*   ಶಿಕ್ಷಣ ನೀತಿಯಲ್ಲಿ ಹಿಂದಿ/ಇಂಗ್ಲಿಷ್‌ನಲ್ಲಿ ಶಿಕ್ಷಣ ನೀಡಿ ಎಂದಿಲ್ಲ*  ಮಾತೃಭಾಷೆಯ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ*  ಎನ್‌ಇಪಿ ಸುವರ್ಣಾವಕಾಶ

ಬೆಂಗಳೂರು(ಏ.30):  ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ(NEP) ಎಲ್ಲಿಯೂ ಕೇಂದ್ರ ಸರ್ಕಾರ ಹಿಂದಿ(Hindi) ಅಥವಾ ಆಂಗ್ಲ ಭಾಷೆಯಲ್ಲಿ ಶಿಕ್ಷಣ ನೀಡಿ ಎಂದು ಹೇಳಿಲ್ಲ. ಮಾತೃಭಾಷೆಯಲ್ಲಿ ಶಿಕ್ಷಣ ನೀಡುವುದಕ್ಕೆ ಆದ್ಯತೆ ನೀಡಲಾಗಿದೆ. ಹಾಗಾಗಿ ಭಾಷೆ ಹೆಸರಲ್ಲಿ ಯಾರೂ ರಾಜಕಾರಣ ಮಾಡುವುದು ಬೇಡ ಎಂದು ಕೇಂದ್ರ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಸಚಿವ ಧರ್ಮೇಂದ್ರ ಪ್ರಧಾನ್‌(Dharmendra Pradhan) ಸ್ಪಷ್ಟಪಡಿಸಿದ್ದಾರೆ.

ಭಾರತೀಯ ವಿಜ್ಞಾನ ಸಂಸ್ಥೆ (IISC)ಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಎನ್‌ಇಪಿ ಅಡಿಯಲ್ಲಿ ರೂಪಿಸಿರುವ ‘ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ ಕ​ಡ್ಡಾಯ ಮಾ​ರ್ಗಸೂ​ಚಿ’​ ಬಿಡುಗಡೆ ಮಾಡಿ ಮಾತನಾಡಿದ ಅವರು, ಭಾಷೆ ಎಂಬುದು ಶಿಕ್ಷಣಕ್ಕಾಗಲಿ, ಅಭಿವೃದ್ಧಿಗಾಗಲಿ ಅಡ್ಡಿಯಾಗಬಾರದು. ಎನ್‌ಇಪಿಯಲ್ಲಿ ಎಲ್ಲಿಯೂ ಆಂಗ್ಲ ಅಥವಾ ಹಿಂದಿ ಭಾಷೆಯಲ್ಲೇ ಬೋಧಿಸಬೇಕೆಂದು ಹೇಳಿಲ್ಲ. ಬದಲಾಗಿ ಮಾತೃಭಾಷೆಯಲ್ಲಿ ಶಿಕ್ಷಣ ನೀಡುವುದಕ್ಕೆ ಸೂಚಿಸಲಾಗಿದೆ.

ರಾಷ್ಟ್ರೀಯ ಶಿಕ್ಷಣ ನೀತಿ ಗೊಂದಲದಿಂದ ಪದವಿ ಪರೀಕ್ಷೆ ವಿಳಂಬ: ವಿದ್ಯಾರ್ಥಿಗಳ ಭವಿಷ್ಯ ಅತಂತ್ರ

ಆಂಗ್ಲಭಾಷೆ(English) ಇದ್ದ ಕಡೆ ಮಾತ್ರ ಬೆಳವಣಿಗೆ ಇದೆ ಎಂದುಕೊಳ್ಳುವುದು ತಪ್ಪು. ಜಪಾನ್‌ನ​ಲ್ಲಿ(Japan) ಇಂಗ್ಲಿಷ್‌ ಭಾಷೆಯ ಬಳಕೆಯೇ ಇಲ್ಲ. ಆದರೂ ಸ್ಥಳೀಯ ಭಾಷೆಯಲ್ಲಿ ವ್ಯವಹರಿಸುತ್ತಲೇ ಆ ದೇಶ ಜಗತ್ತಿನ ದೈತ್ಯ ಆರ್ಥಿಕ ಶಕ್ತಿಗಳಲ್ಲಿ ಒಂದಾಗಿ ಬೆಳೆದಿಲ್ಲವೇ ಎಂದು ಪ್ರತಿಪಾದಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸುವಾಗ ದೇಶದ ಎಲ್ಲ ಭಾಗಗಳಿಂದಲೂ ಜನರ ಅಭಿಪ್ರಾಯ ಸಂಗ್ರಹಿಸಲಾಗಿದೆ. 22 ರಾಜ್ಯ ಸರ್ಕಾರಗಳು ನೇರವಾಗಿ ಈ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದವು. 600 ಜಿಲ್ಲೆಗಳ ಜನರು, ಒಂದು ಲಕ್ಷಕ್ಕೂ ಅಧಿಕ ಶಿಕ್ಷಣ ತಜ್ಞರು ಸಲಹೆ, ಅಭಿಪ್ರಾಯ ನೀಡಿದ್ದಾರೆ ಎಂದು ವಿವರಿಸಿದರು.

ವಸಂತ ಪೂರ್ಣಿಮೆಗೆ ಹೊಸ ಪಠ್ಯ:

ಎನ್‌ಇಪಿಯಲ್ಲಿ ಶಿಕ್ಷಣವನ್ನು(Education) ನಾಲ್ಕು ಹಂತಗಳಾಗಿ ವಿಂಗಡಿಸಲಾಗಿದೆ. ಪೂರ್ವ ಪ್ರಾಥಮಿಕ ಹಂತದ ಹೊಸ ಪಠ್ಯಕ್ರಮ ಮುಂದಿನ ವಸಂತ ಪೂರ್ಣಿಮೆಗೂ ಮೊದಲು ಸಿದ್ಧವಾಗಲಿದೆ. ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟು ಒಂದು ಮಾರ್ಗವಾಗಿದೆ. ಇಂದು ಬಿಡುಗಡೆ ಮಾಡಿದ ಪ್ರಕ್ರಿಯೆ ದಾಖಲೆಯು 21ನೇ ಶತಮಾನದ ಬದಲಾಗುತ್ತಿರುವ ಬೇಡಿಕೆಗಳು ಮತ್ತು ಭವಿಷ್ಯದ ಮೇಲೆ ಸಕಾರಾತ್ಮಕ ಪರಿಣಾಮವನ್ನು ಪ್ರತಿಪಾದಿಸುವ ಸಂವಿಧಾನವಾಗಿದೆ. ಮಕ್ಕಳ ಸರ್ವಾಂಗೀಣ ಅಭಿವೃದ್ಧಿ, ಕೌಶಲದ​ಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದ್ದು, ಮಾತೃಭಾಷೆಯಲ್ಲಿ ಕಲಿಕೆ, ಸಾಂಸ್ಕೃತಿಕ ಬೇರೂರುವಿಕೆಗೆ ಒತ್ತು ನೀಡುವ ಮೂಲಕ ಈ ದಾಖಲೆಯ ಮಾದರಿ ಬದಲಾವಣೆಯನ್ನು ತರುತ್ತದೆ ಎಂದರು.

ಎನ್‌ಇಪಿ ಸುವರ್ಣಾವಕಾಶ:

ಉ​ನ್ನತ ಶಿ​ಕ್ಷಣ ಸ​ಚಿವ ಡಾ.​ಸಿ.​ಎನ್‌. ಅ​ಶ್ವ​ತ್ಥ​ನಾ​ರಾ​ಯಣ ಮಾ​ತ​ನಾಡಿ, ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ದೇಶದ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ಸುವರ್ಣಾವಕಾಶವಾಗಿದೆ. ಇದರ ಲಾಭವನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಮೂಲೆಮೂಲೆಗೂ ಕೊಂಡೊಯ್ಯಬಹುದು ಎಂದರು.

ಇಡೀ ವಿಶ್ವದಲ್ಲೇ ಉತ್ತಮವಾದ ಸ್ಥಳ ನಮ್ಮ ಕರ್ನಾಟಕ: ಸಚಿವ ಅಶ್ವತ್ಥ ನಾರಾಯಣ

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸ​ಚಿವ ಬಿ.ಸಿ.ನಾಗೇಶ್‌ ಮಾತನಾಡಿ, ‘ದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯಲ್ಲಿ ಎನ್‌ಇಪಿ ಮಹತ್ವದ ಪಾತ್ರ ವಹಿಸಲಿದೆ. ಹೊಸ ಶಿಕ್ಷಣ ವ್ಯವಸ್ಥೆಯ ಲೋಕ ಕಲ್ಯಾಣಕ್ಕೂ ಸಹಕಾರಿಯಾಗಲಿದೆ. ಹೊಸ ಪಠ್ಯಕ್ರಮವು ನಮ್ಮ ಶಾಲೆಗಳು ಮತ್ತು ತರಗತಿಗಳಲ್ಲಿ ಎನ್‌ಇಪಿ 2020ರ ದೃಷ್ಟಿಕೋನವನ್ನು ವಾಸ್ತವಗೊಳಿಸುವ ಮೂಲಕ ದೇಶದಲ್ಲಿ ಅತ್ಯುತ್ತಮ ಬೋಧನೆ ಮತ್ತು ಕಲಿಕೆಯನ್ನು ಸಕ್ರಿಯಗೊಳಿಸುತ್ತದೆ ಮತ್ತು ಸಶಕ್ತಗೊಳಿಸುತ್ತದೆ ಎಂದು ಹೇಳಿದರು.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಎನ್‌ಇಪಿ ಅಡಿಯಲ್ಲಿ ರೂಪಿಸಿರುವ ‘ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ ಕ​ಡ್ಡಾಯ ಮಾ​ರ್ಗಸೂ​ಚಿ’​ಯನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಬಿಡುಗಡೆ ಮಾಡಿದರು. ಸಚಿವರಾದ ಅಶ್ವತ್ಥ ನಾರಾಯಣ, ಬಿ.ಸಿ.ನಾಗೇಶ್‌, ಇಸ್ರೋ ಮಾಜಿ ಅಧ್ಯಕ್ಷ ಡಾ.ಕೆ.ಕಸ್ತೂರಿ ರಂಗನ್‌ ಮತ್ತಿತರರಿದ್ದರು.