ಎಂಜಿನಿಯರಿಂಗ್ ಕೋರ್ಸುಗಳ ಪ್ರವೇಶಾತಿಗೆ ನ.30 ಕೊನೆ ದಿನ: ಸಚಿವ ಅಶ್ವತ್ಥ್ ನಾರಾಯಣ
ಎಂಜಿನಿಯರಿಂಗ್ ಕೋರ್ಸುಗಳಿಗೆ ಪ್ರವೇಶಾವಕಾಶದ ಕೊನೆಯ ದಿನಾಂಕವನ್ನು ಸುಪ್ರೀಂಕೋರ್ಟ್ ನವೆಂಬರ್ 30ರವರೆಗೆ ವಿಸ್ತರಿಸಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ ಸೋಮವಾರ ತಿಳಿಸಿದ್ದಾರೆ.
ಬೆಂಗಳೂರು (ಅ.17): ಎಂಜಿನಿಯರಿಂಗ್ ಕೋರ್ಸುಗಳಿಗೆ ಪ್ರವೇಶಾವಕಾಶದ ಕೊನೆಯ ದಿನಾಂಕವನ್ನು ಸುಪ್ರೀಂಕೋರ್ಟ್ ನವೆಂಬರ್ 30ರವರೆಗೆ ವಿಸ್ತರಿಸಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ ಸೋಮವಾರ ತಿಳಿಸಿದ್ದಾರೆ. ಈ ಮುನ್ನ ಎಐಸಿಟಿಇ ನಿಗದಿ ಮಾಡಿದ್ದ ಪ್ರಕಾರ ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ಅಕ್ಟೋಬರ್ 25 ಕೊನೆಯ ದಿನವಾಗಿತ್ತು. ಆದರೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಈ ದಿನಾಂಕವನ್ನು ವಿಸ್ತರಿಸಬೇಕೆಂದು ಕೋರಿ ಸುಪ್ರೀಂಕೋರ್ಟಿನ ಮೊರೆ ಹೋಗಿತ್ತು. ಈ ಮನವಿಯನ್ನು ನ್ಯಾಯಾಲಯವು ಪುರಸ್ಕರಿಸಿದೆ ಎಂದು ಅವರು ಹೇಳಿದ್ದಾರೆ.
ಹೀಗಾಗಿ ನಮಗೆ ಒಂದು ತಿಂಗಳಿಗಿಂತ ಹೆಚ್ಚು ಕಾಲಾವಕಾಶ ಸಿಕ್ಕಿದೆ. ಇಷ್ಟರಲ್ಲಿ ನಾವು ಸುಗಮ ಕೌನ್ಸೆಲಿಂಗ್ ಸೇರಿದಂತೆ ಪ್ರವೇಶ ಪ್ರಕ್ರಿಯೆ ಮುಗಿಸಲಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕಳೆದ ವರ್ಷ ಪಿಯುಸಿ ಪಾಸಾದ 24 ಸಾವಿರ ಅಭ್ಯರ್ಥಿಗಳು ಈ ವರ್ಷ ಸಿಇಟಿ ಬರೆದು, ರ್ಯಾಂಕಿಂಗ್ ನೀಡುವ ವಿಚಾರದಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರಿಂದ ಸ್ವಲ್ಪ ಅಡಚಣೆ ಎದುರಾಯಿತು. ಹೀಗಾಗಿ ಅಂತಿಮ ದಿನಾಂಕ ವಿಸ್ತರಿಸುವಂತೆ ಸರ್ವೋಚ್ಚ ನ್ಯಾಯಾಲಯಕ್ಕೆ ಕೇಳಿಕೊಂಡಿದ್ದೆವು ಎಂದು ಅವರು ವಿವರಿಸಿದ್ದಾರೆ.
ಗಣವೇಷಧಾರಿಗಳಾದ ಜೋಶಿ, ಶೆಟ್ಟರ್, ಅಶ್ವತ್ಥ್ ನಾರಾಯಣ
ಎಂಜಿನಿಯರಿಂಗ್ ಶಿಕ್ಷಣದಲ್ಲಿ ಡಿಸೆಂಬರ್ ವೇಳೆಗೆ ಭಾರೀ ಸುಧಾರಣೆ: ಡಿಸೆಂಬರ್ ವೇಳೆಗೆ ಎಂಜಿನಿಯರಿಂಗ್ ಶಿಕ್ಷಣದಲ್ಲಿ ಸಮಗ್ರ ಸುಧಾರಣೆ ತರಲಾಗುವುದು. ಈ ಪ್ರಕ್ರಿಯೆ ಈಗ ಅಂತಿಮ ರೂಪದಲ್ಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ. ಮಾಗಡಿ ರಸ್ತೆಯ ಈಸ್ಟ್ ವೆಸ್ಟ್ ಎಂಜಿನಿಯರಿಂಗ್ ಕಾಲೇಜು ಸೋಮವಾರ ಎಥ್ನೋಟೆಕ್ ಅಕಾಡೆಮಿಯ ಜತೆಗೂಡಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು 'ರವಿಶಂಕರ್ ಉತ್ಕೃಷ್ಟತಾ ಕೇಂದ್ರ'ವನ್ನು ಉದ್ಘಾಟಿಸಿ ಮಾತನಾಡಿದರು. ಸದ್ಯಕ್ಕೆ ರಾಜ್ಯದಲ್ಲಿ ಸರಕಾರಿ ಕಾಲೇಜುಗಳಲ್ಲಿ ಕಲಿಕೆ ಮತ್ತು ಬೋಧನೆಯ ಡಿಜಿಟಲೀಕರಣ ನಡೆಯುತ್ತಿದೆ. ಇದನ್ನು ಸದ್ಯದಲ್ಲೇ ಖಾಸಗಿ ಕಾಲೇಜುಗಳಿಗೂ ವಿಸ್ತರಿಸಲಾಗುವುದು ಎಂದು ಅವರು ನುಡಿದರು. ರಾಜ್ಯದಲ್ಲಿ ಉನ್ನತ ಶಿಕ್ಷಣ ವಲಯದಲ್ಲಿ ಅಭೂತಪೂರ್ವ ಸುಧಾರಣೆಗಳನ್ನು ತರಲಾಗುತ್ತಿದೆ.
ಅಭಿವೃದ್ಧಿ ಸಹಿಸಿಕೊಳ್ಳಲಾಗದೆ ತಿಕ್ಕಾಟಕ್ಕಿಳಿದಿದ್ದಾರೆ: ಸಚಿವ ಅಶ್ವತ್ಥ್ ನಾರಾಯಣ
ಈಗ ನಮ್ಮ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಉದ್ಯಮಗಳ ಜತೆ ಬೆಸೆಯಲಾಗಿದೆ. ಈ ಮೂಲಕ ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆಯನ್ನು ಬೆಳೆಸಲಾಗುತ್ತಿದೆ ಎಂದು ಅವರು ವಿವರಿಸಿದರು. ಎಂಜಿನಿಯರಿಂಗ್ ಶಿಕ್ಷಣದ ಆಡಳಿತ, ಪಠ್ಯಕ್ರಮ, ಇಂಟರ್ನ್ಶಿಪ್ ಇತ್ಯಾದಿಗಳನ್ನು ಆಮೂಲಾಗ್ರವಾಗಿ ಸುಧಾರಿಸಲಾಗುವುದು. ಇಂಟರ್ನ್ಶಿಪ್ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ವೇತನ ಕೊಡುವುದನ್ನು ಕಡ್ಡಾಯ ಮಾಡಲಾಗಿದೆ ಎಂದು ಅವರು ಹೇಳಿದರು. ಗುಣಮಟ್ಟದ ಶಿಕ್ಷಣ ಮಾತ್ರವೇ ಸಮಾಜದ ಸಬಲೀಕರಣ ಸಾಧ್ಯ. ನಾವು ಸೀಮಿತವಾಗಿ ಯೋಚಿಸದೆ ಜಾಗತಿಕ ಸ್ತರದಲ್ಲಿ ಸ್ಪರ್ಧೆಯನ್ನು ಎದುರಿಸುವಂತಹ ಗುರಿಯನ್ನು ಹೊಂದುವುದು ಅತ್ಯಗತ್ಯವಾಗಿದೆ. ಇಲ್ಲದೆ ಹೋದರೆ ಅವಕಾಶಗಳು ಕೈತಪ್ಪಿ ಹೋಗುತ್ತವೆ ಎಂದು ಸಚಿವರು ಪ್ರತಿಪಾದಿಸಿದರು.