಿವರು ಮತ್ತು ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳ ಪ್ರಾಂಶುಪಾಲರು/ ಮುಖ್ಯಸ್ಥರು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಸಭೆ ನಡೆಸಿ ತರಗತಿ ಬೋಧನೆಗೆ ಜೊತೆಗೆ ಆನ್‌ಲೈನ್ ಮತ್ತು ಆಫ್‌ಲೈನ್ ಶಿಕ್ಷಣ, ಡಿಜಿಟಲ್ ಲರ್ನಿಂಗ್‌ಗೂ ತಯಾರಿ, ಅಗತ್ಯ ಸಾಮಗ್ರಿಗಳ ವ್ಯವಸ್ಥೆ ಮಾಡಿಕೊಳ್ಳಲು ಸೂಚನೆ ನೀಡಿದ್ದಾರೆ.
ಸರ್ಕಾರದ ಮಾರ್ಗಸೂಚಿ ಪ್ರಕಾರವೇ ಶೈಕ್ಷಣಿಕ ಚಟುವಟಿಕೆ ನಡೆಸಲು ನಿರ್ಧರಿಸಲಾಗಿದೆ. ಕಾಲೇಜಿನಲ್ಲಿ ಭೌತಿಕ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಪಾಲಕರಿಂದ ಮುಚ್ಚಳಿಕೆ ಪತ್ರಕ್ಕೆ ಸಹಿ ಮಾಡಿಸಿಕೊಂಡು ಬರುವುದು ಕಡ್ಡಾಯವಾಗಿದೆ. ವಿವಿ ಮತ್ತು ಕಾಲೇಜುಗಳೇ ಮುಚ್ಚಳಿಕೆ ಪತ್ರ ರೂಪಿಸಿ ವಿದ್ಯಾರ್ಥಿಗಳಿಗೆ ನೀಡಲು ತೀರ್ಮಾನಿಸಿವೆ. ಕಾಲೇಜಿಗೆ ಬಾರದ ವಿದ್ಯಾರ್ಥಿಗಳಿಗೆ ಆನ್‌ಲೈನ್ ಶಿಕ್ಷಣ ಒದಗಿಸಲು ಅವರ ಮೊಬೈಲ್ ಮತ್ತು ಇ-ಮೇಲ್ ವಿಳಾಸ ಸಂಗ್ರಹಿಸಲಾಗುತ್ತಿದೆ.
ಕಾಲೇಜು ಆರಂಭಕ್ಕೆ ಶಿಕ್ಷಣ ಇಲಾಖೆಯಿಂದ ಗೈಡ್ ಲೈನ್ಸ್ ಬಿಡುಗಡೆ..!
ಕೆಲವು ಕಾಲೇಜುಗಳು ಪ್ರಸ್ತುತ ಅಂತಿಮ ವರ್ಷದ ವ್ಯಾಸಂಗದಲ್ಲಿರುವ ವಿದ್ಯಾರ್ಥಿಗಳಿಗೆ ಮಾತ್ರ ಸದ್ಯಕ್ಕೆ ತರಗತಿ ಬೋಧನೆ ಆರಂಭಿಸಲು ಚಿಂತನೆ ನಡೆಸಿವೆ. ಉಳಿದ ವಿದ್ಯಾರ್ಥಿಗಳಿಗೆ ಮೊದಲು ಆನ್‌ಲೈನ್ ಶಿಕ್ಷಣ ನಡೆಸಿ ನಂತರ ಹಂತ ಹಂತವಾಗಿ ಅವರಿಗೂ ತರಗತಿ ಹಾಜರಾಗಲು ಅವಕಾಶ ನೀಡಲು ನಿರ್ಧರಿಸಿವೆ.
ಕಾರ್ಯಪಡೆ ರಚನೆ:
ಮಾರ್ಗಸೂಚಿಗಳ ಅನುಷ್ಠಾನಕ್ಕೆ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ಕೊರೋನಾ ಕಾರ್ಯಪಡೆ ರಚಿಸಲಾಗುತ್ತಿದೆ. ಪೂರ್ವ ಸಿದ್ಧತೆಗೆ ನ.12ರಿಂದ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳೂ ಕಾಲೇಜುಗಳಿಗೆ, ವಿವಿಗಳಿಗೆ ಬರುವಂತೆ ಕೆಲ ಕಾಲೇಜುಗಳು ಸೂಚಿಸಿವೆ ಎಂದು ತಿಳಿದು ಬಂದಿದೆ.
ಸರ್ಕಾರಿ ಕಾಲೇಜುಗಳಲ್ಲಿ ಶೌಚಗೃಹ ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಸರಿಪಡಿಸಲು ಕಾಲೇಜು ಪ್ರಾಂಶುಪಾಲರು ಮುಂದಾಗಿದ್ದಾರೆ. ಅಲ್ಲದೆ, ಸ್ಯಾನಿಟೈಸರ್, ಮಾಸ್ಕ್, ಥರ್ಮಲ್ ಸ್ಕಾ$್ಯನಿಂಗ್ ಉಪಕರಣ ಖರೀದಿಗೂ ಕಾಲೇಜುಗಳು ಅಂದಾಜು ವೆಚ್ಚದ ಮಾಹಿತಿ ಸಂಗ್ರಹಿಸಿವೆ.
ಸರ್ಕಾರದ ಸೂಚನೆಯಂತೆ ನ.17ರಿಂದ ಕಾಲೇಜು ಆರಂಭಿಸಲು ಎಲ್ಲ ರೀತಿಯ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕೋವಿಡ್ ನಿಯಂತ್ರಣ ಮಾರ್ಗಸೂಚಿಗಳ ಅನುಷ್ಠಾನಕ್ಕೂ ನಮ್ಮ ಎಲ್ಲ ಬೋಧಕ, ಬೋಧಕೇತರ ಸಿಬ್ಬಂದಿ ಸಭೆ ನಡೆಸಿ ಅಗತ್ಯ ಸೂಚನಾ ಕ್ರಮ ಕೈಗೊಳ್ಳಲಾಗಿದೆ ಎಂದು ಬೆಂಗಳೂರಿನ ಸರ್ಕಾರಿ ಡಿಗ್ರಿ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಚಂದ್ರಶೇಖರ ತಿಳಿಸಿದ್ದಾರೆ.
ಕೊರೋನಾ ಬಗ್ಗೆ ಅರಿವು ಮೂಡಿಸಿಸಲು ಅಪ್ತಸಮಾಲೋಚಕರ ನೇಮಕ ಸೇರಿದಂತೆ ಸರ್ಕಾರದ ಮಾರ್ಗಸೂಚಿ ಅನುಸಾರ ವಿಶ್ವವಿದ್ಯಾಲಯ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ವಿವಿ ವ್ಯಾಪ್ತಿಯ ಕಾಲೇಜುಗಳಿಗೂ ಸೂಚನೆ ನೀಡಲಾಗಿದೆ. ಆನ್‌ಲೈನ್ ಶಿಕ್ಷಣದ ಮಾಹಿತಿ ರವಾನಿಸಲು ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ ಸಂಗ್ರಹಿಸಲಾಗುತ್ತಿದೆ ಎಂದು ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ.ಟಿ.ಡಿ.ಕೆಂಪರಾಜು ಹೇಳಿದ್ದಾರೆ.